30 ನಿರುದ್ಯೋಗಿಗಳಿಗೆ ವಂಚಿಸಿದ ತಂದೆ-ಮಗಳ ಸೆರೆ

KannadaprabhaNewsNetwork |  
Published : Jun 09, 2026, 02:00 AM IST
CCB | Kannada Prabha

ಸಾರಾಂಶ

ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ನಿರುದ್ಯೋಗಿಗಳಿಂದ ₹5.30 ಕೋಟಿ ಹಣ ವಸೂಲಿ ಮಾಡಿ ವಂಚಿಸಿದ್ದ ಅಂಚೆ ಇಲಾಖೆಯ ನಿವೃತ್ತ ನೌಕರ ಹಾಗೂ ಆತನ ಮಗಳು ಸಿಸಿಬಿ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ನಿರುದ್ಯೋಗಿಗಳಿಂದ ₹5.30 ಕೋಟಿ ಹಣ ವಸೂಲಿ ಮಾಡಿ ವಂಚಿಸಿದ್ದ ಅಂಚೆ ಇಲಾಖೆಯ ನಿವೃತ್ತ ನೌಕರ ಹಾಗೂ ಆತನ ಮಗಳು ಸಿಸಿಬಿ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಆರ್‌.ಟಿ.ನಗರದ ನಿವಾಸಿಗಳಾದ ಶಂಸಾದ್ ಬೇಗಂ ಹಾಗೂ ಆಕೆಯ ತಂದೆ ಎಂ.ಎ.ಮನ್ಸೂರ್ ಅಹಮ್ಮದ್ ಬಂಧಿತರಾಗಿದ್ದು, ಆರೋಪಿಗಳಿಂದ ನಕಲಿ ಉದ್ಯೋಗ ನೇಮಕಾತಿ ಪತ್ರಗಳನ್ನು ಜಪ್ತಿ ಮಾಡಲಾಗಿದೆ. ಕೆಲ ತಿಂಗಳ ಹಿಂದೆ ಸಿಸಿಬಿ ಠಾಣೆಯಲ್ಲಿ ಧಾರವಾಡದ ಸಂತ್ರಸ್ತ ದೂರು ನೀಡಿದ್ದರು. ತನಿಖೆಗಿಳಿದ ಸಿಸಿಬಿ ಡಿಸಿಪಿ ಶ್ರೀಹರಿಬಾಬು ಮಾರ್ಗದರ್ಶನದಲ್ಲಿ ಎಸಿಪಿ ಆನಂದ್ ನೇತೃತ್ವದ ತಂಡವು, ತಾಂತ್ರಿಕ ಮಾಹಿತಿ ಆಧರಿಸಿ ತಂದೆ-ಮಗಳನ್ನು ಬಂಧಿಸಿದೆ.

ಅಂಚೆ ಇಲಾಖೆಯಲ್ಲಿ ಸೇವೆ ಸಲ್ಲಿಸಿ ಮನ್ಸೂರ್ ನಿವೃತ್ತರಾಗಿದ್ದಾರೆ. ಅವರ ಪುತ್ರಿ ಎಂಬಿಎ ಪದವೀಧರಳಾಗಿದ್ದು, ಅವಿವಾಹಿತೆ. ಆರ್‌.ಟಿ.ನಗರದಲ್ಲಿ ಇವರು ನೆಲೆಸಿದ್ದಾರೆ. ತಮಗೆ ರಾಜಕೀಯ ನಾಯಕರ ಜತೆ ಸ್ನೇಹದ ಸೋಗಿನಲ್ಲಿ ಜನರಿಗೆ ವಂಚಿಸುತ್ತಿದ್ದರು ಎಂದು ಸಿಸಿಬಿ ಹೇಳಿದೆ.

ಮೂರು ವರ್ಷಗಳ ಹಿಂದೆ ತಮ್ಮ ನೆರೆಮನೆಯಲ್ಲಿ ನೆಲೆಸಿದ್ದ ರೈಲ್ವೆ ಇಲಾಖೆಯ ನೌಕರನ ಮೂಲಕ ತಂದೆ-ಮಗಳಿಗೆ ಧಾರವಾಡ ಜಿಲ್ಲೆಯ ಸಂಗಮೇಶ್ ರಾಚಯ್ಯ ಅವರ ಪರಿಚಯವಾಗಿದೆ. ಆಗ ತಮಗೆ ಎಲ್ಲ ರಾಜಕೀಯ ಪಕ್ಷಗಳಲ್ಲಿ ಒಳ್ಳೆಯ ಸಂಪರ್ಕವಿದೆ. ನಿಮ್ಮ ಕಡೆಯವರಿಗೆ ಯಾರಿಗಾದರೂ ಸರ್ಕಾರಿ ನೌಕರಿ ಬೇಕಿದ್ದರೆ ಹೇಳಿ ಕೊಡಿಸುತ್ತೇವೆ ಎಂದಿದ್ದರು. ತರುವಾಯ ರೈಲ್ವೆ ಇಲಾಖೆಯಲ್ಲಿ ಪ್ರಥಮ ದರ್ಜೆ ಸಹಾಯಕ ಹುದ್ದೆಗೆ ನೇಮಕಾತಿ ಇದ್ದು, ತಾವು ಹೇಳಿದಷ್ಟು ಹಣ ನೀಡಿದರೆ ನೌಕರಿ ಕೊಡಿಸುವುದಾಗಿ ಸಂಗಮೇಶ್ ಅವರಿಗೆ ಬೇಡಿಕೆ ಇಟ್ಟಿದ್ದರು. ಅಲ್ಲದೆ ನಾಜೂಕಿನ ಮಾತು ಹಾಗೂ ಕೆಲ ಪ್ರಭಾವಿ ರಾಜಕಾರಣಿಗಳ ಜತೆ ಇದ್ದ ಪೋಟೋ ಬಳಸಿ ಆತನನ್ನು ಮೋಸದ ಬಲೆಗೆ ಬೀಳಿಸಿದ್ದರು. ಈ ಮಾತು ನಂಬಿದ ಅವರು, ತಮ್ಮ ಸಂಬಂಧಿಕರು ಸೇರಿದಂತೆ ಏಳೆಂಟು ಮಂದಿಯಿಂದ 5.40 ಕೋಟಿ ರು ಹಣವನ್ನು ಹಂತ ಹಂತವಾಗಿ ಮನ್ಸೂರ್ ಹಾಗೂ ಶಂಸಾದೀನ್ ಅವರಿಗೆ ನೀಡಿದ್ದರು.

ಮುಂಬೈನಲ್ಲಿ ತರಬೇತಿ, ನಕಲಿ ನೇಮಕ ಪತ್ರ:

ಸಂಗಮೇಶ್ ಅವರಿಂದ ಹಣ ಪಡೆದ ಬಳಿಕ ಆರೋಪಿಗಳು, ಉದ್ಯೋಗಾಂಕ್ಷಿಗಳಿಗೆ ತಾವೇ ಸೃಷ್ಟಿಸಿದ್ದ ನಕಲಿ ರೈಲ್ವೆ ಇಲಾಖೆ ನೇಮಕಾತಿ ಪತ್ರ ನೀಡಿದ್ದರು. ತರುವಾಯ ಮುಂಬೈನಲ್ಲಿ ಸಂತ್ರಸ್ತರಿಗೆ ತರಬೇತಿ ನೆಪದಲ್ಲಿ 20 ದಿನಗಳು ಕರೆದೊಯ್ದು ಕೂಡಿ ಹಾಕಿದ್ದರು. ಈ ನೇಮಕಾತಿ ಪತ್ರ ಹಿಡಿದು ರೈಲ್ವೆ ಇಲಾಖೆ ಕಚೇರಿಗೆ ತೆರಳಿದಾಗ ಅವರಿಗೆ ಮೋಸದ ಸಂಗತಿ ಗೊತ್ತಾಗಿದೆ. ಎರಡು ವರ್ಷಗಳ ಬಳಿಕ ಆರೋಪಿಗಳಿಗೆ ಹಣ ಮರಳಿಸುವಂತೆ ಸಂಗಮೇಶ್ ಆಗ್ರಹಿಸಿದ್ದಾರೆ. ಆಗ ಏನೇನೋ ಸಬೂಬು ಹೇಳಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಕೊನೆಗೆ ಸಿಸಿಬಿ ಪೊಲೀಸರಿಗೆ ಅವರು ದೂರು ನೀಡಿದ್ದಾರೆ.

₹1.5 ಕೋಟಿ ಟೋಪಿ

ಸಂಗಮೇಶ್ ಅವರಿಗೆ ಮಾತ್ರವಲ್ಲದೆ ಮತ್ತೆ 20 ಜನರಿಗೆ ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ 1.5 ಕೋಟಿ ರು ಹಣವನ್ನು ಸಹ ಆರೋಪಗಳು ಸುಲಿಗೆ ಮಾಡಿರುವುದು ಸಿಸಿಬಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಈ ಬಗ್ಗೆ ಕೂಡ ತನಿಖೆ ನಡೆದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕಾಂಗ್ರೆಸ್‌-ಬಿಜೆಪಿ ನಾಯಕರ ಪೋಟೋ

ತಮಗೆ ಪ್ರಭಾವಿ ರಾಜಕಾರಣಿಗಳ ಜತೆ ಸ್ನೇಹವಿದೆ ಎಂದು ಶಂಸಾದ್ ಬೇಗಂ ಹೇಳಿಕೊಂಡಿದ್ದಳು. ತಾನು ರಾಜ್ಯ ಮಹಿಳಾ ಕಾಂಗ್ರೆಸ್ ಪ್ರಧಾನಿ ಕಾರ್ಯದರ್ಶಿ ಎಂದು ಸಹ ಆಕೆ ಬಿಂಬಿಸಿಕೊಂಡಿದ್ದಳು. ಅಲ್ಲದೆ ಮಾಜಿ ಸಚಿವರು ಸೇರಿ ಹಲವು ನಾಯಕರ ಜೊತೆ ಆರೋಪಿಗಳು ತೆಗೆಸಿಕೊಂಡಿದ್ದ ಪೋಟೋಗಳು ಪತ್ತೆಯಾಗಿವೆ ಎಂದು ಮೂಲಗಳು ವಿವರಿಸಿವೆ.

ಹಲವು ಇಲಾಖೆಗಳ ಪ್ರಸ್ತಾಪ

ರೈಲ್ವೆ, ಆದಾಯ ತೆರಿಗೆ, ನೀರಾವರಿ, ಆರೋಗ್ಯ ಹಾಗೂ ಸಮಾಜ ಕಲ್ಯಾಣ ಸೇರಿದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಇಲಾಖೆಗಳಲ್ಲಿ ನೌಕರಿ ಹೆಸರಿನಲ್ಲಿ ತಂದೆ-ಮಗಳು ವಂಚಿಸಿದ್ದಾರೆ. ಇದುವರೆಗೆ 40 ಜನರು ಮೋಸ ಹೋಗಿರುವ ಬಗ್ಗೆ ಮಾಹಿತಿ ಸಿಕ್ಕಿದ್ದು, ತನಿಖೆ ಮುಂದುವರೆದಂತೆ ಮತ್ತಷ್ಟು ಭಾನಗಡಿ ಬೆಳಕಿಗೆ ಬರಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮುಂದಿನ ಮೂರು ದಿನ ಭಾರಿ ಮಳೆ ಸಾಧ್ಯತೆ: ಜಿಲ್ಲಾಧಿಕಾರಿ
ಕೂಡ್ಲಿಗಿಯಲ್ಲಿ ದಸಂಸ ಬೃಹತ್ ಪ್ರತಿಭಟನೆ