ಕನ್ನಡಪ್ರಭವಾರ್ತೆ ನಾಗಮಂಗಲ
ಗಲಭೆ ಪ್ರಕರಣದ ಹಿನ್ನೆಲೆಯಲ್ಲಿ ಬಂಧನದ ಭೀತಿಯಿಂದ ಗ್ರಾಮ ತೊರೆದಿದ್ದ ವೇಳೆ ಬ್ರೈನ್ ಸ್ಟ್ರೋಕ್‌ನಿಂದ ಸಾವನ್ನಪ್ಪಿದ ಪಟ್ಟಣದ ಬದರಿಕೊಪ್ಪಲಿನ ಎ-17 ಆರೋಪಿ ಕುಮಾರ್ ಪುತ್ರ ಕಿರಣ್ (29) ಅಂತ್ಯಕ್ರಿಯೆ ಭಾನುವಾರ ಬೆಳಗ್ಗೆ ಗ್ರಾಮದ ಹೊರ ವಲಯದಲ್ಲಿ ನೆರವೇರಿತು.ಸೆ.11ರ ರಾತ್ರಿ ಪಟ್ಟಣದಲ್ಲಿ ನಡೆದ ಗಣೇಶ ಮೆರವಣಿಗೆ ವೇಳೆ ಉಂಟಾದ ಕೋಮು ಗಲಭೆ ಪ್ರಕರಣದ ಎ-17 ಆರೋಪಿ ಕುಮಾರ್ ಬಂಧನಕ್ಕೊಳಗಾಗಿ ಜೈಲು ಸೇರಿದ್ದರು. ನಂತರ ಬಂಧನದ ಭೀತಿಯಿಂದ ಗ್ರಾಮ ತೊರೆದು ಬೆಂಗಳೂರಿನಲ್ಲಿ ನೆಲೆಸಿದ್ದರು.
ಈ ವೇಳೆ ಕಿರಣ್‌ಗೆ ಪಾರ್ಶ್ವವಾಯು ಹೊಡೆದಿದ್ದರಿಂದ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಿ ಶಸ್ತ್ರ ಚಿಕಿತ್ಸೆಯನ್ನೂ ಕೂಡ ಮಾಡಿಸಲಾಗಿತ್ತು. ನಂತರ ಲೋ ಬಿಪಿಯಾಗಿ ಶನಿವಾರ ಬೆಳಗ್ಗೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.ಜಿಲ್ಲಾ ಕಾರಾಗೃಹದಲ್ಲಿರುವ ಆರೋಪಿ ಕುಮಾರ್‌ಗೆ ಮಗನ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ನ್ಯಾಯಾಲಯ ಅನುಮತಿ ನೀಡಿತ್ತು. ಭಾನುವಾರ ಬೆಳಗ್ಗೆ 10 ಗಂಟೆ ವೇಳೆಗೆ ಪೊಲೀಸ್ ಭದ್ರತೆಯಲ್ಲಿ ಕುಮಾರ್ ಅವರನ್ನು ಬದರಿಕೊಪ್ಪಲು ಗ್ರಾಮಕ್ಕೆ ಕರೆತರಲಾಯಿತು. ಮಗನ ಮೃತದೇಹ ನೋಡುತ್ತಿದ್ದಂತೆ ನಿನ್ನ ಬದಲಿಗೆ ನಾನಾದರೂ ಸಾಯಬಾರದಿತ್ತೆ ಎಂದು ಕುಮಾರ್ ಎದೆ ಬಡಿದುಕೊಂಡು ಕಣ್ಣೀರು ಹಾಕಿ ಗೋಳಾಡಿದರು. ಮತ್ತೊಂದೆಡೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟುವಂತಿತ್ತು.
ಬಳಿಕ ಗ್ರಾಮದ ಹೊರ ವಲಯದಲ್ಲಿ ಕಿರಣ್ ಅಂತ್ಯಕ್ರಿಯೆ ನೆರವೇರಿತು. ನ್ಯಾಯಾಂಗ ಬಂಧನದಲ್ಲಿರುವ ಕಿರಣ್ ತಂದೆ ಕುಮಾರ್ ಅವರನ್ನು ಕೋರ್ಟ್ ಅನುಮತಿ ಪಡೆದು ಅಂತ್ಯಕ್ರಿಯೆಗೆ ಕರೆತಂದಿದ್ದ ಹಿನ್ನೆಲೆಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ತಿಮ್ಮಯ್ಯ, ಡಿವೈಎಸ್‌ಪಿ ಶಿವಮೂರ್ತಿ, ಸಿಪಿಐ ನಿರಂಜನ್ ಸ್ಥಳದಲ್ಲಿದ್ದು ಯಾವುದೇ ಅಹಿತಕರ ಘಟನೆ ಸಂಭವಿದಂತೆ ಗ್ರಾಮದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಿದ್ದರು. ಅಂತ್ಯಕ್ರಿಯೆ ಮುಗಿದ ಬಳಿಕ ಬಂಧಿತ ಆರೋಪಿ ಕುಮಾರ್‌ನನ್ನು ಜಿಲ್ಲಾ ಕಾರಾಗೃಹಕ್ಕೆ ಪೊಲೀಸರು ಕರೆದೊಯ್ದರು.