ದಾವಣಗೆರೆ: ಮಾತು ಕೇಳುವುದಿಲ್ಲ, ಹೊರಗೆ ಸುತ್ತಾಡುತ್ತಾನೆಂದು ಅಪ್ರಾಪ್ತ ಮಗನಿಗೆ ಕಬ್ಬಿಣದ ಪೈಪ್‌ನಿಂದ ಮಾರಣಾಂತಿಕ ಹಲ್ಲೆ ಮಾಡಿದ್ದ ಅಪರಾಧಿ ತಂದೆಗೆ ಈಗಾಗಲೇ 2 ವರ್ಷ 8 ತಿಂಗಳ ಕಾರಾಗೃಹದಲ್ಲಿ ಇದ್ದುದರಿಂದ ನ್ಯಾಯಾಂಗ ಬಂಧನ ಅವಧಿ ಪರಿಗಣಿಸಿ, ₹5 ಸಾವಿರ ದಂಡ ವಿಧಿಸಿ, ದಂಡ ಕಟ್ಟಲು ತಪ್ಪಿದಲ್ಲಿ 3 ತಿಂಗಳ ಕಾರಾಗೃಹ ಶಿಕ್ಷೆ ವಿಧಿಸಿ, ಸಂತ್ರಸ್ತ ಬಾಲಕನಿಗೆ ಸರ್ಕಾರದಿಂದ ₹1 ಲಕ್ಷ ಪರಿಹಾರ ನೀಡುವಂತೆ ಆದೇಶಿಸಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.
ಜಿಲ್ಲೆಯ ನ್ಯಾಮತಿ ಪಟ್ಟಣದ ಶಿವಾನಂದಪ್ಪ ಬಡಾವಣೆಯ ಅನಿಲಕುಮಾರ (45) ಶಿಕ್ಷೆಗೆ ಗುರಿಯಾದ ಅಪರಾಧಿ. 2021ರ ಜುಲೈ 17ರ ಬೆಳಗ್ಗೆ 10.30ರ ವೇಳೆ ಅಪ್ರಾಪ್ತ ಪುತ್ರನಿಗೆ ಕಬ್ಬಿಣದ ಪೈಪ್‌ನಿಂದ ಅನಿಲಕುಮಾರ ಹಲ್ಲೆ ಮಾಡುತ್ತಿದ್ದರು. ಈ ಬಗ್ಗೆ ನ್ಯಾಮತಿ ಪೊಲೀಸ್ ಠಾಣೆಯ ಹೆಡ್ ಕಾನ್ಸ್‌ಟೇಬಲ್ ಮಂಜಪ್ಪ ಗಸ್ತಿನಲ್ಲಿದ್ದಾಗ ದೊರೆತ ಮಾಹಿತಿ ಮೇರೆಗೆ ಸ್ಥಳಕ್ಕೆ ತೆರಳಿದ್ದರು. ಪ್ರಕರಣ ಸಂಬಂಧ ದೂರು ದಾಖಲಾಗಿತ್ತು. ಪಿಎಸ್‌ಐ ಪಿ.ಎಸ್.ರಮೇಶ ತನಿಖೆ ನಡೆಸಿ, ನ್ಯಾಯಾಲಯಕ್ಕೆ ಆರೋಪಿ ಅನಿಲಕುಮಾರ ವಿರುದ್ಧ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ನ್ಯಾಯಾಧೀಶೆ ರಾಜೇಶ್ವರಿ ಎನ್. ಹೆಗಡೆ ಪ್ರಕರಣದ ವಿಚಾರಣೆ ನಡೆಸಿ, ₹5 ಸಾವಿರ ದಂಡ ವಿಧಿಸಿದರು. ದಂಡ ತಪ್ಪಿದರೆ 3 ತಿಂಗಳ ಕಾರಾಗೃಹ ಶಿಕ್ಷೆ ವಿಧಿಸಿ, ಸಂತ್ರಸ್ತ ಬಾಲಕನಿಗೆ ಸರ್ಕಾರದಿಂದ ₹1 ಲಕ್ಷ ಪರಿಹಾರ ನೀಡುವಂತೆಯೂ ಆದೇಶ ಹೊರಡಿಸಿದ್ದಾರೆ,
ಪಿರ್ಯಾದಿ ಪರ ಸರ್ಕಾರಿ ವಕೀಲ ಬಿ.ಮಂಜುನಾಥ ವಾದ ಮಂಡಿಸಿದ್ದರು ಎಂದು ಎಸ್‌ಪಿ ಉಮಾ ಪ್ರಶಾಂತ, ಎಎಸ್‌ಪಿಗಳಾದ ವಿಜಯಕುಮಾರ ಎಂ.ಸಂತೋಷ, ಜಿ.ಮಂಜುನಾಥ ತಿಳಿಸಿದ್ದಾರೆ.