ಕನ್ನಡಪ್ರಭ ವಾರ್ತೆ, ಬೀದರ್
ಇಲ್ಲಿನ ನ್ಯಾಯಾಧೀಶರ ಮನೆಯಲ್ಲಿ ನಡೆದಿದ್ದ ಕಳ್ಳತನ ಪ್ರಕರಣವನ್ನು ಪೊಲೀಸರು ಬೇಧಿಸಿ ಮಹಾರಾಷ್ಟ್ರ ಹಾಗೂ ಮಧ್ಯಪ್ರದೇಶ ಮೂಲದ ಪಾರ್ದಿ ಸಮುದಾಯಕ್ಕೆ ಸೇರಿದ ಕಳ್ಳರ ತಂಡದ ಮೂವರನ್ನು ಮಂಗಳವಾರ ನಸುಕಿನಲ್ಲಿ ಬಂಧಿಸಿ ಸುಮಾರು 1.7ಲಕ್ಷ ರು. ಮೌಲ್ಯದ ಚಿನ್ನಾಭರಣಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ.ನಗರದ ಜನವಾಡಾ ರಸ್ತೆಯಲ್ಲಿನ ಎರಡನೇ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್‌ಸಿ -2 ನ್ಯಾಯಾಲಯದ ನ್ಯಾಯಾಧೀಶರಾದ ಎಂಡಿ ಶೈಜ್ ಚೌಠಾಯಿ ಅವರ ಮನೆಯಲ್ಲಿ ಮಾರ್ಚ್ 31ರ ತಡರಾತ್ರಿ ಮನೆಯಲ್ಲಿ ಯಾರೂ ಇಲ್ಲದ್ದನ್ನು ಖಚಿತಪಡಿಸಿಕೊಂಡು ಮನೆಯ ಬೀಗ ಮುರಿದು, ಅಲ್ಮಾರಾದಲ್ಲಿದ್ದ ಚಿನ್ನ, ಬೆಳ್ಳಿಯ ಆಭರಣಗಳನ್ನು ದೋಚಿ ಪರಾರಿಯಾಗಿದ್ದ ಪ್ರಕರಣದ ಬೆನ್ನಟ್ಟಿದ್ದ ಪೊಲೀಸರಿಗೆ ನಗರದಲ್ಲಿ ಇತ್ತೀಚೆಗಷ್ಟೇ ಸ್ಥಾಪಿಸಲಾಗಿರುವ ಎಐ ಕಮಾಂಡ್ ಕೇಂದ್ರ (ಸಿಸಿ ಟಿವಿ) ನೀಡಿದ ಸುಳಿವಿನ ಹಿನ್ನೆಲೆಯಲ್ಲಿ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.ತಂದೆ ಮಗ ಸೇರಿ ನಾಲ್ವರಿಂದ ಕಳ್ಳತನ :ಮಹಾರಾಷ್ಟ್ರದ ಔರಂಗಾಬಾದ್‌ನ ತಂದೆ ಮಗ ಇನ್ನಿಬ್ಬರ ಜೊತೆ ಸೇರಿ ಹೊಂಚು ಹಾಕಿ ಕಳ್ಳತನ ಮಾಡಿದ್ದು ಇಲ್ಲಿ ವಿಶೇಷವಾಗಿದ್ದು, ಪೊಲೀಸರು ಸದರಿ ತಂದೆ ಮಗ ಸೇರಿದಂತೆ ಮೂವರನ್ನು ಬಂಧಿಸಿದ್ದು, ಮಧ್ಯಪ್ರದೇಶದ ಇನ್ನೋರ್ವ ಆರೋಪಿಗಾಗಿ ಬಲೆ ಬೀಸಿದ್ದಾರೆ. ಇನ್ನು ಈ ಗ್ಯಾಂಗ್ ವಿರುದ್ಧ ಸಣ್ಣ ಪುಟ್ಟ ಅಪರಾಧಗಳ ಪ್ರಕರಣಗಳು ಕೆಲವೆಡೆ ದಾಖಲಾಗಿವೆ ಎಂದು ಎಸ್‌ಪಿ ತಿಳಿಸಿದರುನಾಲ್ವರು ಆರೋಪಿಗಳು ಕಳ್ಳತನ ಕೃತ್ಯ ನಡೆಸುವುದಕ್ಕೂ ಮುನ್ನ ರೈಲಿನಲ್ಲಿ ನಿತ್ಯ ಬಂದು ಹೋಗುತ್ತಿದ್ದ ಅವರು ಮುರ್ನಾಲ್ಕು ದಿನ ಬೀದರ್ ನಗರದ ವಿವಿಧೆಡೆ ತಿರುಗಾಡಿ ಬೀಗ ಜಡಿದ ಮನೆಗಳನ್ನು ಗಮನಿಸಿ ಈ ಕೃತ್ಯ ಎಸಗಿದ್ದಾರೆ. ಆರೋಪಿಗಳ ಪೈಕಿ ಮೂವರನ್ನು ಬೀದರ್ ಪೊಲೀಸರು ಮಹಾರಾಷ್ಟ್ರ ಪೊಲೀಸರ ಸಹಕಾರದೊಂದಿಗೆ ಅಲ್ಲಿನ ಲಾತೂರ್ ಜಿಲ್ಲೆಯ ಉದಗೀರ ರೈಲು ನಿಲ್ದಾಣದಲ್ಲಿ ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಕಳ್ಳತನ ಮಾಡಿದ್ದನ್ನು ಒಪ್ಪಿಕೊಂಡು ಕಳ್ಳತನ ಮಾಡಿದ್ದ ಸ್ವತ್ತಿನ ಪೈಕಿ 10ಗ್ರಾಂ ತೂಕದ ಬಂಗಾರದ ಚೈನ್ ಜೊತೆ ಪೆಂಡೆಂಟ್, ಎರಡು ಚಿನ್ನದ ಬಳೆಗಳು, 30 ಗ್ರಾಮ ಬೆಳ್ಳಿಯ ಉಂಗುರ ಸೇರಿದಂತೆ 1.77ಲಕ್ಷ ರು. ಮೌಲ್ಯದ ಸ್ವತ್ತನ್ನು ಅವರಿಂದ ಜಪ್ತಿ ಮಾಡಿಕೊಳ್ಳಲಾಗಿದೆ. ಇನ್ನುಳಿದ ಚಿನ್ನದ ಸ್ವತ್ತನ್ನು ಪರಾರಿಯಾಗಿರುವ ಆರೋಪಿ ಬಳಿ ಇದೆ ಎಂದು ಬಂಧನಕ್ಕೊಳಗಾದವರು ವಿಚಾರಣೆ ಸಂದರ್ಭ ಬಾಯಿಬಿಟ್ಟಿದ್ದು, ಸದರಿ ಆರೋಪಿ ಯನ್ನೂ ಶೀಘ್ರದಲ್ಲಿಯೇ ಬಂಧಿಸಿ ಕಳುವಾದ ಸ್ವತ್ತನ್ನು ಜಪ್ತಿ ಮಾಡಿ ಕಾನೂನು ಕ್ರಮ ವಹಿಸಲಾಗುತ್ತದೆ ಎಂದಿದ್ದಾರೆ.ನೂತನ ನಗರ ಠಾಣೆಯ ಸಿಪಿಐ ವಿಜಯಕುಮಾರ ನೇತೃತ್ವದಲ್ಲಿ ಪಿಎಸ್ಐ ಪ್ರಭಾಕರ ಪಾಟೀಲ್, ಸಿಬ್ಬಂದಿಳಾದ ಸಿಪಿಸಿ ಪ್ರಕಾಶ, ಸಿಪಿಸಿ ಮಲ್ಲಿಕಾರ್ಜುನ, ಸಿಪಿಸಿ ನಿಂಗಪ್ಪ ಅಲ್ಲಾಪೂರ ಹಾಗೂ ಗಾಂಧಿಗಂಜ್ ಪೊಲೀಸ್ ಠಾಣೆಯ ನವೀನ್ ಸಿಎಚ್ ಸಿ, ಗಂಗಾಧರ ಸಿಪಿಸಿ ಮತ್ತು ಇಮ್ರಾನ್ ಸಿಪಿಸಿ ಅವರ ತಂಡ ಈ ಪ್ರಕರಣ ಬೇಧಿಸುವಲ್ಲಿ ಶ್ರಮಿಸಿದ್ದು ಪ್ರಶಂಸನೀಯವಾಗಿದೆ ಎಂದು ಎಸ್ ಪಿ ಪ್ರದೀಪ ಗುಂಟಿ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಎಎಸ್ ಪಿ ಚಂದ್ರಕಾಂತ ಪೂಜಾರಿ ಇದ್ದರು.