ಕಾರ್ಕಳ: ಕಾರ್ಕಳ ಭಗವಾನ್ ಶ್ರೀ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕ ಕಾರ್ಕಳದಲ್ಲಿ 2027ರ ಫೆ.18ರಿಂದ 28ರವರೆಗೆ ವಿಜೃಂಭಣೆಯಿಂದ ನಡೆಯಲಿದೆ ಎಂದು ರಾಜಗುರು, ಧ್ಯಾನಯೋಗಿ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ ಅಧಿಕೃತವಾಗಿ ಘೋಷಿಸಿದ್ದಾರೆ.ಕಾರ್ಕಳದ ಬಾಹುಬಲಿ ಪ್ರವಚನ ಮಂದಿರದಲ್ಲಿ ಭಾನುವಾರ ನಡೆದ ಮಹಾಮಸ್ತಕಾಭಿಷೇಕ ಕಾರ್ಯಾಲಯ ಉದ್ಘಾಟನೆ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ದೇವರ ಸಾನ್ನಿಧ್ಯವನ್ನು ಸದಾ ಮನಸ್ಸಿನಲ್ಲಿ ನೆನೆಸಿಕೊಳ್ಳಬೇಕು, ಶಾಂತಿ ಮತ್ತು ಅಹಿಂಸೆಯೇ ಜೀವನದ ಮೂಲ ಮೌಲ್ಯಗಳು ಎಂದರು.
ಎಸ್‌ಸಿಡಿಸಿಸಿ ಬ್ಯಾಂಕ್ ರಾಜ್ಯದಲ್ಲಿ ಮಹಿಳೆಯರ ಸಹಕಾರದಿಂದ ಬೆಳೆದಿರುವುದು ಒಂದು ಉದಾಹರಣೆ. ಸಮಾಜವು ಸಂಕಷ್ಟಗಳನ್ನು ಎದುರಿಸಿ ಬೆಳೆದಿದೆ. ಸರ್ಕಾರದಿಂದಲೂ ಎಲ್ಲ ರೀತಿಯ ಸೌಲಭ್ಯಗಳು ಮತ್ತು ಅನುದಾನಗಳು ಲಭ್ಯವಾಗುತ್ತಿದ್ದು, ಅವನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಹೇಳಿದರು.
ಮಹಾಮಸ್ತಕಾಭಿಷೇಕ ಕಚೇರಿ ಉದ್ಘಾಟಿಸಿ ಮಾತನಾಡಿದ ಧರ್ಮಸ್ಥಳದ ಡಿ. ಹರ್ಷೇಂದ್ರ ಕುಮಾರ್ ಅವರು, ವೇಣೂರು, ಧರ್ಮಸ್ಥಳ ಹಾಗೂ ಕಾರ್ಕಳದ ಗೊಮಟೇಶ್ವರ ಮೂರ್ತಿಯ ಮಸ್ತಕಾಭಿಷೇಕವು 21ನೇ ಶತಮಾನದಲ್ಲಿ ನಡೆಯುತ್ತಿರುವುದು ವಿಶೇಷವಾಗಿದೆ. ದೇಶ-ವಿದೇಶಗಳಿಂದ ಆಗಮಿಸುವ ಭಕ್ತರಿಗೆ ಉತ್ತಮ ವ್ಯವಸ್ಥೆ ಕಲ್ಪಿಸುವುದು ನಮ್ಮ ಕರ್ತವ್ಯ. ಸಭೆಗಳಲ್ಲಿ ಸಮಯಪಾಲನೆ ಹಾಗೂ ಕಾರ್ಯನಿರ್ವಹಣೆಯಲ್ಲಿ ಶಿಸ್ತು ಮುಖ್ಯ ಎಂದು ಸಲಹೆ ನೀಡಿದರು.ಅದಾನಿ ಗ್ರೂಪ್ ಅಧ್ಯಕ್ಷ ಕಿಶೋರ್ ಆಳ್ವ ಮಾತನಾಡಿ, ಇದು ಐತಿಹಾಸಿಕ ಕ್ಷಣವಾಗಿದ್ದು, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಜೈನ ಸಮುದಾಯವು ಸಮಾಜಕ್ಕೆ ಮಹತ್ವದ ಕೊಡುಗೆ ನೀಡಿದೆ. ಜಿಲ್ಲೆಯ ಅಭಿವೃದ್ಧಿಯಲ್ಲಿಯೂ ಜೈನ ಧರ್ಮದ ಪಾತ್ರ ಅಪಾರವಾಗಿದೆ. ಎಲ್ಲ ಧರ್ಮದವರೂ ಕೈಜೋಡಿಸಿ ಈ ಮಹೋತ್ಸವವನ್ನು ಯಶಸ್ವಿಗೊಳಿಸಬೇಕು ಎಂದು ಕರೆ ನೀಡಿದರು.ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಮಹಾಮಸ್ತಕಾಭಿಷೇಕ ರಾಷ್ಟ್ರೀಯ ಹಬ್ಬದಂತೆ ಆಚರಿಸಬೇಕು. ಭಗವಾನ್ ಬಾಹುಬಲಿ ವಿಶ್ವಶಾಂತಿಯ ಸಂದೇಶ ನೀಡಿದ ಮಹಾನ್ ವ್ಯಕ್ತಿ. ಕೇಂದ್ರ ಸರ್ಕಾರದಿಂದ ಕಾರ್ಕಳಕ್ಕೆ ಅಗತ್ಯ ಸಹಕಾರವನ್ನು ಒದಗಿಸಲು ಪ್ರಯತ್ನಿಸಲಾಗುವುದು ಎಂದರು. ಜೈನ ಸಮುದಾಯವು ಶಾಂತಿಯ ಪ್ರತೀಕವಾಗಿದ್ದು, ಜಗತ್ತಿಗೆ ಉತ್ತಮ ಸಂದೇಶ ನೀಡಿದ ಸಮುದಾಯವಾಗಿದೆ ಎಂದು ಕೊಂಡಾಡಿದರು.
ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ್ ಅಳ್ವಮಾತನಾಡಿ, ತಮ್ಮ ಜೀವನದಲ್ಲಿ ನಾಲ್ಕು ಬಾರಿ ಮಹಾಮಸ್ತಕಾಭಿಷೇಕ ನೋಡುವ ಅವಕಾಶ ಸಿಕ್ಕಿರುವುದು ಪುಣ್ಯಕರ. ಡಾ. ರಾಜೇಂದ್ರ ಕುಮಾರ್ ಅವರ ನೇತೃತ್ವದಲ್ಲಿ ಈ ಬಾರಿ ಕೂಡ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲಿದೆ. ಅಳ್ವಾಸ್ ಸಂಸ್ಥೆಯು ಸಂಪೂರ್ಣ ಸಹಕಾರ ನೀಡಲಿದೆ ಎಂದು ಭರವಸೆ ನೀಡಿದರು.
ಅಳದಂಗಡಿ ಪದ್ಮಪ್ರಸಾದ್ ಅಜಿಲ, ಜೀವಂಧರ ಬಲ್ಲಾಳ್, ರತ್ನಾಕರ ರಾಜ್ ಅರಸರು, ಹೆಚ್ಚುವರಿ ಎಸ್ಪಿ ಸುಧಾಕರ ನಾಯ್ಕ್, ಶಶಿಪ್ರಸಾದ್, ಗುಣಪಾಲ ಕಡಂಬ, ಸಿ.ಕೆ. ಬಳ್ಳಾಲ್, ಪ್ರವೀಣ್ ಕುಮಾರ್ ಇಂದ್ರ, ಶ್ರೀಧರ ಕಡಂಬ, ವೈ. ಸೂರಜ್ ಕುಮಾರ್, ಅನಂತರಾಜ ಪುವಾಣಿ, ಸಂಪತ್ ಸಾಮ್ರಾಜ್ಯ, ಸುದೀರ್ ಪಡಿವಾಳ್, ಜಿಪಂ ಸಿಇಒ ಪ್ರತಿಕ್ ಬಾಯಲ್, ಡಿವೈಎಸ್ಪಿ ಮಹೇಶ್ ಪ್ರಸಾದ್, ದೇವಿಪ್ರಸಾದ್ ಶೆಟ್ಟಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.ಸರ್ವೇಶ್ ಜೈನ್ ಪ್ರಾರ್ಥಿಸಿದರು. ಪ್ರಧಾನ ಕಾರ್ಯದರ್ಶಿ ಪುಷ್ಪರಾಜ್ ಜೈನ್ ಸ್ವಾಗತಿಸಿದರು. ಅಜಿತ್ ಕೊಕ್ರಾಡಿ ನಿರೂಪಿಸಿದರು. ಮೋಹನ್ ಪಡಿವಾಳ್ ವಂದಿಸಿದರು.ಈ ಸಂದರ್ಭ ಸಹಕಾರ ರತ್ನ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅವರು ಮಹಾಮಸ್ತಕಾಭಿಷೇಕಕ್ಕಾಗಿ 3 ಲಕ್ಷ ರು. ದೇಣಿಗೆ ನೀಡುವ ಮೂಲಕ ಮಹೋತ್ಸವದ ಯಶಸ್ಸಿಗೆ ತಮ್ಮ ಕೊಡುಗೆ ಸಲ್ಲಿಸಿದರು.