ಜಾನುವಾರುಗಳಿಗೆ ಮೇವಿನ ಕೊರತೆ ಭೀತಿ!

KannadaprabhaNewsNetwork |  
Published : Sep 27, 2026, 02:30 AM IST
ಟ್ರ್ಯಾಕ್ಟರ್‌ ಮೂಲಕ ಮೆಕ್ಕೆಜೋಳದ ಬೆಳೆಯನ್ನು ತೆಗೆದುಕೊಂಡು ಹೋಗುತ್ತಿರುವ ರೈತರು. | Kannada Prabha

ಸಾರಾಂಶ

ಜಾಗತಿಕ ಹವಾಮಾನ ವೈಪರೀತ್ಯದ (ಎಲ್‌ ನಿನೊ) ಪರಿಣಾಮ ಮುಂಗಾರು ಮಳೆ ಕೊರತೆಯಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಇದೀಗ ಜಾನುವಾರುಗಳ ನಿರ್ವಹಣೆಯೂ ದೊಡ್ಡ ಸವಾಲಾಗಿ ಪರಿಣಮಿಸಿದೆ.

ನಾಗರಾಜ ಮಾರೇರ

ಹುಬ್ಬಳ್ಳಿ:

ಜಾಗತಿಕ ಹವಾಮಾನ ವೈಪರೀತ್ಯದ (ಎಲ್‌ ನಿನೊ) ಪರಿಣಾಮ ಮುಂಗಾರು ಮಳೆ ಕೊರತೆಯಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಇದೀಗ ಜಾನುವಾರುಗಳ ನಿರ್ವಹಣೆಯೂ ದೊಡ್ಡ ಸವಾಲಾಗಿ ಪರಿಣಮಿಸಿದೆ.

ಮುಂಗಾರು ಪೂರ್ವ ಮಳೆ ಉತ್ತಮವಾಗಿ ಸುರಿದ ಪರಿಣಾಮ ರೈತರು ಸಾಲ ಮಾಡಿ ಬಿತ್ತನೆ ಮಾಡಿದ್ದರು. ದಿನ ಕಳದಂತೆ ಎಲ್‌ ನಿನೊ ಪರಿಣಾಮ ಮುಂಗಾರು ಕ್ಷೀಣಿಸಿತು. ಇದರಿಂದ ಬಿತ್ತಿದ ಬೆಳೆ ಉಳಿಸಿಕೊಳ್ಳಲು ರೈತರು ಟ್ಯಾಂಕರ್‌ ನೀರು, ಚರಂಡಿ ನೀರು ಹರಿಸಿ ಬೆಳೆ ರಕ್ಷಿಸಿಕೊಳ್ಳಲು ಪ್ರಯತ್ನಿಸಿದರೂ ಫಲ ನೀಡಿಲಿಲ್ಲ. ಇದರಿಂದ ಬಿತ್ತಿದ ಬೆಳೆ ಭೂಮಿಯ ಒಡಲಲ್ಲಿ ಕಮರಿ ಮಣ್ಣಾಗಿದೆ. ಅಳಿದು ಬೆಳೆದ ಬೆಳೆಯೂ ತೇವಾಂಶ ಕೊರತೆ ಹಾಗೂ ಭೀಕರ ಬಿಸಿಲಿನ ಪರಿಣಾಮ ದಷ್ಟ-ಪುಷ್ಠವಾಗಿ ಬೆಳೆದಿಲ್ಲ. ಇದರಿಂದ ರೈತರು ಬಿತ್ತನೆಗೆ ಮಾಡಿದ ಖರ್ಚು ಸಹ ಮರಳಿ ಬರದೆ ಆರ್ಥಿಕ ಬರೆಗೆ ಸಿಲುಕಿದ್ದಾರೆ.

38000 ಹೆಕ್ಟೇರ್‌ ಬಿತ್ತನೆ:

ಧಾರವಾಡ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ 38000 ಹೆಕ್ಟೇರ್‌ ಪ್ರದೇಶದಲ್ಲಿ ಮೆಕ್ಕೆಜೋಳ ಬಿತ್ತನೆ ಮಾಡಿದ್ದು ಅರ್ಧದಷ್ಟು ಬೆಳೆ ಮಳೆ ಕೊರತೆಯಿಂದ ಭೂಮಿ ಬಿಟ್ಟು ಮೇಲೆದಿಲ್ಲ. ಉಳಿದ ಬೆಳೆಯೂ ಸರಿಯಾಗಿ ಕಾಳು ಕಟ್ಟಿಲ್ಲ. ಕಳೆದ ವರ್ಷ ಎಕರೆ 15ರಿಂದ 20 ಕ್ವಿಂಟಲ್‌ ಇಳುವರಿ ಪಡೆದಿದ್ದ ರೈತರು ಈ ಬಾರಿ ಎಕರೆ 5 ಕ್ವಿಂಟಲ್‌ ಇಳುವರಿ ಬಂದರೆ ಅದೇ ದೊಡ್ಡದು ಎನ್ನುತ್ತಾರೆ.

ಮೇವಿಗೆ ಭಾರಿ ಡಿಮ್ಯಾಂಡ್‌:

ತೀವ್ರ ಬರದಿಂದ ಈಗಾಗಲೇ ಗ್ರಾಮೀಣ ಪ್ರದೇಶದಲ್ಲಿ ದಾಹ ತೀರಿಸಿಕೊಳ್ಳಲು ಪರಿದಾಡುತ್ತಿರುವ ಜನರು, ದಾಹ ನೀಗಿಸಿಕೊಳ್ಳಲು ಜಲಮೂಲ ಹುಡುಕುವ ಜತೆಗೆ ತಮ್ಮ ಜೀವನ ಅವಿಭಾಜ್ಯ ಅಂಗವಾಗಿರುವ ಜಾನುವಾರು ಸಾಕಲು ಮೇವಿಗೂ ಕಂಡ ಕಂಡ ಹೊಲಗಳಿಗೆ ಎಡತಾಕುತ್ತಿದ್ದಾರೆ. ಕಳೆದ ವರ್ಷ ಉತ್ತಮ ಮೆಕ್ಕೆಜೋಳ ಬೆಳೆದಿದ್ದರೂ ಅದರ ಮೇವನ್ನು ಸಂಗ್ರಹಿಸಿ ಇಟ್ಟುಕೊಳ್ಳದೆ ರೂಟರ್‌ ಮೂಲಕ ನಾಶ ಮಾಡಿದ್ದ ರೈತರು ಈ ವರ್ಷ ಯಾಕಾದರೂ ಮೇವು ನಾಶ ಮಾಡಿದೇವು ಎಂದು ಪ್ರಶ್ನಿಸಿಕೊಳ್ಳುತ್ತಿದ್ದಾರೆ. ಜಾನುವಾರುಗಳು ಇಲ್ಲದ ಸಣ್ಣ ಹಿಡುವಳಿದಾರರ ಬಳಿ ತೆರಳಿ ಮೆಕ್ಕೆಜೋಳದ ಮೇವು ನಾಶ ಮಾಡಬೇಡಿ. ಅದನ್ನು ನಾವೇ ಕಟ್ಟಾವು ಮಾಡಿಕೊಳ್ಳುತ್ತೇವೆ. ಬೇಕಾದರೆ ನಿಮಗೆ ಇತಿಂಷ್ಟು ಹಣ ನೀಡುತ್ತೇವೆಂದು ಹೇಳುತ್ತಿದ್ದಾರೆ. ಇದರ ಪರಿಣಾಮ ಒಂದು ಟ್ರ್ಯಾಕ್ಟರ್‌ ಮೇವಿಗೆ ₹ 5000ರಿಂದ ₹ 10000( ಬೆಳೆಗೆ ತಕ್ಕಂತೆ) ಮಾರಾಟ ಮಾಡಲಾಗುತ್ತಿದೆ. ಕೆಲವರು ಮುಗಂಡ ಹಣ ನೀಡುತ್ತಿರುವ ಪರಿಣಾಮ ಗೊಬ್ಬರವಾಗುತ್ತಿದ್ದ ಮೆಕ್ಕೆಜೋಳದ ಮೇವಿಗೆ ಭಾರೀ ಡಿಮ್ಯಾಂಡ್‌ ಬಂದಂತೆ ಆಗಿದೆ.

ಮೇವು ರಕ್ಷಿಸಿಕೊಳ್ಳಿ:

ಮಳೆ ಕೊರತೆಯಿಂದ ಮುಂಬರುವ ದಿನಗಳಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆ ಎದುರಾಗುವ ಸಾಧ್ಯತೆ ಇದ್ದು ಮೆಕ್ಕೆಜೋಳದ ಮೇವು ನಾಶಪಡಿಸಿದೆ ಸಂರಕ್ಷಿಸಿಕೊಳ್ಳುವಂತೆ ಜಿಲ್ಲಾಡಳಿತ ಹಾಗೂ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ರೈತರಿಗೆ ಕರೆ ನೀಡಿದೆ. ಹೆಚ್ಚುವರಿ ಮೇವಿನ ಲಭ್ಯವಿದ್ದರೆ ಪಶು ಇಲಾಖೆಯಲ್ಲಿ ಹೆಸರು ನೋಂದಾಯಿಸಿಕೊಳ್ಳುವಂತೆಯೂ ತಿಳಿಸಿದೆ.ಸೋಯಾಬಿನ್‌ ಹೊಟ್ಟಿಗೂ ಪೈಪೋಟಿ

ಸೋಯಾಬಿನ್‌ ಕಟಾವು ಮುಕ್ತಾಯದ ಹಂತ ತಲುಪಿದ್ದು ಅದರ ಹೊಟ್ಟು ಸಂರಕ್ಷಣೆಗೂ ರೈತರು ಆದ್ಯತೆ ನೀಡುತ್ತಿದ್ದಾರೆ. ಪ್ರತಿ ವರ್ಷ ಮಷಿನ್‌ ಮೂಲಕ ಬೆಳೆ ಕಟಾವು ಮಾಡಿಸುತ್ತಿದ್ದ ಸಣ್ಣ ಹಿಡುವಳಿದಾರರು ಕಾರ್ಮಿಕರಿಂದಲೇ ಬೆಳೆ ಕಟಾವು ಮಾಡಿಸಿ ಹೊಟ್ಟು ಸಂಗ್ರಹಿಸಿ ಮಾರಾಟ ಮಾಡಲು ಮುಂದಾಗಿದ್ದಾರೆ.

ಮುಂದಿನ ದಿನಗಳಲ್ಲಿ ಮಳೆ ಕೊರತೆಯಿಂದ ಎದುರಾಗಬಹುದಾದ ಮೇವಿನ ಸಮಸ್ಯೆಯನ್ನು ಸಮರ್ಥವಾಗಿ ಎದುರಿಸಲು ರೈತರು ಈಗಿನಿಂದಲೇ ಮೇವು ಸಂರಕ್ಷಣೆಗೆ ಆದ್ಯತೆ ನೀಡಬೇಕು. ಯಾವುದೇ ಕಾರಣಕ್ಕೂ ಮೇವಿಗೆ ಸುಟ್ಟು ಹಾಕಬಾರದು.

ಸ್ನೇಹಲ್‌ ಆರ್‌. ಜಿಲ್ಲಾಧಿಕಾರಿ

ಪ್ರತಿ ವರ್ಷವೂ ಮೆಕ್ಕೆಜೋಳದ ಮೇವನ್ನು ಕಟಾವು ಮಾಡಿಕೊಟ್ಟರು ಯಾರು ತೆಗೆದುಕೊಂಡು ಹೋಗುತ್ತಿರಲಿಲ್ಲ. ಇದರಿಂದ ನಾವು ಅದನ್ನು ರೂಟರ್‌ ಹೊಡಿಸುವ

ಅಥವಾ ಬೆಂಕಿ ಹಚ್ಚುತ್ತಿದ್ದವು. ಆದರೆ, ಈ ವರ್ಷ ಕೆಲವರು ಮೇವು ನಾಶಪಡಿಸಬೇಡಿ. ನಾವೇ ಕಟಾವು ಮಾಡಿಕೊಂಡು ಹೋಗುತ್ತೇವೆ ಎಂದು ಹೇಳುತ್ತಿದ್ದಾರೆ. ಒಂದು ಕಾಲದಲ್ಲಿ ಬೇಡವಾಗಿದ್ದ ಮೇವಿಗೆ ಬರದ ಬಿಸಿ ತಟ್ಟಿದ್ದರಿಂದ ಡಿಮ್ಯಾಂಡ್‌ ಬಂದಿದೆ.

ಪರಮೇಶ ಸಾರದ, ರೈತ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಿರಿಯರನ್ನು ಗೌರವದಿಂದ ಕಾಣುವುದು ಪ್ರತಿಯೊಬ್ಬರ ಕರ್ತವ್ಯ
ಅಲಿಗದ್ದ ಕಡಲತೀರದಲ್ಲಿ ಸ್ವಚ್ಛತಾ ಅಭಿಯಾನ