ರಾಜೀನಾಮೆಗೆ ಹೆದರಿ ಹುಲಿ ಇಲಿತರ ಬಿಲ ಸೇರಿದೆ : ಎಸ್‌.ಎಂ.ಪಾಟೀಲ

KannadaprabhaNewsNetwork |  
Published : May 10, 2025, 01:13 AM ISTUpdated : May 10, 2025, 11:29 AM IST
ಗಣಿಹಾರ ಸುದ್ದಿಗೋಷ್ಠಿ. ಪಾಕಿಸ್ತಾನದ ಮೇಲೆ ಭಾರತದ ಕ್ರಮ ಸ್ವಾಗತ | Kannada Prabha

ಸಾರಾಂಶ

 ರಾಜೀನಾಮೆಗೆ ಹೆದರಿ ಹುಲಿ ಇಲಿಯಾಗಿ ಬಿಲ ಸೇರಿದೆ ಎಂದು ಅಹಿಂದ ಮುಖಂಡ ಕೆಪಿಸಿಸಿ ವಕ್ತಾರ ಎಸ್‌.ಎಂ.ಪಾಟೀಲ ಗಣಿಹಾರ ಟೀಕಿಸಿದರು.

 ವಿಜಯಪುರ : ನಗರದ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಈ ಹಿಂದೆ ಮಾತನಾಡುವಾಗ, ಶಿವಾನಂದ ಪಾಟೀಲರು, ವಿಜಯಾನಂದ ಕಾಶಪ್ಪನವರ ರಾಜೀನಾಮೆ ಕೊಡಲಿ, ನಾನು ಇಬ್ಬರನ್ನೂ ಸೋಲಿಸುತ್ತೇನೆ ಎಂದಿದ್ದರು. ಸಚಿವ ಶಿವಾನಂದ ಪಾಟೀಲ ರಾಜೀನಾಮೆ ಕೊಟ್ಟರು. ಆದರೆ ಯತ್ನಾಳ ಕೊಡಲಿಲ್ಲ. ರಾಜೀನಾಮೆಗೆ ಹೆದರಿ ಹುಲಿ ಇಲಿಯಾಗಿ ಬಿಲ ಸೇರಿದೆ ಎಂದು ಅಹಿಂದ ಮುಖಂಡ ಕೆಪಿಸಿಸಿ ವಕ್ತಾರ ಎಸ್‌.ಎಂ.ಪಾಟೀಲ ಗಣಿಹಾರ ಟೀಕಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮತದಾರರ, ಬೆಂಬಲಿಗರ ಮರ್ಯಾದೆ ಉಳಿಸಲು ರಾಜೀನಾಮೆ ನೀಡಿ, ಮತ್ತೆ ನಿಂತು ಚುನಾಯಿತರಾಗಬೇಕು. ಆಗದಿದ್ದರೆ ಸೋಲೊಪ್ಪಿಕೊಂಡು ಸುಮ್ಮನೆ ಇರಬೇಕು. ಬಿಜೆಪಿ ಕಾರ್ಯಕರ್ತರು ಸಹ ಬಸನಗೌಡರ ರಾಜೀನಾಮೆ ಕೇಳಬೇಕು. ಯತ್ನಾಳ‌ ಅವರ ಪರಿಸ್ಥಿತಿ ನೋಡಿದರೆ ಅವರು ಸೋಲು ಒಪ್ಪಿಕೊಂಡಂತೆ. ಉಚ್ಚಾಟನೆ ಬಳಿಕ ಮತ್ತೆ ಮೋದಿ, ಅಮಿತ್ ಶಾ ಎನ್ನುತ್ತಿರುವ ಇವರಿಗೆ ಐಟಿ, ಇಡಿ ರೇಡ್ ಭಯವಿದೆ. ಹಾಗಾಗಿ ಬಿಜೆಪಿ ಕೇಂದ್ರ ನಾಯಕರಿಗೆ ಫೇವರ್ ಆಗಿ ಮಾತನಾಡುತ್ತಾರೆ ಎಂದರು.

ಪಹಲ್ಗಾಮ್‌ ದಾಳಿಕೋರರ ಉಗ್ರರ ಅಡಗುತಾಣಗಳನ್ನು ಸಿಂದೂರ ಕಾರ್ಯಾಚರಣೆ ಹೆಸರಿನಲ್ಲಿ ಹೊಡೆದುರುಳಿಸಿದ್ದನ್ನು ನಾವು ಮುಕ್ತ ಮನಸಿನಿಂದ ಸ್ವಾಗತಿಸುತ್ತೇವೆ ಎಂದು ಹೇಳಿದರು. ಉಗ್ರರ ಉಪಟಳ ಜಾಸ್ತಿಯಾಗಿದ್ದರಿಂದ ಪ್ರತಿದಾಳಿ ಮಾಡುವುದು ಭಾರತಕ್ಕೆ ಅವಶ್ಯವಿತ್ತು. ಭಾರತ ಸರ್ಕಾರ ಈ ಬಾರಿ ಚಾಕಚಕ್ಯತೆಯಿಂದ ಕೆಲಸ‌ ಮಾಡಿ ಉಗ್ರರಿಗೆ ಹಾಗೂ ಪಾಕಿಸ್ತಾನಕ್ಕೆ ಬಿಸಿ ಮುಟ್ಟಿಸಿದೆ. ಭಾರತೀಯ ಸೈನಿಕರಿಗೆ ಪಕ್ಷದ ವತಿಯಿಂದ ಹಾಗೂ ನಾಡಿನ ಜನತೆ ಪರವಾಗಿ ಅಭಿನಂದಿಸುವುದಾಗಿ ತಿಳಿಸಿದರು.

ಮುಖಂಡ ಎಂ.ಸಿ.ಮುಲ್ಲಾ ಮಾತನಾಡಿ, ವೈರಿ ದೇಶ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಿದ ಭಾರತದ ಸೈನಿಕರಿಗೆ ಕೋಟಿ ಕೋಟಿ ಅಭಿನಂದನೆ. ಭಾರತ ಸರ್ಕಾರಕ್ಕೂ ಅಭಿನಂದನೆ ಎಂದರು.

ಸುದ್ದಿಗೋಷ್ಠಿಯಲ್ಲಿ ಡಾ.ರವಿಕುಮಾರ ಬಿರಾದಾರ, ನಾಗರಾಜ ಲಂಬು, ಫಯಾಜ್ ಕಲಾದಗಿ ಉಪಸ್ಥಿತರಿದ್ದರು.

ಯತ್ನಾಳಗೆ ಸೀರೆ, ಬಳೆ ರವಾನೆ

ಸಚಿವ ಶಿವಾನಂದ ಪಾಟೀಲ ಅವರ ಪ್ರತಿ ಸವಾಲಿಗೆ ಹಿಂದೆ ಸರಿದಿದ್ದರಿಂದ ಯತ್ನಾಳ ಅವರಿಗೆ ಒಂದು ಉಡುಗೊರೆ ಕಳಿಸುತ್ತೇವೆ. ಇಲಕಲ್ ಸೀರೆ, ಗಾಜಿನ ಬಳೆಗಳನ್ನು ಸುದ್ದಿಗೋಷ್ಠಿಯಲ್ಲಿ ಪ್ರದರ್ಶಿಸಿದರು. ಬಳಿಕ ಯತ್ನಾಳ ಅವರ ಮನೆಗೆ ಕೊರಿಯರ್‌ ಮೂಲಕ ಇವುಗಳನ್ನು ಕಳುಹಿಸುತ್ತಿದ್ದೇವೆ. ಆದರೆ ಇದು ಮಹಿಳೆಯರಿಗೆ ಅವಮಾನ ಮಾಡುವ ಉದ್ದೇಶವಿಲ್ಲ. ಉಗ್ರರ ಸದೆ ಬಡೆಯುವಲ್ಲಿ ಹೇಗೆ ಭಾರತದ ಇಬ್ಬರು ಮಹಿಳೆಯರು ಸಫಲರಾಗಿದ್ದಾರೋ. ಹಾಗೆಯೇ ಯತ್ನಾಳ ಅವರಿಗೂ ಆ ಧೈರ್ಯಶಾಲಿ ಮಹಿಳೆಯರಂತೆ ಸೀರೆಯನ್ನುಟ್ಟು ಶಕ್ತಿಶಾಲಿಯಾಗಿ ರಾಜೀನಾಮೆ‌ ನೀಡಿ ಚುನಾವಣೆಗೆ ನಿಲ್ಲಲಿ ಎಂದು ಟೀಕಿಸಿದರು. ವಿಜಯಾನಂದ ಕಾಶಪ್ಪನವರ ಕ್ಷೇತ್ರದ ಇಲಕಲ್‌ ಸೀರೆ ಹಾಗೂ ಬಸವನ ಬಾಗೇವಾಡಿಯ ಬಳೆ ಕೊಟ್ಟು ಅವರ ಸವಾಲು ಯತ್ನಾಳಗೆ ಎಸೆಯುತ್ತಿದ್ದೇವೆ ಎಂದರು.

PREV

Recommended Stories

15 ವರ್ಷ ಮೇಲ್ಪಟ್ಟ ಸರ್ಕಾರಿ ವಾಹನ ಗುಜರಿಗೆ: ಆದೇಶ
ಹಾಸಿಗೆ, ದಿಂಬಿಗಾಗಿ ಮತ್ತೆ ಕೋರ್ಟಲ್ಲಿ ಅಂಗಲಾಚಿದ ಕೊಲೆ ಆರೋಪಿ ದರ್ಶನ್‌