ಹೆದ್ದಾರಿ ಒತ್ತುವರಿ ತೆರವಿಗೆ ಫೆ.15ರವರೆಗೆ ಗಡುವು: ಎಡಿಸಿ

KannadaprabhaNewsNetwork |  
Published : Feb 02, 2026, 02:00 AM IST
27ಕೆಎಂಎನ್‌ಡಿ-4ಮಂಡ್ಯದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ರಾಷ್ಡೀಯ ಹೆದ್ದಾರಿ ಪ್ರಾಧಿಕಾರ, ಉಪವಿಭಾಗಾಧಿಕಾರಿ, ತಹಶೀಲ್ದಾರ್, ನಗರಸಭೆ ಅಧಿಕಾರಿಗಳು ಮತ್ತು ಕನ್ನಡಪರ ಸಂಘಟನೆಗಳ ಜಂಟಿ ಸಭೆಯನ್ನುದ್ದೇಶಿಸಿ ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ ಮಾತನಾಡಿದರು.  | Kannada Prabha

ಸಾರಾಂಶ

₹೩೦ ಕೋಟಿ ವೆಚ್ಚದಲ್ಲಿ ಉಮ್ಮಡಹಳ್ಳಿ ಗೇಟ್‌ನಿಂದ ಕಿರಂಗೂರುವರೆಗೆ ಹೆದ್ದಾರಿ ನಿರ್ಮಾಣ ಹಾಗೂ ನಗರದಲ್ಲಿ ಪಾದಚಾರಿ ಮಾರ್ಗದ ವಿಸ್ತರಣೆಯಾಗುತ್ತಿದೆ. ಕೆಲವೆಡೆ ಪಾದಚಾರಿ ಮಾರ್ಗದ ಒತ್ತುವರಿಯಿಂದಾಗಿ ಸಾರ್ವಜನಿಕರು ಅನಾನೂಕೂಲ ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಒತ್ತುವರಿ ತೆರವಿಗೆ ಕನ್ನಡ ಪರ ಸಂಘಟನೆಗಳು ಹೋರಾಟ ನಡೆಸುತ್ತಿವೆ.

ಕನ್ನಡಪ್ರಭ ವಾರ್ತೆ ಮಂಡ್ಯ

ನಗರ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಹಾದುಹೋಗುವ ಎಸ್‌.ಡಿ.ಜಯರಾಂ ವೃತ್ತದಿಂದ ಮಹಾವೀರ ವೃತ್ತದವರೆಗಿನ ಪಾದಚಾರಿ ಮಾರ್ಗದ ಒತ್ತುವರಿಯನ್ನು ಫೆ.15 ರೊಳಗೆ ತೆರವುಗೊಳಿಸಿ ವಿಶಾಲ ಪಾದಚಾರಿ ಮಾರ್ಗ ರೂಪಿಸುವಂತೆ ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಉಪವಿಭಾಗಾಧಿಕಾರಿ, ತಹಸೀಲ್ದಾರ್, ನಗರಸಭೆ ಅಧಿಕಾರಿಗಳು ಮತ್ತು ಕನ್ನಡಪರ ಸಂಘಟನೆಗಳ ಜಂಟಿ ಸಭೆಯನ್ನುದ್ದೇಶಿಸಿ ಮಾತನಾಡಿ, ₹೩೦ ಕೋಟಿ ವೆಚ್ಚದಲ್ಲಿ ಉಮ್ಮಡಹಳ್ಳಿ ಗೇಟ್‌ನಿಂದ ಕಿರಂಗೂರುವರೆಗೆ ಹೆದ್ದಾರಿ ನಿರ್ಮಾಣ ಹಾಗೂ ನಗರದಲ್ಲಿ ಪಾದಚಾರಿ ಮಾರ್ಗದ ವಿಸ್ತರಣೆಯಾಗುತ್ತಿದೆ. ಕೆಲವೆಡೆ ಪಾದಚಾರಿ ಮಾರ್ಗದ ಒತ್ತುವರಿಯಿಂದಾಗಿ ಸಾರ್ವಜನಿಕರು ಅನಾನೂಕೂಲ ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಒತ್ತುವರಿ ತೆರವಿಗೆ ಕನ್ನಡ ಪರ ಸಂಘಟನೆಗಳು ಹೋರಾಟ ನಡೆಸುತ್ತಿವೆ. ನಗರದ ಅಭಿವೃದ್ಧಿ ಹಾಗೂ ಸುವ್ಯವಸ್ಥಿತ ಸಂಚಾರದ ಕಾರಣಕ್ಕೆ ಫೆ.15 ರೊಳಗೆ ಒತ್ತುವರಿ ತೆರವುಗೊಳ್ಳಬೇಕು. ಅದಕ್ಕೂ ಮುಂಚೆ ನಿಯಮಾನುಸಾರ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕರುನಾಡ ಸೇವಕರು ಸಂಘಟನೆಯ ರಾಜ್ಯ ವಕ್ತಾರ ಎಂ.ಬಿ.ನಾಗಣ್ಣಗೌಡ ಮಾತನಾಡಿ, ನಗರದಲ್ಲಿ ಕ್ರಮಬದ್ಧವಾಗಿ ಪಾದಚಾರಿ ಮಾರ್ಗ ನಿರ್ಮಾಣವಾಗುತ್ತಿಲ್ಲ. ಕೆಲವೆಡೆ ಮೂವತ್ತು ಅಡಿಗೆ ಮತ್ತೊಂದು ಕಡೆ ಮೂರು ಅಡಿಗೆ ಪಾದಚಾರಿ ಮಾರ್ಗ ನಿರ್ಮಿಸಲಾಗುತ್ತಿದೆ. ನಿಯಮದ ಪ್ರಕಾರ ರಾಷ್ಟ್ರೀಯ ಹೆದ್ದಾರಿ ಮಧ್ಯಭಾಗದಿಂದ ಎರಡು ಭಾಗದಲ್ಲೂ ತಲಾ ೨೦ ಮೀಟರ್ ಅಂತರದವರೆಗೆ ಯಾವುದೇ ಕಟ್ಟಡ ನಿರ್ಮಿಸುವಂತಿಲ್ಲ. ಆದರೆ, ಒತ್ತುವರಿ ತೆರವುಗೊಳಿಸಿ ಪಾದಚಾರಿ ಮಾರ್ಗ ನಿರ್ಮಿಸದೆ ಅವೈಜ್ಞಾನಿಕ ಕಾಮಗಾರಿ ನಡೆಸಲಾಗುತ್ತಿದೆ. ದಾಸೇಗೌಡ ವೃತ್ತದಲ್ಲಿ ರಸ್ತೆಗೂ ಪಾದಚಾರಿ ಮಾರ್ಗಕ್ಕೂ ಯಾವುದೇ ವ್ಯತ್ಯಾಸ ಇಲ್ಲದಂತಾಗಿದೆ. ಭೂಗತ ಗ್ಯಾಸ್ ಪೈಪ್ ಲೈನ್ ಇದರಿಂದ ಹಾನಿಗೊಳಗಾಗುವ ಸಾಧ್ಯತೆ ಹೆಚ್ಚಿದೆ. ನಗರದುದ್ದಕ್ಕೂ ಸಮ ಪ್ರಮಾಣದ ಪಾದಚಾರಿ ಮಾರ್ಗ ನಿರ್ಮಾಣವಾಗಬೇಕು. ಯಾವುದೇ ಒತ್ತಡಕ್ಕೆ ಮಣಿಯಬಾರದು ಎಂದು ಒತ್ತಾಯಿಸಿದರು.

ನಗರಸಭೆ ಆಯುಕ್ತೆ ಯು.ಪಿ.ಪಂಪಾಶ್ರೀ ಮಾತನಾಡಿ, ಎಸ್‌.ಡಿ.ಜಯರಾಂ ವೃತ್ತದಿಂದ ಮಹಾವೀರ ವೃತ್ತದವರೆಗೆ ಒಟ್ಟು ೩೨ ಆಸ್ತಿಗಳು ಇದ್ದು, ಈಗಾಗಲೇ ೧೪ ಮಂದಿಗೆ ನೋಟಿಸ್ ಜಾರಿ ಮಾಡಲಾಗಿದೆ. ಇನ್ನುಳಿದವರಿಗೂ ನೋಟಿಸ್ ಜಾರಿಗೊಳಿಸಲಾಗುವುದು ಎಂದು ಸಭೆಗೆ ತಿಳಿಸಿದರು.

ಮಾಲೀಕರ ಆಸ್ತಿ ಖಾತೆಯ ಬದಲು ಮೂಲ ಖರೀದಿ, ಮಂಜೂರಾತಿ ದಾಖಲೆಗಳನ್ನು ಪರಿಶೀಲಿಸಿ ಫೆ.೧೫ ರೊಳಗೆ ಒತ್ತುವರಿ ತೆರವುಗೊಳಿಸುವಂತೆ ಅಪರ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.

ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಎಚ್‌.ಡಿ.ಜಯರಾಮ್‌ ಸಭೆಯಲ್ಲಿ ಮಾತನಾಡಿ, ನಗರದಲ್ಲಿ ನಕ್ಷೆ ಉಲ್ಲಂಘಿಸಿ ಕಟ್ಟಡ ನಿರ್ಮಾಣವಾಗುತ್ತಿದ್ದು, ಅಗತ್ಯ ಕ್ರಮ ತೆಗೆದುಕೊಳ್ಳುವಲ್ಲಿ ನಗರಸಭೆ ವಿಫಲವಾಗಿದೆ. ವಿವಿ ರಸ್ತೆಯಲ್ಲಿ ಎಸ್ ಬಿ ಐ ಬ್ಯಾಂಕ್ ಎದುರಿನ ಗಲ್ಲಿಗೆ ಖಾಸಗಿ ವ್ಯಕ್ತಿಗಳು ಬೀಗ ಜಡಿದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ಕುಡಿಯುವ ನೀರು, ಶೌಚಾಲಯದ ವ್ಯವಸ್ಥೆ ಇಲ್ಲವಾಗಿದೆ. ಸರ್ವೀಸ್ ರಸ್ತೆಗಳಲ್ಲಿ ಅವೈಜ್ಞಾನಿಕವಾಗಿ ರಸ್ತೆ ಉಬ್ಬುಗಳನ್ನು ನಿರ್ಮಿಸಲಾಗಿದೆ. ಹಲವೆಡೆ ಗ್ರಾಮಗಳ ಚರಂಡಿ ನೀರು ರಸ್ತೆಗೆ ಹರಿಯುತ್ತಿದ್ದರೂ ಪ್ರಾಧಿಕಾರ ಟೋಲ್ ಸಂಗ್ರಹಕ್ಕೆ ಮಾತ್ರವೇ ಆದ್ಯತೆ ನೀಡಿದೆ. ವನ್ಯಜೀವಿಗಳ ಓಡಾಟಕ್ಕಾಗಿನ ಸೇತುವೆ ಪೂರ್ಣಗೊಳಿಸಿಲ್ಲ ಎಂದು ವಿವಿಧ ಸಂಘಟನೆಗಳ ಮುಖಂಡರು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳನ್ನು ಪ್ರಶ್ನಿಸಿದರು.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಇಂಜಿನಿಯರ್ ವಿಶ್ವ ಮಾತನಾಡಿ, ಹೆದ್ದಾರಿಯಲ್ಲಿ ಕುಡಿಯುವ ನೀರು, ಶೌಚಾಲಯ ನಿರ್ಮಾಣಕ್ಕೆ ಕ್ರಮವಹಿಸಲಾಗುವುದು. ಸರ್ವೀಸ್ ರಸ್ತೆಗಳಲ್ಲಿ ಚರಂಡಿ ನೀರು ಹರಿಯದಂತೆ ಚರಂಡಿ ನಿರ್ಮಿಸಲಾಗುವುದು. ವನ್ಯಜೀವಿಗಳ ಓಡಾಟಕ್ಕಾಗಿನ ಸೇತುವೆಯನ್ನು ಸಂಪೂರ್ಣಗೊಳಿಸಲು ಅಗತ್ಯ ಅನುಮತಿ ಪಡೆದು ಕಾಮಗಾರಿ ಸಂಪೂರ್ಣಗೊಳಿಸುವುದಾಗಿ ಭರವಸೆ ನೀಡಿದರು.

ಸಭೆಯಲ್ಲಿ ಸಹಾಯಕ ಕಾರ್ಯ ಪಾಲಕ ಪುಟ್ಟಯ್ಯ, ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಇಂಜಿನಿಯರ್ ಶಿವಕುಮಾರ್, ಭೂದಾಖಲೆಗಳ ಸಹಾಯಕ ಅಧಿಕಾರಿ ಹಾಗೂ ಕರುನಾಡ ಸೇವಕರು ಸಂಘಟನೆಯ ಮೈಸೂರು ಜಿಲ್ಲಾಧ್ಯಕ್ಷ ರಾಜೂಗೌಡ, ಮುದ್ದೇಗೌಡ, ಶಿವರಾಂ, ವೆಂಕಟೇಶ್, ಸೋಮಶೇಖರ್, ರೈತಸಂಘದ ಅಣ್ಣಯ್ಯ, ಕಿರಣ್‌ಕುಮಾರ್‌ ಸೇರಿ ಹಲವರು ಸಭೆಯಲ್ಲಿ ಭಾಗಿಯಾಗಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

400 ಕೋಟಿ ರು. ದರೋಡೆ ಪ್ರಮುಖ ಆರೋಪಿ ಬಂಧನ
ಕಾಂಗ್ರೆಸ್‌ನವರಿಗೆ ಬಜೆಟ್ ಅರ್ಥವಾಗಲ್ಲ: ಜೋಶಿ ಚಾಟಿ