ಪುಷ್ಪಗಿರಿ ವೇರ್ ಹೌಸ್ ಮಾಲೀಕರು ಅಕ್ರಮ ಪ್ರವೇಶ ಮಾಡಿ ನಿವೇಶನ ನಿರ್ಮಾಣ ಆರೋಪ । ಕಾಮಗಾರಿ ತಡೆದು ಗ್ರಾಮಸ್ಥರ ಪ್ರತಿಭಟನೆಕನ್ನಡಪ್ರಭ ವಾರ್ತೆ ಹಾಸನ
ನಗರದ ಹೊರ ವಲಯದ ಕೈಗಾರಿಕಾ ಅಭಿವೃದ್ಧಿ ಪ್ರದೇಶದಲ್ಲಿರುವ ನಾಗತವಳ್ಳಿ ಗ್ರಾಮದ ಸರ್ವೆ ನಂಬರ್ 54 ರಲ್ಲಿನ 2 ಎಕರೆ ಗೋಮಾಳ ಜಾಗಕ್ಕೆ ಪುಷ್ಪಗಿರಿ ವೇರ್ ಹೌಸ್ ಮಾಲೀಕರು ಅಕ್ರಮ ಪ್ರವೇಶ ಮಾಡಿ ನಿವೇಶನ ಮಾಡಲು ಮುಂದಾಗಿದ್ದಾರೆ ಎಂದು ಆರೋಪಿಸಿ ಗ್ರಾಮಸ್ಥರು ಕಾಮಗಾರಿ ತಡೆದು ಸ್ಥಳದಲ್ಲೇ ಪ್ರತಿಭಟನೆ ನಡೆಸಿದರು.ಸರ್ವೆ ನಂಬರ್ 54 ರ ಪೈಕಿ ಎರಡು ಎಕರೆ ಜಮೀನು ಕಳೆದ 25 ವರ್ಷಗಳಿಂದ ಗ್ರಾಮದ ಜನ, ಜಾನುವಾರು ಅನುಕೂಲಕ್ಕೆ ಮೀಸಲಿಡಲಾಗಿತ್ತು. ಆದರೆ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಅಧಿಕಾರಿಗಳು ಸಿರಿವಂತರ ಜತೆ ಶಾಮೀಲಾಗಿ ಅಕ್ರಮವಾಗಿ ಮಂಜೂರು ಮಾಡಿದ್ದಾರೆ ಎಂಬುದು ಗ್ರಾಮಸ್ಥರ ದೂರು.
ಈ ವೇಳೆ ಗ್ರಾಮದ ಸುನಿಲ್ ಮಾತನಾಡಿ, ಈಗಾಲೇ ಗ್ರಾಮದ ಸಂಪೂರ್ಣ ಜಾಗ ಕೈಗಾರಿಕಾ ಪ್ರದೇಶಕ್ಕೆ ಒತ್ತುವರಿಯಾಗಿದೆ. ಗ್ರಾಮದ ಅನುಕೂಲಕ್ಕೆ ಇರುವ ಕೇವಲ ಎರಡು ಎಕರೆ ಗೋಮಾಳ ಜಾಗ ಇಂದಿಗೂ ಪಹಣಿಯಲ್ಲಿ ಗೋಮಾಳ ಜಾಗ ಎಂದು ಬರುತ್ತಿದೆ. ಆದರೆ ಕೆಲವರು ಈ ಜಾಗ ತಮಗೆ ಸೇರಿದೆ ಎಂದು ಅಕ್ರಮ ಪ್ರವೇಶ ಮಾಡಿದ್ದಾರೆ ಎಂದು ದೂರಿದರು.ಯಾವುದೇ ಕಾರಣಕ್ಕೂ ಜಾಗವನ್ನು ಖಾಸಗಿಯವರಿಗೆ ಬಿಟ್ಟು ಕೊಡುವುದಿಲ್ಲ ಎಂದು ಪಟ್ಟು ಹಿಡಿದ ಗ್ರಾಮಸ್ಥರು ಕಾಮಗಾರಿ ಮಾಡಲು ಬಂದ ಜೆಸಿಬಿ ತಡೆದು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.
ಈ ಬಗ್ಗೆ ಕಳೆದ ಅನೇಕ ವರ್ಷಗಳಿಂದ ಜಾಗವನ್ನು ಗ್ರಾಮಸ್ಥರ ಅನುಕೂಲಕ್ಕೆ ಬಿಟ್ಟುಕೊಡಬೇಕು ಎಂದು ಸಂಬಂಧಿಸಿದ ಇಲಾಖೆ ಅಧಿಕಾರಿಗಳ ಬಳಿ ಮನವಿ ಮಾಡಲಾಗಿದೆ. ಈ ವೇಳೆ ಅಧಿಕಾರಿಗಳು ಜಾಗ ಗೋಮಾಳ ಜಾಗವಾಗಿಯೇ ಉಳಿದಿದೆ. ಗ್ರಾಮಸ್ಥರು ಭಯಪಡುವ ಅಗತ್ಯ ಇಲ್ಲ ಎಂದು ಭರವಸೆ ನೀಡಿದ್ದಾರೆ.ಆದರೆ ಪುಷ್ಪಗಿರಿ ವೇರ್ ಹೌಸ್‌ನವರು ಪುಂಡರನ್ನು ಕರೆದುಕೊಂಡು ಬಂದು ಕಾಮಗಾರಿಗೆ ಮುಂದಾಗಿದ್ದಾರೆ. ನ್ಯಾಯಸಮ್ಮತವಾಗಿ ಕೆಲಸ ಮಾಡುವುದಾದರೆ ಅಧಿಕಾರಿಗಳ ಹಾಗೂ ಪೊಲೀಸರ ಸಮ್ಮುಖದಲ್ಲಿ ಕೆಲಸ ಮಾಡಲಿ. ಅದನ್ನು ಬಿಟ್ಟು ಅತಿಕ್ರಮ ಪ್ರವೇಶ ಮಾಡಿ ಗ್ರಾಮದ ಜನರ ಅನುಕೂಲಕ್ಕೆ ಇರುವ ಸ್ವಲ್ಪ ಜಾಗವನ್ನು ದೋಚುವ ಹುನ್ನಾರ ಮಾಡಿದ್ದಾರೆ ಎಂದು ಆರೋಪಿಸಿದರು.
ಗ್ರಾಮದ ರೇಣುಕಮ್ಮ ಮಾತನಾಡಿ, ಇಡೀ ಗ್ರಾಮಕ್ಕೆ ದನ, ಕರುವಿನ ಮೇವಿಗೆ ಇದೊಂದೇ ಜಾಗ ಆಶ್ರಯವಾಗಿದೆ. ಆದುದರಿಂದ ಯಾವುದೇ ಕಾರಣಕ್ಕೂ ಈ ಜಾಗವನ್ನು ಬಿಟ್ಟು ಕೊಡುವುದಿಲ್ಲ ಎಂದರು.ಈಗಾಗಲೇ ಕಾಮಗಾರಿ ನಿಲ್ಲಿಸಲು ಬಂದಾಗ ತಮ್ಮನ್ನು ಕೆಲ ಕಿಡಿಗೇಡಿಗಳು ಅವಾಚ್ಯ ಶಬ್ಧಗಳಿಂದ ನಿಂದಿಸಿ ಹಲ್ಲೆ ಮಾಡಲು ಯತ್ನ ಮಾಡಿದ್ದಾರೆ. ಕೂಡಲೇ ಪೊಲೀಸ್ ಇಲಾಖೆ ಹಾಗೂ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಸಮಸ್ಯೆ ಬಗೆ ಹರಿಸಬೇಕು. ತಮ್ಮ ಹೋರಾಟಕ್ಕೂ ಮೀರಿ ಕಾಮಗಾರಿಗೆ ಮುಂದಾದರೆ ಮುಂದಾಗುವ ಅನಾಹುತಕ್ಕೆ ಅಧಿಕಾರಿಗಳೇ ನೇರ ಹೊಣೆ ಎಚ್ಚರಿಸಿದರು.
ಈ ವೇಳೆ ಗ್ರಾಮಸ್ಥರಾದ ಪ್ರದೀಪ್, ಶರತ್, ರಿಕಿ, ಕೆಂಪಣ್ಣ, ಪುಟ್ಟರಾಜು, ವಿನಿ, ರವಿ, ಸತೀಶ್, ಸರೋಜಮ್ಮ, ಯಶೋಧಮ್ಮ, ಪಪ್ಪಕ್ಕ, ರತ್ನಮ್ಮ, ಜವರಮ್ಮ ಇದ್ದರು.ಕೆಲಸ ಮಾಡಲು ಬಂದ ಹಿಟಾಚಿಯನ್ನು ತಡೆದು ನಾಗತವಳ್ಳಿ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದರು.