ಹೆಣ್ಣು ಸಂಸ್ಕೃತಿಯ ಬ್ರ್ಯಾಂಡ್ ಅಂಬಾಸಿಡರ್: ಲಕ್ಷ್ಮಿ ಹೆಬ್ಬಾಳಕರ

KannadaprabhaNewsNetwork | Published : Dec 28, 2023 1:47 AM

ಸಾರಾಂಶ

ಮಹಿಳೆ ಮತ್ತು ಸಂಸ್ಕೃತಿ ಎಂಬ ಗೋಷ್ಠಿಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಾತನಾಡಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ನಾವು ನಮ್ಮ ಮನೆಯಲ್ಲಿನ ನಮ್ಮ ಹೆಣ್ಣು ಮಕ್ಕಳನ್ನು ನೋಡುವ ದೃಷ್ಟಿ ಬದಲಾಗಬೇಕಿದೆ. ಅವರಿಗೂ ಸಮಾನ ಅವಕಾಶ, ಹಕ್ಕು ಸಿಗಬೇಕಿದೆ. ಏಕೆಂದರೆ ಸಂಸ್ಕೃತಿಯ ಬ್ರ್ಯಾಂಡ್ ಅಂಬಾಸಿಡರ್ ಎಂದರೆ ಅದು ಮಹಿಳೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.

ನಗರದ ಜ್ಞಾನಯೋಗಾಶ್ರಮದ ಜ್ಞಾನಯೋಗಿ ಪರಮಪೂಜ್ಯ ಶ್ರೀಸಿದ್ಧೇಶ್ವರ ಮಹಾಸ್ವಾಮಿಗಳ ಗುರುನಮನ ಮಹೋತ್ಸವ ಅಂಗವಾಗಿ ಮಹಿಳೆ ಮತ್ತು ಸಂಸ್ಕೃತಿ ಎಂಬ ವಿಷಯದ ಕುರಿತು ಹಮ್ಮಿಕೊಂಡಿದ್ದ 5ನೇ ಗೋಷ್ಠಿಯಲ್ಲಿ ಅವರು ಮಾತನಾಡಿ, ನಮ್ಮ ಮನೆಯಲ್ಲಿ ಹಬ್ಬ ಹರಿದಿನಗಳಿದ್ದರೆ ಯಾರು ಜವಾಬ್ದಾರಿ ತೆಗೆದುಕೊಳ್ಳುತ್ತಾರೆ? ಯಾರು ಮುಂಜಾನೆ ಎದ್ದು ಮನೆಯನ್ನೆಲ್ಲ ಸಿಂಗರಿಸುತ್ತಾರೆ?. ಹೀಗಿದ್ದಾಗ ನಮ್ಮ ಸಂಸ್ಕೃತಿಯನ್ನು ಯಾರು ಪೀಳಿಗೆಯಿಂದ ಪೀಳಿಗೆಗೆ ಕರೆದುಕೊಂಡು ಹೋಗುತ್ತಿದ್ದಾರೆ ಎನ್ನುವುದನ್ನು ನಾವು ಯೋಚಿಸಬೇಕಿದೆ.

ನಮ್ಮ ತಾಯಿ ಕಲಿಸಿಕೊಟ್ಟಂತಹ ಸಂಸ್ಕೃತಿ ನಮ್ಮಅಜ್ಜಿಕಟ್ಟಿ ಕೊಟ್ಟ ಅನುಭವ ಇಂದು ನಾನು ನಿಮ್ಮ ಮುಂದೆ ಬಂದು ನಿಂತು ಮಾತನಾಡುತ್ತಿದ್ದೇನೆ. ಮನೆಯಿಂದಲೇ ನಮ್ಮಗಟ್ಟಿತನ ಬೆಳೆಯುತ್ತದೆ. ಹೆಣ್ಣು ಭೂಮಿಯ ಮೇಲಿರುವ ಅತ್ಯಂತ ಧೈರ್ಯಶಾಲಿ ಜೀವಿ. ಅವಳು ಎಷ್ಟೇ ಕಷ್ಟ ಬರಲಿ ಕುಗ್ಗದೇ ಮುನ್ನಡೆಯುತ್ತಾಳೆ. ಧೈರ್ಯವಾಗಿ ಎಲ್ಲವನ್ನು ಎದುರಿಸುತ್ತಾಳೆ. ಆದರೆ, ಅಂತಹ ಹೆಣ್ಣಿಗೆ ಇಂದಿಗೂ ಸರಿ ಸಮಾನವಾದ ಬದುಕು ಮತ್ತು ಹಕ್ಕು ಎರಡು ಸಿಗುತ್ತಿಲ್ಲ. ಇದು ಖೇದಕರ ಸಂಗತಿ ಎಂದರು.

ನಮ್ಮಲ್ಲಿರುವ ವಿಚಾರಧಾರೆಗಳು ಬದಲಾಗಬೇಕಿದೆ. ಹೆಣ್ಣು ಎಲ್ಲಕ್ಕಿಂತ ಕೀಳು ಎಂಬ ಭಾವನೆ ಮಾತುಗಳು ದೂರಾಗಬೇಕಿದೆ. ಈಗಿಂದಲೇ ನಾವು ನಮ್ಮ ಮಕ್ಕಳಿಗೆ ನೈತಿಕತೆಯ ಬಗ್ಗೆ ತಿಳಿಸಬೇಕು. ಅವರಿಗೆ ಜೀವನದ ಮೌಲ್ಯಗಳನ್ನು ತಿಳಿಸಬೇಕು. ಸಮಾನತೆಯ ಬಗ್ಗೆ ಅರಿವು ಮೂಡಿಸಬೇಕು. ಅವರನ್ನು ಸುಸಂಸ್ಕೃತರನ್ನಾಗಿ ಮಾಡೋಣ. ಹೆಣ್ಣು-ಗಂಡಿನ ನಡುವೆ ಅಂತರವಿಲ್ಲ ಎಂಬುವುದನ್ನು ಕಲಿಸೋಣ. ನಮ್ಮ ದೇಶದ ಉತ್ತಮ ಪ್ರಜೆಗಳನ್ನಾಗಿ ಮಾಡೋಣ. ಅದರ ಜೊತೆ ನಾವು ಸದಾಕಾಲ ಸ್ವಾಭಿಮಾನಿಗಳಾಗಿ ಬದುಕೋಣ ಎಂದರು.

ಕಾರ್ಯಕ್ರಮದಲ್ಲಿ ತಮ್ಮಅನುಭಾವವನ್ನು ಹಂಚಿಕೊಂಡ ಕಲ್ಲಹಳ್ಳಿಯ ಸುಮ್ಮನೆ ವೀಣಾ ಬನ್ನಂಜೆ, ಅಪ್ಪನವರು ಹೋಗಿದ್ದಾರೆ ಎಂದು ಕೇಳಿದ್ದಾಗ ಅವರು ಹೋಗಲೇ ಇಲ್ಲ ಎನ್ನುವುದಕ್ಕೆ ಸಾವಿರಾರು ಸಂಖ್ಯೆಯಲ್ಲಿ ಸೇರಿರುವ ನೀವೆಲ್ಲರೇ ಕಾರಣ. ಅಪ್ಪನವರು ಇಂದಿಗೂ ಇಲ್ಲಿಯೇ ಇದ್ದಾರೆ. ನಮ್ಮೊಂದಿಗೆ ಇದ್ದಾರೆ ಎಂಬ ಭಾವವನ್ನು ಪ್ರೀತಿಯನ್ನು ಸಾವಿರಾರು ಸಂಖ್ಯೆಯ ಮಕ್ಕಳಿಗೆ ಏಕಕಾಲದಲ್ಲಿ ಪ್ರೀತಿ, ವಾತ್ಸಲ್ಯ ನೀಡಲು ಸಾಧ್ಯವಾಗುವುದು. ಒಬ್ಬ ಮಹಾನ್‌ ದೈವತಾ ಮನುಷ್ಯನಿಗೆ ಮಾತ್ರ ಅಂತಹ ಏಕಕಾಲದ ಪ್ರೀತಿಯನ್ನು ಶ್ರೀ ಸಿದ್ಧೇಶ್ವರ ಅಪ್ಪನವರು ನಮ್ಮೆಲ್ಲರಿಗೂ ನೀಡಿದ್ದಾರೆ. ಅದು ನಮ್ಮ ಪುಣ್ಯ ಎಂದರು.

ಅವರನ್ನು ದೂರದಿಂದ ನೋಡಿ ಆನಂದ ಪಡುವುದೇ ನನ್ನಲ್ಲಿ ಒಂದುಧನ್ಯತಾ ಭಾವವನ್ನು ಮೂಡಿಸುತ್ತಿತ್ತು. ಅವರು ಯಾವಾಗಲೂ ನನಗೆ ಮಾತನಾಡು ಎಂದಾಗ ನಾನು ಇಲ್ಲಅಪ್ಪ ನಾನು ನಿಮ್ಮ ಮಾತುಗಳನ್ನು ಕೇಳಲು ಬಂದವಳು ಎಂದು ಅವರ ಮಾತು ಕೇಳಿ, ಅವರ ಪ್ರೀತಿ ಪಡೆದು, ವಾತ್ಸಲ್ಯ ಪಡೆದು ಮರುಳುತ್ತಿದ್ದೆ. ಆದರೆ, ಇಂದು ಅವರ ಬಗ್ಗೆ ಬಹಳಷ್ಟು ಮಾತನಾಡುವಂತೆ ಅಪ್ಪನವರು ಮಾಡಿದ್ದಾರೆ ಎಂದರು.

ಕೌಟುಂಬಿಕ ಮೌಲ್ಯ ಎಂಬುವುದು ನಮ್ಮ ಭಾರತದ ಮಹಿಳೆಯರು ಶಕ್ತಿ. ನಮ್ಮ ಮಹಿಳೆಯರಿಗೆ ಇರುವಷ್ಟು ಶಕ್ತಿ ಮತ್ಯಾರಿಗೂ ಇರಲು ಸಾಧ್ಯವಿಲ್ಲ. ನಾವೆಲ್ಲರೂ ಗೃಹವಸ್ಥೆಯಲ್ಲಿದ್ದು, ಆಧ್ಯಾತ್ಮದತ್ತ ಸಾಗಲು ಸಾಧ್ಯವಿಲ್ಲ ಎಂದು ತಿಳಿದುಕೊಂಡಿದ್ದೇವೆ. ಅದು ನಮ್ಮತಪ್ಪುಕಲ್ಪನೆ. ನಮ್ಮ ಹೆಣ್ಣು ಮಕ್ಕಳು ಸಂಸಾರವನ್ನು ನಿಭಾಯಿಸಿ, ಮಕ್ಕಳನ್ನು ನಿಭಾಯಿಸಿ, ಕುಟುಂಬವನ್ನು ನಿಭಾಯಿಸಿ ನಂತರವೂ ಆಧ್ಯಾತ್ಮ ಲೋಕದಲ್ಲಿ ತಲ್ಲೀಣರಾಗುವಂತಹ ಶಕ್ತಿ ನಮ್ಮ ಹೆಣ್ಣು ಮಕ್ಕಳಲ್ಲಿದೆ. ಭಗವಂತ ನಮ್ಮ ಹೆಣುಕುಲದ ಮೇಲೆ ಬಹಳಷ್ಟು ಅಪೇಕ್ಷೆ ಇಟ್ಟುಕೊಂಡು ನಮ್ಮನ್ನು ಭೂಮಿಗೆ ಕಳುಹಿಸಿದ್ದಾನೆ. ಅದನ್ನು ನಾವೆಲ್ಲರೂ ಅತ್ಯಂತ ಯಶಸ್ವಿಯಾಗಿ ನಿಭಾಯಿಸುವ ಮೂಲಕ ಅವನ ಮೆಚ್ಚುಗೆಗೆ ಪಾತ್ರರಾಗೋಣ ಎಂದರು.

ಕಾರ್ಯಕ್ರಮದಲ್ಲಿ ಕೂಡಲಸಂಗಮ ಬಸವಧರ್ಮ ಪೀಠದ ಪೂಜ್ಯ ಮಾತಾಜಗದ್ಗುರು ಗಂಗಾ ಮಾತಾಜಿ ಆಶೀರ್ವಚನ ನೀಡಿ, ಗಂಡು ಹೆಣ್ಣು ಇಬ್ಬರೂ ಒಂದು ಬಂಡಿಯ ಎರಡು ಚಕ್ರವಿದ್ದಂತೆ. ಇಬ್ಬರೂ ಸಮಾನವಾಗಿ ಸಾಗಿದಾಗ ಮಾತ್ರ ಸಂಸಾರದ ಬಂಡಿ ಸಾಗಲು ಸಾಧ್ಯ. ಸತಿ-ಪತಿಯರ ಭಕ್ತಿ ದೇವರಿಗೆ ಅಮೃತವಿದ್ದಂತೆ. ಇಬ್ಬರೂ ಸದಾ ಭಕ್ತಿಪೂರ್ವಕರಾಗಿರಬೇಕು ಎಂದರು.

ಕಾರ್ಯಕ್ರಮಕ್ಕೂ ಮುನ್ನ ಷಣ್ಮುಖಾರೂಢ ಅಕ್ಕನ ಬಳಗ ಪ್ರಾರ್ಥನಾ ಗೀತೆ ಹಾಡಿದರು. ಗೆಜ್ಜೆಕೆರಿಯರ್‌ಅಕಾಡೆಮಿಯ ಮಹಾನಂದಾ ಬಿರಾದಾರ ಸ್ವಾಗತಿಸಿ ಪರಿಚಯಿಸಿದರು. ಪೂಜ್ಯ ಶ್ರೀ ಯೋಗೇಶ್ವರಿ ಮಾತಾಜಿ ನಿರೂಪಿಸಿದರು.

---

ಕೋಟ್‌.....

ಹೆಣ್ಣು ಸಂಸಾರದ ಕಣ್ಣುಇದ್ದಂತೆ. ಅವಳಿಂದಲೇ ಒಂದು ಕುಟುಂಬ, ಅವಳೇ ಸಂಸ್ಕೃತಿಯ ಬಿಂಬ. ಇವತ್ತು 7-8 ಸಾವಿರ ಜನ ಇಂದು ಜ್ಞಾನಯಾತ್ರೆಯಲ್ಲಿ ಭಾಗವಹಿಸಿದ್ದಾರೆ. ನಿಮ್ಮೆಲ್ಲರಿಗೂ ಅಪ್ಪನವರ ಮೇಲಿದ್ದ ಪ್ರೀತಿಗೆ ಸಾಕ್ಷಿ.

-ಪೂಜ್ಯ ಶ್ರೀ ಬಸವಲಿಂಗ ಮಹಾಸ್ವಾಮಿಗಳು, ಜ್ಞಾನಯೋಗಾಶ್ರಮ

Share this article