ಕನ್ನಡಪ್ರಭ ವಾರ್ತೆ ಹನೂರು
ಹನೂರು ಪಟ್ಟಣದ ಲೋಕೋಪಯೋಗಿ ಇಲಾಖೆಯ ವಸತಿಗೃಹದ ಆವರಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರೆಕಾರ್ಡ್ ರೂಂನಲ್ಲಿ ಸಾರ್ವಜನಿಕ ಕೆಲಸಗಳಲ್ಲಿ ನಿರ್ಲಕ್ಷ್ಯ ವಹಿಸುತ್ತಿರುವ ಶ್ರೀಧರ್ ಅವರನ್ನು ನಮ್ಮ ಮನವಿಯ ಮೇರೆಗೆ ಬೇರೆ ಶಾಖೆಗೆ ವರ್ಗಾವಣೆ ಮಾಡಲಾಗಿದೆ. ಆದರೆ ಅವರು ತಹಸಿಲ್ದಾರ್ ವಿರುದ್ಧ ಜಾತಿ ನಿಂದನೆ ಮಾಡಿದ್ದಾರೆ ಎಂದು ಎಸ್ಪಿ ಅವರಿಗೆ ದೂರು ನೀಡಿರುವುದು ಸತ್ಯಕ್ಕೆ ದೂರವಾದ ವಿಚಾರ ಎಂದು ಸ್ಪಷ್ಟಪಡಿಸಿದರು.
ತಾಲೂಕಿನ ಗಡಿ ಗ್ರಾಮಗಳಾದ ಗೋಪಿನಾಥಂ, ಒಡೆಯರಪಾಳ್ಯ, ಬೈಲೂರು, ಹೂಗ್ಯಂ ಗ್ರಾಮಗಳಿಂದ ಜನರು ತಮ್ಮ ಕೆಲಸ ಕಾರ್ಯಗಳನ್ನು ಮಾಡಿಸಿಕೊಳ್ಳಲು ಬರಬೇಕಾದರೆ ಒಂದು ದಿನವೇ ಬೇಕಾಗುತ್ತದೆ. ಆರ್‌ಟಿಸಿ, ಆಧಾರ್ ಕಾರ್ಡ್ ತಿದ್ದುಪಡಿಯಂತಹ ಸಣ್ಣಪುಟ್ಟ ವಿಚಾರಕ್ಕೂ ಹಲವು ದಿನಗಳು ಕಾಯಬೇಕು. ಇದರ ನಡುವೆ ಶ್ರೀಧರ್ ಬರುವ ಎಲ್ಲಾ ರೈತರಿಂದ ಲಂಚ ಪಡೆಯುತ್ತಿದ್ದಾನೆ ಎಂದು ರೈತರು ನೇರವಾಗಿ ಆರೋಪ ಮಾಡಿದ್ದಾರೆ, ಆದರೂ ಇದುವರೆಗೂ ಯಾವುದೇ ಕ್ರಮವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಛಲವಾದಿ ಮಹಾಸಭಾ ರಾಜ್ಯ ಉಪಾಧ್ಯಕ್ಷ ಅಣಗಳ್ಳಿ ಬಸವರಾಜು ಮಾತನಾಡಿ, ದ್ವಿತೀಯ ದರ್ಜೆ ಸಹಾಯಕ ಶ್ರೀಧರ್ ಕೊಳ್ಳೇಗಾಲದಲ್ಲಿಯೂ ಕರ್ನಾಟಕ ರಕ್ಷಣಾ ವೇದಿಕೆಯ ಸದಸ್ಯರ ಬಳಿಯೇ ಲಂಚ ಪಡೆದಿದ್ದು, ಈತನನ್ನು ಅಮಾನತು ಮಾಡುವಂತೆ ಪ್ರತಿಭಟನೆ ನಡೆಸಲಾಗಿತ್ತು. ಆ ವೇಳೆ ಆತನಿಗೆ ಬುದ್ಧಿ ಹೇಳಿ ವರ್ತನೆ ಬದಲಾಯಿಸಿಕೊಳ್ಳುವಂತೆ ನಾವೇ ಬುದ್ಧಿವಾದ ಹೇಳಿದ್ದೆವು. ಆದರೆ ಈತ ಇನ್ನೂ ವರ್ತನೆಯನ್ನು ಬದಲಾಯಿಸಿಕೊಂಡಿಲ್ಲ ಎಂದರು.
ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನೀಡಿರುವ ಅಟ್ರಾಸಿಟಿ ಕಾಯ್ದೆಯನ್ನು ಕಷ್ಟ ಬಂದಾಗ, ಜೀವ ಬೆದರಿಕೆ ಬಂದಾಗ, ಅವಮಾನವಾದಾಗ ಮಾತ್ರ ಬಳಸಿಕೊಳ್ಳಬೇಕು. ಬೇಕಾಬಿಟ್ಟಿಯಾಗಿ ಬಳಸಬಾರದು. ತಹಶೀಲ್ದಾರ್ ಅವರು ಎಲ್ಲಾ ಸಮುದಾಯಗಳಿಗೂ ಬೇದ ಭಾವವಿಲ್ಲದೆ ಕೆಲಸ ಮಾಡುತ್ತಿದ್ದಾರೆ ಎಂದರು.