- ಹೊನ್ನಾಳಿಯಲ್ಲೂ ಬಿಜೆಪಿ, ರೈತರು ಪ್ರತಿಭಟನೆ । ಜಿಲ್ಲೆಯಲ್ಲಿ ಕಾವೇರುತ್ತಿರುವ ಯೂರಿಯಾ ರಸಗೊಬ್ಬರ ಹೋರಾಟ
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ಯೂರಿಯಾ ಗೊಬ್ಬರಕ್ಕಾಗಿ ರೈತರ ಪರದಾಟವು ಜಿಲ್ಲೆಯಲ್ಲಿ ಭಾನುವಾರವೂ ಮುಂದುವರಿದಿದ್ದು, ಕೆಲ ಕಡೆ ನಸುಕಿನಿಂದಲೇ ಗೊಬ್ಬರದಂಗಡಿಗಳ ಮುಂದೆ ರೈತರು, ರೈತ ಕುಟುಂಬಗಳು ಸಾಲುಗಟ್ಟಿ ನಿಂತರೂ ಕೇವಲ 50 ಕೆಜಿ ಪಾಕೆಟ್ ಮಾತ್ರ ನೀಡುತ್ತಿರುವುದು, ಮತ್ತೆ ಕೆಲವೆಡೆ ರಸಗೊಬ್ಬರವೇ ಇಲ್ಲದಿರುವುದು ರೈತರ ಪಿತ್ತ ನೆತ್ತಿಗೇರುವಂತೆ ಮಾಡಿದೆ.ದಾವಣಗೆರೆ ತಾಲೂಕಿನ ಮಾಯಕೊಂಡ ಹೋಬಳಿಯ ಮಳೆಯಾಶ್ರಿತ ಪ್ರದೇಶದಲ್ಲಿ ಮೆಕ್ಕೆಜೋಳ, ಹತ್ತಿ ಇತರೆ ಬೆಳೆಗಳಿಗೆ ತುರ್ತಾಗಿ ರಸಗೊಬ್ಬರ ನೀಡಬೇಕಾಗಿದೆ. ಆದರೆ, ಅರ್ಧ ಎಕರೆ ರೈತನಿಗೂ 50 ಕೆಜಿ ಪಾಕೆಟ್, 5 ಎಕರೆ ಹೊಲವಿರುವ ರೈತನಿಗೂ 50 ಕೆಜಿ ಪಾಕೆಟ್ ರಸಗೊಬ್ಬರ ಕೊಟ್ಟರೆ ಏನು ಮಾಡಬೇಕು? ಯಾವ ಮೂಲೆಗೆ ಅದನ್ನು ಹಾಕಬೇಕು ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಅಳಲು, ಆತಂಕ, ಆಕ್ರೋಶ:ಪ್ರತಿ ರೈತನಿಂದಲೂ ಆಧಾರ್ ಕಾರ್ಡ್ ಪಡೆದು, ಬಯೋಮೆಟ್ರಿಕ್ ಮೆಷಿನ್ ಇಟ್ಟುಕೊಂಡು ಕೇವಲ 50 ಕೆಜಿ ಪಾಕೆಟ್ ಯೂರಿಯಾ ಮಾತ್ರ ವಿತರಣೆ ಮಾಡಲಾಗುತ್ತಿದೆ. ರೈತರಿಂದ ಹೆಬ್ಬೆಟ್ಟಿನ ಗುರುತನ್ನು ಪಡೆದು, ಒಂದು ಪಾಕೆಟ್ ಮಾತ್ರ ರಸಗೊಬ್ಬರ ಕೊಡುತ್ತಿದ್ದಾರೆ. ಒಂದು ಸಲ 50 ಕೆಜಿ ಪಾಕೆಟ್ ಪಡೆದರೆ, ಅದೇ ರೈತರು ಹೆಬ್ಬೆಟ್ಟಿನ ಗುರುತು ಕೊಟ್ಟು, ಮತ್ತೆ ಯೂರಿಯಾ ಪಡೆಯಲು ಕನಿಷ್ಠ 1 ತಿಂಗಳಾದರೂ ಕಾಯಬೇಕಾಗುತ್ತದೆ ಎಂಬುದು ರೈತರ ಅಳಲು, ಆತಂಕ, ಆಕ್ರೋಶ.
ಕೇಂದ್ರ ಬಂದ್‌ಗೊಳಿಸಿದ ರೈತರು- ಮುತ್ತಿಗೆ:ಅಸಮರ್ಪಕ, ಅವೈಜ್ಞಾನಿಕ ರೀತಿಯಲ್ಲಿ ಯೂರಿಯಾ ಗೊಬ್ಬರ ವಿತರಣೆ ಮಾಡುತ್ತಿದ್ದುದರಿಂದ ಆಕ್ರೋಶಗೊಂಡ ಮಾಯಕೊಂಡ ರೈತರು ಅಲ್ಲಿನ ಗೊಬ್ಬರ ವಿತರಣಾ ಕೇಂದ್ರವನ್ನೇ ಬಂದ್ ಮಾಡಿ, ಪ್ರತಿಭಟಿಸಿದರು. 50 ಕೆಜಿ ಪಾಕೆಟ್ ಗೊಬ್ಬರ ಪಡೆದು, ನಾವು ಹೊಲದಲ್ಲಿ ಯಾವ ಮೂಲೆಗೆ ಹಾಕಬೇಕು? ಕನಿಷ್ಠ 1 ಎಕರೆಗೆ ಎಷ್ಟು ರಸಗೊಬ್ಬರ ಬೇಕಾಗುತ್ತದೆಂಬ ಅರಿವು ಸಹ ಸರ್ಕಾರಕ್ಕೆ ಇಲ್ಲವೇ ಎಂದು ರೈತರು ತೀವ್ರ ಅಸಮಾಧಾನಗೊಂಡರು. ಮತ್ತೊಂದು ಕಡೆ ದಾವಣಗೆರೆ ಕೃಷಿ ಇಲಾಖೆ ಜಂಟಿ ನಿರ್ದೇಶಕರ ಕಚೇರಿ ಎದುರು ರೈತ ಸಂಘದ ಹುಚ್ಚವ್ವನಹಳ್ಳಿ ಮಂಜುನಾಥ ನೇತೃತ್ವದಲ್ಲಿ ಮುತ್ತಿಗೆ ಹಾಕಿ ಪ್ರತಿಭಟಿಸಲಾಯಿತು.
ಅತ್ತ ಬರಪೀಡಿತ ಜಗಳೂರಿನಲ್ಲೂ ರೈತರ ಪರಿಸ್ಥಿತಿ ಭಿನ್ನವಾಗೇನೂ ಇಲ್ಲ. ಅಲ್ಲಿಯೂ ರೈತರು ನಡುರಾತ್ರಿಯಿಂದಲೇ ಗೊಬ್ಬರದ ಅಂಗಡಿಗಳ ಮುಂದೆ ಸಾಲುಗಟ್ಟಿ ನಿಂತಿದ್ದಾರೆ. ಹಗಲು-ರಾತ್ರಿ ಎನ್ನದೇ ರಸಗೊಬ್ಬರ ಖರೀದಿಗಾಗಿ ಮುಗಿಬಿದ್ದಿದ್ದಾರೆ. ಕಳೆದ ಕೆಲವು ದಿನಗಳಿಂದ ಜಗಳೂರು ಪಟ್ಟಣದಲ್ಲಿ ರಸಗೊಬ್ಬರಕ್ಕಾಗಿ ಪ್ರತಿಭಟನೆ, ಧರಣಿ ನಡೆಸಿದ್ದ ರೈತರು ಈಗ ಅದೇ ರಸಗೊಬ್ಬರ ಪಡೆಯಲು ಎಲ್ಲಿಲ್ಲದ ಹರಸಾಹಸಪಡಬೇಕಾದ ಪರಿಸ್ಥಿತಿ ಬಂದೊದಗಿದೆ.- - -
(ಬಾಕ್ಸ್-1) * ಹೊನ್ನಾಳಿಯಲ್ಲಿ ಬಿಜೆಪಿ ಮುಖಂಡರ ಪ್ರತಿಭಟನೆಮತ್ತೊಂದು ಕಡೆ ರಸಗೊಬ್ಬರ ಅಭಾವದ ವಿರುದ್ಧ ಹೊನ್ನಾಳಿಯಲ್ಲಿ ಭಾನುವಾರ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ, ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, ಜಿಲ್ಲಾಧ್ಯಕ್ಷ ರಾಜಶೇಖರ ನಾಗಪ್ಪ, ಚಂದ್ರಶೇಖರ ಪೂಜಾರ, ಶಿವು ಹುಡೇದ ಇತರರ ನೇತೃತ್ವದಲ್ಲಿ ಟೈಯರ್‌ಗೆ ಬೆಂಕಿ ಹಚ್ಚಿ, ತೀವ್ರ ಸ್ವರೂಪದ ಪ್ರತಿಭಟನೆ ನಡೆಸಿ, ರಾಜ್ಯ ಸರ್ಕಾರದ ನಿರ್ಲಕ್ಷ್ಯ, ರೈತವಿರೋಧಿ ಧೋರಣೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಲಾಯಿತು. ಸುರಿಯುತ್ತಿದ್ದ ಮಳೆಯಲ್ಲೂ ಬಿಜೆಪಿ ಹಿರಿಯ, ಕಿರಿಯ ಮುಖಂಡರು, ಕಾರ್ಯಕರ್ತರು, ರೈತರೊಂದಿಗೆ ಸೇರಿ ಪ್ರತಿಭಟನೆ ನಡೆಸಲಾಯಿತು.
ಕೆಲ ದಿನಗಳ ಹಿಂದೆ ಜಗಳೂರು ತಾಲೂಕು, ಮಾಯಕೊಂಡ ಭಾಗದ ರೈತರಿಗೆ ಮಾತ್ರ ಯೂರಿಯಾದ ಅಗತ್ಯವಿತ್ತು. ಇದೀಗ ಬತ್ತ ನಾಟಿ ಮಾಡಿರುವ ಹಿನ್ನೆಲೆಯಲ್ಲಿ ಬತ್ತ ಬೆಳೆಗಾರರೂ ರಸಗೊಬ್ಬರಕ್ಕಾಗಿ ಬೀದಿಗಿಳಿದು ಹೋರಾಟ ನಡೆಸುವ ಪರಿಸ್ಥಿತಿ ಬಂದೊದಗುತ್ತಿದೆ. ಸದ್ಯಕ್ಕೆ ಜಗಳೂರು, ಮಾಯಕೊಂಡ ಭಾಗದಲ್ಲಿ ಯೂರಿಯಾಗಾಗಿ ರೈತರು ಹೋರಾಟ ಶುರು ಮಾಡಿದ್ದಾರೆ. ಹೊನ್ನಾಳಿಯಲ್ಲಿ ಬಿಜೆಪಿ ನೇತೃತ್ವದ ಹೋರಾಟವಾಗಿದೆ. ದಾವಣಗೆರೆ ಜಿಲ್ಲೆಗೆ ರಸಗೊಬ್ಬರ ಪೂರೈಕೆ ಆಗುವುದನ್ನೇ ಆಡಳಿತ ಯಂತ್ರ ಇದಿರು ನೋಡುತ್ತಿದೆ.- - -
(ಬಾಕ್ಸ್-2)* ಯೂರಿಯಾ ಬಗ್ಗೆ ಎಚ್ಚೆತ್ತುಕೊಳ್ಳದ ಕೃಷಿ ಇಲಾಖೆ: ಆಕ್ರೋಶ
- ಎಕರೆಗೆ ಕ್ವಿಂಟಲ್ ಯೂರಿಯಾ ಬೇಕು, 50 ಕೆಜಿ ಪಾಕೆಟ್ ಎಲ್ಲೆಗೆ ಹಾಕಬೇಕು ಎಂದು ಅಸಮಾಧಾನ ಕನ್ನಡಪ್ರಭ ವಾರ್ತೆ ದಾವಣಗೆರೆ ಸಾವಿರಾರು ಎಕರೆ ಭೂಮಿ ಇರುವಂತಹ ಮಾಯಕೊಂಡದಂತಹ ದೊಡ್ಡ ಊರಿಗೆ 12 ಟನ್ ಗೊಬ್ಬರ ಕಳಿಸಿದ್ದಾರೆ. ಈಗ ಒಬ್ಬ ರೈತನಿಗೆ 50 ಕೆಜಿ ಗೊಬ್ಬರದ ಬ್ಯಾಗ್ ತಗೊಂಡು ಹೋಗಿ ಬೆಳೆಗೆ ಎಷ್ಟು ಹಾಕಬೇಕು ಎಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ ಕಿಡಿಕಾರಿದರು.ದಾವಣಗೆರೆಯಲ್ಲಿ ಕೃಷಿ ಇಲಾಖೆ ಜಂಟಿ ನಿರ್ದೇಶಕರ ಕಚೇರಿಗೆ ಮುತ್ತಿಗೆ ಹಾಕಿದ ವೇಳೆ ಮಾತನಾಡಿ, ಮಾಧ್ಯಮಗಳ ಮುಂದೆ ಈಗ ಯೂರಿಯಾ ಬಂತು, ನಾಳೆ ಬರುತ್ತೆ ರಸಗೊಬ್ಬರ ಅಂತೆಲ್ಲಾ ಅಧಿಕಾರಿಗಳು ಹೇಳಿಕೆ ನೀಡುತ್ತಿದ್ದಾರೆ. ನ್ಯಾನೋ ಗೊಬ್ಬರ ಹಾಕುವಂತೆ, ಆ ಗೊಬ್ಬರ ಹಾಕಿ, ಈ ಗೊಬ್ಬರ ಹಾಕಿ ಅಂತಾ ಕಂಪನಿ ಏಜೆಂಟರಂತೆ ಕೃಷಿ ಅಧಿಕಾರಿಗಳು ವರ್ತಿಸುತ್ತಿದ್ದಾರೆ. ಎಕರೆಗೆ 1 ಕ್ವಿಂ. ಯೂರಿಯಾ ಬೇಕು. ಆದರೆ, ಕೇವಲ 50 ಕೆಜಿ ಪಾಕೆಟ್ ನೀಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮೇ, ಜೂನ್ ತಿಂಗಳಲ್ಲೇ ಯೂರಿಯಾ ಸಭೆ ಮಾಡಿ, ದಾವಣಗೆರೆ ಜಿಲ್ಲೆಗೆ ಅಗತ್ಯ ಪ್ರಮಾಣದ ರಸಗೊಬ್ಬರ ದಾಸ್ತಾನು ಮಾಡಕೊಳ್ಳಬೇಕಾಗಿತ್ತು. ನಾವು ಆಗಲೇ ಎಚ್ಚರಿಸಿ, ಮನವಿ ಅರ್ಪಿಸಿದ್ದೆವು. ಆದರೆ, ರಸಗೊಬ್ಬರ ಬೇಕೆಂದು ಅಷ್ಟೊಂಟು ಸಲ ಕೇಳಿಕೊಂಡರೂ ಅಧಿಕಾರಿಗಳು ಉದ್ಭವಿಸಬಹುದಾದ ಸಮಸ್ಯೆಗಳ ಬಗ್ಗೆ ಚಿಂತನೆಯನ್ನೇ ಮಾಡಲಿಲ್ಲ ಎಂದು ಕಿಡಿಕಾರಿದರು.ಈಗಾಗಲೇ ಖಾಸಗಿ ಗೊಬ್ಬರ ವಿತರಕರು ತಾವು ತರಿಸಿಕೊಂಡಿದ್ದ ರಸಗೊಬ್ಬರ ಕಾಳಸಂತೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಿಕೊಂಡಿದ್ದಾರೆ. ಬ್ಲಾಕ್‌ನಲ್ಲಿ ಯೂರಿಯಾ ಮಾರಿಕೊಂಡವರ ವಿರುದ್ಧ ತನಿಖೆ ಮಾಡುವಂತೆ ಹೇಳಿದರೂ ಕಿವಿಗೊಟ್ಟಿಲ್ಲ. 4 ರೇಥ್ ತರಿಸಿಕೊಂಡ ವಿತರಕರನ್ನು ತನಿಖೆಗೆ ಒಳಪಡಿಸಿದ್ದರೆ ನಮ್ಮ ಜಿಲ್ಲೆಯಲ್ಲಿ ಯೂರಿಯಾ ಸಮಸ್ಯೆ ಹೀಗೆ ಉಲ್ಬಣಿಸುತ್ತಿರಲಿಲ್ಲ ಎಂದರು.
ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ರೈತರು ಈಗ ಯೂರಿಯಾ ರಸಗೊಬ್ಬರಕ್ಕಾಗಿ ಪರದಾಡುತ್ತಿದ್ದಾರೆ. ಕಾಳಸಂತೆಯಲ್ಲಿ ರಸಗೊಬ್ಬರ ಮಾರಾಟ ಮಾಡಿಕೊಂಡಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಂಡಿದ್ದರೆ ಇಷ್ಟೆಲ್ಲಾ ಸಮಸ್ಯೆ ಆಗುತ್ತಿರಲಿಲ್ಲ ಎಂದು ಹುಚ್ಚವ್ವನಹಳ್ಳಿ ಮಂಜುನಾಥ ಬೇಸರ ವ್ಯಕ್ತಪಡಿಸಿದರು.- - -
(ಬಾಕ್ಸ್-3) * ಯೂರಿಯಾ ಸ್ಟಾಕ್ ಮಾಡ್ಬೇಡಿ: ವಿತರಕರಿಗೆ ಸಚಿವ ಎಸ್ಸೆಸ್ಸೆಂ ಮನವಿ - 12.5 ಟನ್ ಯೂರಿಯಾ ಬರುತ್ತಿದ್ದಂತೆ ಎಲ್ಲ ಕಡೆಗಳಿಗೂ ಸರಬರಾಜಿಗೆ ಕ್ರಮಕನ್ನಡಪ್ರಭ ವಾರ್ತೆ ದಾವಣಗೆರೆ
ಮಾನ್ಸೂನ್ ಬೇಗ ಬಂದಿದ್ದರಿಂದ ಸಹಜವಾಗಿಯೇ ರಸಗೊಬ್ಬರಕ್ಕೆ ಬೇಡಿಕೆ ಹೆಚ್ಚಾಗಿದ್ದು, 12.5 ಸಾವಿರ ಟನ್ ಯೂರಿಯಾ ಬರುತ್ತಿದ್ದಂತೆ ಎಲ್ಲ ಕಡೆ ಸರಬರಾಜು ಆಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಹೇಳಿದರು. ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೊಬ್ಬರ ವಿತರಕರು, ಮಾರಾಟಗಾರರು ದಾಸ್ತಾನು ಮಾಡಿಟ್ಟಿರುವ ರಸಗೊಬ್ಬರ ಜಪ್ತಿ ಮಾಡಲಾಗುತ್ತಿದೆ. ದಾವಣಗೆರೆ, ಹೊನ್ನಾಳಿಯಲ್ಲಿ ಸೀಜ್ ಮಾಡಿ, ರೈತರಿದೆ ಅದೇ ಯೂರಿಯಾ ವಿತರಣೆ ಮಾಡುತ್ತಿದ್ದಾರೆ. ದಯವಿಟ್ಟು ಯಾವುದೇ ಗೊಬ್ಬರ ವಿತರಕರು, ಮಾರಾಟಗಾರರು ಸ್ಟಾಕ್ ಮಾಡಬೇಡಿ ಎಂಬುದಾಗಿ ಮನವಿ ಮಾಡುತ್ತೇನೆ. ಲಿಂಕ್ ಗೊಬ್ಬರ ವಿತರಣೆ ಬಗ್ಗೆ ದೂರು ಬಂದರೆ ಕ್ರಮ ಕೈಗೊಳ್ಳುತ್ತೇವೆ ಎಂದು ಸಚಿವರು ಹೇಳಿದರು. ಎಐಸಿಸಿ ಪ್ರಧಾನ ಕಾರ್ಯದರ್ಶಿ, ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೀವಾಲಾ ಅಧಿಕಾರಿಗಳ ಸಭೆ ನಡೆಸಿದ್ದಾರೆಂಬುದು ವಿರೋಧ ಪಕ್ಷದವರ ಸೃಷ್ಟಿ ಅಷ್ಟೇ. ಡಿಪ್ಲೋಮೆಟಿಕ್ ಆಗಿ ಶಾಸಕರು, ಸಚಿವರನ್ನು ಕರೆಸಿ, ಸುರ್ಜೀವಾಲಾ ಮಾಡಿದ್ದಾನೆ. ಜಿಲ್ಲಾವಾರು ಏನೇನು ಅಭಿವೃದ್ಧಿ ಕೆಲಸಗಳಾಗಿವೆಯೆಂದು ಸಭೆ ಮಾಡಿದ್ದಾರೆ. ಈ ವಾರವೂ ಸಭೆ ಕರೆದಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.ಮಲೆನಾಡು ಭಾಗದಲ್ಲಿ, ಘಟ್ಟ ಪ್ರದೇಶದಲ್ಲಿ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ತುಂಗಭದ್ರಾ ನದಿಯಲ್ಲಿ ಸಾಕಷ್ಟು ನೀರು ಹರಿದು ಬರುತ್ತಿದೆ. ದಾವಣಗೆರೆ ಜಿಲ್ಲೆಯಲ್ಲಿ ನದು ಹಾದು ಹೋಗಿರುವ ತಾಲೂಕು, ಗ್ರಾಮಗಳ ಪ್ರದೇಶದಲ್ಲಿ ಪ್ರವಾಹ ಪರಿಸ್ಥಿತಿ ಬಗ್ಗೆ ಮುನ್ನೆಚ್ಚರಿಕೆ ವಹಿಸುವಂತೆ ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದೇನೆ ಎಂದು ಎಸ್.ಎಸ್. ಮಲ್ಲಿಕಾರ್ಜುನ ತಿಳಿಸಿದರು.- - -
-27ಕೆಡಿವಿಜಿ1.ಜೆಪಿಜಿ: ದಾವಣಗೆರೆ ತಾಲೂಕಿನ ಮಾಯಕೊಂಡ ಗ್ರಾಮದ ಗೊಬ್ಬರದಂಗಡಿ ಬಂದ್‌ಗೊಳಿಸಿ ರೈತರು ಪ್ರತಿಭಟಿಸಿದರು. -27ಕೆಡಿವಿಜಿ2.ಜೆಪಿಜಿ: ದಾವಣಗೆರೆಯಲ್ಲಿ ಕೃಷಿ ಇಲಾಖೆ ಜಂಟಿ ನಿರ್ದೇಶಕರ ಕಚೇರಿಗೆ ರೈತ ಸಂಘದ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ ನೇತೃತ್ವದಲ್ಲಿ ರೈತರು ಮುತ್ತಿಗೆ ಹಾಕಿದರು.-27ಕೆಡಿವಿಜಿ3, 4, 5ಜೆಪಿಜಿ: ಹೊನ್ನಾಳಿಯಲ್ಲಿ ರಸಗೊಬ್ಬರ ಕೊರತೆ ಖಂಡಿಸಿ ಬಿಜೆಪಿ ನಾಯಕರು, ರೈತರು ಹಳೇ ಟೈರ್‌ಗೆ ಬೆಂಕಿಹಚ್ಚಿ ಪ್ರತಿಭಟಿಸಿದರು.