ಗದಗ: 12ನೇ ಶತಮಾನದ ಶರಣರು ಬರೀ ಧಾರ್ಮಿಕವಾಗಿಯಷ್ಟೇ ಅಲ್ಲ ವೈಜ್ಞಾನಿಕ,ವೈಚಾರಿಕವಾಗಿ ಚಿಂತಿಸಿ,ಸಮಾಜದಲ್ಲಿನ ಮೌಢ್ಯ,ಕಂದಾಚಾರ ತೊಡೆಯಲು ಯತ್ನಿಸಿದರು. ಅವರ ಒಂದೊಂದು ವಚನಗಳು ಇಂದಿಗೂ ಮೌಢ್ಯ, ಮೂಢತೆಯಲ್ಲಿ ಮುಳುಗೇಳುತ್ತಿರುವ ಈ ಸಮಾಜಕ್ಕೆ ಹೊಸ ಬೆಳಕಾಗಿವೆ ಎಂದು ಜ. ತೋಂ.ಸಿದ್ಧರಾಮ ಶ್ರೀಗಳು ಹೇಳಿದರು.
ಅವರು ಬಸವದಳ-ಬಸವಕೇಂದ್ರ, ಲಿಂಗಾಯತ ಪ್ರಗತಿಶೀಲ ಸಂಘ, ಜಾತ್ರಾ ಮಹೋತ್ಸವ ಸಮಿತಿ ಹಾಗೂ ಜಾಗತಿಕ ಲಿಂಗಾಯತ ಸಭಾ ಬಸವ ಪರ ಸಂಘಟನೆಗಳು ಬಸವ ಪಂಚಮಿ ಅಂಗವಾಗಿ ನಡೆದ ಹಾಲು ಉಣಿಸುವ ಹಬ್ಬಕ್ಕೆ ಚಾಲನೆ ನೀಡಿ ಮಾತನಾಡಿದರು.
ಅನೇಕ ವರ್ಷಗಳಿಂದ ಈ ಸಂಘಟನೆಗಳು ಶ್ರೀಮಠದ ಜೊತೆಗೂಡಿ ಹಾಲನೆರೆಯುವ ಬದಲು ಹಾಲು ಕುಡಿಸುವ ಹಬ್ಬವಾಗಿ ಆಚರಿಸುತ್ತಿವೆ. ಹಾಲು ಪೌಷ್ಠಿಕಾಂಶವುಳ್ಳ ಪ್ರಸಾದವಾಗಿದೆ. ಅಂತಹದನ್ನು ಯಾವುದೋ ಮೌಢ್ಯತೆ, ಸಂಪ್ರದಾಯದ ಹೆಸರಿನಲ್ಲಿ ಕಲ್ಲು ನಾಗರಕ್ಕೆ, ಹುತ್ತಕ್ಕೆ ಎರೆಯುವ ಮೂಲಕ ಮಣ್ಣು ಪಾಲಾಗುವಂತೆ ಮಾಡುತ್ತಿದ್ದಾರೆ.ಲಕ್ಷಾಂತರ ಲೀಟರ್ ಹಾಲು ನೆಲದ ಪಾಲಾಗುತ್ತಿದ್ದು, ಇದು ಸರಿಯಲ್ಲ. ಈ ಮೌಢ್ಯತೆಯ ಬಗ್ಗೆ 12ನೇ ಶತಮಾನದಲ್ಲೇ ಶರಣರು ಕಟು ಶಬ್ದಗಳಿಂದ ಖಂಡಿಸಿದ್ದಾರೆ ಎಂದರು.
ಹಳೆಯ ಪದ್ಧತಿ ತೊರೆದು ಅವನ್ನೇ ಮಕ್ಕಳಿಗೆ,ರೋಗಿಗಳಿಗೆ ನೀಡುವ ಮೂಲಕ ದೇವರನ್ನು ಅವರಲ್ಲಿ ಕಾಣಬೇಕಿದೆ. ಹಾವು ಎಂದಿಗೂ ಹಾಲು ಕುಡಿಯಲಾರದು. ಅದರ ಆಹಾರ ಕ್ರಿಮಿ, ಕೀಟಗಳು ಮಾತ್ರ. ಗದುಗಿನ ಬಸವ ಪರ ಸಂಘಟನೆಗಳು ನಿರಂತರವಾಗಿ ಅನೇಕ ಕಾರ್ಯಕ್ರಮಗಳನ್ನು ವೈಚಾರಿಕವಾಗಿ ಹಮ್ಮಿಕೊಂಡು ಸಮಾಜದ ಮೌಢ್ಯತೆ ತೊಡೆದು ಹಾಕಲು ಪ್ರಯತ್ನಿಸುತ್ತಿರುವ ಬಗ್ಗೆ ಪ್ರಶಂಸೆ ವ್ಯಕ್ತ ಮಾಡಿದರು.
ಆ ನಂತರ ಬಸವಪರ ಸಂಘಟನೆಗಳು ಗದುಗಿನ ಜಿಲ್ಲಾಸ್ಪತ್ರೆಯಲ್ಲಿ ಹಾಲು ವಿತರಿಸುವ ಕಾರ್ಯಕ್ರಮ ನಡೆಸಿದರು. ಈ ವೇಳೆ ಹೈದರಾಬಾದ ಹಂಸಾರೂಢ ಸ್ವಾಮಿಗಳು, ಹರ್ಲಾಪೂರ ಚಂದ್ರಶೇಖರ ಸ್ವಾಮೀಜಿ, ಜಿಮ್ಸ್ ನಿರ್ದೇಶಕ ಡಾ.ಬಸವರಾಜ ಬೊಮ್ಮನಹಳ್ಳಿ, ಉಪನಿರ್ದೆಶಕ ಡಾ.ಹಳೇಮನಿ ಸೇರಿದಂತೆ ಇತರರು ಇದ್ದರು.