ಸಾರಾಂಶ
ಮರಿಯಮ್ಮನಹಳ್ಳಿ: ಸ್ಥಳೀಯ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಲು ಸುಸಜ್ಜಿತ ಮಾದರಿ ಕ್ರೀಡಾಂಗಣ ಮತ್ತು ಕಲಾವಿದರ ತವರೂರಲ್ಲಿ ಸುಸಜ್ಜಿತವಾದ ರಂಗಮಂದಿರ ನಿರ್ಮಿಸಿ ಕೊಡಲು ಪ್ರಾಮಾಣಿಕವಾಗಿ ಪ್ರಯತ್ನಿಸುವೆ ಎಂದು ಸಂಸದ ಇ. ತುಕಾರಾಂ ಭರವಸೆ ನೀಡಿದರು.
ಪಟ್ಟಣದ ವಿನಾಯಕ ಪ್ರೌಢ ಶಾಲಾವರಣದಲ್ಲಿ ವಿಜಯನಗರ ಜಿಲ್ಲಾಡಳಿತ, ಶಿಕ್ಷಣ ಇಲಾಖೆ, ಜಿಲ್ಲಾಪಂಚಾಯತಿಯಿಂದ ಹಮ್ಮಿಕೊಂಡದ್ದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ 14 ಮತ್ತು 17ವಯಸ್ಸಿನ ಬಾಲಕ, ಬಾಲಕಿಯರ ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.ಈ ಭಾಗದಲ್ಲಿ ಹಂಪಿ ಉತ್ಸವದ ಮೂಲಕ ರಾಷ್ಟ್ರೀಯ ಕುಸ್ತಿ ಪಟುಗಳ ಪರಿಚಯವಾಗಿದೆ. ರಾಷ್ಟ್ರೀಯ ಮಟ್ಟಕ್ಕೆ ನಮ್ಮ ಗ್ರಾಮೀಣ ಕ್ರೀಡಾಪಟುಗಳು ಬೆಳೆಯಬೇಕು. ಕ್ರೀಡಾಪಟುಗಳು ಕ್ರೀಡೆಗಳನ್ನು ಅಭ್ಯಸಿಸಲು ಉತ್ತಮ ಕ್ರೀಡಾಂಗಣವನ್ನು ಹೊಂದಿರಬೇಕು. ಮರಿಯಮ್ಮನಹಳ್ಳಿಯಲ್ಲಿ ಒಂದು ಸುಸಜ್ಜಿತವಾದ ಕ್ರೀಡಾಂಗಣ ಮುಂದಿನ ದಿನಗಳಲ್ಲಿ ನಿರ್ಮಿಸಲು ಮುಂದಾಗುವೆ. ಇದೇ ರೀತಿಯಲ್ಲಿ ಸುಸಜ್ಜಿತವಾದ ರಂಗಮಂದಿರವನ್ನು ನಿರ್ಮಿಸಲು ಪ್ರಯತ್ನಿಸುವೆ ಎಂದು ಅವರು ಹೇಳಿದರು.
ಬಾಲಕಿಯರಿಗೆ ಮತ್ತು ಬಾಲಕರಿಗೆ ತಮ್ಮ ಆತ್ಮರಕ್ಷಣೆಗೆ ಕುಸ್ತಿಯಂತಹ ಕ್ರೀಡೆಗಳು ಸಹಕಾರಿಯಾಗಿವೆ. ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ ವಿಜೇತರಾಗುವ ಕುಸ್ತಿ ಪಟುಗಳಿಗೆ, ಜೆಎಸ್ ಡಬ್ಯ್ಲೂಕ್ರೀಡಾತರಬೇತಿ ಕೇಂದ್ರದಲ್ಲಿ ತರಬೇತಿ ಪಡೆದುಕೊಳ್ಳಲು ಅಲ್ಲಿನ ಅಧಿಕಾರಿಗಳಿಗೆ ಸೂಚಿಸುವೆ. ಕ್ರೀಡೆಯಲ್ಲಿ ಸೋಲು- ಗೆಲುವು ಸಮನಾಂತರವಾಗಿ ಸ್ವೀಕರಿಸಿ, ಕ್ರೀಡಾ ಮನೋಭಾವನೆಯನ್ನು ಮೆರೆಯಬೇಕು ಎಂದು ಅವರು ಹೇಳಿದರು.ಶಾಸಕ ಕೆ. ನೇಮರಾಜ ನಾಯ್ಕ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ಮಹಾಕಾವ್ಯ ಪುರಾಣಗಳಾದ, ರಾಮಾಯಣ, ಮಹಾಭಾರತದಲ್ಲಿಯೂ ಕುಸ್ತಿಗಳ ಕುರಿತು ಐತಿಹ್ಯವಿದೆ. ಆಂಜನೇಯಸ್ವಾಮಿ ಕೂಡ ಉತ್ತಮ ಕುಸ್ತಿಪಟುವಾಗಿದ್ದರಿಂದ, ಇಂದಿಗೂ ಗ್ರಾಮೀಣ ಪ್ರದೇಶಗಳ ಗರಡಿ ಮನೆಗಳಲ್ಲಿ ಆಂಜನೇಯಸ್ವಾಮಿಯ ಪೋಟೋವನ್ನು ಹಾಕಿಕೊಂಡಿರುತ್ತಾರೆ. ನಾರಾಯಣದೇವಕೆರೆಯು ಕೂಡ ಕಲೆಗಳಿಗೆ, ಹೆಸರುವಾಸಿಯಾದಂತೆ ಕುಸ್ತಿಗೂ ಖ್ಯಾತಿಯಾಗಿತ್ತು ಎಂದು ಅವರು ಸ್ಮರಿಸಿದರು.
ಗ್ರಾಮಾಂತರ ಪ್ರದೇಶದಲ್ಲಿ ಇಂದಿಗೂ ಹಬ್ಬ, ಜಾತ್ರೆಗಳಲ್ಲಿ ಕುಸ್ತಿ ಆಯೋಜನೆಗಳಾಗುತ್ತವೆ. ಇಂತಹ ಕ್ರೀಡೆಗಳು ನಶಿಸದೇ ಮುಂದುವರಿಸಿಕೊಂಡು ಹೋಗಬೇಕು. 2009ರಲ್ಲಿ ಇದೇ ಮೈದಾನದಲ್ಲಿ ರಾಷ್ಟ್ರೀಯ ವಾಲಿಬಾಲ್ ಪಂದ್ಯಾವಳಿಗಳು ನಡೆಯುವ ಮೂಲಕ ಮರಿಯಮ್ಮನಹಳ್ಳಿ ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡಿತ್ತು. ಈಗ ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿಗಳು ನಡೆಯುತ್ತಿರುವುದು ಹಗರಿಬೊಮ್ಮನಹಳ್ಳಿ ಕ್ಷೇತ್ರದ ಹೆಮ್ಮೆಯಾಗಿದೆ ಎಂದು ಅವರು ಹೇಳಿದರು.ಇದಕ್ಕೂ ಮುನ್ನ ವಿಜಯನಗರ ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಕ್ರೀಡಾಜ್ಯೋತಿ ಬೆಳಗಿಸಿದರು. ಶಾಸಕಿ ಲತಾ ಮಲ್ಲಿಕಾರ್ಜುನ, ರಾಜ್ಯಕುಸ್ತಿ ತೀರ್ಪುಗಾರರ ಸಂಘದ ನಿರ್ದೇಶಕ ಡಾ. ವಿನೋದ್ ಸಭೆಯಲ್ಲಿ ಮಾತನಾಡಿದರು. ತಹಶೀಲ್ದಾರ ಶ್ರುತಿ ಎಂ. ಮಳ್ಳಪ್ಪಗೌಡರ್, ಡಿಡಿಪಿಐ ವೆಂಕಟೇಶ ರಾಮಚಂದ್ರಪ್ಪ, ಇಒ ಅಸ್ಲಂ ಪಾಷ, ವಿಜಯನಗರ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿಯ ಅಧ್ಯಕ್ಷ ಕುರಿ ಶಿವಮೂರ್ತಿ, ಬಿ.ಇ.ಒ. ಶೇಖರಪ್ಪ ಹೊರಪೇಟೆ, ಏಕಲವ್ಯ ಪ್ರಶಸ್ತಿ ಪುರಸ್ಕೃತೆ ಸ್ಮಿತಾ ಪಾಟೇಲ್, ಕರ್ನಾಟಕ ಕೇಸರಿ ಸ್ವಾತಿ ಪಾಟೇಲ್, ಜಿಪಂ ಮಾಜಿ ಸದಸ್ಯ ಗೋವಿಂದರ ಪರಶುರಾಮ, ಸ್ಥಳೀಯ ಮುಖಂಡರಾದ ಗರಗ ಪ್ರಕಾಶ್ ಪೂಜಾರ್, ಗುಂಡಾಸ್ವಾಮಿ, ಪಿ.ಓಬಪ್ಪ, ಬಿ.ಎಸ್. ರಾಜಪ್ಪ, ನಂದಿಬಂಡಿ ಯು. ಸೋಮಪ್ಪ, ಮೃತ್ಯುಂಜಯ ಬದಾಮಿ, ಎಸ್. ನವೀನಕುಮಾರ್, ಎಲೆಗಾರ್ ಮಂಜುನಾಥ, ಶಾಲೆಯ ಆಡಳಿತ ಮಂಡಳಿಯ ಕುಪ್ಪಿನಕೆರೆ ಮಂಜುನಾಥ, ಸಿಪಿಐ ವಿಕಾಸ ಲಮಾಣಿ, ಪಿ.ಎಸ್.ಐ. ತಾರಾಬಾಯಿ ಉಪಸ್ಥಿತರಿದ್ದರು.