ಕನ್ನಡಪ್ರಭ ವಾರ್ತೆ ಮಡಿಕೇರಿ
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಔಷಧಿ ಗಿಡಮೂಲಿಕಾ ಪ್ರಾಧಿಕಾರದ ಡಾ. ಪ್ರಭು ಮಾತನಾಡಿ ಪ್ರಗತಿಪರ ರೈತರನ್ನು ಮಾದರಿಯಾಗಿ ತೋರಿಸುವ ನಿಟ್ಟಿನಲ್ಲಿ ಪೂಣಚ್ಚ ಅವರ ತೋಟದಲ್ಲಿ ಕ್ಷೇತ್ರೋತ್ಸವ ಮಾಡುತ್ತಿದ್ದೇವೆ. ನಾನಾ ಕಾರಣದಿಂದ ಔಷಧೀಯ ಗಿಡಗಳ ಪ್ರಮಾಣ ಕಡಿಮೆಯಾಗುತ್ತಿದೆ. ಆದರೆ ಬೇಡಿಕೆ ಹೆಚ್ಚಿದೆ. ಆದ್ದರಿಂದ ಇದನ್ನು ಉಳಿಸಿ ಬೆಳೆಸಬೇಕಾಗಿದೆ ಎಂದು ಹೇಳಿದರು.
ಸಾಮಾನ್ಯವಾಗಿ ಬೆಳೆಯುವ ಆಡುಸೋಗೆಯ ಬೇರಿಗೆ ತುಂಬಾ ಬೇಡಿಕೆಯಿದೆ. ಇದು ಉತ್ತಮ ಔಷಧೀಯ ಗಿಡವಾಗಿದೆ. ಇದರಿಂದ ಕೂಡ ಆದಾಯವನ್ನು ಗಳಿಸಬಹುದಾಗಿದೆ. ನಮ್ಮ ಪ್ರಾಧಿಕಾರದಿಂದ ಔಷಧೀಯ ಗಿಡಗಳನ್ನು ಬೆಳೆಸಲು ರೈತರಿಗೆ ಮಾಹಿತಿ ಹಾಗೂ ಉತ್ತೇಜನ ನೀಡಲಾಗುವುದು ಎಂದರು.ಕೇರಳ ಅರಣ್ಯ ಸಂಶೋಧನಾ ಸಂಸ್ಥೆಯ ಯು.ಎಂ. ಚಂದ್ರಶೇಖರ್ ಮಾತನಾಡಿ, ನಮ್ಮ ದೇಶದಲ್ಲಿ ಸುಮಾರು ಎಂಟು ಸಾವಿರ ಸಸ್ಯ ಪ್ರಬೇಧಗಳಿದೆ. ಇದರಲ್ಲಿ 2 ಸಾವಿರಕ್ಕೂ ಅಧಿಕ ಔಷಧೀಯ ಗಿಡಗಳಿದೆ. ಈ ಔಷಧೀಯ ಗಿಡಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಆದ್ದರಿಂದ ಸ್ಥಳೀಯವಾಗಿ ಔಷಧೀಯ ಸಸ್ಯಗಳನ್ನು ಬೆಳೆಸಬೇಕಾಗಿದೆ ಎಂದರು.
ಕಾಫಿ ಮಂಡಳಿ ಮಾಜಿ ಉಪಾಧ್ಯಕ್ಷ ಬೋಸ್ ಮಂದಣ್ಣ ಮಾತನಾಡಿ, ನಮ್ಮ ಜಾಗದಲ್ಲಿ ಏನು ಚನ್ನಾಗಿ ಬೆಳೆಯುತ್ತದೆಯೋ ಅದನ್ನು ಬೆಳೆದು ಬ್ರ್ಯಾಂಡಿಂಗ್ ಮಾಡಬೇಕು. ಕಾಫಿ ವಾರ್ಷಿಕವಾಗಿ ಬರುವ ಆದಾಯ ಆದರೆ, ಬೆಳೆಗಾರರು ಒಟ್ಟಾಗಿ ಔಷಧೀಯ ಗಿಡಗಳನ್ನು ಬೆಳೆದರೆ ಯಾವ ಸಂದರ್ಭದಲ್ಲಿ ಬೇಕಾದರೂ ಹಣವನ್ನು ಗಳಿಸಬಹುದು ಎಂದರು.
ಪ್ರಗತಿಪರ ಕೃಷಿಕ ನಾಪಂಡ ಪೂಣಚ್ಚ ಮಾತನಾಡಿ, ಎಲ್ಲಿಂದಲೋ ತಂದ ಗಿಡಗಳನ್ನು ನಾವು ಒತ್ತಾಯ ಪೂರ್ವಕವಾಗಿ ನಮ್ಮ ಪರಿಸರದಲ್ಲಿ ಹಾಕಲು ಸಾಧ್ಯವಿಲ್ಲ. ಆದ್ದರಿಂದ ನಮ್ಮಲ್ಲಿ ಸ್ಥಳೀಯವಾಗಿ ಬೆಳೆಯುವ ಔಷಧೀಯ ಗಿಡಗಳನ್ನು ಬೆಳೆಸಿ ರೈತರಿಗೆ ನೀಡಲಾಗುವುದು ಎಂದರು.