ರಾಣಿಬೆನ್ನೂರು: ಜಿಲ್ಲೆಯಲ್ಲಿ ಹೆಚ್ಚಿನ ರೈತರು ಮೆಕ್ಕೆಜೋಳ ಬೆಳೆಯನ್ನು ಬೆಳೆಯುತ್ತಾರಾದರೂ ಕಟಾವಿನ ನಂತರ ಬಹುತೇಕರು ಮೇವಿನ ಸಂರಕ್ಷಣೆಯನ್ನು ಮಾಡುವುದಿಲ್ಲ ಎಂದು ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥ ಡಾ. ಗುರುಪ್ರಸಾದ ಹೇಳಿದರು. ತಾಲೂಕಿನ ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಸವಣೂರು ತಾಲೂಕಿನ ಹೊಸಳ್ಳಿ ಗ್ರಾಮದ ಪ್ರಗತಿಪರ ರೈತ ಸಂತೋಷ ಗೊಡ್ಡೆಮಿಯವರ ಕ್ಷೇತ್ರದಲ್ಲಿ ಏರ್ಪಡಿಸಲಾಗಿದ್ದ ರಸಮೇವು ತಯಾರಿಕೆ ಪ್ರಾತ್ಯಕ್ಷಿಕೆಯ ಕ್ಷೇತ್ರೋತ್ಸವದಲ್ಲಿ ಅವರು ಮಾತನಾಡಿದರು. ರೈತರು ಕಟಾವಿನ ನಂತರವು ಮೆಕ್ಕೆಜೋಳದ ದಂಟು, ಸೊಪ್ಪೆ ಮತ್ತು ರವದಿಯನ್ನು ಸಂರಕ್ಷಣೆ ಮಾಡಿ ಮತ್ತು ರಸಮೇವು ತಯಾರಿಸಿ ಮೇವಿನ ಅಭಾವವಿರುವ ಸಂದರ್ಭದಲ್ಲಿ ಅದನ್ನು ಬಳಕೆ ಮಾಡಬೇಕು ಎಂದರು. ಕೇಂದ್ರದ ಪಶು ವಿಜ್ಞಾನಿ ಡಾ. ಮಹೇಶ ಕಡಗಿ ಮಾತನಾಡಿ, ರಸಮೇವು ಮಾಡಲು ದಪ್ಪ ದಂಟಿನ ಜೋಳ ಮತ್ತು ಮುಸುಕಿನ ಜೋಳ ರಸ ಮೇವಿಗೆ ಸೂಕ್ತವಾದ ಬೆಳೆಗಳು. ರಸ ಮೇವನ್ನು ಗುಂಡಿಗಳಲ್ಲೂ, ಟ್ರೆಂಚ್‌ಗಳಲ್ಲೂ, ರಸಮೇವಿನ ಚೀಲ ಮತ್ತು ಪ್ಲಾಸ್ಟಿಕ್ ಡ್ರಮ್‌ಗಳಲ್ಲಿಯೂ ತಯಾರಿಸಬಹುದು. ಮೇವಿನಲ್ಲಿ ಸುಮಾರು ಶೇ.70 ರಷ್ಟು ತೇವಾಂಶವಿರುವಾಗ ಹಾಗೂ ಮುಸುಕಿನ ಜೋಳವಾದಲ್ಲಿ ತೆನೆಯಲ್ಲಿ ಹಾಲ್ಗಾಳಾದಾಗ ಮೇವನ್ನು ಕೊಯಲು ಮಾಡುವುದು ಸೂಕ್ತ. ಈ ಮೇವನ್ನು ಒಂದರಿಂದ ಒಂದೂವರೆ ಇಂಚು ಉದ್ದವಿರುವಂತೆ ಮೇವು ಕತ್ತರಿಸುವ ಯಂತ್ರಗಳ ಸಹಾಯದಿಂದ ಕತ್ತರಿಸಿ ಗುಂಡಿ/ಚೀಲಗಳಲ್ಲಿ ಒತ್ತಿ ಗಾಳಿಯಾಡದಂತೆ ತುಂಬಬೇಕು. ನಂತರ ಮೇಲ್ಭಾವನ್ನು ಸರಿಯಾಗಿ ಗಾಳಿಯಾಡದಂತೆ ಮುಚ್ಚಬೇಕು. ಒಂದು ತಿಂಗಳ ನಂತರ ಈ ಹಸಿರು ಮೇವು ಬಂಗಾರದ ಹಳದಿ ಬಣ್ಣದ ರಸಮೇವಾಗಿ ಪರಿವರ್ತನೆಗೊಳ್ಳುತ್ತದೆ. ರಸಮೇವು ತಯಾರಿಕೆಯಲ್ಲಿ ಲ್ಯಾಕ್ಟಿಕ್ ಆಮ್ಲ ಉತ್ಪತ್ತಿಯಾಗಿ ಮೇವು ಕೆಡದಿರಲು ಸಹಾಯಕವಾಗುವುದು. ಹಸಿರು ಮೇವು ಲಭ್ಯವಿಲ್ಲದ ಕಾಲದಲ್ಲಿ ಈ ರಸಮೇವನ್ನು ಒಂದು ವಯಸ್ಕ ಹಾಲು ಹಿಂಡುವ ಆಕಳಿಗೆ ದಿನಕ್ಕೆ 10-15ಕೆ.ಜಿಯಷ್ಟು ನೀಡಬಹುದು ಎಂದರು.ಪ್ರಗತಿಪರ ರೈತ ಸಂತೋಷ್ ಕೃಷಿ ವಿಜ್ಞಾನ ಕೇಂದ್ರದ ಸಹಾಯದಿಂದ ರಸಮೇವನ್ನು ತಯಾರಿಸಿದ ಬಗೆಯ ಕುರಿತು ತಮ್ಮ ಅನುಭವನ್ನು ಹಂಚಿಕೊಂಡರು. ಪಶು ಇಲಾಖೆ ಸಹಾಯಕ ನಿರ್ದೇಶಕ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಕ್ಷೇತ್ರೋತ್ಸವದಲ್ಲಿ ಸುಮಾರು ಸುತ್ತ ಮುತ್ತಲಿನ ಗ್ರಾಮಗಳ 30 ಜನ ರೈತರು ಭಾಗವಹಿಸಿದ್ದರು.