ಹಳೇಬೀಡಿನ ವಾರದ ಸಂತೆಗೆ ಸರ್ಕಾರಿ ಕಾಲೇಜು ವಿದ್ಯಾರ್ಥಿಗಳಿಂದ ಕ್ಷೇತ್ರ ಸಮೀಕ್ಷೆ

KannadaprabhaNewsNetwork |  
Published : Apr 05, 2024, 01:04 AM IST
4ಎಚ್ಎಸ್ಎನ್7 : ಸರ್ಕಾರಿ ಪ್ರಥಮ ದರ್ಜೆಕಾಲೇಜಿನ ವಿದ್ಯಾರ್ಥಿಗಳು ಒಂದು ದಿನದಕ್ಷೇತ್ರಾಧ್ಯಯನವಾಗಿ  ಸಂತೆಗೆ ಭೇಟಿ ನೀಡಿ ವಿವಿಧ ವ್ಯಾಪರವ್ಯವಹಾರಗಳ ಮಾಹಿತಿ ಪಡೆದರು.. | Kannada Prabha

ಸಾರಾಂಶ

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಒಂದು ದಿನದ ಕ್ಷೇತ್ರಾಧ್ಯಯನವಾಗಿ ಹಳೇಬೀಡಿನ ವಾರದ ಸಂತೆಗೆ ಭೇಟಿ ನೀಡಿ ವಿವಿಧ ವ್ಯಾಪಾರ ವ್ಯವಹಾರಗಳ ಮಾಹಿತಿ ಪಡೆದರು.

ವ್ಯಾಪಾರದ ಮಾಹಿತಿ । ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಯೋಜನೆ । ವ್ಯಾಪಾರಸ್ಥರ ಆರ್ಥಿಕ ಸ್ಥಿತಿಗತಿ, ಲಾಭ, ನಷ್ಟ ಅಧ್ಯಯನ

ಕನ್ನಡಪ್ರಭ ವಾರ್ತೆ ಹಳೇಬೀಡು

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಒಂದು ದಿನದ ಕ್ಷೇತ್ರಾಧ್ಯಯನವಾಗಿ ಹಳೇಬೀಡಿನ ವಾರದ ಸಂತೆಗೆ ಭೇಟಿ ನೀಡಿ ವಿವಿಧ ವ್ಯಾಪಾರ ವ್ಯವಹಾರಗಳ ಮಾಹಿತಿ ಪಡೆದರು. ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಮಾಜಶಾಸ್ತ್ರ ಮತ್ತು ರಾಜ್ಯಶಾಸ್ತ್ರ ವಿಭಾಗದ ಸಹಯೋಗದಲ್ಲಿ ಈ ಯೋಜನೆ ಹಮ್ಮಿಕೊಳ್ಳಲಾಗಿತ್ತು.

ಕ್ಷೇತ್ರಾದ್ಯಯನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಖುಷಿಯಿಂದ ಬಿಸಿಲಿನಲ್ಲಿ ಸಂತೆಗೆ ಭೇಟಿ ನೀಡಿ ಸಂತೆ ವ್ಯಾಪಾರಸ್ಥರ ಆರ್ಥಿಕ ಸ್ಥಿತಿಗತಿಗಳು, ವ್ಯಾಪಾರದ ಲಾಭ ನಷ್ಟ, ಎಲ್ಲವನ್ನು ಮಾಹಿತಿ ಕಲೆಹಾಕಿಕೊಂಡು ಸಂತೆ ವ್ಯಾಪಾರಿಗಳ ಜೀವನ ಅರ್ಥ ಮಾಡಿಕೊಳ್ಳುವ ಪ್ರಯತ್ನ ಮಾಡಿದರು.

ಕಲಿಯುವುದರ ಜೊತೆಗೆ ಪ್ರಾಯೋಗಿಕವಾಗಿ ವಿಷಯವನ್ನು ಅರ್ಥ ಮಾಡಿಕೊಳ್ಳುವ ದೃಷ್ಟಿಯಿಂದ ಸುಮಾರು ೫೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ೧೦ ತಂಡಗಳಾಗಿ ಮಾಡಿಕೊಂಡು ಸಂತೆಯಲ್ಲಿ ವ್ಯಾಪಾರ ಮಾಡುತ್ತಿರುವ ತರಕಾರಿ, ಕಾಯಿ ಪಲ್ಯ, ಮೀನು, ದವಸ ಧಾನ್ಯ, ರೈತರ ಕೃಷಿ ಉಪಕರಣಗಳು, ವ್ಯವಸಾಯ ಉತ್ಪನ್ನಗಳು, ಕಟ್ಟಿಗೆ ಸಾಮಾನುಗಳು, ನಿತ್ಯದ ಅವಶ್ಯಕ ವಸ್ತುಗಳು, ಬೇಳೆಕಾಳುಗಳು, ಜವಾರಿ ಕಾಳುಗಳು, ಮಸಾಲ ಸಾಮಗ್ರಿಗಳು, ಹಣ್ಣುಗಳ ವ್ಯಾಪಾರದ ಬಗ್ಗೆ ವೀಕ್ಷಣೆ ಮಾಡುವದರ ಜತೆಗೆ ಕೊಡು ಮತ್ತು ಕೊಳ್ಳುವವರ ಚೌಕಾಸಿ ಕುರಿತು ಮಾಹಿತಿ ಕಲೆ ಹಾಕಿದರು.

ಸಂತೆ ವ್ಯಾಪಾರವೆಂದರೆ ಹಳ್ಳಿಗಾಡಿನ ಜನರು ತಾವು ಉತ್ಪಾದನೆ ಮಾಡಿದ ಹಣ್ಣು ದವಸ, ಧಾನ್ಯ, ಬೇಳೆಕಾಳು, ತರಕಾರಿ ಸೊಪ್ಪು ಇತ್ಯಾದಿಗಳನ್ನು ಸುಡು ಬಿಸಿಲನ್ನೂ ಲೆಕ್ಕಿಸದೇ ವ್ಯಾಪಾರ ಮಾಡುತ್ತಿರುವವರ ಬಳಿ ಒಂದು ರುಪಾಯಿ, ಎರಡು ರುಪಾಯಿಗೆ ಚೌಕಾಸಿ ಮಾಡಿ ತೆಗೆದುಕೊಳ್ಳುವ ಪಟ್ಟಣ ಗ್ರಾಹಕರು ಅಂಗಡಿಗಳಿಗೆ, ಮಾಲ್‌ಗಳಲ್ಲಿ ನಿಗದಿತ ಬೆಲೆ ತೆತ್ತು ಅವಶ್ಯಕ ವಸ್ತುಗಳನ್ನು ತರುತ್ತಾರೆ. ಆದರೆ ಸಂತೆಯಲ್ಲಿ ಮಾತ್ರ ರೈತರ, ಹಳ್ಳಿ ಜನರ ಬಳಿ ಏಕೆ ಚೌಕಾಸಿ ಮಾಡುತ್ತಾರೆ ಎಂದು ವಿದ್ಯಾರ್ಥಿಗಳು ಬೇಸರ ಹೊರಹಾಕಿದರು.

ಈ ಸಂದರ್ಭದಲ್ಲಿ ಸಮಾಜಶಾಸ್ತ್ರ ಉಪನ್ಯಾಸಕಿ ಜಿ. ಆರ್. ದೀಪ್ತಿ ಮಾತನಾಡಿ, ಕಾಲೇಜು ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಕ್ಷೇತ್ರ ಅಧ್ಯಯನವಾಗಿ ಸಂತೆ ಆಯ್ಕೆ ಮಾಡಿಕೊಂಡಿದ್ದರ ಮುಖ್ಯ ಉದ್ದೇಶ ವಾರದ ಸಂತೆ ವ್ಯಾಪಾರದಿಂದ ಸಣ್ಣ ಸಣ್ಣ ವ್ಯಾಪಾರ ವಹಿವಾಟಿನಿಂದ ಹಳ್ಳಿ ರೈತ ವ್ಯಾಪಾರಿಗಳು ಹೇಗೆ ಬದುಕು ನಡೆಸುತ್ತಿದ್ದಾರೆ ಮತ್ತು ಬದುಕು ಕಟ್ಟಿಕೊಂಡಿದ್ದಾರೆ ಎಂಬ ವಾಸ್ತವ ವಿದ್ಯಾರ್ಥಿಗಳಿಗೆ ತಿಳಿಸಿಕೊಡುವುದಾಗಿತ್ತು. ಇದರಲ್ಲಿ ವಿದ್ಯಾರ್ಥಿಗಳು ಖುಷಿಯಿಂದ ಭಾಗವಹಿಸಿ ಮಾಹಿತಿ ಪಡೆದುಕೊಂಡಿದ್ದಾರೆ ಎಂದರು.

ರಾಜ್ಯಶಾಸ್ತ್ರದ ವಿಭಾಗದ ಮುಖ್ಯಸ್ಥ ಮಹೇಶ್‌ ಮಾತನಾಡಿದರು.

ವ್ಯಾಪಾರ ಜೀವಾನಾಧಾರದ ಕಸುಬಾಗಿದೆ. ನಮ್ಮ ತಂದೆಯವರು ಬೆಳೆದ ತರಕಾರಿಗಳನ್ನು ಪ್ರತಿ ವಾರ ವಾರದ ಸಂತೆಯಲ್ಲಿ ಮಾರಾಟ ಮಾಡಿ ನಮ್ಮ ಶಿಕ್ಷಣಕ್ಕೆ ನೆರವಾಗಿದ್ದಾರೆ. ಮುಂದಿನ ದಿನಗಳಲ್ಲಿ ಉತ್ತಮ ಶಿಕ್ಷಣ ಪಡೆದು ಒಳ್ಳೆಯ ಉದ್ಯೋಗ ಪಡೆದು ಅವರಿಗೆ ಈ ವೃತ್ತಿಯಿಂದ ಮುಕ್ತಿ ನೀಡಬೇಕೆಂದಿದ್ದೇನೆ.

ಪ್ರಜ್ವಲ್, ವಿದ್ಯಾರ್ಥಿ.

ಕಾಲೇಜು ವಿದ್ಯಾರ್ಥಿ ಹಂತದಲ್ಲಿ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಪಾಠಗಳ ಅವಶ್ಯಕತೆ ಅವಶ್ಯಕವಾಗಿದ್ದು, ಆ ಕೆಲಸವನ್ನು ಸಮಾಜಶಾಸ್ತ್ರ ಮತ್ತು ರಾಜ್ಯಶಾಸ್ತ್ರ ವಿಭಾಗದಿಂದ ಮಾಡಿದ್ದಾರೆ. ಇಂತಹ ವಿನೂತನ ಕಲಿಸುವಿಕೆಯ ಕಲೆಗೆ ಧನ್ಯವಾದ ಸಲ್ಲಿಸುತ್ತೇನೆ.

ವಸಂತ್‌ಕುಮಾರ್, ಪ್ರಾಂಶುಪಾಲ.ಹಳೇಬೀಡಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಒಂದು ದಿನದ ಕ್ಷೇತ್ರದ ಅಧ್ಯಯನವಾಗಿ ಸಂತೆಗೆ ಭೇಟಿ ನೀಡಿ ವಿವಿಧ ವ್ಯಾಪಾರ ವ್ಯವಹಾರಗಳ ಮಾಹಿತಿ ಪಡೆದರು..

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ