ದಿನದ ಬಡ್ಡಿ ಸಾಲಕ್ಕೆ ಹೊಲವಾರಿ ಇಸ್ಪೀಟ್‌ !

KannadaprabhaNewsNetwork | Published : Aug 23, 2024 1:03 AM

ಸಾರಾಂಶ

ಹೊಲದಲ್ಲಿ ಇಸ್ಪಿಟ್‌ ಆಟ ಆಡುವವರಿಗೆ ಕೆಲವರು ದಿನದ ಬಡ್ಡಿಯಂತೆ ಹಣ ನೀಡುತ್ತಿರುವುದು ಇಂದು ಹೆಚ್ಚಾಗಿದೆ. ನಿತ್ಯವೂ ಒಂದು ಹೊಲದಿಂದ ಮತ್ತೊಂದು ಹೊಲದಲ್ಲಿ ಇಸ್ಪಿಟ್‌ ಆಟ ನಡೆಯುತ್ತದೆ. ಗೆದ್ದವರು ಬಡ್ಡಿ ಜತೆಗೆ ಅಸಲನ್ನು ಅಂದೇ ಕೊಟ್ಟರೆ, ಕೆಲವರು ಬೆಳಗ್ಗೆ ನೀಡುತ್ತಾರೆ.

ಶಿವಾನಂದ ಗೊಂಬಿ

ಹುಬ್ಬಳ್ಳಿ

ವಾರ, ಪಾಕ್ಷಿಕ ಹಾಗೂ ತಿಂಗಳ ಬಡ್ಡಿಯಂತೆ ದಿನದ ಬಡ್ಡಿಯೂ ಇಲ್ಲುಂಟು. ಇದಂತೂ ಅಕ್ಷರಶಃ ಜನರನ್ನು ಸುಲಿಯುವ ದಂಧೆ. ಬೇಕಾದವರಿಗೆಲ್ಲ ದಿನದ ಬಡ್ಡಿ ಲೆಕ್ಕದಲ್ಲಿ ಸಾಲ ಸಿಗುವುದಿಲ್ಲ. ತೀರಾ ಅನಿವಾರ್ಯವಿದ್ದವರಿಗೆ ಮಾತ್ರ ದಿನದ ಬಡ್ಡಿಯಂತೆ ಕೊಡುತ್ತಾರೆ. ಅವರು ಮರುದಿನವೇ ಬಡ್ಡಿ ಮತ್ತು ಅಸಲು ಕಟ್ಟುವಂತಿರಬೇಕು. ಇಲ್ಲವೇ ಬಡ್ಡಿಯಂತೂ ಕಟ್ಟಲೇಬೇಕು. ಅಂಥವರಿಗೆ ಮಾತ್ರ ಈ ಸಾಲ!

ಇದು ಹುಬ್ಬಳ್ಳಿಯಲ್ಲಿನ ಮೀಟರ್‌ ಬಡ್ಡಿ ಮಾಫಿಯಾ ನಡೆಸುವ ದಿನದ ಬಡ್ಡಿಯ ಕರಾಳತೆ.

ದಿನದ ಬಡ್ಡಿ ₹ 1000ದಿಂದ ಹಿಡಿದು ಲಕ್ಷಗಟ್ಟಲೇ ಕೊಟ್ಟಿರುವ ಉದಾಹರಣೆಗಳಿವೆ. ಎರಡು ಬಗೆಯ ಜನರಿಗೆ ದಿನದ ಬಡ್ಡಿ ಲೆಕ್ಕದಲ್ಲಿ ಕೊಡುತ್ತಾರೆ. ಒಂದನೆಯ ವರ್ಗದವರು ತರಕಾರಿ ವ್ಯಾಪಾರಸ್ಥರು, ಸಣ್ಣ ಪುಟ್ಟ ರಸ್ತೆ ಬದಿಯಲ್ಲಿ ಅಂದಿನ ಸಾಮಗ್ರಿಗಳನ್ನು ಅಂದೇ ಮಾರಾಟ ಮಾಡಿ ಜೀವನ ಸಾಗಿಸುವವರು. ಇವರಿಗೆ ₹ 1000ದಿಂದ ₹ 10000 ಬಂಡವಾಳ ಬೇಕಾಗುತ್ತದೆ. ಇಂಥವರಿಗೆ ಶೇ. 5ರಿಂದ 10ರ ಬಡ್ಡಿದರದಲ್ಲಿ ಸಾಲ ನೀಡುತ್ತಾರೆ. ಇವರು ಬೆಳಗ್ಗೆ ಸಾಲ ಪಡೆದು ರಸ್ತೆ ಬದಿಗಳಲ್ಲಿ ನಿಂತು ವ್ಯಾಪಾರ ಮಾಡಿ ತಮ್ಮ ಲಾಭವನ್ನಿಟ್ಟುಕೊಂಡು ಅಂದೇ ಸಂಜೆ ಸಾಲ ಮರಳಿಸುತ್ತಾರೆ. ಇವರಿಗೆಲ್ಲ ಸಾಲ ಕೊಡುವಾಗಲೇ ಬಡ್ಡಿಯ ಹಣ ಪಡೆದುಕೊಂಡಿರುತ್ತಾರೆ ಸಾಲಗಾರರು. ಇದು ದಿನನಿತ್ಯ ಮಾರುಕಟ್ಟೆ ಪ್ರದೇಶಗಳಲ್ಲಿ ನಡೆಯುತ್ತಲೇ ಇರುತ್ತದೆ.

ಇಸ್ಪಿಟ್‌ ಅಡ್ಡಾ:

ಇನ್ನು ಇಸ್ಪೀಟ್‌ ಆಟಗಳಲ್ಲೂ ದಿನದ ಬಡ್ಡಿ ರೂಪದಲ್ಲಿ ಸಾಲ ನೀಡಲಾಗುತ್ತದೆ. ಇಸ್ಪೀಟ್‌ನಲ್ಲೂ ಎರಡು ಬಗೆ. ಒಂದು ಅಡ್ಡಾ ಅಥವಾ ಕ್ಲಬ್‌. ಮತ್ತೊಂದು ಹೊಲವಾರಿ ಇಸ್ಪೀಟ್‌. ಕೆಲ ಬಡ್ಡಿ ಕುಳಗಳ ಅಡ್ಡಾಗಳಲ್ಲಿ ಹಾಗೂ ಅಡ್ಡಾ ಮಾಲೀಕರೇ ಇದನ್ನು ನಿಭಾಯಿಸುತ್ತಾರೆ. ಇತ್ತೀಚಿಗೆ ಕೊಂಚ ಕಡಿಮೆಯಾಗಿದೆ. ಆದರೂ ಅಲ್ಲಲ್ಲಿ ಗೌಪ್ಯವಾಗಿ ನಡೆಯುತ್ತಲೇ ಇರುತ್ತದೆ. ಆದರೆ ಹೊಲವಾರಿ ಇಸ್ಪೀಟ್‌ ಭಾರೀ ಅನಾಹುತಗಳನ್ನೇ ಸೃಷ್ಟಿಸುತ್ತಿದೆ.

ಹೊಲವಾರಿ ಇಸ್ಪೀಟ್‌ ಎಂದರೆ ಇವರು ಎಲ್ಲಿಯೂ ಅಡ್ಡಾ ಮಾಡಿರುವುದಿಲ್ಲ. ಪ್ರತಿದಿನ ಬೇರೆ ಬೇರೆ ಜಾಗಗಳಲ್ಲೇ ಇಸ್ಪೀಟ್‌ ಆಡಿಸುತ್ತಾರೆ. ನಗರಕ್ಕೆ ಹೊಂದಿಕೊಂಡಿರುವ ಹಳ್ಳಿಗಳಲ್ಲಿನ ಹೊಲಗಳಲ್ಲಿ ಮಧ್ಯಾಹ್ನದ ನಂತರ ಈ ಆಟ ಶುರುವಾಗುತ್ತದೆ. ಇಂದು ಈ ಹೊಲದಲ್ಲಿ ಆದರೆ ಮರುದಿನ ಪಕ್ಕದ ಊರು ಅಂದರೆ ಎರಡ್ಮೂರು ಕಿಮೀ ಅಂತರದಲ್ಲಿರುವ ಊರಿನ ಹೊಲಗಳಲ್ಲಿ ಇಸ್ಪೀಟ್‌ ನಡೆಯುತ್ತಿರುತ್ತದೆ. ಇಲ್ಲಿ ಆಟವನ್ನು ಈ ಬಡ್ಡಿ ಕುಳಗಳೇ ನಡೆಸುತ್ತಾರೆ. ಅದರಲ್ಲಿ ಕಮಿಷನ್‌ ಹೊಡೆಯುತ್ತಾರೆ. ಜತೆಗೆ ಯಾರಿಗಾದರೂ ಸಾಲ ಬೇಕಾದರೆ ದಿನದ ಬಡ್ಡಿ ಲೆಕ್ಕದಲ್ಲಿ ದುಡ್ಡನ್ನು ಕೊಡುತ್ತಾರೆ. ಆಟಕ್ಕೆ ಕುಳಿತವ ಏನಾದರೂ ಇವರಲ್ಲಿ ಸಾಲ ಪಡೆದು ಇಸ್ಪೀಟ್‌ ಆಡಿ ಗೆದ್ದರೆ ಆ ಕ್ಷಣವೇ ಅಸಲು ಹಾಗೂ ಬಡ್ಡಿ ಹಣ ಕೊಟ್ಟೇ ಮನೆಗೆ ಹೋಗಬೇಕು. ಒಂದು ವೇಳೆ ಸೋತರೆ ಮರುದಿನ ತಂದು ಕೊಡಬೇಕು. ಇಲ್ಲದಿದ್ದಲ್ಲಿ ಮನೆವರೆಗೂ ಬಂದು ಮಾನ ಹರಾಜು ಮಾಡುತ್ತಾರೆ. ತಾವು ಕೊಟ್ಟ ಸಾಲಕ್ಕೆ ಹೊಂದಾಣಿಕೆ ಆಗುವಂತಹ ವಸ್ತುಗಳನ್ನು ಮನೆಗಳಿಂದ ಎತ್ತಿಕೊಂಡು ಹೋಗುತ್ತಾರೆ. ಇದು ಸಹಜವಾಗಿ ಶೇ.10ರ ಬಡ್ಡಿದರದಲ್ಲೇ ನೀಡುವ ಸಾಲವಿದು.

ಪೊಲೀಸರಿಗೂ ಈ ರೀತಿಯ ಸಾಲ ಕೊಡುವುದು, ವಸೂಲಿ ಮಾಡುವುದೂ ಗೊತ್ತಿರುತ್ತದೆ. ಯಾವಾಗಲೋ ಒಮ್ಮೆ ರೇಡ್‌ ಕೂಡ ಮಾಡುತ್ತಿರುತ್ತಾರೆ. ಆದರೂ ಹೆಚ್ಚಿನ ಸಮಯ ಕಂಡೂ ಕಾಣದಂತೆ ಇರುವುದೇ ಜಾಸ್ತಿ ಎಂಬ ಆರೋಪ ಮಾಮೂಲಿ. ಇದೀಗ ಖಡಕ್‌ ಪೊಲೀಸ್‌ ಕಮಿಷನರ್‌ ಆಗಮಿಸಿದ್ದಾರೆ. ಇವನ್ನೆಲ್ಲ ಬಯಲಿಗೆಳೆದರೆ ಬಡ್ಡಿ ಮಾಫಿಯಾಕ್ಕೆ ಸ್ವಲ್ಪವಾದರೂ ಕಡಿವಾಣ ಹಾಕಬಹುದು ಎಂಬ ಮಾತು ಪ್ರಜ್ಞಾವಂತರದ್ದು.

Share this article