ಕನ್ನಡಕ್ಕಾಗಿ ಕೈ ಎತ್ತಿದ್ದಕ್ಕಾಗಿ ಬಿತ್ತು 2000 ಕೇಸ್‌!

| N/A | Published : Nov 08 2025, 12:06 PM IST

Narayanagowda
ಕನ್ನಡಕ್ಕಾಗಿ ಕೈ ಎತ್ತಿದ್ದಕ್ಕಾಗಿ ಬಿತ್ತು 2000 ಕೇಸ್‌!
Share this Article
  • FB
  • TW
  • Linkdin
  • Email

ಸಾರಾಂಶ

 ಕೋಮು ವೈಷಮ್ಯದಿಂದ ಸಮಾಜದ ನೆಮ್ಮದಿ ಕೆಡಿಸಿದವರ ಕೇಸುಗಳನ್ನು ವಾಪಸ್‌ ಪಡೆಯುವ ಸರ್ಕಾರ, ಕನ್ನಡ ನಾಡಿನ ಅಸ್ಮಿತೆಗಾಗಿ ಬೀದಿಗಿಳಿದ ಹೋರಾಟಗಾರರ ಮೇಲೆ ದುರುದ್ದೇಶದಿಂದ ಹೂಡಲಾಗಿರುವ ಕೇಸುಗಳನ್ನು ಹಿಂಪಡೆಯಲು ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದೆ ಎಂದು ಕನ್ನಡಪರ ಸಂಘಟನೆಗಳು ಆಕ್ರೋಶ 

 ಸಂಪತ್‌ ತರೀಕೆರೆ 

 ಬೆಂಗಳೂರು :   ರಾಜಕೀಯ ಪಕ್ಷಗಳ ಮುಖಂಡರು, ಕಾರ್ಯಕರ್ತರು ಮತ್ತು ಕೋಮು ವೈಷಮ್ಯದಿಂದ ಸಮಾಜದ ನೆಮ್ಮದಿ ಕೆಡಿಸಿದವರ ಕೇಸುಗಳನ್ನು ವಾಪಸ್‌ ಪಡೆಯುವ ಸರ್ಕಾರ, ಕನ್ನಡ ನಾಡಿನ ಅಸ್ಮಿತೆಗಾಗಿ ಬೀದಿಗಿಳಿದ ಹೋರಾಟಗಾರರ ಮೇಲೆ ದುರುದ್ದೇಶದಿಂದ ಹೂಡಲಾಗಿರುವ ಕೇಸುಗಳನ್ನು ಹಿಂಪಡೆಯಲು ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದೆ ಎಂದು ಕನ್ನಡಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. 

 ಕನ್ನಡ ನಾಡು, ನುಡಿ, ನೆಲ, ಜಲ ಹಾಗೂ ರೈತರ ಪರವಾಗಿ ದಶಕಗಳಿಂದ ಹೋರಾಟ ನಡೆಸಿದ ಸಾವಿರಾರು ಕನ್ನಡಪರ ಹೋರಾಟಗಾರರ ವಿರುದ್ಧ ರಾಜ್ಯಾದ್ಯಂತ ದಾಖಲಾಗಿರುವ ಪ್ರಕರಣಗಳ ಸಂಖ್ಯೆ ಎರಡು ಸಾವಿರ ದಾಟಿದೆ. ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಸಂಘಟನೆ ಒಂದರದ್ದೇ 60ಕ್ಕೂ ಹೆಚ್ಚು ಕೇಸುಗಳು ಇವೆ. ದೇವನಹಳ್ಳಿ, ಚನ್ನಪಟ್ಟಣ, ರಾಮನಗರ, ಬಾಗಲಕೋಟೆ, ಚನ್ನರಾಯಪಟ್ಟಣ, ಬೆಂಗಳೂರು ನಗರ, ದಾವಣಗೆರೆ, ಬೆಳಗಾವಿ, ಹಿರೇಬಾಗೇವಾಡಿ ಸೇರಿದಂತೆ ವಿವಿಧೆಡೆ ಕರವೇ ಕಾರ್ಯಕರ್ತರು, ಮುಖಂಡರ ಮೇಲೆ ಕೇಸುಗಳು ದಾಖಲಾಗಿವೆ.

ಕೋರ್ಟ್‌ಗಳಿಗೆ ಅಲೆದಾಟ: 

ಈ ಎಲ್ಲ ಪ್ರಕರಣಗಳು ಕನ್ನಡಪರ ಹೋರಾಟಗಾರರ ವೈಯಕ್ತಿಕ ವಿಚಾರಕ್ಕೆ ದಾಖಲಾದಂತಹ ಕೇಸುಗಳಲ್ಲ. ಕಾವೇರಿ ಹೋರಾಟ, ಕನ್ನಡ ನಾಮಫಲಕ ಹೋರಾಟ, ಬೆಳಗಾವಿ ಗಡಿ ಹೋರಾಟ, ಮಹದಾಯಿ, ಹಿಂದಿ ಭಾಷೆ ವಿರುದ್ಧದ ಹೋರಾಟ ಸೇರಿದಂತೆ ಕನ್ನಡ ನಾಡು, ನುಡಿ, ಭಾಷೆ ವಿಚಾರವಾಗಿ ಕೈಗೊಂಡ ಹೋರಾಟದಿಂದ ಆದಂತಹ ಕೇಸುಗಳು. ಕನ್ನಡಕ್ಕಾಗಿ, ನಾಡಿನ ಅಸ್ಮಿತೆಗಾಗಿ ಹೋರಾಡಿದ ಫಲವಾಗಿ ಇಂದಿಗೂ ಕೋರ್ಟ್‌ಗಳಿಗೆ ಅಲೆಯುತ್ತಲೆ ಇದ್ದೇವೆ. ಸರ್ಕಾರ ಮಾತ್ರ ಕೇಸು ಹಿಂಪಡೆಯುವ ಪ್ರಯತ್ನವನ್ನೂ ಮಾಡುತ್ತಿಲ್ಲ ಎಂದು ಕನ್ನಡಪರ ಸಂಘಟನೆಗಳು ಆರೋಪಿಸಿವೆ.

ಕಳೆದೆರಡು ವರ್ಷಗಳಿಂದ ಕನ್ನಡಪರ ಹೋರಾಟಗಾರರ ಕೇಸು ವಾಪಸ್‌ ಪಡೆಯುವುದಾಗಿ ಹೇಳುತ್ತಿರುವ ‘ಕನ್ನಡರಾಮಯ್ಯ’ ಎಂದೇ ಖ್ಯಾತರಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡ ಆಶ್ವಾಸನೆ ಕೊಡುತ್ತಿರುವುದು ಬಿಟ್ಟರೆ, ಕೇಸು ಹಿಂಪಡೆಯುವ ಕಾರ್ಯಕ್ಕೆ ಕೈಹಾಕಿಲ್ಲ. ವಿರೋಧ ಪಕ್ಷದ ನಾಯಕರಾಗಿದ್ದಾಗ ‘ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಕೇಸು ವಾಪಸ್‌ ಪಡೆಯುತ್ತೇವೆ’ ಎಂದು ಭರವಸೆ ನೀಡಿದ್ದರು. ಆ ನಂತರ 2025 ಜ.28ರಂದು ವಿಧಾನಸೌಧದ ಬಳಿ ಭುವನೇಶ್ವರಿ ಪ್ರತಿಮೆ ಅನಾವರಣದ ಸಂದರ್ಭದಲ್ಲಿ ಇದೇ ಮಾತನ್ನು ಪುನರುಚ್ಚರಿಸಿದ್ದರು. ಈಗ ನ.1ರಂದು ಅದೇ ಮಾತಿನ ಪ್ರತಿಜ್ಞೆ ಮಾಡಿದ್ದಾರೆ. ಆದರೆ, ಕೇಸು ಹಿಂಪಡೆಯುವ ಪ್ರಕ್ರಿಯೆಯನ್ನೇ ಆರಂಭಿಸಿಲ್ಲ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಧರ್ಮಸಿಂಗ್‌ ನೇತೃತ್ವದ ಸರ್ಕಾರದ ನಂತರ ಬಂದ ಯಾವ ಸರ್ಕಾರಗಳು ಕೂಡ ಕನ್ನಡಪರ ಹೋರಾಟಗಾರರ ಮೇಲಿನ ಕೇಸುಗಳನ್ನು ಹಿಂಪಡೆಯಲು ಇಚ್ಛಾಶಕ್ತಿ ಪ್ರದರ್ಶಿಸುತ್ತಿಲ್ಲ. ಈ ಹಿಂದೆ ಯಡಿಯೂರಪ್ಪ ಅವರ ಸರ್ಕಾರ ಹಿಂದುಪರ ಸಂಘಟನೆಗಳ 2 ಸಾವಿರಕ್ಕೂ ಹೆಚ್ಚು ಪ್ರಕರಣಗಳನ್ನು ಹಿಂದಕ್ಕೆ ಪಡೆದಿತ್ತು. ಈಗಿನ ಕಾಂಗ್ರೆಸ್‌ ಸರ್ಕಾರ ಕೂಡ ಮೇಕೆದಾಟು ಹೋರಾಟದಲ್ಲಿ ಕೇಸು ಹಾಕಿಸಿಕೊಂಡಿದ್ದ ತಮ್ಮ ಪಕ್ಷದ ಹತ್ತಾರು ಶಾಸಕರು, ಸಚಿವರು, ವಿಧಾನಪರಿಷತ್‌ ಸದಸ್ಯರ ವಿರುದ್ಧದ ಪ್ರಕರಣಗಳನ್ನು ಮಾತ್ರ ಹಿಂಪಡೆದಿದೆ. ಆದರೆ, ಕನ್ನಡಪರ ಹೋರಾಟಗಾರರ ಬಗ್ಗೆ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದೆ ಎಂದು ನಾರಾಯಣಗೌಡ ಕಿಡಿಕಾರಿದ್ದಾರೆ.

ಕನ್ನಡಕ್ಕಾಗಿ ಹೋರಾಟ ನಿಲ್ಲಲ್ಲ: 

ಕನ್ನಡಪರ ಹೋರಾಟಗಾರರು ಸ್ವಾರ್ಥಕ್ಕಾಗಿ ಎಂದೂ ಹೋರಾಟ ನಡೆಸಿದವರಲ್ಲ. ಐಎಎಸ್‌, ಐಪಿಎಸ್‌, ಬ್ಯಾಂಕಿಂಗ್‌ ಸೇರಿದಂತೆ ಕೇಂದ್ರದ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಕನ್ನಡದಲ್ಲೂ ಬರೆಯುವ ಅವಕಾಶಕ್ಕಾಗಿ ಖಾಸಗಿ ವಲಯದಲ್ಲೂ ಕನ್ನಡಿಗರಿಗೆ ಉದ್ಯೋಗ ಮೀಸಲಾತಿಗಾಗಿ, ಕನ್ನಡ ನೆಲದಲ್ಲಿ ಕಡ್ಡಾಯ ಕನ್ನಡ ನಾಮಫಲಕ ಅಳವಡಿಕೆಗಾಗಿ, ರಾಜ್ಯಕ್ಕೆ ನೀರು ಸಾಲದಿದ್ದಾಗ ತಮಿಳುನಾಡಿಗೆ ನೀರು ಹರಿಸುವುದರ ವಿರುದ್ಧ, ನದಿ ನೀರು ಹಂಚಿಕೆಯಲ್ಲಿ ರಾಜ್ಯಕ್ಕೆ ಅನ್ಯಾಯವಾದಾಗ ಹೀಗೆ ಕನ್ನಡತನ, ಕನ್ನಡಿಗರ ಸ್ವಾಭಿಮಾನಕ್ಕಾಗಿ ಪ್ರಾಣವನ್ನು ಪಣಕ್ಕಿಟ್ಟು ಬೀದಿಗಿಳಿದು ಹೋರಾಡಿದ್ದಾರೆ. ಸರ್ಕಾರ ಕೇಸು ವಾಪಸ್‌ ಪಡೆಯದಿದ್ದರೂ ಕನ್ನಡಕ್ಕಾಗಿ ಬೀದಿಗಿಳಿದು ಹೋರಾಡುವುದು ನಿಲ್ಲುವುದಿಲ್ಲ ಎಂದು ಎಚ್ಚರಿಸಿದ್ದಾರೆ.

 ನುಡಿದಂತೆ ನಡೆಯಲಿ ಕನ್ನಡಪರ ಹೋರಾಟಗಾರರು ವೈಯಕ್ತಿಕ ಲಾಭಕ್ಕಾಗಿ ಹೋರಾಟ ಮಾಡುವವರಲ್ಲ. ನಾಡು, ನುಡಿ, ನೆಲ, ಜಲ ರಕ್ಷಣೆಗಾಗಿ ನಿಂತವರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕನ್ನಡಪ್ರೀತಿ ಇದೆ ಎಂದು ಭಾವಿಸಿದ್ದೇನೆ. ಹಿಂದೆ ಹಲವು ಬಾರಿ ಕೊಟ್ಟ ಭರವಸೆಯಂತೆ ಸಿದ್ದರಾಮಯ್ಯ ಅವರು ನುಡಿದಂತೆ ನಡೆಯಬೇಕು. ಭಾಷೆ, ನೆಲ, ಜಲ, ಉದ್ಯೋಗಕ್ಕೆ ಸಂಬಂಧಿಸಿದಂತೆ ಯಾವ ಪಕ್ಷಗಳೂ ಹೋರಾಟ ಮಾಡಿಲ್ಲ. ಕನ್ನಡಪರ ಹೋರಾಟಗಾರರನ್ನು ಹತ್ತಿಕ್ಕುವಂತಹ ಕೆಲಸ ಮಾಡಿದರೆ, ಮುಂದೆ ಯಾವ ಹೋರಾಟಗಾರರು ನಾಡಿನ ಪರ ಧ್ವನಿ ಎತ್ತುತ್ತಾರೆ?

ನನ್ನ ವಿರುದ್ಧವೇ 21 ಕೇಸುಗಳು ಇದ್ದು ಕೋರ್ಟ್‌ಗೆ ಅಲೆಯುತ್ತಿದ್ದೇನೆ. ಆರು ಬಾರಿ ನನ್ನನ್ನು ಜೈಲಿಗೆ ಕಳುಹಿಸಲಾಗಿದೆ. ದೇವೇಗೌಡರು ಮುಖ್ಯಮಂತ್ರಿಯಾಗಿದ್ದಾಗ, ಎಸ್‌.ಎಂ.ಕೃಷ್ಣರ ಕಾಲದಲ್ಲಿ ಮತ್ತು ಈಗಿನ ಸರ್ಕಾರವೂ ಜೈಲಿಗೆ ಕಳುಹಿಸಿದೆ ಎಂದು ನಾರಾಯಣಗೌಡ ಬೇಸರ ವ್ಯಕ್ತಪಡಿಸಿದ್ದಾರೆ.

Read more Articles on