ಕಡೂರು ಯುಜಿಡಿ ಸೌಲಭ್ಯಕ್ಕೆ ಸರ್ಕಾರದಿಂದ ₹53 ಕೋಟಿ ಅನುದಾಬ: ಶಾಸಕ ಕೆ.ಎಸ್‌. ಆನಂದ್

KannadaprabhaNewsNetwork | Published : Feb 27, 2025 12:34 AM

ಪಟ್ಟಣಕ್ಕೆ ಯುಜಿಡಿ ಸೌಲಭ್ಯಕ್ಕಾಗಿ ಕಳುಹಿಸಿದ್ದ ₹168 ಕೋಟಿ ಪ್ರಸ್ತಾವನೆಯಡಿ ರಾಜ್ಯ ಸರ್ಕಾರ ಈಗಾಗಲೇ ₹53 ಕೋಟಿ ಬಿಡುಗಡೆ ಮಾಡಿದೆ ಎಂದು ಶಾಸಕ ಕೆ.ಎಸ್‌. ಆನಂದ್ ತಿಳಿಸಿದರು.

ಹೂವು, ಹಣ್ಣು, ಎಲೆ ವ್ಯಾಪಾರಿಗಳ ಸಂಘದಿಂದ ಆಯೋಜನೆ । ಬಾಕಿ ಅನುದಾನ ಶೀಘ್ರ ಬಿಡುಗಡೆಕನ್ನಡಪ್ರಭ ವಾರ್ತೆ ಕಡೂರು

ಪಟ್ಟಣಕ್ಕೆ ಯುಜಿಡಿ ಸೌಲಭ್ಯಕ್ಕಾಗಿ ಕಳುಹಿಸಿದ್ದ ₹168 ಕೋಟಿ ಪ್ರಸ್ತಾವನೆಯಡಿ ರಾಜ್ಯ ಸರ್ಕಾರ ಈಗಾಗಲೇ ₹53 ಕೋಟಿ ಬಿಡುಗಡೆ ಮಾಡಿದೆ ಎಂದು ಶಾಸಕ ಕೆ.ಎಸ್‌. ಆನಂದ್ ತಿಳಿಸಿದರು.

ಪಟ್ಟಣದ ಪೇಟೆ ಗಣಪತಿ ಆಂಜನೇಯ ದೇವಾಲಯ ವೃತ್ತ ಮತ್ತು ಕೆ.ಎಲ್.ವಿ. ವೃತ್ತದಲ್ಲಿರುವ ಹೂವು, ಹಣ್ಣು, ಎಲೆ ವ್ಯಾಪಾರಿಗಳ ಸಂಘದಿಂದ ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು. ಕಡೂರು ಪಟ್ಟಣಕ್ಕೆ ಯುಜಿಡಿ ಸೌಲಭ್ಯಕ್ಕಾಗಿ ₹53 ಕೋಟಿ ಬಿಡುಗಡೆಯಾಗಿದ್ದು ಉಳಿದ ಅನುದಾನ ಬಂದಾಕ್ಷಣ ಯುಜಿಡಿಗೆ ಚಾಲನೆ ದೊರಕಲಿದೆ ಎಂದು ಹೇಳಿದರು.

ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಸಹ ಸದಸ್ಯರೊಡಗೂಡಿ ಬೀದಿ ಬದಿ ವ್ಯಾಪಾರಿಗಳ ಪರವಾಗಿ ನಿಂತು ಅವರನ್ನು ಒಕ್ಕಲೆಬ್ಬಿಸದೆ ರಕ್ಷಣೆಗೆ ಪಣತೊಟ್ಟು ವ್ಯಾಪಾರ ಮಾಡಲು ಉತ್ತಮ ಅವಕಾಶ ನೀಡಿದರು. ಅಧ್ಯಕ್ಷರು ಹಳೆ ಸಂತೆ ಜಾಗ ರಕ್ಷಣೆ ಮಾಡಿ ಸರ್ಕಾರದ ಜಾಗ ಉಳಿಸಿ ತಂತಿ ಬೇಲಿ ಹಾಕಿಸಿದ್ದಾರೆ ಎಂದರು.

ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಮಾತನಾಡಿ, ಬೀದಿ ಬದಿ ವ್ಯಾಪಾರಿಗಳ ಬದುಕು ಕಟ್ಟಿಕೊಡುವ ಕೆಲಸ ಮಾಡ ಬೇಕು ಎಂಬ ಅಚಲ ನಿರ್ಧಾರದಿಂದ ಈ ಕೆಲಸನ್ನು ಎಲ್ಲರೂ ಪ್ರಾಮಾಣಿಕವಾಗಿ ಮಾಡಿ ತೋರಿಸಿದ್ದೇವೆ. ಬಡವರ, ಸಣ್ಣ ವ್ಯಾಪಾರಿಗಳ ಕಷ್ಟ ನನಗೂ ಅರಿವಿದೆ. ನಾನು ಕೂಡ ಒರ್ವ ರೈತನ ಮಗನಾಗಿದ್ದು ಕಷ್ಟಗಳು ಏನೆಂದು ತಿಳಿದಿದೆ ಎಂದರು..

ಉಪಾಧ್ಯಕ್ಷೆ ಮಂಜುಳಾ ಚಂದ್ರು ಮಾತನಾಡಿ, ಪಟ್ಟಣದ ಸಮಗ್ರ ಅಭಿವೃದ್ಧಿಗೆ ಪುರಸಭೆಯ ಆಡಳಿತ ಮಂಡಳಿಯ ಎಲ್ಲ ಸದಸ್ಯರು ಉತ್ತಮವಾಗಿ ಸ್ಪಂಧಿಸುತ್ತಿದ್ದು ಶಾಸಕರು ಇನ್ನು ಹೆಚ್ಚಿನ ಅನುದಾನ ನೀಡಿದರೆ ಪ್ರಗತಿಗೆ ಪೂರಕವಾಗಲಿದೆ ಎಂದರು.

ಹಿರಿಯ ಪುರಸಭೆ ಸದಸ್ಯ ಈರಳ್ಳಿ ರಮೇಶ್ ಮಾತನಾಡಿ, ಅಭಿವೃದ್ದಿ ನೆಪದಲ್ಲಿ ಬೀದಿ ಬದಿ ವ್ಯಾಪಾರಿಗಳನ್ನು ಒಕ್ಕಲೆಬ್ಬಿಸಬಾರದು. ಒಂದು ವೇಳೆ ಅನಿವಾರ್ಯ ಇದ್ದರೆ ಅವರಿಗೆ ನೆರವಾಗಿ ಸೂಕ್ತ ಪರಿಹಾರ ನೀಡುವುದು ನಮ್ಮ ಕರ್ತವ್ಯ ಎಂದರು.

ಸದಸ್ಯರಾದ ತೋಟದಮನೆ ಮೋಹನ್, ಸುಧಾಉಮೇಶ್,ಶಂಕರ್, ಶ್ರೀಕಾಂತ್ ಮತ್ತಿತರರನ್ನು ಸನ್ಮಾನಿಸಲಾಯಿತು..

ಹಿರಿಯ ಸದಸ್ಯ ತೋಟದ ಮನೆ ಮೋಹನ್, ಸದಸ್ಯ ಯಾಸಿನ್, ಮರುಗುದ್ದಿ ಮನು , ಕೆ.ಎಲ್.ವಿ ವೃತ್ತದ ವ್ಯಾಪಾರಿಗಳಾದ ಪಂಗುಲಿ ಮಂಜುನಾಥ್, ಕಲ್ಲೇಶ್, ಯೋಗೀಶ್,ಕುಮಾರ್, ಶಿವಣ್ಣ,ರಾಮಣ್ಣ, ಪೈರೋಜ್,ಬಾಳೆಹಣ್ಣು ಕುಮಾರ್, ಲಕ್ಷ್ಮೀಶ, ಸ್ವಾಮಿ, ಗೋವಿಂದಪ್ಪ, ತಂಗಲಿಕುಮಾರ್, ನಂಜುಂಡಪ್ಪ, ಶ್ರೀನಿವಾಸ್, ಶೇಖರ್ ಮತ್ತಿತರರು ಇದ್ದರು.

ಭದ್ರಾ ಯೋಜನೆಗೆ ಸಹಕರಿಸಿದ್ದೇನೆ

ನನ್ನ 29 ವರ್ಷಗಳ ಸಕ್ರಿಯ ರಾಜಕೀಯ ಜೀವನದಲ್ಲಿ ಹೇಗೆ ಜನರಿಗೆ ಸೇವೆ ಸಲ್ಲಿಸಬೇಕೆಂದು ಗೊತ್ತಿದೆ. ಕೆಎಂಕೆ ಅವರೊಂದಿಗೆ ಇದ್ದು ಕಲಿತಿದ್ದು ಅವರ ದಾರಿಯಲ್ಲಿ ನಾನು ಕೂಡ ನಡೆಯುತ್ತಿದ್ದು ಭದ್ರಾ ಕುಡಿವ ನೀರು ತರುವ ಯೋಜನೆಗೆ ಕೆಎಂಕೆ ಅವರಿಗೆ ಸಹಕಾರ ನೀಡಿದ್ದೇನೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ ಎಂದು ಭಂಡಾರಿ ಶ್ರೀನಿವಾಸ್ ಹೇಳಿದರು.