ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಪಟ್ಟಣದ ರಾಷ್ಟ್ರೀಯ ಶಾಸ್ತ್ರೀಯ ನೃತ್ಯ ಅಕಾಡೆಮಿ ಹಾಗೂ ಮುಂಬೈನ ಮೈಸೂರು ಅಸೋಸಿಯೇಟ್ಸ್ ಸಂಯುಕ್ತ ಆಶ್ರಯದಲ್ಲಿ ಅಸೋಸಿಯೇಷನ್ ಎ ಸಿ ಆಡಿಟೋರಿಯಂನಲ್ಲಿ ನಡೆದ 58ನೇ ರಾಷ್ಟ್ರೀಯ ನೃತ್ಯೋತ್ಸವವನ್ನು ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಉದ್ಘಾಟನೆ ಮಾಡಿದರು. ನಂತರ ಮಾತನಾಡಿದ ಅವರು, ಭಾರತೀಯ ಸಂಸ್ಕೃತಿಯ ಕಲೆಗಳನ್ನು ವಿಶ್ವಾದ್ಯಂತ ಉಳಿಸಿ ಬೆಳೆಸುವಂತಹ ಕೆಲಸವನ್ನು ವಿದುಷಿ ಸ್ವಾತಿ ಪಿ ಭಾರದ್ವಾಜ್ ಮಾಡುತ್ತಾ ಬಂದಿದ್ದಾರೆ. ಸ್ವಾತಿ ಅವರು ವಿಶ್ವಾದ್ಯಂತ ನೃತ್ಯೋತ್ಸವಗಳ ಆಯೋಜನೆ ಮಾಡುತ್ತಿರುವುದು ಶ್ಲಾಘನೀಯ ಎಂದರು. ಕಲೆ ಯಾರ ಸ್ವತ್ತಲ್ಲ ಪೋಷಕರಲ್ಲಿ ಶ್ರದ್ಧೆ ಇದ್ದರೆ ಏನನ್ನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ನಮ್ಮ ಮುಂದೆ ಇರುವ ಸ್ವಾತಿ ಉದಾಹರಣೆಯಾಗಿದ್ದಾರೆ ಎಂದರು.ತನ್ನ ಸಾಧನೆಯನ್ನು ಸ್ವಾರ್ಥಕ್ಕೆ ಬಳಸಿಕೊಳ್ಳದೆ ವಿಶ್ವದಾದ್ಯಂತ ಇರುವ ಕಲಾವಿದರನ್ನು ಬೆಳಸುವ ನಿಟ್ಟಿನಲ್ಲಿ ತನ್ನದೇ ಆದಂತಹ ಅಕಾಡೆಮಿ ಸೃಷ್ಟಿಸಿಕೊಂಡು ವಿಶ್ವದಾದ್ಯಂತ ಕಲಿತಿರುವ ಕಲಿಯುತ್ತಿರುವ ವೇದಿಕೆ ವಂಚಿತ ಕಲಾವಿದರಿಗೆ ವೇದಿಕೆಯನ್ನು ಕಲ್ಪಿಸಿ ಕೊಡುವ ನಿಟ್ಟಿನಲ್ಲಿ ಅಕಾಡೆಮಿಯನ್ನು ಒಂದು ಶಕ್ತಿಯನ್ನಾಗಿ ಇಟ್ಟುಕೊಂಡು ಭಾರತೀಯ ಸಂಸ್ಕೃತಿಯ ಕಲೆಯನ್ನು ಉಳಿಸಿ ಬೆಳೆಸುವಲ್ಲಿ ಹಗಲಿರುಳು ಶ್ರಮಿಸುತ್ತಿರುವ ಡಾ. ಸ್ವಾತಿ ಪಿ ಭಾರದ್ವಾಜ್ ಅವರನ್ನು ಶ್ಲಾಘಿಸಿದರು.
ಮನೆಯಲ್ಲಿ ಬರುವ ನಾಲ್ಕು ಜನರನ್ನು ಸಂಭಾಳಿಸುವುದು ಕಷ್ಟದಲ್ಲಿರುವ ಈ ಪರಿಸ್ಥಿತಿಯಲ್ಲಿ ಜಿಲ್ಲೆ, ರಾಜ್ಯ, ರಾಷ್ಟ್ರ, ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ನೃತ್ಯೋತ್ಸವ ಕಾರ್ಯಕ್ರಮ ಮಾಡುತ್ತಿರುವುದು ಹೆಮ್ಮೆಯ ವಿಚಾರವೆಂದರು. ನೃತ್ಯೋತ್ಸವದಲ್ಲಿ ಜರ್ಮನ್, ಚೆನ್ನೈ ,ಆಂಧ್ರ ಪ್ರದೇಶ, ಮುಂಬೈ ಕರ್ನಾಟಕ ಭಾಗದ 3 ವರ್ಷದಿಂದ 40 ವರ್ಷದ ವಯಸ್ಸಿನ ಕಲಾವಿದರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಜರ್ಮನ್ ದೇಶದ ಕಲಾವಿದಯ ನೃತ್ಯ ಪ್ರೇಕ್ಷಕರ ಗಮನ ಸೆಳೆಯಿತು. ಎಲ್ಲಾ ಕಲಾವಿದರಿಗೆ ರಾಜ್ಯ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ಅವಾರ್ಡ್ ನೀಡಿ ಕಲಾವಿದರನ್ನು ಅಭಿನಂದಿಸಿದರು.ಹಿರಿಯ ಭರತನಾಟ್ಯ ಕಲಾವಿದೆ ಮಾಧುರಿ ಪ್ರತಾಪ್ ಮಾತನಾಡಿ, ನಾನು 2017ರಲ್ಲಿ ಹಾಸನದಲ್ಲಿ ನಡೆದ ನೃತ್ಯೋತ್ಸವಲ್ಲಿ ಭಾಗವಹಿಸಿದ್ದೆ ಹಾಸನ ಜಿಲ್ಲೆ ನಮ್ಮ ಭಾರತದಲ್ಲೇ ವಿಶೇಷ ಸ್ಥಾನಮಾನ ಇರುವ ಕಲೆಯ ಬೀಡು. ನಾನು ಹಾಸನದಲ್ಲಿ ನಾಲ್ಕು ದಿನ ಉಳಿದು ಎಲ್ಲಾ ಪ್ರವಾಸಿ ತಾಣಗಳಿಗೆ ಭೇಟಿಕೊಟ್ಟು ಬಂದಿದ್ದೇನೆ. ಹಾಸನದಲ್ಲಿ ಬೆಳೆದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡುತ್ತಿರುವ ಡಾ. ಸ್ವಾತಿ ಭಾರತದ ಒಂದು ಆಸ್ತಿ ಎಂದು ಕೊಂಡಾಡಿದರು.
ಇದೇ ಸಂದರ್ಭದಲ್ಲಿ ಆಯೋಜನ ಕಾರ್ಯದರ್ಶಿ ವಿದೂಷಿ ಡಾ. ಸ್ವಾತಿ ಪಿ ಭಾರದ್ವಾಜ್, ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷರಾದ ಮತ್ತಿಕೆರೆ ಜಯರಾಮ್, ರಾಷ್ಟ್ರೀಯ ಶಾಸ್ತ್ರೀಯ ನೃತ್ಯ ಅಕಾಡೆಮಿಯ ರಾಷ್ಟ್ರೀಯ ಸಂಚಾಲಕ ಚಿನ್ಮಯ ಹೆಗಡೆ, ಅಕಾಡೆಮಿ ಅಧ್ಯಕ್ಷರಾದ ಶ್ರೀಮತಿ ಅನಿತಾ ಪ್ರಕಾಶ್, ಇತರರು ಹಾಜರಿದ್ದರು.