ಶಿವಮೊಗ್ಗ: ಬ್ರಿಟಿಷ್ ಅಧಿಪತ್ಯಕ್ಕೆ ನೇತಾಜಿ ಅಂತಹ ಹಲವರು ನಡುಕ ಹುಟ್ಟಿಸಿದ್ದರು. ಅದರಿಂದಲೇ ನಮಗೆ ಸ್ವಾತಂತ್ರ್ಯ ಬಂದಿತು. ಕೆಲವು ದಾಳಿಕಾರರು ನಮ್ಮ ಮನಸ್ಥಿತಿಯ ವಿರುದ್ಧ ಆಡಳಿತ ನಡೆಸಿದ್ದರು. ಅವರನ್ನು ನಂತರ ಹೊಡೆದೋಡಿಸಿದ್ದೇವೆ ಎಂದು ನಟ, ನಿರ್ದೇಶಕ ಎಸ್.ಎನ್.ಸೇತುರಾಮ್ ಹೇಳಿದರು.
ಇಲ್ಲಿನ ಅಲ್ಲಮಪ್ರಭು ಮೈದಾನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕರ್ನಾಟಕ ದಕ್ಷಿಣ 44ನೇ ಪ್ರಾಂತ ಸಮ್ಮೇಳನದಲ್ಲಿ ಅವರು ಮಾತನಾಡಿದರು.ದೇಶ ಬಿಟ್ಟು ಬೇರೆ ದೇಶ ನಮಗೆ ಇಲ್ಲ. ದೇಶದಲ್ಲಿ 140 ಕೋಟಿ ಜನಸಂಖ್ಯೆ ಇದೆ. ಆದರೂ ಬೇರೆ ದೇಶದ ಮೇಲೆ ದಾಳಿ ಮಾಡದೆ, ಲೂಟಿ ಮಾಡದೆ ಇದ್ದೇವೆ. ಎಲ್ಲರಿಗೂ ಅನ್ನ ನೀಡುತ್ತಿದ್ದೇವೆ. ಬ್ರಿಟಿಷರು ನಮ್ಮನ್ನು 300 ವರ್ಷ ಲೂಟಿ ಮಾಡಿ ಹೋಗಿದ್ದಾರೆ ಎಂದರು.
ಈಗಲೂ ಯುಕೆ ಲಂಡನ್ ಮ್ಯೂಸಿಯಂನಲ್ಲಿ ದೇಶದ ಹೆಸರಿನಲ್ಲಿ ವಸ್ತುಗಳನ್ನು ಇಟ್ಟಿದ್ದಾರೆ. ಕದ್ದ ಮಾಲನ್ನು ಇಟ್ಟಿದ್ದಾರೆ. ಅವರಿಗೆ ಸ್ವಲ್ಪವೂ ಮರ್ಯಾದೆ ಇಲ್ಲ. ನಮಗೆ ಸಂಸ್ಕೃತಿ ಕಲಿಸಲು ಬಂದಿದ್ದೇವೆ ಎಂದು ಹೇಳಿದ್ದರು. ಆದರೆ, ನಮ್ಮಲ್ಲಿ ಪ್ರಬುದ್ಧರು ಇದ್ದರು. ಬದುಕಿನ ಬಗ್ಗೆ ಆಸ್ಥೆ ಇದೆ. ಇದನ್ನು ನಾವು ಅರ್ಥ ಮಾಡಿಕೊಂಡು, ಈ ದೃಷ್ಟಿಕೋನದಲ್ಲಿ ನೋಡಬೇಕು ಎಂದು ಹೇಳಿದರು.ದುಬೈನಲ್ಲಿ ಸ್ವಾಮಿ ನಾರಾಯಣ ದೇವಸ್ಥಾನ ನಿರ್ಮಾಣವಾಗಿದೆ. ಇದರಿಂದ ಅವರಿಗೆ ಆದಾಯ ಬರುತ್ತದೆ. ಬೇರೆ ಯಾವುದೊ ದೇಶದಲ್ಲಿ ಸ್ಥಳ ಮಾಡಿಕೊಟ್ಟರೆ ಅವರಿಗೆ ನಮ್ಮಿಂದ ಹಣ ಬರುತ್ತದೆ. ಇದರ ಉದ್ದೇಶ ನಮ್ಮನ್ನು ಉದ್ಧಾರ ಮಾಡಲು ಅಲ್ಲ. ಹೀಗಾಗಿ ನಮ್ಮನ್ನು ಇಡೀ ಪ್ರಪಂಚ ಮಾರುಕಟ್ಟೆಯಂತೆ ನೋಡುತ್ತದೆ. ನಮ್ಮ ದೇಶದ ಎಲ್ಲ ಭಾಷೆಗಳು ಭಾವದ ಭಾಷೆಗಳು. ಇಂಗ್ಲೀಷ್ ಕರಾರಿನ ಭಾಷೆ. ನಾವೆಲ್ಲ ದಡ್ಡರು ಎಂಬ ಭಾವ ಬೇಡ ಎಂದರು.
ನಮ್ಮ ದೇಶದಲ್ಲಿ ಕಾಡುಗಳು ನಿರ್ಮೂಲವಾಗುತ್ತಿವೆ. ಇದು ನಿಮ್ಮ ದೇಶ. ಇದನ್ನು ನೀವೇ ಕಾಪಾಡಿಕೊಳ್ಳಬೇಕು. ಮೇಲು ಕೀಳು ಎಂಬ ಭಾವಗಳ ವಿರುದ್ಧ ಹೋರಾಡಬೇಕು ಎಂದು ತಿಳಿಸಿದರು.ರಾಜಕೀಯ ಧುರೀಣರ ಹಿಂದೆ ಹತ್ತು ತಲೆಗಳಿರುತ್ತವೆ. ನೀವು ಬೆಳೆದ ಎಬಿವಿಪಿಯಲ್ಲಿ ರಾಜಕೀಯ ಪಕ್ಷದ ಗುರುತು ಇರುತ್ತದೆ. ಇದಕ್ಕೆ ಒಳಗಾಗದೆ ಮೆಚ್ಯುರಿಟಿ ಬೆಳೆಸಿಕೊಳ್ಳಬೇಕು. ಈ ದೇಶ ಹೀಗೆ ಇರಲು ಭ್ರಷ್ಟಾಚಾರ ಕಾರಣ. ಇದನ್ನು ತೆಗೆಯಲು ನೀವು ಮುಂದಾಗಬೇಕು ಎಂದು ಕರೆ ನೀಡಿದರು.ಕಾರ್ಯಕ್ರಮದಲ್ಲಿ ಸಾಮಾಜಿಕ ಸೇವಾ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಮೈಸೂರಿನ ಸತೀಶ್ ಮೇತ್ರಿ ಅವರಿಗೆ ಯುವ ಪುರಸ್ಕಾರ ಪ್ರಶಸ್ತಿ ನೀಡಲಾಯಿತು. ರಾಜಕೀಯ, ಶೈಕ್ಷಣಿಕ, ವಿಶ್ವವಿದ್ಯಾಲಯಗಳ ಸ್ಥಿತಿ ಕುರಿತು ವಿವಿಧ ನಿರ್ಣಯಗಳನ್ನು ಅಂಗೀಕರಿಸಲಾಯಿತು.
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯದರ್ಶಿ ಎಚ್.ಕೆ.ಪ್ರವೀಣ್, ಸ್ವಾಗತ ಸಮಿತಿ ಸಹ ಸಂಚಾಲಕ ಡಿ.ಎಸ್.ಶಿವಕುಮಾರ್, ರವಿ ಮಂಡ್ಯ ಮತ್ತಿತರರು ಇದ್ದರು.