ಕನ್ನಡಪ್ರಭ ವಾರ್ತೆ ರಾಯಚೂರು
ರಾಜ್ಯದಲ್ಲಿ ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ಜಾರಿ ಆಗುವ ತನಕ ಯಾವುದೇ ರೀತಿಯ ನೇಮಕಾತಿ ಪ್ರಕ್ರಿಯೇ ನಡೆಸದಂತೆ ಸಿಎಂ ಸೂಚನೆ ನೀಡಿದ್ದರು ಸಹ ಬ್ಯಾಕ್ ಲಾಗ್ ಹುದ್ದೆಗಳನ್ನು ಭರ್ತಿ ಮಾಡಲು ಮುಂದಾಗಿರುವ ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹಾದೇವಪ್ಪ ಅವರ ನಡೆಯನ್ನು ಖಂಡಿಸಿ ಮಾ.3 ರಂದು ನಗರದಲ್ಲಿ ಹೋರಾಟ ನಡೆಸಲು ತೀರ್ಮಾನಿಸಲಾಗಿದೆ ಎಂದು ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಹೋರಾಟ ಸಮಿತಿ ಪ್ರಧಾನ ಸಂಚಾಲಕ ಎಸ್.ಮಾರೆಪ್ಪ ವಕೀಲರು ತಿಳಿಸಿದರು.ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಳಮೀಸಲಾತಿ ಜಾರಿಗಾಗಿ ಈಗಾಗಲೇ ರಾಜ್ಯ ಸರ್ಕಾರ ನ್ಯಾ.ನಾಗಮೋಹನದಾಸ್ ಆಯೋಗವನ್ನು ರಚಿಸಿ ಮೂರು ತಿಂಗಳ ಗಡುವು ನೀಡಿದ್ದು, ಆದರೆ ವಿವಿಧ ಇಲಾಖೆಯ ಅಧಿಕಾರಿಗಳು ಆಯೋಗ ಕೇಳಿದ ಮಾಹಿತಿ, ಅಗತ್ಯ ದಾಖಲೆಗಳನ್ನು ನೀಡದೇ ನಿರ್ಲಕ್ಷ್ಯ ವಹಿಸಿರುವುದು ಶೋಚನೀಯ ಸಂಗತಿಯಾಗಿದೆ.
ಪರಿಶೀಲನಾ ಸಮಿತಿ ವರದಿ ನೀಡಲು ಮಾ.1 ಗಡುವು ಇದ್ದು ಆದರೆ ಇಲಾಖೆಯ ಅಧೀನ ಅಧಿಕಾರಿಗಳು ಅಗತ್ಯ ಮಾಹಿತಿ ನೀಡುತ್ತಿಲ್ಲ ಎಂದು ನ್ಯಾಯಮೂರ್ತಿ ನಾಗಮೋಹನ್ದಾಸ್ ಅವರು ಸರ್ಕಾರಕ್ಕೆ ಪತ್ರ ಬರೆದು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದರಿಂದ ಆಯೋಗದ ಕಾರ್ಯಸೂಚಿಗಳು ನನೆಗುದಿಗೆ ಬೀಳುವಂತಾಗಿದೆ ಎಂದು ದೂರಿದರು.ನ್ಯಾಯಮೂರ್ತಿ ನಾಗಮೋಹನದಾಸ್ ವರದಿ ಜಾರಿಯಾಗುವವರೆಗೆ ಬ್ಯಾಕ್ ಲಾಗ್ ಹುದ್ದೆಗಳನ್ನು ನೇಮಕ ಮಾಡಬಾರದು ಎಂದು ಪ್ರತಿಭಟನೆಗಳು ಮಾಡಿದ ಬಳಿಕ ಸರ್ಕಾರ ಅದಕ್ಕೆ ಸ್ಪಂದಿಸಿ ನೇಮಕ ಪ್ರಕ್ರಿಯೆ ಮುಂದೂಡಿತ್ತು. ಆದರೆ ಸಮಾಜ ಕಲ್ಯಾಣ ಇಲಾಖೆಯ ಸಚಿವ ಎಚ್.ಸಿ.ಮಹಾದೇವಪ್ಪ ಅವರು ಹುದ್ದೆಗಳ ಭರ್ತಿಮಾಡಲು ಸಚಿವ ಸಂಪುಟದಲ್ಲಿ ಬ್ಯಾಕಲಾಗ್ ಸಾವಿರರು ಹುದ್ದೆಗಳನ್ನು ಭರ್ತಿ ಮಾಡುವ ತೀರ್ಮಾನ ಮಾಡಿರುವುದು ಖಂಡನೀಯ ವಿಷಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಒಳಮೀಸಲಾತಿ ಇನ್ನು ಜಾರಿಗೆ ಆಗಿಲ್ಲ ಏಕಾಏಕಿ ಹುದ್ದೆ ಭರ್ತಿಗೆ ಮುಂದಾಗಿರುವುದು ಸರ್ಕಾರ ದಲಿತರ ವಿರೋಧಿ ನಿಲುವು ಹೊಂದಿದೆ ಎಂದು ಸ್ಪಷ್ಟ ನಿರ್ದೇಶನವಾಗಿದ್ದು, ಈ ವಿಚಾರವಾಗಿ ಸಮುದಾಯದ ಪ್ರಮುಖರಾದ ಸಚಿವ ಎಚ್ ಸಿ ಮಹಾದೇವಪ್ಪನವರು ವರದಿ ಜಾರಿಗೆ ವಿಳಂಬ ಮಾಡಿದ ಅಧಿಕಾರಿಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೇ ಮೌನ ವಹಿಸಿರುವುದು ತರವಲ್ಲ ಈ ಹಿನ್ನೆಲೆಯಲ್ಲಿಯೇ ಮಾ.3 ರಂದು ದಲಿತಪರ ಸಂಘಟನೆಗಳ ನೇತೃತ್ವದಲ್ಲಿ ಸಚಿವರ ವಿರುದ್ಧ ಪ್ರತಿಭಟನೆಯನ್ನು ರೂಪಿಸಲಾಗಿದೆ ಎಂದು ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಹೇಮರಾಜ್ ಆಸ್ಕಿಹಾಳ, ನರಸಿಂಹಲು ಮರ್ಚೇಟ್ಹಾಳ, ತಾಯಪ್ಪ, ಲಕ್ಷ್ಮಣ, ಆಂಜನೇಯ್ಯ, ಶ್ರೀನಿವಾಸ ಕಲವಲದೊಡ್ಡಿ, ಲಕ್ಷ್ಮಣ, ಶ್ರೀನಿವಸ ಕೊಪ್ಪರ ಸೇರಿ ಇತರು ಇದ್ದರು.