ಪಂಚಮಸಾಲಿ ಪೀಠಕ್ಕೆ ಶೀಘ್ರವೇ ಹೊಸ ಶ್ರೀಗಳು: ಕಾಶಪ್ಪನವರ

KannadaprabhaNewsNetwork |  
Published : Jul 20, 2025, 01:15 AM IST
ವಿಜಯಾನಂದ ಕಾಶಪ್ಪನವರ್‌ | Kannada Prabha

ಸಾರಾಂಶ

ಕೂಡಲ ಸಂಗಮದ ಪಂಚಮಸಾಲಿ ಪೀಠಕ್ಕೆ ರಾತ್ರೋರಾತ್ರಿ ಬೀಗ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೀಠಾಧ್ಯಕ್ಷ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹಾಗೂ ಕೂಡಲ ಸಂಗಮ ಪಂಚಮಸಾಲಿ ಪೀಠದ ಟ್ರಸ್ಟ್‌ ಅಧ್ಯಕ್ಷ, ಶಾಸಕ ವಿಜಯಾನಂದ ಕಾಶಪ್ಪನವರ ನಡುವಿನ ಜಟಾಪಟಿ ಇದೀಗ ಪೀಠಾಧ್ಯಕ್ಷರ ಬದಲಾವಣೆಗೆ ತಿರುಗಿದೆ.

- ಬಸವ ಶ್ರೀ, ಧರ್ಮ ಬಿಟ್ಟು ರಾಜಕೀಯದಲ್ಲಿ ಬ್ಯುಸಿ- 2019ರಲ್ಲೇ ಎಚ್ಚರಿಸಿದ್ರೂ ಶ್ರೀಗಳು ಬದಲಾಗಲಿಲ್ಲ

===

ಕೂಡಲ ಶ್ರೀ ಆರೋಗ್ಯಏರುಪೇರು: ಐಸಿಯುಗೆದಾಖಲಿಸಿ ತುರ್ತು ಚಿಕಿತ್ಸೆಬಾಗಲಕೋಟೆ: ಕೂಡಲಸಂಗಮದ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರ ಆರೋಗ್ಯದಲ್ಲಿ ದಿಢೀರ್ ಏರುಪೇರಾಗಿದೆ. ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಳಗಿನ ಜಾವ ತಲೆನೋವು, ವಾಂತಿ, ಎದೆ ನೋವು ಕಾಣಿಸಿಕೊಂಡಿದೆ. ಸ್ವಾಮೀಜಿ ಅವರಿಗೆ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕಲಬುರಗಿ ಪಂಚಮಸಾಲಿ ಸಮಾಜದ ಜಿಲ್ಲಾಧ್ಯಕ್ಷ ಮಲ್ಲನಗೌಡ ಪಾಟೀಲ ಆಸ್ಪತ್ರೆ ಬಳಿ ಸುದ್ದಿಗಾರರೊಂದಿಗೆ ಮಾತನಾಡಿ, ಶುಕ್ರವಾರ ಮಧ್ಯಾಹ್ನ ಸ್ವಾಮೀಜಿಗೆ ವಿಷಾಹಾರ ಆಗಿತ್ತು. ರಾತ್ರಿ ಸ್ವಲ್ಪ ಚೇತರಿಸಿಕೊಂಡಿದ್ದರು. ಬೆಳಗ್ಗೆ ತಲೆನೋವು, ವಾಂತಿ, ಎದೆನೋವು ಶುರುವಾಗಿ ಅಸ್ವಸ್ಥರಾದರು. ಶ್ರೀಗಳು ಆರಾಮಾಗಿದ್ದಾರೆ, ಭಕ್ತರು ಭಯಪಡುವಂತದ್ದೇನಿಲ್ಲ. ಪೀಠಕ್ಕೆ ಬೀಗ ಹಾಕಿದ್ದು ಸ್ವಾಮೀಜಿಗಳಿಗೆ ತೀವ್ರ ನೋವಾಗಿತ್ತು. ಈ ಬಗ್ಗೆ ನಮ್ಮೊಂದಿಗೆ ಚರ್ಚಿಸಿದ್ದರು ಎಂದು ತಿಳಿಸಿದ್ದಾರೆ.

==

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ಕೂಡಲ ಸಂಗಮದ ಪಂಚಮಸಾಲಿ ಪೀಠಕ್ಕೆ ರಾತ್ರೋರಾತ್ರಿ ಬೀಗ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೀಠಾಧ್ಯಕ್ಷ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹಾಗೂ ಕೂಡಲ ಸಂಗಮ ಪಂಚಮಸಾಲಿ ಪೀಠದ ಟ್ರಸ್ಟ್‌ ಅಧ್ಯಕ್ಷ, ಶಾಸಕ ವಿಜಯಾನಂದ ಕಾಶಪ್ಪನವರ ನಡುವಿನ ಜಟಾಪಟಿ ಇದೀಗ ಪೀಠಾಧ್ಯಕ್ಷರ ಬದಲಾವಣೆಗೆ ತಿರುಗಿದೆ. ‘ಹಾಲಿ ಶ್ರೀಗಳು ಧರ್ಮದ ಕೆಲಸ ಬಿಟ್ಟು ರಾಜಕೀಯದಲ್ಲಿ ಹೆಚ್ಚು ತೊಡಗಿಸಿಕೊಂಡಿದ್ದಾರೆ. ಹೀಗಾಗಿ ಪೀಠಕ್ಕೆ ಬೇರೆ ಗುರುಗಳನ್ನು ನೇಮಿಸಿ, ಪರ್ಯಾಯ ವ್ಯವಸ್ಥೆ ಮಾಡುವುದು ಶತಃಸಿದ್ಧ ಎಂದು ಟ್ರಸ್ಟ್ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ಘೋಷಿಸಿದ್ದಾರೆ.

ಶನಿವಾರ ಹುಬ್ಬಳ್ಳಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾಶಪ್ಪನವರ, ಶ್ರೀಗಳು ಲೋಕ ಸಂಚಾರಿಯಾಗಿ ಬೆಂಗಳೂರು, ಬೆಳಗಾವಿ ಮತ್ತು ಹುಬ್ಬಳ್ಳಿಯಲ್ಲಿ ಮನೆ ಮಾಡಿಕೊಂಡು ಧರ್ಮ ಕಾರ್ಯ ಮರೆತಿದ್ದಾರೆ. ಸ್ವಾಮೀಜಿಗಳು ಧಾರ್ಮಿಕ ಕಾರ್ಯಕ್ರಮ ಮಾಡಬೇಕು, ಶುದ್ಧ ಬಸವತತ್ವದ ಅನುಷ್ಠಾನ ಮಾಡಬೇಕೆಂಬುದು ನಮ್ಮ ಮತ್ತು ಸಮಾಜದ ನಿರೀಕ್ಷೆಯಾಗಿತ್ತು. ಅವರ ಓಡಾಟ ಬಹಳಷ್ಟಾಗಿದೆ. ರಾಜಕಾರಣಿಗಳ ಒಡನಾಟ ಹೆಚ್ಚಾಗಿದೆ. ರಾಜಕೀಯದಲ್ಲಿ ಅವರ ಹಸ್ತಕ್ಷೇಪ ಬಹಳ ಆಯ್ತು. ಅಧಿಕಾರಗಳ ವರ್ಗಾವಣೆಯಂತಹ ವಿಷಯಗಳಲ್ಲಿ ಮೂಗು ತೂರಿಸುತ್ತಿದ್ದಾರೆ. ಇದು ಶ್ರೀಗಳ ಕೆಲಸ ಅಲ್ಲ. ಬಸವ ತತ್ವ ಅನುಷ್ಠಾನ ಮಾಡುವ ಪೀಠದಲ್ಲಿದ್ದು, ಧರ್ಮ ಕಾರ್ಯದಲ್ಲಿ ತೊಡಗುವವರನ್ನು ನಾವು ಗುರುಗಳನ್ನಾಗಿ ಮಾಡುವ ಚಿಂತನೆ ಮಾಡಿದ್ದೇವೆ, ಮಾಡಿಯೇ ತೀರುತ್ತೇವೆ. ಇದು ಶತಸಿದ್ಧ ಎಂತಲೂ ಹೇಳಿದರು.

ಬಸವಜಯ ಮೃತ್ಯುಂಜಯ ಶ್ರೀಗಳ ವರ್ತನೆ ಸಾಕಷ್ಟು ಬದಲಾವಣೆ ಆಗಿದೆ. ಈ ಬಗ್ಗೆ 2019ರಲ್ಲಿ ಟ್ರಸ್ಟ್‌ನಿಂದ ನೋಟಿಸ್ ನೀಡಿದಾಗ ತಿದ್ದಿಕೊಳ್ಳುವುದಾಗಿ ಲಿಖಿತವಾಗಿ ತಿಳಿಸಿದರು. ಆದರೂ ಅವರು ತಮ್ಮ ನಡವಳಿಕೆ ತಿದ್ದಿಕೊಳ್ಳದೇ ಒಂದು ಪಕ್ಷ, ಕೆಲ ನಾಯಕರ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು.

ಹೊಸ ಮಠಕ್ಕೆ ಸ್ವಾಗತ:

ಅಗ್ರ ನಾಯಕರು ಸ್ವಾಮೀಜಿಗಳಿಗೆ ಹುಬ್ಬಳ್ಳಿ-ಬೆಳಗಾವಿ ನಡುವೆ ಮಠ ಕಟ್ಟುವುದಾಗಿ ಹೇಳಿದ್ದಾರೆ. ಶ್ರೀಗಳೇ ಖುದ್ದು ಮಲಪ್ರಭಾ ನದಿ ದಂಡೆ ಮೇಲೆ ಮಠ ಕಟ್ಟಿಕೊಳ್ಳುವುದಾಗಿಯೂ ಹೇಳಿದ್ದಾರೆ. ಹೀಗಾಗಿ, ಅವರಿಗೆ ಹೊರಗೆ ಹೋಗಿ ಅಂತ ಹೇಳಲು ನಾವ್ಯಾರು? ಪೀಠ ಬಿಟ್ಟು ಹೋಗಿ ಅಂತ ಹೇಳುವಷ್ಟು ನಾವು ದೊಡ್ಡವರಲ್ಲ. ಅವರೇ ಮಠ ಬಿಟ್ಟು ಹೋಗುತ್ತೇವೆ ಎಂದಿದ್ದಾರೆ. ಅವರಾಗಿಯೇ ಹೋದರೆ ಸಂತೋಷ. ಒಟ್ಟಿನಲ್ಲಿ ಮಠದಲ್ಲಿ ಪರ್ಯಾಯ ವ್ಯವಸ್ಥೆ ಮಾಡೋದು ನಿಶ್ಚಿತ ಎಂದು ಸ್ಪಷ್ಟಪಡಿಸಿದರು.

ಮಲಪ್ರಭಾ ಕಾಲುವೆ ದಡದಲ್ಲಿ ಹೊಸ ಮಠ ಕಟ್ಟಿ ಅಲ್ಲಿ ಸಮಾಜದ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವುದಾಗಿ ಹೇಳಿದ್ದಾರೆ. ಇದನ್ನು ಟ್ರಸ್ಟ್ ಸ್ವಾಗತಿಸುತ್ತದೆ. ಅವರು ಪರ್ಯಾಯ ಮಠ ಆರಂಭಿಸುವುದಾದರೆ ಆರಂಭಿಸಲಿ. ಇದಕ್ಕೆ ನಮ್ಮದೇನೂ ಅಭ್ಯಂತರವಿಲ್ಲ ಎಂದರು.

ಶ್ರೀಗಳಿಗೆ ಬಿಜೆಪಿ ನಂಟು:

ಶ್ರೀಗಳು ಬಿಜೆಪಿ ಕಾರ್ಯಕ್ರಮಗಳಲ್ಲಿ ಹೆಚ್ಚಾಗಿ ಕಾಣಿಸುತ್ತಾರೆ. ಅವರು ಅಧಿಕೃತವಾಗಿ ಬಿಜೆಪಿ ಸೇರಿದಂತಾಗಿದೆ. ಅವರು ಪ್ರಚಾರ ಪ್ರಿಯರು, ಯಾವಾಗಲೂ ಫೇಸ್ ಬುಕ್, ವಾಟ್ಸ್ ಆ್ಯಪ್, ಮಾಧ್ಯಮ ಅಂತೆಲ್ಲ ಇರುತ್ತಾರೆ. ಅವರಿಗೆ ಸಮಾಜದ ಬಗ್ಗೆ ಕಳಕಳಿಯಿಲ್ಲ ಎಂದು ಕಿಡಿಕಾರಿದರು.

2ಎ ಬೇಕಾ, 2ಡಿ ಬೇಕಾ?:

ಸ್ವಾಮೀಜಿಗಳು, ಸಮಾಜದ ಅಗ್ರಗಣ್ಯ ನಾಯಕರೆಂದು ಹೇಳಿಕೊಳ್ಳುವವರು ಸಮಾಜಕ್ಕೆ 2ಎ ಅಥವಾ 2ಡಿ ಮೀಸಲಾತಿ ಬೇಕಾ ಎಂಬ ಬಗ್ಗೆ ಸ್ಪಷ್ಟಪಡಿಸಲಿ, ಒಂದು ವೇಳೆ 2ಡಿ ಮೀಸಲಾತಿ ಬೇಕಾದರೆ ಸರ್ಕಾರದಿಂದ ನಮ್ಮ ಮಕ್ಕಳಿಗೆ 2ಡಿ ಪ್ರಮಾಣಪತ್ರ ಕೊಡಿಸಲಿ ಎಂದು ವಿಜಯಾನಂದ ಕಾಶಪ್ಪನವರ್‌ ಸವಾಲು ಹಾಕಿದರು.

ಹಿಂದಿನ ಸರ್ಕಾರ 2ಬಿ ಮೀಸಲಾತಿ ಕಡಿತಗೊಳಿಸಿ ನಮಗೆ 2ಡಿ ಮೀಸಲಾತಿ ನೀಡಿದ್ದಾರೆ. ಇದಕ್ಕೆ ಸುಪ್ರೀಂಕೋರ್ಟ್‌ ತಡೆಯಾಜ್ಞೆ ನೀಡಿದೆ. ಅಲ್ಲದೆ ಹಿಂದಿನ ಸರ್ಕಾರವೇ 2ಬಿ ಮೀಸಲಾತಿಯಲ್ಲಿ ಕಡಿತ ಮಾಡುವುದಿಲ್ಲ ಎಂದು ಹಿಂಬರಹ ನೀಡಿದೆ. ಸುಪ್ರೀಂಕೋರ್ಟ್‌ ತಡೆಯಾಜ್ಞೆ ತೆರವು ಮಾಡಿದರೆ 2ಡಿ ಮೀಸಲಾತಿ ಬಿದ್ದು ಹೋಗುತ್ತದೆ. ಅದಕ್ಕೆ ಸಂವಿಧಾನದ ಮಾನ್ಯತೆ ಇಲ್ಲ. ನಮ್ಮ ಟ್ರಸ್ಟ್‌ನ ಬೇಡಿಕೆ ಅಚಲವಾಗಿದ್ದು, ನಾವು 2ಎ ಮೀಸಲಾತಿ ಬೇಕು ಎಂದು ಹೋರಾಟ ಮುಂದುವರಿಸುತ್ತೇವೆ. ಸಿಎಂ ಸಿದ್ದರಾಮಯ್ಯ ಅವರ ಮೇಲೆ ಭರವಸೆ ಇದ್ದು, ಅವರು ನಮಗೆ 2ಎ ಮೀಸಲಾತಿ ದೊರಕಿಸುತ್ತಾರೆ ಎಂದರು.

==

ಮಠದ ರಕ್ಷಣೆಗಾಗಿ ಬೀಗ:

ಕಾಶಪ್ಪನವರ ಸ್ಪಷ್ಟನೆ

ಇತ್ತೀಚೆಗೆ ಸ್ವಾಮೀಜಿಗಳು ಮಠಕ್ಕೆ ಬರುವುದೇ ಅಪರೂಪವಾಗಿದೆ. ಹೀಗಾಗಿ, ಅಲ್ಲಿ ಅನೈತಿಕ ಚಟುವಟಿಕೆಗಳು ಹೆಚ್ಚಾಗಿವೆ. ಮಠದ ರಕ್ಷಣೆಗಾಗಿ ಇತ್ತೀಚೆಗೆ ಗೇಟ್, ಸಿಸಿ ಟಿವಿ ಅಳವಡಿಸಲಾಗಿದೆ. ಸ್ವಾಮೀಜಿ ಸ್ವತಃ ಬಂದು ಬೀಗ ಕೇಳಿದ್ದರೆ ಅಲ್ಲಿದ್ದವರೇ ಕೊಡುತ್ತಿದ್ದರು. ಆದರೆ, ಅವರ ಸೂಚನೆ ಮೇರೆಗೆ ಏಳು ಜನರು ಬಂದು ಏಕಾಏಕಿ ಬೀಗ ಮುರಿದಿದ್ದಾರೆ. ಅಷ್ಟೇ ಅಲ್ಲದೇ ಮರುದಿನ ಶ್ರೀಗಳು ಬಸವಮಂಟಪಕ್ಕೆ ಬಂದು ಸುಖಾಸುಮ್ಮನೆ ಮಠಕ್ಕೆ ಬಾರದಂತೆ ನನ್ನನು ತಡೆದಿದ್ದಾರೆ ಎಂದು ಮಾಧ್ಯಮಗಳ ಮುಂದೆ ಆಪಾದನೆ ಮಾಡಿದ್ದಾರೆ. ಶ್ರೀಗಳನ್ನು ತಡೆಯುವ ಪ್ರಶ್ನೆ ಇಲ್ಲ. ಅವರೇ ಬಂದು ಅಥವಾ ಕರೆ ಮಾಡಿ ಬೀಗ ಕೇಳಿದ್ದರೆ ಯಾವುದೇ ಸಮಸ್ಯೆ ಇರಲ್ಲಿಲ್ಲ. ಉದ್ದೇಶಪೂರ್ವಕವಾಗಿಯೇ ಬೀಗ ಒಡೆಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

=

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಪಿಎಲ್‌ ಮಾನದಂಡ ಬದಲಿಗೆ ಮುಂದಾದ ರಾಜ್ಯ
ಸರ್ಕಾರಿ ಶಾಲೆಗೆ ಶೀಘ್ರ 11000 ಶಿಕ್ಷಕರ ನೇಮಕ : ಮಧು