ಕೊಪ್ಪಳ ವಿಶ್ವವಿದ್ಯಾಲಯ ಮುಚ್ಚಲು ರಾಜ್ಯ ಸರ್ಕಾರ ತೀರ್ಮಾನ : ನಿಲುವನ್ನು ಖಂಡಿಸಿ ಉಳಿವಿಗಾಗಿ ಹೋರಾಟ

KannadaprabhaNewsNetwork |  
Published : Feb 15, 2025, 12:35 AM ISTUpdated : Feb 15, 2025, 11:34 AM IST
Vidhan soudha

ಸಾರಾಂಶ

ಕೊಪ್ಪಳ ವಿಶ್ವವಿದ್ಯಾಲಯ ಮುಚ್ಚಲು ರಾಜ್ಯ ಸರ್ಕಾರ ತೀರ್ಮಾನ ತೆಗೆದುಕೊಂಡಿದ್ದು, ಸರ್ಕಾರದ ಈ ನಿಲುವನ್ನು ಖಂಡಿಸಿ ಫೆ. 15ರಂದು ಬೆಳಗ್ಗೆ 10.30ಕ್ಕೆ ಕೊಪ್ಪಳದ ಜಿಲ್ಲಾಧಿಕಾರಿ ಕಚೇರಿ (ಮುಂಭಾಗದ ಗೇಟ್) ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

ಕೊಪ್ಪಳ: ಸರ್ಕಾರದ ವಿವಿ ಮುಚ್ಚುವ ಆದೇಶದ ಹಿನ್ನಲೆ ಕೊಪ್ಪಳದಲ್ಲೂ ನೂತನವಾಗಿ ಆರಂಭವಾಗಿದ್ದ ಕೊಪ್ಪಳ ವಿವಿಯನ್ನು ಮುಚ್ಚದಿರುವಂತೆ ಧ್ವನಿ ಕೇಳಿಬರುತ್ತಿದೆ. 

ಜಿಲ್ಲೆಯ ಶೈಕ್ಷಣಿಕ ಅಭಿವೃದ್ಧಿಗೆ ವಿಶ್ವವಿದ್ಯಾಲಯ ಅವಶ್ಯಕ. ವಿಶ್ವವಿದ್ಯಾಲಯ ಮುಚ್ಚುವ ಅವಶ್ಯಕತೆ ಇಲ್ಲ. ಅಂತಹ ಅನಿವಾರ್ಯತೆ ಸಹ ಇಲ್ಲ. ವಿಶ್ವವಿದ್ಯಾಲಯದ ಹಂತದಲ್ಲಿ ಹಲವಾರು ಕಾಲೇಜುಗಳು ಕಾರ್ಯನಿರ್ವಹಿಸುತ್ತಿವೆ. ಸಾವಿರಾರು ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ವಿಶ್ವವಿದ್ಯಾಲಯ ಜಿಲ್ಲೆಯಲ್ಲಿ ಬೆಳೆಯುವ ಹಂತದಲ್ಲಿಯೇ ಅದನ್ನು ಮುಚ್ಚಲು ಹೊರಟಿರುವ ಸರ್ಕಾರದ ನಿರ್ಣಯಕ್ಕೆ ಶಿಕ್ಷಣ ಚಿಂತಕರು ವಿರೋಧ ಸಹ ವ್ಯಕ್ತಪಡಿಸಿದ್ದಾರೆ.

40ಕ್ಕೂ ಹೆಚ್ಚು ಕಾಲೇಜುಗಳನ್ನು ಹಾಗೂ 5000ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಕೊಪ್ಪಳ ವಿಶ್ವವಿದ್ಯಾಲಯ ಹೊಂದಿದೆ. ಇತ್ತೀಚೆಗಷ್ಟೇ ಕೊಪ್ಪಳ ವಿವಿ ಆರಂಭವಾಗಿ ಕುಕನೂರು ತಾಲುಕಿನ ತಳಕಲ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಕಾರ್ಯನಿರ್ವಹಿಸುತ್ತಿತ್ತು, ಸ್ವಂತ ಕಟ್ಟಡ ಹೊಂದಿ, ಜಿಲ್ಲೆಯ ಶೈಕ್ಷಣಿಕ ಅಭಿವೃದ್ಧಿಗೆ ಕನ್ನಡಿಯಾಗಬೇಕಿದ್ದ ವಿವಿಯನ್ನು ಮುಚ್ಚಲು ಹೊರಟಿರುವುದು ನಿಜಕ್ಕೂ ದುರ್ದೈವದ ಸಂಗತಿ.

ಇಂದು ವಿಶ್ವವಿದ್ಯಾಲಯ ಉಳಿವಿಗಾಗಿ ಹೋರಾಟ:  ಕೊಪ್ಪಳ ವಿಶ್ವವಿದ್ಯಾಲಯ ಮುಚ್ಚಲು ರಾಜ್ಯ ಸರ್ಕಾರ ತೀರ್ಮಾನ ತೆಗೆದುಕೊಂಡಿದ್ದು, ಸರ್ಕಾರದ ಈ ನಿಲುವನ್ನು ಖಂಡಿಸಿ ಫೆ. 15ರಂದು ಬೆಳಗ್ಗೆ 10.30ಕ್ಕೆ ಕೊಪ್ಪಳದ ಜಿಲ್ಲಾಧಿಕಾರಿ ಕಚೇರಿ (ಮುಂಭಾಗದ ಗೇಟ್) ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಆನಂತರ ಜಿಲ್ಲಾಧಿಕಾರಿಗೆ ಮನವಿ ನೀಡಲಾಗುತ್ತದೆ. ಕೊಪ್ಪಳ ವಿಶ್ವವಿದ್ಯಾಲಯದ ಎಲ್ಲ ವಿದ್ಯಾರ್ಥಿಗಳು ಇದರಲ್ಲಿ ಪಾಲ್ಗೊಂಡು ವಿಶ್ವವಿದ್ಯಾಲಯ ಮುಚ್ಚದಂತೆ ಮನವಿ ಸಲ್ಲಿಸಲು ಕೊಪ್ಪಳ ಜಿಲ್ಲಾ ಪ್ರಗತಿಪರ ಸಂಘಟನೆಗಳ ಒಕ್ಕೂಟದವರು ಕೋರಿದ್ದಾರೆ.

ಹೋರಾಟ: ಕೊಪ್ಪಳ ವಿವಿ ಮುಚ್ಚುವುದು ಯಾವ ನ್ಯಾಯ? ಇದೊಂದು ಜಿಲ್ಲೆಗೆ ಶೈಕ್ಷಣಿಕ ಮಾರ್ಗಸೂಚಿ. ವಿವಿ ಮುಚ್ಚುವುದರಿಂದ ಜಿಲ್ಲೆಯ ಶೈಕ್ಷಣಿಕ ಪ್ರಗತಿ ಕುಂಠಿತವಾಗುತ್ತದೆ. ಕಾರಣ ವಿವಿ ಉಳಿವಿಗಾಗಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಹೋರಾಟ ಮಾಡಿ ಮನವಿ ಸಲ್ಲಿಸಲಾಗುವುದು ಎಂದು ಹೋರಾಟಗಾರ ಅಲ್ಲಮಪ್ರಭು ಬೆಟದೂರು ಹೇಳಿದರು.

ಕೊಪ್ಪಳ ವಿಶ್ವವಿದ್ಯಾಲಯ ಮುಂದುವರಿಸಲು ಬಯ್ಯಾಪುರ ಮನವಿ:

ಒಂಭತ್ತು ವಿಶ್ವವಿದ್ಯಾಲಯವನ್ನು ಮುಚ್ಚಲು ತೀರ್ಮಾನ ಮಾಡಲಾಗಿದೆ ಎಂದು ಹರಡಿರುವ ಸುದ್ದಿಯು ಕೊಪ್ಪಳ ಜಿಲ್ಲೆಯ ಜನತೆಗೆ ನೋವುಂಟು ಮಾಡಿದ್ದು, ಕೊಪ್ಪಳ ವಿಶ್ವವಿದ್ಯಾಲಯವನ್ನು ಮುಂದುವರಿಸಬೇಕು ಎಂದು ಮಾಜಿ ಸಚಿವ ಅಮರೇಗೌಡ ಪಾಟೀಲ ಬಯ್ಯಾಪೂರ ಅವರು ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ ಹಾಗೂ ಕೊಪ್ಪಳ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅವರಿಗೆ ಪತ್ರ ಬರೆದಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿದ ಅವರು ಬಡತನದಿಂದ ಕೆಲ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಮರೆತು ಗುಳೆ ಹೋಗಿ ಜೀವನ ಸಾಗಿಸುತ್ತಿದ್ದಾರೆ. ಹೈದರಾಬಾದ್‌ ಕರ್ನಾಟಕದ ಹಿಂದುಳಿದ ಪ್ರದೇಶದಲ್ಲಿನ ನಂಜುಂಡಪ್ಪನವರ ವರದಿಯಂತೆ ಹಿಂದುಳಿದ ಪ್ರದೇಶದಲ್ಲಿರುವ ನಾವು, ನಮ್ಮ ಮಕ್ಕಳ ಹಿತದೃಷ್ಟಿಯಿಂದ ದೂರದ ಬಳ್ಳಾರಿ, ಧಾರವಾಡ, ಕಲಬುರಗಿ, ಬೆಂಗಳೂರು ಇನ್ನಿತರ ನಗರಗಳಿಗೆ ಹೋಗಿ ವಿದ್ಯಾಭ್ಯಾಸ ಮಾಡುವ ತೊಂದರೆ ತಪ್ಪಿಸಲು ಕೊಪ್ಪಳ ವಿವಿ ನಮಗೆ ಉತ್ತಮ ಶಿಕ್ಷಣವನ್ನು ನೀಡುತ್ತಿದೆ.ಈಗಾಗಲೇ 40 ಶಿಕ್ಷಣ ಸಂಸ್ಥೆಗಳನ್ನು ಒಳಗೊಂಡಂತೆ ಸುಮಾರು 15 ಸಾವಿರ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ. ಸರ್ವ ಶಿಕ್ಷಣ ಅಭಿಯಾನದ ಆಶಯದಂತೆ ಉನ್ನತ ಶಿಕ್ಷಣದ ಪ್ರಗತಿಗೆ ಕೊಪ್ಪಳ ವಿಶ್ವವಿದ್ಯಾಲಯದಿಂದ ಬಡ ಮಕ್ಕಳಿಗೂ ಉನ್ನತ ಶಿಕ್ಷಣ ಸಿಗುವಂತಾಗಿದೆ. ಕೊಪ್ಪಳ ವಿಶ್ವವಿದ್ಯಾಲಯವನ್ನು ಯಥಾವತ್ತಾಗಿ ಮುಂದುವರಿಸಬೇಕು ಎಂದು ತಿಳಿಸಿದ್ದಾರೆ.

ವಿವಿ ಮುಚ್ಚುವ ತೀರ್ಮಾನ ಹಿಂಪಡೆಯಲಿ-ಶಿವಪ್ಪ ವಾದಿ:

೯ ವಿಶ್ವ ವಿದ್ಯಾಲಯಗಳನ್ನು ಮುಚ್ಚುವ ತೀರ್ಮಾನವನ್ನು ರಾಜ್ಯ ಸರ್ಕಾರ ಕೂಡಲೇ ಹಿಂಪಡೆಯಬೇಕು ಎಂದು ರಾಬಕೊವಿ ಹಾಲು ಒಕ್ಕೂಟದ ಮಂಡಳಿ ನಿರ್ದೇಶಕ ಶಿವಪ್ಪ ವಾದಿ ಆಗ್ರಹಿಸಿದ್ದಾರೆ.ಈ ಕುರಿತು ಶುಕ್ರವಾರ ಪ್ರಕಟಣೆ ನೀಡಿದ ಅವರು, ಹಿಂದೆ ಬಿಜೆಪಿ ಆಡಳಿತ ಅವಧಿಯಲ್ಲಿ ಅಂದಿನ ಸಿಎಂ ಬಸವರಾಜ ಬೊಮ್ಮಾಯಿ ಅವರು ೧೦ ವಿಶ್ವ ವಿದ್ಯಾಲಯಗಳನ್ನು ಪ್ರಾರಂಭಿಸಿದ್ದರು. ತದನಂತರ ಕಾಂಗ್ರೆಸ್ ಅಧಿಕಾರಕ್ಕೆ ಬಂದಮೇಲೆ, ಬೀದರ ಹೊರತುಪಡಿಸಿ ಕೊಪ್ಪಳ ವಿವಿ ಸೇರಿದಂತೆ ೯ ವಿವಿಗಳಿಗೆ ಮೂಲಸೌಕರ್ಯಕ್ಕಾಗಿ ಅನುದಾನ ನೀಡಲು ಹಿಂದೇಟು ಹಾಕಿತು. ಇದರಿಂದ ಉನ್ನತ ಶಿಕ್ಷಣ ಪಡೆಯಬೇಕಾದ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯಾಗಿದೆ. ಕೂಡಲೇ ರಾಜ್ಯ ಸರ್ಕಾರ ತನ್ನ ನಿರ್ಧಾರ ಹಿಂಪಡೆದು ವಿವಿಗಳಿಗೆ ಅನುದಾನ ನೀಡಬೇಕು. ಕಲ್ಯಾಣ ಕರ್ನಾಟಕ ಭಾಗದ ಕೊಪ್ಪಳ ಜಿಲ್ಲೆಯ ವಿವಿ ಅಭಿವೃದ್ಧಿಪಡಿಸಲು ಜಿಲ್ಲೆಯ ಸಚಿವರು, ಶಾಸಕರು ಪಕ್ಷಾತೀತವಾಗಿ ಕಾಳಜಿ ವಹಿಸಬೇಕು. ಒಂದು ವೇಳೆ ನಿರ್ಧಾರ ಹಿಂಪಡೆಯದಿದ್ದರೆ ಉಗ್ರ ಪ್ರತಿಭಟನೆಗೆ ಮುಂದಾಗಬೇಕಾಗುತ್ತದೆ ಅವರು ತಿಳಿಸಿದ್ದಾರೆ.

ಕೊಪ್ಪಳ ವಿಶ್ವವಿದ್ಯಾಲಯ ಮುಂದುವರಿಸಲು ಸಣ್ಣ ಕನಕಪ್ಪ ಒತ್ತಾಯ:

ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾಗ ಆರಂಭಿಸಿದ್ದ 9 ವಿಶ್ವವಿದ್ಯಾಲಯಗಳನ್ನು ಯಥಾಸ್ಥಿತಿ ಮುಂದುವರಿಸಬೇಕು. ಇಲ್ಲವಾದರೆ, ಬೃಹತ್ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಬಿಜೆಪಿ ಮಂಡಲ ಅಧ್ಯಕ್ಷ ಸಣ್ಣ ಕನಕಪ್ಪ ಹೇಳಿದ್ದಾರೆ.

ಅವರು ಶುಕ್ರವಾರ ಈ ಕುರಿತು ಪತ್ರಕರ್ತರೊಂದಿಗೆ ಮಾತನಾಡಿ, ಬಡ, ಹಿಂದುಳಿದ ಮಕ್ಕಳ ಅನುಕೂಲಕ್ಕಾಗಿ ರಾಜ್ಯದಲ್ಲಿ 7 ಹೊಸ ವಿಶ್ವವಿದ್ಯಾಲಯಗಳನ್ನು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಘೋಷಿಸಿದ್ದರು. ಆದರೆ, ಕಾಂಗ್ರೆಸ್ ಸರ್ಕಾರ ಅನುದಾನ ಕೊರತೆಯಿಂದ ಹೊಸ ವಿಶ್ವ ವಿದ್ಯಾಲಯಗಳನ್ನು ಮುಚ್ಚಲು ಹೊರಟಿದೆ. ಏಕಾಏಕಿ ವಿಶ್ವವಿದ್ಯಾಲಯ ಮುಚ್ಚುವುದರಿಂದ ಬಡ ಹಾಗೂ ಹಿಂದುಳಿದ ಮಕ್ಕಳಿಗೆ ಅನ್ಯಾಯವಾಗಲಿದೆ. ಓದುವ ವಿದ್ಯಾರ್ಥಿಗಳ ಭವಿಷ್ಯಕ್ಕೆ ಕಲ್ಲು ಹಾಕಿದಂತಾಗಲಿದೆ. ಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವರು ಈ ಬಗ್ಗೆ ಪರಿಶೀಲನೆ ನಡೆಸಿ ಹಿಂದುಳಿದ ಕೊಪ್ಪಳ ಜಿಲ್ಲೆಯ ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ವಿಶ್ವವಿದ್ಯಾಲಯವನ್ನು ಯಥಾಸ್ಥಿತಿ ಮುಂದುವರಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಉಗ್ರ ಹೋರಾಟ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ
‘ಆತ್ಮನಿರ್ಭರ ಭಾರತ’ಕ್ಕೆ ಅಮೆಜಾನ್ ಪುಷ್ಟಿ