ಕನ್ನಡಪ್ರಭ ವಾರ್ತೆ ತಾಳಿಕೋಟೆ: ತಾಳಿಕೋಟೆ ನಗರದಲ್ಲಿ ಸ್ವಚ್ಛತೆ ಕಾಪಾಡಲು ಹಾಗೂ ಸೌಂದರ್ಯೀಕರಣದ ಉದ್ದೇಶದಿಂದ ನಡೆಸಿರುವ ಫುಟ್‌ಪಾತ್, ರಸ್ತೆ ಅತಿಕ್ರಮಣ ತೆರವು ಕಾರ್ಯಾಚರಣೆ ಕೈಗೊಂಡಿರುವುದು ಸ್ವಾಗತಾರ್ಹ ಎಂದು ಸ್ಥಳೀಯ ಮುಖಂಡ ಶಿರಸಕುಮಾರ ಹಜೇರಿ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ರವಿವಾರ ಕರೆಯಲಾದ ಪಟ್ಟಣದ ಪ್ರಮುಖರ ಸಭೆಯ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಳಿಕೋಟೆ ಪಟ್ಟಣದ ಅಭಿವೃದ್ದಿಯ ದೃಷ್ಠಿಯಿಂದ ಹಾಗೂ ಸೌಂದರ್ಯೀಕರಣದ ದೃಷ್ಟಿಯಿಂದ ತೆರವು ಕಾರ್ಯ ಚರಣೆ ಅವಶ್ಯವಾಗಿದೆ. ಅತಿಕ್ರಮಣ ತೆರವಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಆದೇಶ ಮಾಡಿದೆ. ಅದರ ಆದೇಶದಂತೆ ಮತ್ತು ಜಿಲ್ಲಾಧಿಕಾರಿಗಳ ಸೂಚನೆಯನ್ನು ತಾಳಿಕೋಟೆ ಪುರಸಭೆ ಮುಖ್ಯಾಧಿಕಾರಿ ಅತಿಕ್ರಮಣ ತೆರವು ಮಾಡಿದ್ದಾರೆ. ಇದಕ್ಕೆ ಸಾರ್ವಜನಿಕರು ಸಹಕಾರ ನೀಡಿದ್ದಾರೆ. ಆದರೆ, ಬಸ್ ನಿಲ್ದಾಣದ ಎದುರಿಗಿನ ಗೂಡಂಗಡಿಗಳ ಮಾಲೀಕರು ತೆರವಿಗೆ ವಿರೋಧ ವ್ಯಕ್ತಪಡಿಸಿರುವದು ಸರಿಯಲ್ಲ ಎಂದು ಹೇಳಿದರು.ಪುರಸಭೆ ಅಧಿಕಾರಿಗಳು ಈ ಹಿಂದೆ ಅವರಿಗೆ ಅಂಗಡಿ ಇಟ್ಟುಕೊಳ್ಳಲು ಅವಕಾಶ ನೀಡಿದ್ದಾರೆ. ಆದರೆ, ಅದನ್ನೇ ಬಂಡವಾಳ ಮಾಡಿಕೊಂಡು ಅಂಗಡಿಗಳನ್ನು ಬಾಡಿಗೆ ನೀಡಿರುವದು ಕಣ್ಣಾರೆ ಕಂಡಿದ್ದಾಗಿದೆ. ಈಗ ಆ ಅಂಗಡಿಕಾರರು ಮುಖ್ಯ ರಸ್ತೆಯನ್ನು ಬಂದ್ ಮಾಡಿ ಧರಣಿ ನಡೆಸಿರುವದರಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗಿದೆ. ಧರಣಿಯಿಂದ ಅನಾವಶ್ಯಕವಾಗಿ ಸಾರ್ವಜನಿಕರಿಗೆ ತೊಂದರೆ ಕೊಡುವ ಕೆಲಸ ಮಾಡುತ್ತಿದ್ದಾರೆ. ಕೂಡಲೇ ಜಿಲ್ಲಾಧಿಕಾರಿಗಳು ಪೊಲೀಸ್ ಅಧಿಕಾರಿಗಳಿಗೆ ಹಾಗೂ ಪುರಸಭೆ ಮುಖ್ಯಾಧಿಕಾರಿಗಳಿಗೆ ಸೂಚಿಸಿ ಧರಣಿ ಕುಳಿತಿರುವವರನ್ನು ತೆರವುಗೊಳಿಸಲು ಸೂಚಿಸಬೇಕು. ಪುರಸಭೆ ಮುಖ್ಯಾಧಿಕಾರಿ ಮೋಹನ್ ಜಾಧವ ಅವರು ಒಳ್ಳೆಯ ಕೆಲಸಗಾರರಿದ್ದು, ಜಿಲ್ಲೆಯ ಹಿರಿಯ ಅಧಿಕಾರಿಗಳು ಅವರ ಬೆನ್ನಿಗೆ ನಿಂತು ಅರ್ಧಕ್ಕೆ ನಿಂತಿರುವ ತೆರವು ಕಾರ್ಯಚರಣೆ ಪೂರ್ಣಗೊಳಿಸಬೇಕೆಂದು ತಾಳಿಕೋಟೆ ಪಟ್ಟಣದ ಸಾರ್ವಜನಿಕರ ಪರವಾಗಿ ಒತ್ತಾಯಿಸಿದರು.ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ಎಸ್.ಬಿ.ಕಟ್ಟಿಮನಿ ಮಾತನಾಡಿ ಫುಟ್‌ಪಾತ್ ಅತಿಕ್ರಮಣದ ಅಂಗಡಿಗಳನ್ನು ಪುರಸಭೆ ಅಧಿಕಾರಿಗಳು ತೆರವುಗೊಳಿಸಿದ್ದಾರೆ ಆದರೆ, ಬಸ್ ನಿಲ್ದಾಣದ ಮುಂಭಾಗದ ೨೩ ಅಂಗಡಿಕಾರರು ಈ ಅಂಗಡಿಗಳಿಂದಲೇ ನಮ್ಮ ಜೀವನ ನಡೆಯುತ್ತಿದೆ ಎಂದು ಧರಣಿಗೆ ಕುಳಿತಿದ್ದಾರೆ. ೨೩ ಅಂಗಡಿಕಾರರಲ್ಲಿ ೧೫ ಅಂಗಡಿಕಾರರು ತಮ್ಮ ಅಂಗಡಿಗಳನ್ನು ಬಾಡಿಗೆ ನೀಡಿದ್ದರು. ಈಗ ಅಂಬೇಡ್ಕರ್ ಪೋಟೋ ಇಟ್ಟು ಧರಣಿ ಕುಳಿತಿರುವುದು ಸರಿಯಲ್ಲ. ಅಂಗಡಿ ಇಟ್ಟಿರುವದು ಅನಧಿಕೃತ. ಧರಣಿ ನಡೆಸಿರುವದು ಅನಧಿಕೃತ. ಇಂತವುಗಳಿಗೆ ಜಿಲ್ಲಾಧಿಕಾರಿಗಳು ಪೊಲೀಸ್ ಅಧಿಕಾರಿಗಳು ತಲೆ ಕೆಡಿಸಿಕೊಳ್ಳದೇ ಕೂಡಲೇ ತೆರವುಗೊಳಿಸಬೇಕೆಂದು ತಾಳಿಕೋಟೆ ಪಟ್ಟಣದ ಸಾರ್ವಜನಿಕರ ಪರವಾಗಿ ಒತ್ತಾಯಿಸುತ್ತೇವೆಂದರು.ಪುರಸಭೆ ಮಾಜಿ ಸದಸ್ಯ ಪ್ರಭುಗೌಡ ಮದರಕಲ್ಲ ಮಾತನಾಡಿ, ಪುರಸಭೆಯ ಮುಖ್ಯಾಧಿಕಾರಿಗಳು ತೆರವು ಕಾರ್ಯಚರಣೆಯಲ್ಲಿ ತಮ್ಮ ಕರ್ತವ್ಯ ನಿಭಾಯಿಸಿದ್ದಾರೆ. ಅಧಿಕಾರಿಗಳು ತೆರವು ಕಾರ್ಯಚರಣೆ ಮುಂದುವರೆಸಿ ಪಟ್ಟಣದ ಸೌಂದರ್ಯೀಕರಣಕ್ಕೆ ಪುಷ್ಠಿ ನೀಡುವಂತಹ ಕಾರ್ಯ ಮಾಡಬೇಕು. ಎಲ್ಲ ಪಕ್ಷದ ಮುಖಂಡರು ಇಂದು ಪಕ್ಷಾತೀತವಾಗಿ ಸೇರಿ ಚರ್ಚಿಸಿದ್ದೇವೆ. ಅದರಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿ ತೆರವು ಕಾರ್ಯಚರಣೆ ಪೂರ್ಣಗೊಳಿಸಲು ಒತ್ತಾಯಿಸುವುದಾಗಿ ತಿಳಿಸಿದರು.ಪುರಸಭಾ ಮಾಜಿ ಸದಸ್ಯ ಸುರೇಶ ಹಜೇರಿ, ಮಂಜುನಾಥ ಶೆಟ್ಟಿ ಮಾತನಾಡಿ, ತಾಳಿಕೋಟೆ ನಗರವು ದೊಡ್ಡ ನಗರವಾಗಿ ಬೆಳೆದು ನಿಂತಿದ್ದು, ಪಟ್ಟಣದ ಸೌಂದರ್ಯಕ್ಕೆ ಪೆಟ್ಟುಕೊಡುವ ಕಾರ್ಯ ನಡೆಯುತ್ತಿದೆ. ಅದನ್ನು ನಿಲ್ಲಿಸುವದರ ಜೊತೆಗೆ ತೆರವು ಕಾರ್ಯಚರಣೆ ಪುರಸಭೆ ಮುಖ್ಯಾಧಿಕಾರಿಗಳು ಮಾಡಿರುವದು ಒಳ್ಳೆಯದ್ದೇ. ಪಟ್ಟಣದಲ್ಲಿ ಸ್ವಚ್ಛತೆಗೆ ಮೊದಲು ಆದ್ಯತೆ ನೀಡುತ್ತಾ ಬಂದಿರುವ ಮುಖ್ಯಾಧಿಕಾರಿ ಒಳ್ಳೆಯ ಅಧಿಕಾರಿ. ಅವರ ಒಳ್ಳೆಯ ಕಾರ್ಯಗಳಿಗೆ ಪಟ್ಟಣದ ನಾಗರಿಕರ ಸಹಕಾರವಿದೆ. ಪಟ್ಟಣದ ವಿಷಯ ಬಂದಾಗ ಪಕ್ಷಾತೀತವಾಗಿ ಎಲ್ಲರೂ ಜೊತೆಗೂಡಿ ಅಧಿಕಾರಿಗಳಿಗೆ ಸಹಕರಿಸುವುದಾಗಿ ತಿಳಿಸಿದರು.ಕರವೇ ಸಂಘಟನೆಯ ಅಧ್ಯಕ್ಷ ರವಿ ಕಟ್ಟಿಮನಿ ಮಾತನಾಡಿ, ಪಟ್ಟಣದ ಅಭಿವೃದ್ದಿಯ ದೃಷ್ಟಿಯಿಂದ ಪುರಸಭೆ ಅಧಿಕಾರಿಗಳು ತೆರವು ಕಾರ್ಯಚರಣೆ ನಡೆಸಿರುವದು ಒಳ್ಳೆಯ ವಿಚಾರ. ಈ ಹಿಂದೆ ನಮ್ಮ ಕರವೇ ಸಂಘಟನೆಯ ವತಿಯಿಂದ ಅತಿಕ್ರಮಣ ತೆರವಿಗಾಗಿ ೨೦೨೦ರಲ್ಲಿ ಹೋರಾಟವನ್ನು ಮಾಡಿದ್ದೇವೆ ಆ ಸಮಯದಲ್ಲಿ ತೆರವು ಕಾರ್ಯ ಚರಣೆ ನಡೆಸಲಾಗಿತ್ತು. ಸದ್ಯ ಪುರಸಭೆ ಮುಖ್ಯಾಧಿಕಾರಿ ಪಟ್ಟಣದ ದೃಷ್ಟಿಯಿಂದ ಪಾದಚಾರಿಗಳ ಹಿತದೃಷ್ಠಿಯಿಂದ ತೆರವು ಕಾರ್ಯಚರಣೆ ನಡೆಸಿರುವದು ಸ್ವಾಗತಿಸುತ್ತೇವೆ. ಈ ತೆರವು ಕಾರ್ಯಚರಣೆಯನ್ನು ಸಂಪೂರ್ಣಗೊಳಿಸಬೇಕೆಂದು ಒತ್ತಾಯಿಸಿದರು.ತಾಳಿಕೋಟೆ ಸಾರ್ವಜನಿಕರ ಪರವಾಗಿ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲು ತಯಾರಿಸಲಾದ ಮನವಿ ಪತ್ರವನ್ನು ಜಿ.ಎ.ಕಸ್ತೂರಿ ಓದಿ ಹೇಳಿದರು. ಈ ಸಮಯದಲ್ಲಿ ಪಟ್ಟಣದ ಮುಖಂಡರಾದ ಮುತ್ತಪ್ಪಣ್ಣ ಚಮಲಾಪೂರ, ಎಂ.ಕೆ.ಚೋರಗಸ್ತಿ, ಪರಶುರಾಮ ತಂಗಡಗಿ, ಅಣ್ಣಾಜಿ ಜಗತಾಪ, ಎಸ್.ಎಚ್.ಪಡಸಾಲಿ, ಆರ್.ಸಿ.ಚವ್ಹಾಣ, ಆರ್.ಆರ್.ಕಟ್ಟಿಮನಿ, ಗುರುರಾಜ ಮಾನೆ, ಮಲ್ಲಿಕಾರ್ಜುನ ಪಟ್ಟಣಶೆಟ್ಟಿ, ಮುಸ್ತಫಾ ಚೌದ್ರಿ, ಬಿ.ಪಿ.ಕೇಂಭಾವಿ, ವಿಠ್ಠಲ ಮೋಹಿತೆ, ವಿಠ್ಠಲ ಜಗತಾಪ, ಇಬ್ರಾಹಿಂ ಬಿಳಗಿ, ರತನಸಿಂಗ್ ಕೊಕಟನೂರ, ಫಯಾಜ ಉತ್ನಾಳ, ಬ್ಯಾಲ್ಯಾಳ ಸಜ್ಜನ, ಮಂಜೂರ ಬೇಪಾರಿ, ಈಶ್ವರ ಹೂಗಾರ, ಜೆ.ಸಿ.ಕರಡಿ, ಜಿ.ಟಿ.ಕಶೆಟ್ಟಿ, ಎಂ.ಎಚ್.ಮನಗೂಳಿ, ಮಾಸುಮ ಕೇಂಭಾವಿ, ಎಂ.ಎಸ್.ನಗಾರ್ಚಿ, ಮಾಬುಶಾ ಮಕಾಂದಾರ, ರಜಾಕ ಮಮದಾಪೂರ, ಸದ್ದಾಂ ಮನಗೂಳಿ, ರಾಮಚಂದ್ರ ಸುಬೇದಾರ, ತಿಪ್ಪಣ್ಣ ಸಜ್ಜನ ಮೊದಲಾದವರು ಇದ್ದರು.