ಧರ್ಮ, ಜಾತಿ ಹೆಸರಲ್ಲಿ ಬಡಿದಾಡುವುದು ಸಂಸ್ಕೃತಿ ಅಲ್ಲ: ಶಾಸಕ ಶ್ರೀನಿವಾಸ ಮಾನೆ

KannadaprabhaNewsNetwork | Published : Apr 15, 2025 12:58 AM

ಸಾರಾಂಶ

ಸಾಮರಸ್ಯ, ಸೌಹಾರ್ದತೆಯಿಂದ ಪರಸ್ಪರ ಪ್ರೀತಿ, ವಿಶ್ವಾಸದಿಂದ ಸಹೋದರರಂತೆ ಪ್ರತಿಯೊಬ್ಬರೂ ಬದುಕು ಸಾಗಿಸುವುದು ಈ ನೆಲದ ಸಂಸ್ಕೃತಿ.

ಹಾನಗಲ್ಲ: ವ್ಯವಸ್ಥೆ ಬದಲಾಗಬೇಕಾದರೆ ನಾವೂ ಬದಲಾವಣೆಯ ಭಾಗವಾಗಬೇಕು. ವ್ಯವಸ್ಥೆಯನ್ನು ಬರೀ ದೂಷಿಸಿದರೆ ಪ್ರಯೋಜನವಿಲ್ಲ. ಬದಲಾವಣೆ ನಮ್ಮಿಂದಲೇ ಆರಂಭವಾಗಬೇಕು ಎಂದು ಶಾಸಕ ಶ್ರೀನಿವಾಸ ಮಾನೆ ತಿಳಿಸಿದರು.ತಾಲೂಕಿನ ಹಾವಣಗಿ ಗ್ರಾಮದಲ್ಲಿ ಇಲ್ಲಿನ ಸಿ.ಜಿ. ಬೆಲ್ಲದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಎನ್ನೆಸ್ಸೆಸ್ ವಾರ್ಷಿಕ ವಿಶೇಷ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಧರ್ಮ, ಜಾತಿಗಳ ಹೆಸರಿನಲ್ಲಿ ಬಡಿದಾಡುವುದು ಈ ನೆಲದ ಸಂಸ್ಕೃತಿ ಅಲ್ಲ. ಸಾಮರಸ್ಯ, ಸೌಹಾರ್ದತೆಯಿಂದ ಪರಸ್ಪರ ಪ್ರೀತಿ, ವಿಶ್ವಾಸದಿಂದ ಸಹೋದರರಂತೆ ಪ್ರತಿಯೊಬ್ಬರೂ ಬದುಕು ಸಾಗಿಸುವುದು ಈ ನೆಲದ ಸಂಸ್ಕೃತಿ ಎನ್ನುವ ಕುರಿತು ವಿದ್ಯಾರ್ಥಿ ದೆಸೆಯಿಂದಲೇ ತಿಳಿವಳಿಕೆ ಮೂಡಿಸಬೇಕಿದೆ ಎಂದರು.

ಸಾಮಾಜಿಕ ಜವಾಬ್ದಾರಿ, ಕರ್ತವ್ಯಗಳನ್ನು ಮರೆಯುತ್ತಿರುವ ಪರಿಣಾಮ ಸಂಕಷ್ಟಗಳು ಹೆಚ್ಚುತ್ತಿವೆ. ಸರ್ಕಾರದ ಮೇಲೂ ಹೊರೆ ಬೀಳುತ್ತಿದೆ. ಎಲ್ಲವನ್ನೂ ಸರ್ಕಾರವೇ ಮಾಡಬೇಕು ಎನ್ನುವ ಮನೋಭಾವನೆ ಸರಿಯಲ್ಲ. ಈ ನಿಟ್ಟಿನಲ್ಲಿ ಶಿಬಿರಾರ್ಥಿಗಳು ಸಮುದಾಯದಲ್ಲಿ ಅರಿವು ಮೂಡಿಸಬೇಕಿದೆ. ಗಾಂಧೀಜಿ ಅವರ ಸರ್ವೋದಯ ತತ್ವದ ನೆಲೆಯಲ್ಲಿ ಯೋಚಿಸಿ ರಾಷ್ಟ್ರೀಯ ಸೇವಾ ಯೋಜನೆ ಆರಂಭಿಸಲಾಗಿದೆ. ಲೋಕಸೇವೆಯ ಮೂಲಕ ವಿದ್ಯಾರ್ಥಿಗಳನ್ನು ರಾಷ್ಟ್ರ ನಿರ್ಮಾಣದ ಕಾರ್ಯದಲ್ಲಿ ತೊಡಗಿಸುವುದೇ ಇದರ ಮೂಲ ಉದ್ದೇಶವಾಗಿದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ. ವೀರೇಶ ಕುಮ್ಮೂರ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ಇಂದಿಗೂ ಮೌಢ್ಯ, ಕಂದಾಚಾರಗಳನ್ನು ಕಾಣುತ್ತಿದ್ದೇವೆ. ಇವುಗಳ ವಿರುದ್ಧ ಶಿಬಿರಾರ್ಥಿಗಳು ಜಾಗೃತಿ ಮೂಡಿಸಬೇಕಿದೆ. ರಚನಾತ್ಮಕ ಕಾರ್ಯಗಳ ಮೂಲಕ ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಅಗತ್ಯವಿದೆ ಎಂದರು.ಜಿಪಂ ಮಾಜಿ ಸದಸ್ಯ ಟಾಕನಗೌಡ ಪಾಟೀಲ, ಗ್ರಾಪಂ ಅಧ್ಯಕ್ಷೆ ಶಿಲ್ಪಾ ಪದ್ಮೋಜಿ, ಮಾಜಿ ಅಧ್ಯಕ್ಷ ಆನಂದ ಹವಳಣ್ಣನವರ, ಮಲ್ಲನಗೌಡ ಕುಲಕರ್ಣಿ, ಯಮುನಾ ಕೋಣೇಸರ, ಪಾಂಡುರಂಗ ಕೊಂಡೂರ, ಪ್ರೇಮಾ ವೀರಾಪುರ, ಗೀತಾ, ನೂರ್‌ಅಹ್ಮದ್ ತಿಳವಳ್ಳಿ, ಲೀಲಾವತಿ ಸಂಗೂರ ಉಪಸ್ಥಿತರಿದ್ದರು.ಬೇಸಿಗೆ ಶಿಬಿರದಿಂದ ಮಕ್ಕಳ ಆತ್ಮವಿಶ್ವಾಸ ವೃದ್ಧಿ

ಶಿಗ್ಗಾಂವಿ: ಬೇಸಿಗೆ ಶಿಬಿರ ಮಕ್ಕಳಿಗೆ ಹಲವು ರೀತಿಯ ಲಾಭಗಳನ್ನು ನೀಡುತ್ತವೆ. ಶಿಬಿರದಲ್ಲಿ ಕಲೆ, ಕ್ರೀಡೆ, ಸಂಗೀತ, ನೃತ್ಯ ನಾಟಕಗಳಲ್ಲಿ ಪರಿಣಿತಿ ಹೊಂದಿರುವ ತರಬೇತಿದಾರರಿಂದ ಹೇಳಿಕೊಡಲಾಗುತ್ತದೆ. ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಭಾರತ ಸೇವಾ ಸಂಸ್ಥೆಯ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ ತಿಳಿಸಿದರು.ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಭಾರತ ಸೇವಾ ಸಂಸ್ಥೆ ಬನ್ನೂರ ವತಿಯಿಂದ ಆಯೋಜಿಸಿದ್ದ ಉಚಿತ ಬೇಸಿಗೆ ಶಿಬಿರದಲ್ಲಿ ಮಾತನಾಡಿ, ಈ ಶಿಬಿರದಿಂದ ಹೊಸದನ್ನು ಕಲಿಯಲು ಚಟುವಟಿಕೆಗಳಲ್ಲಿ ಭಾಗವಹಿಸುವುದು ಮತ್ತು ಮಕ್ಕಳಲ್ಲಿನ ಆತ್ಮವಿಶ್ವಾಸ ದ್ವಿಗುಣಗೊಳ್ಳುತ್ತದೆ. ಬೇರೆಯವರೊಡನೆ ಬೆರೆತುಕೊಂಡು ತಂಡಗಳಲ್ಲಿ ಕೆಲಸ ಮಾಡುವ ಮೂಲಕ ಮಕ್ಕಳ ಸಾಮಾಜಿಕ ಕೌಶಲ್ಯ ಅಭಿವೃದ್ಧಿಯಾಗಿ ಶಿಸ್ತು ಮತ್ತು ಸಮಯಪಾಲನೆಯ ಮಹತ್ವವನ್ನು ಮಕ್ಕಳು ಕಲಿಯುತ್ತಾರೆ ಎಂದರು.

ಸಂಗನಬಸವ ಶ್ರೀಗಳು ಸಾನ್ನಿಧ್ಯ ವಹಿಸಿ ಮಾತನಾಡಿ, ಭಾರತ ಸೇವಾ ಸಂಸ್ಥೆಯು ಕಳೆದ ಹಲವಾರು ವರ್ಷಗಳಿಂದ ಸಮಾಜ ಸೇವೆಯಲ್ಲಿ ತೊಡಗಿಕೊಂಡು ತಾಲೂಕಿನ ಜನರ ಮೆಚ್ಚುಗೆಗೆ ಪಾತ್ರವಾಗಿದೆ ಎಂದರು.

ಕೆಎಸ್ಆರ್‌ಪಿ ೧೦ನೇ ಪಡೆಯ ಕಮಾಂಡೆಂಟ್ ನಾಗರಾಜ ಮೆಳ್ಳಾಗಟ್ಟಿ ಮಾತನಾಡಿ, ಭಾರತ ಸೇವಾ ಸಂಸ್ಥೆಯು ಬಡ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಉಚಿತ ಬೇಸಿಗೆ ಶಿಬಿರವನ್ನು ನೀಡಿ ಬೇಸಿಗೆ ರಜಾ ದಿನಗಳಲ್ಲಿ ಮಕ್ಕಳು ಟಿವಿ ಮೊಬೈಲ್ ಬಳಕೆಯನ್ನು ಬಿಟ್ಟು ದೈಹಿಕ ಮತ್ತು ಮಾನಸಿಕ ಸದೃಢತೆಯನ್ನು ಬೆಳೆಸಿಕೊಳ್ಳಲು ಉಪಯುಕ್ತಕಾರಿಯಾದಂತಹ ಕೆಲಸವನ್ನು ಮಾಡಿದೆ ಎಂದರು.

ಈ ಸಂದರ್ಭದಲ್ಲಿ ನಜಿರಹ್ಮದ ಶೇಕಸನದಿ, ಭರತ ಕಳ್ಳಿಮನಿ, ಬಸವರಾಜ ಹೊಸಪೇಟೆ, ರವಿ ಮಡಿವಾಳರ, ವಿಜಯ ಬುಳ್ಳಕ್ಕನವರ, ಶಶಿಕಾಂತ ರಾಠೋಡ, ಶಂಕರ ಧಾರವಾಡ, ಸಾಧಿಕ ಸವಣೂರ ದರ್ಶನ ಕರೂರ, ಮಾಲತೇಶ ಮಾದರ ಹಾಗೂ ಪಾಲಕರು ವಿದ್ಯಾರ್ಥಿಗಳು ಭಾಗವಹಿಸಿದ್ದರು.

Share this article