ಜಮೀನು ದಾರಿ ವಿಷಯದಲ್ಲಿ ಪ್ರಕರಣ ದಾಖಲು: ಪ್ರತಿಭಟನೆ

KannadaprabhaNewsNetwork |  
Published : Aug 28, 2024, 12:52 AM IST
ಕೊಡೇಕಲ್ ಸಮೀಪದ ಮನ್ನಾನಾಯಕ ತಾಂಡಾದಲ್ಲಿ ಜಮೀನು ದಾರಿ ವಿಷಯವಾಗಿ ತಾಂಡಾದ ಜನರ ಮೇಲೆ ಅಧಿಕಾರಿಗಳ ದೌರ್ಜನ್ಯವನ್ನು ಖಂಡಿಸಿ ಅಧಿಕಾರಿಗಳ ವಿರುದ್ದ ಪ್ರತಿದೂರು ದಾಖಲಿಸುವಂತೆ ಆಗ್ರಹಿಸಿ ಸೋಮವಾರ ತಾಲೂಕು ಬಂಜಾರಾ ಸಮುದಾಯದವರು ಪೊಲೀಸ್ ಠಾಣೆ ಮುಂಭಾಗದಲ್ಲಿ ಧರಣಿ ನಡೆಸಿದರು. | Kannada Prabha

ಸಾರಾಂಶ

ಸಮೀಪದ ಮನ್ನಾನಾಯಕ ತಾಂಡಾ ನಿವಾಸಿಗಳ ಮೇಲೆ ಜಮೀನು ದಾರಿ ವಿಷಯವಾಗಿ ಗೂಂಡಾ ವರ್ತನೆ ಮಾಡುವುದಲ್ಲದೆ, ಗ್ರಾಮಸ್ಥರ ಮೇಲೆಯೇ ಸುಳ್ಳು ಪ್ರಕರಣ ದಾಖಲಿಸಿರುವ ಅಧಿಕಾರಿಗಳ ವಿರುದ್ಧ ಪ್ರತಿದೂರು ದಾಖಲು ಮಾಡಿಕೊಳ್ಳುವಂತೆ ಒತ್ತಾಯಿಸಿ ಸೋಮವಾರ ತಾಲೂಕು ಬಂಜಾರಾ ಸಮುದಾಯವರು ಕೊಡೇಕಲ್ ಪೊಲೀಸ್ ಠಾಣೆಯ ಮುಂದೆ ಧರಣಿ ನಡೆಸಿದರು.

ಕನ್ನಡಪ್ರಭ ವಾರ್ತೆ ಕೊಡೇಕಲ್

ಸಮೀಪದ ಮನ್ನಾನಾಯಕ ತಾಂಡಾ ನಿವಾಸಿಗಳ ಮೇಲೆ ಜಮೀನು ದಾರಿ ವಿಷಯವಾಗಿ ಗೂಂಡಾ ವರ್ತನೆ ಮಾಡುವುದಲ್ಲದೆ, ಗ್ರಾಮಸ್ಥರ ಮೇಲೆಯೇ ಸುಳ್ಳು ಪ್ರಕರಣ ದಾಖಲಿಸಿರುವ ಅಧಿಕಾರಿಗಳ ವಿರುದ್ಧ ಪ್ರತಿದೂರು ದಾಖಲು ಮಾಡಿಕೊಳ್ಳುವಂತೆ ಒತ್ತಾಯಿಸಿ ಸೋಮವಾರ ತಾಲೂಕು ಬಂಜಾರಾ ಸಮುದಾಯವರು ಕೊಡೇಕಲ್ ಪೊಲೀಸ್ ಠಾಣೆಯ ಮುಂದೆ ಧರಣಿ ನಡೆಸಿದರು.

ಕಳೆದ ಬುಧವಾರ ಆ.21 ರಂದು ಕೊಡೇಕಲ್ ಹೋಬಳಿ ವಲಯದ ಮನ್ನಾನಾಯ್ಕ ತಾಂಡಾದಲ್ಲಿ ಜಮೀನು ದಾರಿ ವಿಷಯದ ಹಿನ್ನೆಲೆಯಲ್ಲಿ ಜರುಗಿದ್ದ ಘಟನೆಯಲ್ಲಿ ಹುಣಸಗಿ ತಹಸೀಲ್ದಾರ್ ಮತ್ತು ಹುಣಸಗಿ ಸಿಪಿಐ ಹಾಗೂ ಕೊಡೇಕಲ್ ಪಿಎಸ್‌ಐ ಮತ್ತು ಸಿಬ್ಬಂದಿಗಳು ಮನ್ನಾನಾಯ್ಕ ತಾಂಡಾದ ಜನರ ಮೇಲೆ ದಬ್ಬಾಳಿಕೆ ನಡೆಸುವ ಮೂಲಕ ಮನೆಯನ್ನು ಧ್ವಂಸ ಮಾಡುತೇವೆ ಎಂದು ಬೆದರಿಕೆಯನ್ನು ಹಾಕುವುದಲ್ಲದೇ ತಾಂಡಾದ 5 ಜನ ಮುಗ್ದರ ಮೇಲೆ ಸುಳ್ಳು ಪ್ರಕರಣವನ್ನು ದಾಖಲು ಮಾಡಿಕೊಂಡಿರುತ್ತಾರೆಂದು ಧರಣಿ ನಿರತರು ಆರೋಪಿಸಿದರು.

ರಾಷ್ಟ್ರೀಯ ಗೋರಸೇನಾದ ರಾಜ್ಯ ಕಾರ್ಯದರ್ಶಿ ಕೃಷ್ಣಾ ಜಾಧವ ಮಾತನಾಡಿ, ಆ.21ರಂದು ಮನ್ನಾನಾಯ್ಕ ತಾಂಡಾಕ್ಕೆ ತೆರಳಿದ ಅಧಿಕಾರಿಗಳ ತಂಡ ಜಮೀನು ದಾರಿ ವಿಷಯವಾಗಿ ಜನರ ಜೊತೆ ಅಸಭ್ಯವಾಗಿ ವರ್ತನೆ ಮಾಡಿದ್ದು ಅಲ್ಲದೆ ನೀವು ಕಟ್ಟಿಕೊಂಡಿರುವ ಮನೆಗಳು ಜಮೀನು ರಸ್ತೆಯಲ್ಲಿ ಬರುತ್ತಿರುವ ಕಾರಣ ಮನೆಗಳನ್ನು ದ್ವಂಸಗೋಳಿಸಿ ರಸ್ತೆಯನ್ನು ಮಾಡುತ್ತೇವೆ. ಇದು ನ್ಯಾಯಾಲಯದಿಂದ ಬಂದಿರುವ ಆದೇಶವಾಗಿದೆ ಎಂದು ದಬ್ಬಾಳಿಕೆಯನ್ನು ನಡೆಸಿದ್ದು, ಅಲ್ಲದೆ ತಾಂಡಾದ ಮಹಿಳೆಯರು ಹಾಗೂ ಅಂಗವಿಕಲರ ಮೇಲೆ ದೌರ್ಜನ್ಯ ಎಸಗಿದ್ದು, ಅಧಿಕಾರಿಗಳ ವಿರುದ್ದ ಪ್ರಕರಣ ದಾಖಲಿಸಿಕೊಳ್ಳಬೇಕು ಮತ್ತು ಅವರ ಮೇಲೆ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳುವವರೆಗೆ ಧರಣಿಯನ್ನು ನಡೆಸಲಾಗುವುದೆಂದು ಎಚ್ಚರಿಕೆಯನ್ನು ನೀಡಿದರು.

ಈ ಸಂದರ್ಭದಲ್ಲಿ ಠಾಣೆಗೆ ಆಗಮಿಸಿದ ಪಿಎಸ್‌ಐ ಅಯ್ಯಪ್ಪ ಅವರು ಧರಣಿ ನಿರತರೊಂದಿಗೆ ಮಾತನಾಡಿ, ದೂರು ನೀಡುವುದಾದರೆ ನೀಡಿ. ಆದರೆ, ಅನುಮತಿ ಇಲ್ಲದೆ ಠಾಣೆಯಲ್ಲಿ ಧರಣಿ ನಡೆಸುವುದು ಸರಿಯಲ್ಲ ಎಂದು ಹೇಳಿದ ನಂತರ ಧರಣಿ ನಿರತ ಬಂಜಾರಾ ಸಮುದಾಯದವರು ಗೂಂಡಾ ವರ್ತನೆ ಮಾಡಿರುವ ಅಧಿಕಾರಿಗಳ ವಿರುದ್ದ ಪ್ರತಿದೂರನ್ನು ದಾಖಲಿಸಿ ಧರಣಿಯನ್ನು ಹಿಂಪಡೆದುಕೊಂಡರು.

ಆಲ್ ಇಂಡಿಯಾ ಬಂಜಾರಾ ಸಂಘದ ಸುರಪೂರ ತಾಲೂಕಾಧ್ಯಕ್ಷ ನಿಂಗಾನಾಯ್ಕ್ ರಾಠೋಡ್, ಹುಣಸಗಿ ತಾಲೂಕಾಧ್ಯಕ್ಷ ಶೇಖರ ನಾಯ್ಕ್, ವೆಂಕಟೇಶ ಸಾಹುಕಾರ, ಮೋತಿಲಾಲ್ ಚವ್ಹಾಣ, ನಾರಾಯಣ ಡಿ. ನಾಯ್ಕ್, ತಿರುಪತಿ ಚವ್ಹಾಣ, ಗೋರಸೇನಾ ತಾಲೂಕಾಧ್ಯಕ್ಷ ಸೀತಾರಾಮ, ಕಾಶಿನಾಥ, ಜೈರಾಮ್, ಬಾಬು ರಾಠೋಡ್, ಗಣಪತಿ, ಪೀರಪ್ಪ ಜಾಧವ, ಸುನೀಲ್ ಜಾಧವ,ರಾಜು ನಾಯ್ಕ್ ಸೇರಿದಂತೆ ಮನ್ನಾನಾಯ್ಕ, ತಾಂಡಾ, ರೇವುನಾಯ್ಕ ತಾಂಡಾ, ಮಾರನಾಳ ತಾಂಡಾ, ರಾಮರಾವ್ನಗರ ತಾಂಡಾ, ಸಣ್ಣಚಾಪಿ ತಾಂಡಾ, ದೊಡ್ಡ ಚಾಪಿತಾಂಡಾ, ಹುಣಸಗಿ ತಾಂಡಾ, ಗೆದ್ದಲಮರಿ ತಾಂಡಾ, ರಾಜವಾಳ ತಾಂಡಾ, ಐ.ಬಿ. ತಾಂಡಾ ಸೇರಿದಂತೆ ಹುಣಸಗಿ ತಾಲೂಕಿನ ವಿವಿಧ ತಾಂಡಾಗಳ ಮಹಿಳೆಯರು ಮತ್ತು ಪುರುಷರು ಧರಣಿಯಲ್ಲಿ ಭಾಗವಹಿಸಿದ್ದರು.

PREV

Recommended Stories

ವಿಶ್ವಾದ್ಯಂತ ಒಂದೇ ದಿನ ಕಾಂತಾರ ಚಾಪ್ಟರ್ 1 ಬಿಡುಗಡೆ
ಈರುಳ್ಳಿ, ಹೂ, ಪಚ್ಚ ಬಾಳೆ ಬೆಲೆ ಧರೆಗೆ!