ರೈತರ ಕೆಲಸ ಕಾರ್ಯಕ್ಕೆ ಲಂಚ ಕೇಳಿದರೆ ಎಫ್ಐಆರ್ ದಾಖಲಿಸಿ

KannadaprabhaNewsNetwork | Published : Nov 22, 2023 1:00 AM

ಸಾರಾಂಶ

ಅಧಿಕಾರಿಗಳು ಸಾರ್ವಜನಿಕ ಹಾಗೂ ರೈತರ ಕೆಲಸ ಕಾರ್ಯಕ್ಕೆ ಲಂಚ ಕೇಳಿದರೆ ಅವರ ಮೇಲೆ ಎಫ್ಐಆರ್ ದಾಖಲಿಸಿ ಎಂದು ಸಚಿವ ಸಂತೋಷ್ ಲಾಡ್ ಹೇಳಿದರು.

ಕನ್ನಡಪ್ರಭ ವಾರ್ತೆ ಕಲಘಟಗಿ

ಅಧಿಕಾರಿಗಳು ಸಾರ್ವಜನಿಕ ಹಾಗೂ ರೈತರ ಕೆಲಸ ಕಾರ್ಯಕ್ಕೆ ಲಂಚ ಕೇಳಿದರೆ ಅವರ ಮೇಲೆ ಎಫ್ಐಆರ್ ದಾಖಲಿಸಿ ಎಂದು ಸಚಿವ ಸಂತೋಷ್ ಲಾಡ್ ಹೇಳಿದರು.

ತಾಲೂಕಿನ ದೇವಿಕೊಪ್ಪ ಗ್ರಾಮದ ಗ್ರಾಮ ಪಂಚಾಯತಿಯಲ್ಲಿ ಭಾನುವಾರ ನಡೆದ ಕುಂದುಕೊರತೆ ಸಭೆಯಲ್ಲಿ ಕಿಡಿಕಾರಿದರು.

ಸಭೆಯಲ್ಲಿ ಕೆಲ ರೈತರು ಮಾತನಾಡಿ, ನಮ್ಮ ಕೆಲಸ ಮಾಡಿಕೊಡಲು ಅಧಿಕಾರಿಗಳು ಲಂಚ ಕೇಳುತ್ತಾರೆ. ಕೊಡದಿದ್ದರೆ ಕೆಲಸ ಮಾಡಿಕೊಡದೆ ಸತಾಯಿಸುತ್ತಾರೆ ಎಂದು ದೂರಿದರು.

ಇದರಿಂದ ಆಕ್ರೋಶಗೊಂಡಂತೆ ಕಂಡುಬಂದ ಸಚಿವ ಸಂತೋಷ ಲಾಡ್‌, ಎದ್ದು ನಿಂತು ರೈತರ ಯಾವುದೇ ಕೆಲಸಕ್ಕೆ ಲಂಚ ಕೇಳಿದರೆ ರಿಕಾರ್ಡ್ ಮಾಡಿ ಕೊಡಿ. ಇಲ್ಲಾವಾದರೆ ನನಗೆ ದೂರವಾಣಿ ಕರೆ ಮಾಡಿ ತಿಳಿಸಿ. ಕಾರ್ಯಕ್ರಮದಲ್ಲಿ ಆರೋಪ ಮಾಡುವದು ನಾನು ಸಹಿಸಲ್ಲ. ಅದಕ್ಕೆ ದಾಖಲೆ ತೆಗೆದುಕೊಂಡು ಬನ್ನಿ. ಅವರೇನಾದರೂ ನಿಮ್ಮ ಕೆಲಸ ಮಾಡದಿದ್ದರೆ ನನಗೆ ಅರ್ಜಿ ಕೊಡಿ. ನಾನು ಪ್ರಾಮಾಣಿಕವಾಗಿ ನಿಮ್ಮ ಕೆಲಸ ಮಾಡಲು ಪ್ರಮಾಣ ಮಾಡುತ್ತೇನೆ ಎಂದು ತಿಳಿಸಿದರು.

ಗ್ರಾಮದ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ, ಪ್ರೌಢ ಶಾಲೆ ಹಾಗೂ ಪ್ರಾಥಮಿಕ ಶಾಲೆಗೆ ಕೊಠಡಿಗಳ ನಿರ್ಮಾಣ, ಶಿಕ್ಷಕರ ಸಮಸ್ಯೆ, ಜಲ ಜೀವನ್ ಮಿಷನ್ ಕಾಮಗಾರಿ ಅನುಷ್ಠಾನ, ಕಂದಾಯ ಇಲಾಖೆ ರೈತರ ಪಹಣಿ ತಿದ್ದುಪಡೆ, ಪೋಡಿ ಮಾಡಿಕೊಡುವ ಹಾಗೂ ಇನ್ನು ಹಲವು ಸಮಸ್ಯೆಗಳ ಕುರಿತು ಪಿಡಿಒ ಸಿ.ಎಂ. ಉಳಾಗಡ್ಡಿ ಮನವಿ ಮಾಡಿದರು.

ಗ್ರಾಮದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಿಂದ ನಿರ್ಮಿಸಲಾದ ನೂತನ ವಾಣಿಜ್ಯ ಮಳಿಗೆ ಕಟ್ಟಡ ಉದ್ಘಾಟನೆ ಮಾಡಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥಗೌಡ ಮುರಳ್ಳಿ, ಎಸ್.ಆರ್. ಪಾಟೀಲ, ನರೇಶ ಮಲೆನಾಡು, ನಿಜಗುಣಿ ಕೆಲಗೇರಿ, ಸೋಮಶೇಖರ ಬೆನ್ನೂರ, ಗ್ರಾಪಂ ಅಧ್ಯಕ್ಷ ಮಂಜುನಾಥ ಕೆಲಗೇರಿ, ಉಪಾಧ್ಯಕ್ಷೆ ದೇವಕಿ ಲಮಾಣಿ, ಮಂಜು ವಾಡ್ಕರ, ಸಾತಪ್ಪ ಸುಳಿಕಟ್ಟಿ, ಮಹದೇವಪ್ಪ ಭೋವಿ ಇದ್ದರು.

Share this article