ಏಳು ದಿನದೊಳಗೆ ಸಮಸ್ಯೆಯ ಅರ್ಜಿ ಸಲ್ಲಿಸಿ

KannadaprabhaNewsNetwork |  
Published : Nov 10, 2024, 01:42 AM ISTUpdated : Nov 10, 2024, 01:43 AM IST
45 | Kannada Prabha

ಸಾರಾಂಶ

ನವಲಗುಂದ ತಾಲೂಕಿನಲ್ಲಿ ಒಟ್ಟು 5300 ಹೆಕ್ಟೇರ್‌ ಪ್ರದೇಶದಷ್ಟು ಬಿತ್ತನೆ ಕ್ಷೇತ್ರವಿದ್ದು, ಅದರಲ್ಲಿ ಶೇ. 90ರಷ್ಟು ಬೆಳೆಹಾನಿಯಾಗಿದೆ.

ನವಲಗುಂದ:

ಅತಿವೃಷ್ಟಿಯಿಂದ ತಾಲೂಕಿನಲ್ಲಿ 13,326 ಹೆಕ್ಟೇರ್‌ ಪ್ರದೇಶ ಬೆಳೆಹಾನಿಯಾಗಿದೆ. ಇದರಲ್ಲಿ ರೈತರಿಗೆ ಏನಾದರೂ ಇನ್ನೂ ಹೆಚ್ಚಿನ ರೀತಿಯ ತೊಂದರೆಯಾಗಿದ್ದರೆ ಏಳು ದಿನಗಳೊಳಗೆ ತಮ್ಮ ಸಮಸ್ಯೆಗಳನ್ನು ಅರ್ಜಿಯ ಮೂಲಕ ಗಮನಕ್ಕೆ ತರಬೇಕು ಎಂದು ತಹಸೀಲ್ದಾರ್‌ ಸುಧೀರ ಸಾಹುಕಾರ ಹೇಳಿದರು.

ಪಟ್ಟಣದ ತಹಸೀಲ್ದಾರ್‌ ಸಭಾಭವನದಲ್ಲಿ ಅಧಿಕಾರಿಗಳು, ಗ್ರಾಮ ಲೆಕ್ಕಾಧಿಕಾರಿಗಳು ಹಾಗೂ ರೈತರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.

ಈಗಾಗಲೇ ಹಾನಿಯ ಬಗ್ಗೆ ಮೇಲಧಿಕಾರಿಗಳಿಗೆ ವರದಿ ಸಲ್ಲಿಸುತ್ತಿದ್ದು, ಅದರ ಪೂರ್ವಭಾವಿಯಾಗಿ ರೈತರೊಂದಿಗೆ ಸಭೆ ಕರೆಯಲಾಗಿದೆ. ಇನ್ನು ರೈತರ ಬೆಳೆವಿಮೆ ಹಾಗೂ ಬೆಳೆ ಪರಿಹಾರದಲ್ಲಿ ಯಾವುದೇ ಸಂಶಯವಿದ್ದರೆ, 7 ದಿನಗಳೊಳಗಾಗಿ ಗಮನಕ್ಕೆ ತರಬೇಕು ಎಂದರು.

ಈ ವೇಳೆ ಮಾತನಾಡಿದ ರೈತ ಮುಖಂಡ ಲೋಕನಾಥ ಹೆಬಸೂರ, ನವಲಗುಂದ ತಾಲೂಕಿನಲ್ಲಿ ಒಟ್ಟು 5300 ಹೆಕ್ಟೇರ್‌ ಪ್ರದೇಶದಷ್ಟು ಬಿತ್ತನೆ ಕ್ಷೇತ್ರವಿದ್ದು, ಅದರಲ್ಲಿ ಶೇ. 90ರಷ್ಟು ಬೆಳೆಹಾನಿಯಾಗಿದೆ. ಸುಮಾರು 40 ಸಾವಿರ ಹೆಕ್ಟೇರ್ ಪ್ರದೇಶಕ್ಕೂ ಹೆಚ್ಚು ಹತ್ತಿ, ಗೋವಿನಜೋಳ, ಶೇಂಗಾ, ಮೆಣಸಿನಕಾಯಿ, ಈರುಳ್ಳಿ ಬೆಳೆಗಳು ಅತೀವೃಷ್ಟಿಯಿಂದ ಹಾನಿಯಾಗಿವೆ. ಇನ್ನು ತಾವು ಜಂಟಿ ಸಮೀಕ್ಷೆಯಲ್ಲಿ ಕೇವಲ 13326 ಹೆಕ್ಟೇರ್‌ ಪ್ರದೇಶ ಮಾತ್ರ ಹಾನಿಯಾಗಿದೆ ಎಂದು ಹೇಳುತ್ತಿದ್ದೀರಿ. ಮತ್ತೊಮ್ಮೆ ಸರಿಯಾಗಿ ಸಮೀಕ್ಷೆ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕು. ಯಾವ ರೈತರಿಗೂ ಬೆಳೆಪರಿಹಾರ ಹಾಗೂ ಬೆಳೆ ವಿಮೆಯಲ್ಲಿ ವಂಚನೆಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ನಿಮ್ಮ ಮೇಲಿದೆ ಎಂದು ಅಧಿಕಾರಿಗಳಿಗೆ ಹೇಳಿದರು.

ರೈತ ಹೋರಾಟಗಾರ ಶಂಕರ ಅಂಬ್ಲಿ ಮಾತನಾಡಿ, ಕೇವಲ ನಮ್ಮ ರೈತರಿಗೆ ವಿವಿಧ ಬೆಳೆಗಳ ಮೇಲೆ ಮಾತ್ರ ಬೆಳೆ ಪರಿಹಾರ ಸಿಗುತ್ತಿದೆ. ಆದರೆ, ತೋಟಗಾರಿಕೆ ಬೆಳೆಯಾದ ಪೇರಲ ಬೆಳೆಗೆ ಏಕೆ ಪರಿಹಾರ ನೀಡುತ್ತಿಲ್ಲ?. ನಮ್ಮ ತಾಲೂಕಿನಲ್ಲಿ 200 ಹೆಕ್ಟೇರ್‌ ಪ್ರದೇಶಕ್ಕಿಂತ ಹೆಚ್ಚು ಪೇರಲು ಬೆಳೆ ಬೆಳೆದಿದ್ದು, ಅದು ಮಳೆಯಿಂದ ಸಾಕಷ್ಟು ಪ್ರಮಾಣದಲ್ಲಿ ಬೆಳೆ ಹಾನಿಯಾಗಿದೆ. ಅದಕ್ಕೂ ಕೂಡಾ ಸರ್ಕಾರದಿಂದ ಪರಿಹಾರ ಒದಗಿಸಬೇಕೆಂದು ಒತ್ತಾಯಿಸಿದರು.

ಈ ವೇಳೆ ಕೃಷಿ ಸಹಾಯಕ ಅಧಿಕಾರಿ ತಿಪ್ಪೆಸ್ವಾಮಿ, ತೋಟಗಾರಿಕೆ ಅಧಿಕಾರಿ ಸಂಜುಕುಮಾರ ಗುಡಿಮನಿ, ರೈತರಾದ ರಘುನಾಥ ನಡುವಿನಮನಿ, ಮಲ್ಲಿಕಾರ್ಜುನಗೌಡ ಕುಲಕರ್ಣಿ, ಡಿ.ಎಸ್. ಗುಡಿಸಾಗರ, ವೀರಯ್ಯ ಹಿರೇಮಠ, ಟಿ.ಎನ್. ಸಾವಿ, ಬಸುರಾಜ ವಾಲಿಕಾರ ಸೇರಿದಂತೆ ಹಲವರಿದ್ದರು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...