ಮಳೆಯ ಕೊರತೆಯಿಂದ ಕುಡಿಯುವ ನೀರಿನ ಸಮಸ್ಯೆ ತಲೆದೋರುವ ಸಂಭವವಿದ್ದು, ಅಧಿಕಾರಿಗಳು ಯಾವುದೇ ಗ್ರಾಮ, ಜನವಸತಿ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಶಾಸಕ ಯಶವಂತ್ರಾಯಗೌಡ ಪಾಟೀಲ ಅಧಿಕಾರಿಗಳಿಗೆ ಸೂಚಿಸಿದರು.
ಕನ್ನಡಪ್ರಭ ವಾರ್ತೆ ಇಂಡಿ
ಮಳೆಯ ಕೊರತೆಯಿಂದ ಕುಡಿಯುವ ನೀರಿನ ಸಮಸ್ಯೆ ತಲೆದೋರುವ ಸಂಭವವಿದ್ದು, ಅಧಿಕಾರಿಗಳು ಯಾವುದೇ ಗ್ರಾಮ, ಜನವಸತಿ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಬೇಕು. ಕುಡಿಯುವ ನೀರಿಗಾಗಿ ಕಾಲುವೆಗೆ ನೀರು ಹರಿಸಲಾಗಿದೆ. ಕಾಲುವೆ ನೀರು ಕೆರೆಗಳಿಗೆ ತುಂಬಿಸಬೇಕು. ಕಾಲುವೆ ನೀರು ಮೊದಲು ಕುಡಿಯುವ ನೀರಿಗೆ ಆದ್ಯತೆ ನೀಡಬೇಕು. ಎಲ್ಲಾ ಕೆರೆಗಳು ಶೇ.80 ರಿಂದ 90ರಷ್ಟು ಪ್ರಮಾಣದಲ್ಲಿ ನೀರು ತುಂಬಿಸಬೇಕು ಎಂದು ಶಾಸಕ ಯಶವಂತ್ರಾಯಗೌಡ ಪಾಟೀಲ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ತಾಪಂ ಸಭಾಭವನದಲ್ಲಿ ಟಾಸ್ಕ್ ಫೋರ್ಸ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಾರ್ವಜನಿಕರ ಭಾವನೆಗಳಿಗೆ ಸ್ಪಂದಿಸಿ,ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿ, ಯುದ್ಧೋಪಾದಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಶ್ರಮಿಸಬೇಕು ಎಂದು ಹೇಳಿದರು.
ನಿಸರ್ಗದ ಸಹಾಯಕ್ಕಾಗಿ ಪ್ರಾರ್ಥನೆ ಮಾಡೋಣ. ನಿಸರ್ಗದ ಮಧ್ಯೆ ಸರ್ಕಾರದಿಂದ ಕುಡಿಯುವ ನೀರು, ಜಾನುವಾರುಗಳಿಗೆ ಮೇವಿನ ಸಹಾಯಕ್ಕಾಗಿ ಎಲ್ಲವೂ ಸರ್ಕಾರ ಮಾಡುತ್ತದೆ. ಇದ್ದ ನೀರು ಸದ್ಬಳಕೆ ಆಗುವಂತೆ, ನೀರು ಹೇಗೆ ಉಪಯೋಗಿಸಬೇಕು ಎಂಬುದು ನೋಡಿಕೊಳ್ಳಬೇಕು. ಬರ ನಿರ್ವಹಣೆಯಲ್ಲಿ ಸರ್ಕಾರ ಕಳಕಳಿಯಿಂದ ಕೆಲಸ ಮಾಡುತ್ತಿದೆ. ವಿಜಯಪುರ ಜಿಲ್ಲೆಯಲ್ಲಿ ವಾಡಿಕೆಗಿಂತ ಕಡಿಮೆ ಆಗಿದೆ ಎಂದು ಹೇಳಿದರು.
ಮುಂಬರುವ ದಿನದಲ್ಲಿ ಮಳೆಯಾದರೆ ಬೀಜ, ಗೊಬ್ಬರದ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಕಳಪೆ ಬೀಜದ ಬಗ್ಗೆ ನಿಗಾ ವಹಿಸಬೇಕು ಎಂದು ಸೂಚಿಸಿದರು.
ಭೀಮಾನದಿಗೆ ಮಹಾರಾಷ್ಟ್ರದಿಂದ ನೀರು ಹರಿಸುವ ಕುರಿತು ರಾಜ್ಯ ಸರ್ಕಾರದಿಂದ ಮಹಾರಾಷ್ಟ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಭೀಮಾನದಿಗೆ ನೀರು ಬಂದರೆ ಇಂಡಿ ನಗರ ಹಾಗೂ ಅರ್ಜನಾಳ ಬಹುಹಳ್ಳಿ ಕುಡಿಯುವ ನೀರಿನ ಯೋಜನೆ ವ್ಯಾಪ್ತಿಗೆ ಬರುವ 30 ರಿಂದ 40 ಗ್ರಾಮಗಳಿಗೆ ಕುಡಿಯುವ ನೀರಿನ ಅನುಕೂಲ ಆಗುತ್ತದೆ. ಅಲ್ಲದೆ ನದಿ ದಂಡೆಯ ಗ್ರಾಮಗಳಿಗೂ ಅನುಕೂಲವಾಗಲಿದೆ ಎಂದು ಹೇಳಿದರು.
ಮಳೆಯಾಗದಿದ್ದರೆ ಮುಂಬರುವ ದಿನದಲ್ಲಿ ಜಾನುವಾರಗಳಿಗೆ ಮೇವಿನ ಕೊರತೆ ಆಗದಂತೆ ನೋಡಿಕೊಳ್ಳಲು ರೂಪುರೇಷ ಹಾಕಿಕೊಳ್ಳಬೇಕು. ಯಾವ ಭಾಗದಲ್ಲಿ ಗೋಶಾಲೆ ತೆರೆಯಬೇಕು ಎಂಬುದು ಸ್ಥಳ ಗುರುತಿಸಿಟ್ಟುಕೊಳ್ಳಬೇಕು ಎಂದು ಸೂಚಿಸಿದರು.
ನಗರ ಸೇರಿದಂತೆ ತಾಲೂಕಿನಾದ್ಯಂತ ಅಕ್ರಮ ಚಟುವಟಿಕೆ ನಡೆಯದಂತೆ ಪೊಲೀಸ್ ಇಲಾಖೆ ನಿಗಾ ವಹಿಸಬೇಕು. ಹಿಂದಿನ ಕರಾಳ ಇತಿಹಾಸ ಮರುಕಳುಹಿಸದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ಸಾವಳಸಂಗ ಅರಣ್ಯ ಪ್ರದೇಶದಸಿದ್ದೇಶ್ವರ ಸ್ವಾಮಿಜಿ ವೃಕ್ಷೋಧ್ಯಾನ ಉತ್ತಮವಾಗಿ ಮಾಡಿದ್ದು, ಪ್ರವಾಸಿತಾಣವಾಗಿ ರೂಪುಗೊಳಿಸಿದ್ದು, ಪ್ರವಾಸಿಗರ ಸಂಖ್ಯೆ ಹೆಚ್ಚಾಗುವಂತೆ ಮಾಡಿದ ಅರಣ್ಯಾಧಿಕಾರಿಗಳ ಕಾರ್ಯ ಶ್ಲಾಘನೀಯ ಎಂದು ಹೇಳಿದರು.
ಎಸ್ಐಅರ್ ಜಿಲ್ಲೆಯಲ್ಲಿ ಪ್ರಥಮ : ಎಸ್ಐಆರ್ ಕಾರ್ಯದಲ್ಲಿ ಅಧಿಕಾರಿ,ಸಿಬ್ಬಂದಿಗಳು ಒಳ್ಳೆಯ ರೀತಿಯಲ್ಲಿ ಕರ್ತವ್ಯ ನಿರ್ವಹಿಸಿದಕ್ಕಾಗಿ ಎಸ್ಐಆರ್ ದಲ್ಲಿ ಇಂಡಿ ತಾಲೂಕು ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದೆ. ಶೇ.80 ರಷ್ಟು ಎಸ್ಐಆರ್ ಪ್ರಗತಿ ಸಾಧಿಸಿದೆ. ಎಸ್ಐಆರ್ ಕಾರ್ಯದಲ್ಲಿ ತೊಡಗಿದ ಎಲ್ಲಾ ಅಧಿಕಾರಿ, ಸಿಬ್ಬಂದಿಗೆ ಅಭಿನಂದಿಸುತ್ತೇನೆ ಎಂದು ಹೇಳಿದರು.ಎಸಿ ಚಿದಾನಂದ ಗುರುಸ್ವಾಮಿ,ತಹಶಿಲ್ದಾರ ನಾಗೇಂದ್ರ ಕೋಳಶೆಟ್ಟಿ, ತಾಪಂ ಇಒ ಮಹಾದೇವಪ್ಪ ಏವೂರ,ಪೌರಾಡಳಿತದ ಯೋಜನಾ ನಿರ್ದೇಶಕ ಸೌದಾಗರ, ಎಇಇ ದಯಾನಂದ ಮಠ,ಎಸ್.ಆರ್.ಮೆಡೆಗಾರ,ಶಿವಾಜಿ ಬನಸೋಡೆ, ಅರಣ್ಯಾಧಿಕಾರಿಗಳಾದ ಮಂಜುನಾಥ ಧೂಳೆ,ಎಸ್.ಜಿ.ಸಂಗಾಲಕ,ರಾಜಶೇಖರ ದೈವಾಡಿ,ಬಿಸಿಎಂ ಇಲಾಖೆಯ ಗದ್ಯಾಳ, ಸಿಪಿಐ ಪ್ರದೀಪ ಭೀಸೆ, ಸುನೀಲ ಪಾಟೀಲ ಸೇರಿದಂತೆ ತಾಲೂಕುಮಟ್ಟದ ಅಧಿಕಾರಿಗಳು, ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.