ಗದಗ: ಖಾಲಿ ಇರುವ ಹೊರಗುತ್ತಿಗೆ ನೌಕರರ ಹುದ್ದೆಗಳನ್ನು ಸರ್ಕಾರ ತಕ್ಷಣ ಭರ್ತಿ ಮಾಡಬೇಕು ಎಂದು ರಾಜ್ಯ ಆರೋಗ್ಯ ಇಲಾಖೆ ವಿವಿಧ ವೃಂದದ ಹೊರಗುತ್ತಿಗೆ ನೌಕರರ ಸಂಘದ ರಾಜ್ಯಾಧ್ಯಕ್ಷ ಅಕ್ಷಯ್ ಡಿ.ಎಂ. ಗೌಡ ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಸುಮಾರು 2.50 ಲಕ್ಷ ಹೊರಗುತ್ತಿಗೆ ನೌಕರರ ಹುದ್ದೆಗಳು ಖಾಲಿ ಇವೆ. ಈಗ ಕೆಲಸ ನಿರ್ವಹಿಸುತ್ತಿರುವ ಹೊರಗುತ್ತಿಗೆ ನೌಕರರಿಗೆ ಇದು ಹೊರೆಯಾಗುತ್ತಿದೆ. ಸರ್ಕಾರ ಇದುವರೆಗೂ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವ ನಿರ್ಣಯ ಕೈಗೊಳ್ಳುತ್ತಿಲ್ಲ. ಸರ್ಕಾರದ ಈ ನಿರ್ಣಯದಿಂದಾಗಿ ಸದ್ಯ ದುಡಿಯುತ್ತಿರುವ ಹೊರಗುತ್ತಿಗೆ ನೌಕರರಿಗೆ ತೀವ್ರ ತೊಂದರೆ ಆಗುತ್ತಿದೆ ಎಂದು ಹೇಳಿದರು.ಆರೋಗ್ಯ ಇಲಾಖೆಯಲ್ಲಿ ಹತ್ತಾರು ವರ್ಷಗಳಿಂದ ಹೊರಗುತ್ತಿಗೆ ಆಧಾರದಲ್ಲಿ ಸುಮಾರು 9 ಸಾವಿರ ನೌಕರರು ಕಾರ್ಯನಿರ್ವಹಿಸುತ್ತಿದ್ದು, ಸರ್ಕಾರ ಒಂದು ಖಾಸಗಿ ಸಂಸ್ಥೆಗೆ ಟೆಂಡರ್ ನೀಡುವ ಮೂಲಕ ನೌಕರರನ್ನು ಶೋಷಿಸುತ್ತಿದೆ. ಗದಗ ಜಿಲ್ಲೆಯಲ್ಲಿ 142 ಹೊರಗುತ್ತಿಗೆ ನೌಕರರು ಆರೋಗ್ಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದು, ಅವರಿಗೆ ದೊರೆಯಬೇಕಾದ ಮೂಲಭೂತ ಸೌಲಭ್ಯಗಳು ಸಿಗುತ್ತಿಲ್ಲ. ಹೀಗಾಗಿ ಕೂಡಲೇ ಅವರಿಗೆ ಸೌಲಭ್ಯಗಳನ್ನು ಒದಗಿಸಬೇಕು ಎಂದು ಆಗ್ರಹಿಸಿದರು.
ಬಾಗಲಕೋಟೆ ಜಿಲ್ಲೆಯ ಹೊರಗುತ್ತಿಗೆ ನೌಕರರೊಬ್ಬರು ಇತ್ತೀಚೆಗೆ ಮೃತಪಟ್ಟಿದ್ದು, ಅವರ ಅಗಲಿಕೆಯಿಂದ ಅವರ ಮನೆಯ ಜೀವನ ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ. ಮೃತನ ಕುಟುಂಬಕ್ಕೆ ನಮ್ಮ ಸಂಘದಿಂದ ₹36,211 ನೀಡಿ ಸಹಾಯ ಮಾಡಲಾಗಿದೆ. ಸರ್ಕಾರ ಮಾನವೀಯತೆ ಆಧಾರದ ಮೇಲೆ ಮೃತಪಟ್ಟ ನೌಕರರ ಮನೆಯವರಿಗೆ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಕಲ್ಪಿಸಿ, ಅವರ ಕುಟುಂಬಕ್ಕೆ ಆಸರೆ ಆಗಬೇಕು. ಇದರಿಂದ ಆ ಬಡ ನೌಕರನ ಕುಟುಂಬಸ್ಥರ ಹೊಟ್ಟೆ ತುಂಬಿದಂತಾಗುತ್ತದೆ ಎಂದು ಸರ್ಕಾರಕ್ಕೆ ಮನವಿ ಮಾಡಿದರು.ಕೋವಿಡ್‌ನಂತಹ ಸಂಕಷ್ಟದ ಸಂದರ್ಭದಲ್ಲಿ ಹೊರಗುತ್ತಿಗೆ ನೌಕರರು ಪ್ರಾಣದ ಹಂಗು ತೊರೆದು ಕಾರ್ಯನಿರ್ವಹಿಸಿದ್ದಾರೆ. ಆದರೆ, ಇತ್ತೀಚಿಗೆ ಹೊರಗುತ್ತಿಗೆ ಪದ್ಧತಿಯಲ್ಲಿಯೂ ಮೀಸಲಾತಿ ತಂದು ನೌಕರರನ್ನು ಇಕ್ಕಟ್ಟಿಗೆ ಸಿಲುಕಿಸುವ ಪ್ರಯತ್ನವನ್ನು ಸರ್ಕಾರ ಮಾಡುತ್ತಿದೆ. ಮೀಸಲಾತಿ ಜಾರಿಯಾದರೆ ಹೊರಗುತ್ತಿಗೆ ಆಧಾರದಲ್ಲಿ ದುಡಿಯುತ್ತಿರುವ ನೌಕರರ ಕುಟುಂಬಗಳು ಬೀದಿಗೆ ಬರುತ್ತವೆ. ಮೀಸಲಾತಿ ತಂದರೂ ಈಗ ಕೆಲಸ ನಿರ್ವಹಿಸುತ್ತಿರುವ ನೌಕರರ ಕೆಲಸ ಕಿತ್ತುಕೊಳ್ಳಬಾರದು. ಈ ಬಗ್ಗೆ ಜಿಲ್ಲಾಧಿಕಾರಿ, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಡಿಎಚ್‌ಒ ಅವರಿಗೆ ಮನವಿ ನೀಡಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ಗದಗ ಜಿಲ್ಲೆಯಾದ್ಯಂತ 13 ಹೊರಗುತ್ತಿಗೆ ನೌಕರರನ್ನು ಈಗಾಗಲೇ ಕೆಲಸದಿಂದ ವಜಾಗೊಳಿಸಲಾಗಿದೆ. ಆದರೆ, ಅವರನ್ನು ವಜಾಗೊಳಿಸಲು ನಿಖರ ಕಾರಣ ತಿಳಿಸಿಲ್ಲ. ಹೀಗಾಗಿ ಅವರ ಕುಟುಂಬಗಳು ಈಗ ಬೀದಿಗೆ ಬಂದಿದ್ದು, ಕೂಡಲೇ ಅವರನ್ನು ಮರಳಿ ಕೆಲಸಕ್ಕೆ ಹಾಜರುಪಡಿಸಬೇಕು. ಅನುದಾನದ ನೆಪವೊಡ್ಡಿ ವಜಾಗೊಳಿಸುವುದು ಸರಿಯಾದ ಕ್ರಮವಲ್ಲ. ಈ ಬಗ್ಗೆ ಡಿಎಚ್‌ಒ ಹಾಗೂ ಜಿಲ್ಲಾಧಿಕಾರಿ ಗಮನಕ್ಕೆ ತಂದು ಆನಂತರ ಟೆಂಡರ್ ಹಿಡಿದ ಏಜೆನ್ಸಿ ಅವರಿಗೂ ಮನವಿ ಮಾಡಲಾಗುವುದು ಎಂದು ತಿಳಿಸಿದರು.ಈ ವೇಳೆ ಸಂಘದ ಪದಾಧಿಕಾರಿಗಳು ಇದ್ದರು.