೫೬ ಸಾವಿರ ಹುದ್ದೆಗಳ ಭರ್ತಿ ಐತಿಹಾಸಿಕ ನಿರ್ಧಾರ: ಸಚಿವ ಮಧು ಬಂಗಾರಪ್ಪ

KannadaprabhaNewsNetwork |  
Published : Mar 04, 2026, 01:30 AM IST
ಸಚಿವ ಮಧೂ ಬಂಗಾರಪ್ಪ ಭೇಟಿ | Kannada Prabha

ಸಾರಾಂಶ

ರಾಜ್ಯದಲ್ಲಿ ೫೬ ಸಾವಿರ ಹುದ್ದೆಯನ್ನು ಭರ್ತಿ ಮಾಡುತ್ತಿರುವುದು ಐತಿಹಾಸಿಕ ನಿರ್ಧಾರ. ದೇಶದ ಯಾವ ರಾಜ್ಯದಲ್ಲೂ ಇಷ್ಟು ದೊಡ್ಡ ಪ್ರಮಾಣದ ನೇಮಕಾತಿ ನಡೆದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.

ಕನ್ನಡಪ್ರಭ ವಾರ್ತೆ ಸಾಗರ

ರಾಜ್ಯದಲ್ಲಿ ೫೬ ಸಾವಿರ ಹುದ್ದೆಯನ್ನು ಭರ್ತಿ ಮಾಡುತ್ತಿರುವುದು ಐತಿಹಾಸಿಕ ನಿರ್ಧಾರ. ದೇಶದ ಯಾವ ರಾಜ್ಯದಲ್ಲೂ ಇಷ್ಟು ದೊಡ್ಡ ಪ್ರಮಾಣದ ನೇಮಕಾತಿ ನಡೆದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.

ಪಟ್ಟಣದ ಜೋಸೆಫ್ ನಗರದಲ್ಲಿರುವ ಮಾಜಿ ಸಚಿವ ಕಾಗೋಡು ತಿಮ್ಮಪ್ಪನವರ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಪತ್ರಕರ್ತರ ಜೊತೆ ಮಾತನಾಡಿದ ಅವರು, ಮೀಸಲಾತಿ ನಿಗಧಿಪಡಿಸದೆ ನೇಮಕಾತಿ ಮಾಡಿಕೊಂಡರೆ ಕೆಲವು ವರ್ಗಗಳಿಗೆ ಅನ್ಯಾಯವಾಗುತ್ತದೆ ಎಂದು ಹೇಳಿದರು.

೫೬ಸಾವಿರ ಜನರನ್ನು ಏಕಕಾಲಕ್ಕೆ ಭರ್ತಿ ಮಾಡುತ್ತಿರುವುದು ಒಂದು ಇತಿಹಾಸ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೂರು ವರ್ಷದಲ್ಲಿ ಅಷ್ಟು ಜನ ನಿವೃತ್ತಿಯೇ ಆಗಿಲ್ಲ. ಓದಿರುವ ಮಕ್ಕಳಿಗೆ ಉದ್ಯೋಗ ಕೊಡುವುದು ನಮ್ಮ ಜವಾಬ್ದಾರಿ. ಮುಂದೆಯೂ ಇನ್ನೊಂದು ಹಂತದಲ್ಲಿ ಹುದ್ದೆಗಳನ್ನು ಭರ್ತಿ ಮಾಡುತ್ತೇವೆ ಎಂದು ಹೇಳಿದರು.

ರೈತರನ್ನು ಒಕ್ಕಲೆಬ್ಬಿಸಲ್ಲ: ಶರಾವತಿ ಮುಳುಗಡೆ ಸಂತ್ರಸ್ತರ ಹೆಸರಿನಲ್ಲಿ ಹೋರಾಟ ಮಾಡುತ್ತಿರುವವರ ಕೈಯಲ್ಲಿಯೇ ಹಿಂದೆ ಕೇಂದ್ರ ಮತ್ತು ರಾಜ್ಯದ ಅಧಿಕಾರ ಇತ್ತು. ಅರ್ಜಿಗಳನ್ನು ವಜಾ ಮಾಡಿ ಈಗ ಹೋರಾಟ ಎನ್ನುತ್ತಿದ್ದಾರೆ. ಶರಾವತಿ ಮುಳುಗಡೆ ಸಂತ್ರಸ್ತರ ಪರ ನಾವು ಹೋರಾಟ ಮಾಡುತ್ತೇವೆ. ಅಂತಿಮವಾಗಿ ಕಾನೂನು ಏನು ಹೇಳುತ್ತದೆಯೋ ಅದನ್ನೆ ಮಾಡುವುದು ಅನಿವಾರ್ಯ. ಅಧಿಕಾರಕ್ಕೆ ಬರುವುದಕ್ಕಿಂತ ಮೊದಲು ನಾವು ಕಾಗೋಡು ತಿಮ್ಮಪ್ಪನವರ ಎದುರು ಶರಾವತಿ ಮುಳುಗಡೆ ಸಂತ್ರಸ್ತರಿಗೆ ಭೂಹಕ್ಕು ಕೊಡುತ್ತೇವೆ ಎಂದು ಮಾತು ಕೊಟ್ಟಿದ್ದೇವೆ. ಅದನ್ನು ಖಂಡಿತಾ ಈಡೇರಿಸುತ್ತೇವೆ. ಈಗಾಗಲೆ ನ್ಯಾಯಾಲಯ ಉತ್ತಮವಾಗಿ ಸ್ಪಂದಿಸುತ್ತಿದೆ, ಕೇಂದ್ರ ಸರ್ಕಾರ ಸಕಾರಾತ್ಮಕವಾಗಿದೆ. ಶರಾವತಿ, ಚಕ್ರ, ವರಾಹಿ ಎಲ್ಲರಿಗೂ ನ್ಯಾಯ ಸಿಗುತ್ತದೆ. ನ್ಯಾಯಾಲಯ ಆದೇಶ ಹೊರತುಪಡಿಸಿ ಇತರೆ ಸಂದರ್ಭದಲ್ಲಿ ರೈತರನ್ನು ಒಕ್ಕಲೆಬ್ಬಿಸಲು ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಬಜೆಟ್‌ನಲ್ಲಿ ಜಿಲ್ಲೆಗೆ ಬೇರೆಬೇರೆ ಯೋಜನೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಬಜೆಟ್ ಹೊರತುಪಡಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಏಪ್ರಿಲ್ ತಿಂಗಳಿನಲ್ಲಿ ಕರ್ನಾಟಕ ಪಬ್ಲಿಕ್ ಶಾಲೆಗಳ ರಾಜ್ಯಮಟ್ಟದ ಕಾರ್ಯಕ್ರಮ ಉದ್ಘಾಟನೆಗೆ ಶಿವಮೊಗ್ಗಕ್ಕೆ ಆಗಮಿಸುತ್ತಾರೆ. ಆಗ ಜಿಲ್ಲೆಗೆ ಬೇಕಾದ ಒಂದಷ್ಟು ಯೋಜನೆಯನ್ನು ಅವರೇ ಘೋಷಣೆ ಮಾಡುತ್ತಾರೆ. ಒಂದು ಲಕ್ಷ ಜನರಿಗೆ ಹಕ್ಕುಪತ್ರ ನೀಡಿದ ವಿನೂತನ ಕಾರ್ಯಕ್ರಮ ನಮ್ಮ ಸರ್ಕಾರ ಮಾಡಿದೆ. ನಮ್ಮ ಕ್ಷೇತ್ರದಲ್ಲಿ ಇನ್ನು ಒಂದೆರಡು ತಿಂಗಳಿನಲ್ಲಿ ಸುಮಾರು ೫ಸಾವಿರ ಜನರಿಗೆ ಹಕ್ಕುಪತ್ರ ಕೊಡುವ ಕಾರ್ಯಕ್ರಮ ಮಾಡಲಾಗುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ದೀಪಾ ಕಾಗೋಡು, ಅನಿತಾ ಕುಮಾರಿ, ಕಲಸೆ ಚಂದ್ರಪ್ಪ, ಗಿರೀಶ್ ಕೋವಿ, ಲೋಕೇಶ್ ಗಾಳಿಪುರ, ತಾರಾಮೂರ್ತಿ, ಮಹಾಬಲೇಶ್ವರ ಕುಗ್ವೆ, ಡಿ.ದಿನೇಶ್, ನಾರಾಯಣ ಅರಮನೆಕೇರಿ ಇನ್ನಿತರರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಚಂದ್ರಗ್ರಹಣ ನೆರಳು ಬೆಳಕಿನ ಆಟ ಆತಂಕ ಬೇಡ
ಗ್ರಹಣಕ್ಕೂ ಮುನ್ನ ತೂಬಗೆರೆಯಲ್ಲಿ ರಥೋತ್ಸವ ಸಂಭ್ರಮ