ಮಳೆಯ ಅಭಾವದಿಂದ ಬರಗಾಲದ ವಾತಾವರಣ ಸೃಷ್ಟಿಯಾಗಿದ್ದು, ನೀರಿನ ಕೊರತೆಯಿಂದ ಕೃಷಿ ಚಟುವಟಿಕೆ ನಿಂತು ಹೋಗಿವೆ. ಇದರಿಂದ ಮುಂದೇನು ಮಾಡುವುದು ಎಂಬ ಆತಂಕ ರೈತರಲ್ಲಿ ಮೂಡಿದೆ.
ಏತ ನೀರಾವರಿ ಯೋಜನೆಗೆ ಚಾಲನೆ । ಬನವಾಸಿ ಪೂರ್ವಭಾಗದ 28 ಕೆರೆಗಳಿಗೆ ನೀರು
ಶಂಕರ ಜಾವೂರ
ಕನ್ನಡಪ್ರಭ ವಾರ್ತೆ ಶಿರಸಿ
ಮಳೆಯ ಅಭಾವದಿಂದ ಬರಗಾಲದ ವಾತಾವರಣ ಸೃಷ್ಟಿಯಾಗಿದ್ದು, ನೀರಿನ ಕೊರತೆಯಿಂದ ಕೃಷಿ ಚಟುವಟಿಕೆ ನಿಂತು ಹೋಗಿವೆ. ಇದರಿಂದ ಮುಂದೇನು ಮಾಡುವುದು ಎಂಬ ಆತಂಕ ರೈತರಲ್ಲಿ ಮೂಡಿದೆ. ಈ ಹಿನ್ನೆಲೆ ತಾಲೂಕಿನ ಬನವಾಸಿ ವ್ಯಾಪ್ತಿಯ ರೈತರ ಹಿತ ಕಾಪಾಡಲು ವಿದ್ಯುತ್ ಸಮಸ್ಯೆ ನಡುವೆಯೇ ವರದಾ ನದಿಯಲ್ಲಿ ಲಭ್ಯವಿರುವ ಅಲ್ಪಪ್ರಮಾಣದ ನೀರನ್ನೇ ಬಳಸಿಕೊಂಡು ಬನವಾಸಿ ಪೂರ್ವಭಾಗದ 28 ಕೆರೆಗಳಿಗೆ ನೀರು ತುಂಬಿಸುವ ಕಾರ್ಯ ಭರದಿಂದ ಸಾಗಿದೆ.
ಈ ಮಹತ್ವಾಕಾಂಕ್ಷೆಯ ಯೋಜನೆಯು ಶಾಸಕ ಶಿವರಾಮ ಹೆಬ್ಬಾರ ಅವರ ದೂರದೃಷ್ಟಿಯ ಫಲವಾಗಿದೆ. ಅವರ ಸೂಚನೆ ಮತ್ತು ಮಾರ್ಗದರ್ಶನದಂತೆ ವರದಾ ನದಿಯಿಂದ ಕೆರೆಗಳಿಗೆ ನೀರು ಹರಿಸುವ ಕಾರ್ಯ ಭರದಿಂದ ನಡೆಯುತ್ತಿದ್ದು, ರೈತರಲ್ಲಿ ಹೊಸ ಆಶಾಭಾವನೆ ಮೂಡಿಸಿದೆ. ಕೆರೆಗಳು ತುಂಬುವುದರಿಂದ ಅಂತರ್ಜಲ ಮಟ್ಟ ಹೆಚ್ಚುವುದರ ಜೊತೆಗೆ ಕೃಷಿ ಚಟುವಟಿಕೆಗಳಿಗೆ ಜೀವ ಬಂದಂತಾಗಿದೆ.
ಬರಗಾಲದ ಸಂಕಷ್ಟದ ಸಮಯದಲ್ಲಿ ರೈತರ ಕಷ್ಟವನ್ನು ಅರಿತು ಶಾಸಕರು ತ್ವರಿತ ಕ್ರಮ ಕೈಗೊಂಡಿದ್ದಾರೆ. ಕೆರೆಗಳಿಗೆ ಜೀವಜಲ ಹರಿಸುವ ಮೂಲಕ ಸಾವಿರಾರು ರೈತರ ಬದುಕಿಗೆ ಆಶಾಕಿರಣವಾಗಿದ್ದಾರೆ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ.
ಈ ಯೋಜನೆಯಿಂದ ಕೆರೆಗಳ ಪುನರುಜ್ಜೀವನವಾಗುವುದರ ಜೊತೆಗೆ ರೈತರ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಲಿದ್ದು, ಗ್ರಾಮೀಣ ಪ್ರದೇಶದಲ್ಲಿ ನೀರಿನ ಸಂರಕ್ಷಣೆ ಹಾಗೂ ಸಮರ್ಪಕ ಬಳಕೆಗೆ ಇದು ಉತ್ತಮ ಮಾದರಿಯಾಗಿದೆ. ರೈತರ ಬದುಕು ಹಸನಾಗಲಿ, ಕೃಷಿ ಸಮೃದ್ಧಿಯಾಗಲಿ ಎಂಬ ಉದ್ದೇಶದೊಂದಿಗೆ ಕೈಗೊಳ್ಳಲಾಗಿರುವ ಈ ಕಾರ್ಯಕ್ಕೆ ಸಾರ್ವಜನಿಕರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.ಏತ ನೀರಾವರಿ ಯೋಜನೆ ಪ್ರಾರಂವಾಗಿ 3 ವರ್ಷವಾಗಿದೆ. ಈಗ ವಿದ್ಯುತ್ ಸಮಸ್ಯೆಯಿದ್ದರೂ ರೈತರ ಹಿತದೃಷ್ಟಿಯಿಂದ ವರದಾ ನದಿಯಿಂದ ಏತ ನೀರಾವರಿ ಮೂಲಕ ನಾಲ್ಕು ಪಂಪ್‌ಗಳ ಪೈಕಿ ಒಂದು ಪಂಪ್‌ನಿಂದ ಈಗಾಗಲೇ ನೀರು ಬಿಡಲಾಗುತ್ತಿದೆ. 15 ದಿನದೊಳಗಾಗಿ ಎಲ್ಲಾ ಏತ ನೀರಾವರಿ ಪಂಪ್‌ಗಳ ಮೂಲಕ ಬನವಾಸಿ ವ್ಯಾಪ್ತಿಯ 28 ಕೆರೆಗಳನ್ನು ತುಂಬಿಸಿ ರೈತರಿಗೆ ಅನೂಕೂಲ ಕಲ್ಪಿಸಲಾಗುತ್ತದೆ ಎನ್ನುತ್ತಾರೆ ಶಾಸಕ ಶಿವರಾಮ ಹೆಬ್ಬಾರ.ಈ ಹಿಂದೆ ರಾಜ್ಯ ಸರಕಾರಕ್ಕೆ ಮತ್ತು ಶಾಸಕ ಶಿವರಾಮ ಹೆಬ್ಬಾರರಿಗೆ ಬನವಾಸಿ ತಾಲೂಕು ಹೋರಾಟ ಸಮಿತಿಯಿಂದ ಏತ ನೀರಾವರಿ ಯೋಜನೆ ಮೂಲಕ ವರದಾ ನದಿಯ ನೀರನ್ನು ಬನವಾಸಿ ಭಾಗದ ಕೆರೆಗಳಿಗೆ ಬಿಡುವಂತೆ ಮನವಿ ಮಾಡಿತ್ತು. ಈಗ ನಮ್ಮ ಮನವಿಗೆ ಸ್ಪಂದಿಸಿ ವರದಾ ನದಿಯಿಂದ ನೀರನ್ನು ಕೆರೆಗಳಿಗೆ ಬಿಡುತ್ತಿರುವುದು ಅತ್ಯಂತ ಸಂತಸ ತಂದಿದೆ ಎಂದು ಬನವಾಸಿ ತಾಲೂಕು ಹೋರಾಟ ಸಮಿತಿ ಅಧ್ಯಕ್ಷ ಉದಯಕುಮಾರ್ ಕಾನಳ್ಳಿ ತಿಳಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.