ಧರ್ಮಾ ಜಲಾಶಯ ಭರ್ತಿ: ರೈತರ ಮೊಗದಲ್ಲಿ ಮಂದಹಾಸ

KannadaprabhaNewsNetwork |  
Published : Aug 06, 2026, 02:30 AM IST
ಮುಂಡಗೋಡ: ತಾಲೂಕಿನ ಮಳಗಿ ಧರ್ಮಾ ಜಲಾಶಯವೀಗ ಬರ್ತಿಯಾಗಿ ಕೋಡಿ ಹರಿಯುತ್ತಿದ್ದು, ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ. | Kannada Prabha

ಸಾರಾಂಶ

ಪ್ರಸಕ್ತ ಸಾಲಿನಲ್ಲಿ ಮಳೆಯ ಕೊರತೆಯ ನಡುವೆಯೂ ಈಗ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆ ಸುಮಾರು ೩೦ ಸಾವಿರ ಎಕರೆ ಕೃಷಿ ಭೂಪ್ರದೇಶಕ್ಕೆ ನೀರುಣಿಸುವ, ಹಾನಗಲ್ ತಾಲೂಕಿನ ರೈತರ ಜೀವನಾಡಿಯಾಗಿರುವ ತಾಲೂಕಿನ ಮಳಗಿ ಧರ್ಮಾ ಜಲಾಶಯವೀಗ ಭರ್ತಿಯಾಗಿ ಕೋಡಿ ಹರಿಯುತ್ತಿದೆ.

ಪ್ರಸಕ್ತ ಸಾಲಿನ ಮಳೆಗಾಲದಲ್ಲಿ ಸಂಪೂರ್ಣ ಭರ್ತಿಯಾದ ತಾಲೂಕಿನ ಮೊದಲ ಜಲಾಶಯಸಂತೋಷ ದೈವಜ್ಞ

ಕನ್ನಡಪ್ರಭ ವಾರ್ತೆ ಮುಂಡಗೋಡ

ಪ್ರಸಕ್ತ ಸಾಲಿನಲ್ಲಿ ಮಳೆಯ ಕೊರತೆಯ ನಡುವೆಯೂ ಈಗ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆ ಸುಮಾರು ೩೦ ಸಾವಿರ ಎಕರೆ ಕೃಷಿ ಭೂಪ್ರದೇಶಕ್ಕೆ ನೀರುಣಿಸುವ, ಹಾನಗಲ್ ತಾಲೂಕಿನ ರೈತರ ಜೀವನಾಡಿಯಾಗಿರುವ ತಾಲೂಕಿನ ಮಳಗಿ ಧರ್ಮಾ ಜಲಾಶಯವೀಗ ಭರ್ತಿಯಾಗಿ ಕೋಡಿ ಹರಿಯುತ್ತಿದ್ದು, ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ. ಪ್ರಸಕ್ತ ಸಾಲಿನ ಮಳೆಗಾಲದಲ್ಲಿ ಸಂಪೂರ್ಣ ಭರ್ತಿಯಾದ ತಾಲೂಕಿನ ಮೊದಲ ಜಲಾಶಯ ಇದಾಗಿದೆ.

ಯಮಗಳ್ಳಿ, ಕ್ಯಾದಗಿಕೊಪ್ಪ ಗ್ರಾಮದ ನೂರಾರು ಎಕರೆ ಭೂಪ್ರದೇಶ ಮುಳುಗಡೆಗೊಳಿಸುವ ಮೂಲಕ ೧೯೬೫ ರಲ್ಲಿ ಅಂದಿನ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪ ಅವರ ಅಮೃತ ಹಸ್ತದಿಂದ ಉದ್ಘಾಟನೆಗೊಂಡಿರುವ ಸುಮಾರು ೧೬೦೦ ಎಕರೆ ಪ್ರದೇಶ ವಿಸ್ತೀರ್ಣ, ೨೯ ಅಡಿ ಆಳ (ಅಂದಾಜು ೮೫೦೦ ಕ್ಯೂಸೆಕ್ಸ್) ನೀರು ಸಂಗ್ರಹ ಇರುವ ಈ ಜಲಾಶಯ ನಿರ್ಮಾಣಕ್ಕಾಗಿ ಸುತ್ತಮುತ್ತಲಿನ ನೂರಾರು ರೈತರು ತಮ್ಮ ಭೂಮಿ ಕಳೆದುಕೊಂಡಿದ್ದಾರೆ. ತಾಲೂಕಿನ ಸುತ್ತಮುತ್ತಲ ಗ್ರಾಮಗಳಿಗೆ ಕುಡಿಯುವ ನೀರು ಸರಬರಾಜು ಮಾಡಲಾಗುತ್ತದೆ ಎಂಬುವುದನ್ನು ಬಿಟ್ಟರೆ ಸ್ಥಳೀಯರಿಗೆ ಬೇರೆ ಯಾವುದೇ ರೀತಿ ಅನುಕೂಲವಿಲ್ಲದಂತಾಗಿದೆ.

ಹಾನಗಲ್ ತಾಲೂಕಿನ ರೈತರಲ್ಲಿ ಹರ್ಷ: ಜಲಾಶಯ ಮುಂಡಗೋಡ ತಾಲೂಕಿನಲ್ಲಿದ್ದರೂ ಇದರ ಸಂಪೂರ್ಣ ಉಪಯೋಗ ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿಗೆ ಆಗುತ್ತಿದೆ. ಹಾನಗಲ್ ತಾಲೂಕಿನ ೯೬ ಕೆರೆಗಳು ಈ ಡ್ಯಾಂ ವ್ಯಾಪ್ತಿಗೆ ಬರುತ್ತವೆ. ಅಲ್ಲದೇ ಹಾನಗಲ್ ತಾಲೂಕಿನ ಸುಮಾರು ೩೦ ಸಾವಿರ ಎಕರೆ ಭೂಪ್ರದೇಶಕ್ಕೆ ಈ ಜಲಾಶಯದಿಂದ ನೀರು ಹರಿಸಲಾಗುತ್ತದೆ. ಆದರೆ ಜಲಾಶಯಕ್ಕಾಗಿ ತಮ್ಮ ಭೂಮಿಯನ್ನೇ ಕಳೆದುಕೊಂಡ ರೈತರ ಸುತ್ತಮುತ್ತವಿರುವ ಕೇವಲ ೧೮೦ ಎಕರೆ ಭೂಪ್ರದೇಶಕ್ಕೆ ಸಮರ್ಪಕವಾಗಿ ನೀರು ಹರಿಯದಿರುವುದು ವಿಪರ್ಯಾಸವೇ ಸರಿ. ಸ್ಥಳೀಯ ರೈತರಿಗೆ ಸಂಪೂರ್ಣ ಅನ್ಯಾಯವಾಗುತ್ತಿರುವುದಂತೂ ಸುಳ್ಳಲ್ಲ. ತಾಲೂಕಿನ ಜನತೆಗೆ ಧರ್ಮಾ ಜಲಾಶಯ ಹಿತ್ತಲ ಗಿಡ ಮದ್ದಲ್ಲ ಎಂಬಂತಹ ಭಾವನೆ ಮೂಡಿದೆ.

ಅಧಿಕಾರಿಗಳ ನಿರ್ಲಕ್ಷ್ಯ:

ಸುತ್ತಮುತ್ತ ಎಲ್ಲಿಯೂ ಇಲ್ಲದಂತಹ ಜಲಾಶಯ ಇದಾಗಿದ್ದು, ಜಲಾಶಯದ ಸುತ್ತ ರಮಣೀಯ ವಾತಾವರಣದಿಂದ ಕೂಡಿದೆ. ಪ್ರವಾಸಿ ತಾಣ ನಿರ್ಮಾಣ ಮಾಡಲು ಉತ್ತಮ ಅವಕಾಶವಿದ್ದರೂ ಕೂಡ ಇಂದಿಗೂ ಯಾವುದೇ ರೀತಿ ಪ್ರಯತ್ನಗಳನ್ನು ಮಾಡದ ಅಧಿಕಾರಿಗಳು ನೀರು ಬಿಡುವುದು ಬಂದ್ ಮಾಡುವುದೊಂದು ಬಿಟ್ಟರೆ ಈ ಜಲಾಶಯದ ಬಗ್ಗೆ ಕಿಂಚಿತ್ತು ಕಾಳಜಿ ತೋರಿಸುವುದಿಲ್ಲ ಎಂಬುವುದು ರೈತರ ಅಂಬೋಣ.

ಪ್ರವಾಸಿ ತಾಣ ನಿರ್ಮಾಣ ಮಾಡುವ ಉದ್ದೇಶದಿಂದ ಜಲಾಶಯದ ಸುತ್ತ ಹತ್ತಾರು ಎಕರೆ ಭೂಮಿ ಇತ್ತು. ಆದರೆ ಸದ್ಯ ಇಲ್ಲಿ ಗಮನಿಸುವುದಾದರೆ ಯಾವುದೇ ರೀತಿ ಹೆಚ್ಚುವರಿ ಭೂಮಿ ಕಾಣಿಸುತ್ತಿಲ್ಲ. ಜಲಾಶಯಕ್ಕೆ ಸಂಬಂಧಿಸಿದ ಭೂಮಿಯನ್ನು ಕೂಡ ಕೆಲವರು ಒತ್ತುವರಿ ಮಾಡಿಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಕೂಡ ಭೂಮಿಯನ್ನು ಉಳಿಸಿಕೊಳ್ಳುವಲ್ಲಿ ಬೇಜವಾಬ್ದಾರಿ ತೋರಿದ್ದಾರೆ ಎಂಬುದು ರೈತರ ಆರೋಪವಾಗಿದೆ.

ನಿತ್ಯ ನೂರಾರು ಸಂಖ್ಯೆಯಲ್ಲಿ ಪ್ರವಾಸಿಗರು ಜಲಾಶಯಕ್ಕೆ ಬರುತ್ತಾರೆ. ಆದರೆ ಪ್ರವಾಸಿಗರಿಗೆ ಯಾವುದೇ ಅಗತ್ಯ ವ್ಯವಸ್ಥೆ ಕಲ್ಪಿಸಲಾಗಿಲ್ಲ. ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಪ್ರವಾಸಿಗರ ಹಿತದೃಷ್ಟಿಯಿಂದ ಅಗತ್ಯ ಮೂಲಭೂತ ಸೌಲಭ್ಯ ಒದಗಿಸುವಂತಹ ಕ್ರಮ ಕೈಗೊಳ್ಳಬೇಕೆಂಬುದು ಸಾರ್ವಜನಿಕರ ಆಗ್ರಹವಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಳೆ, ಬೆಳೆ ಪರಿಸ್ಥಿತಿ ಬಗ್ಗೆ ಸರ್ಕಾರಕ್ಕೆ ವರದಿ: ನರೇಂದ್ರಸ್ವಾಮಿ
ರ್‍ಯಾಗಿಂಗ್‌ ನಿಯಂತ್ರಣಕ್ಕೆ ಸರ್ಕಾರ ವಿಫಲ: ಡಾ.ಭರತ್‌ ಶೆಟ್ಟಿ ಟೀಕೆ