ಕಾನೂನು ಸಲಹೆ ಪಡೆದು ಸಾವಿರ ಚಾಲಕ ಹುದ್ದೆಗಳ ಭರ್ತಿ

KannadaprabhaNewsNetwork |  
Published : Jul 19, 2025, 02:00 AM ISTUpdated : Jul 19, 2025, 01:03 PM IST
19ಎಚ್‌ಯುಬಿ22ಸಾರಿಗೆ ಸಂಸ್ಥೆ ನೇಮಕ ಪ್ರಕ್ರಿಯೆಯಲ್ಲಿ ಪರಿಗಣಿಸುವಂತೆ ಒತ್ತಾಯಿಸುತ್ತಿರುವ ಅಭ್ಯರ್ಥಿಗಳ ಪರವಾಗಿ ಹೋರಾಟಗಾರ ಸುಭಾಷಸಿಂಗ್ ಜಮಾದಾರ ನೇತೃತ್ವದಲ್ಲಿ ಅಭ್ಯರ್ಥಿಗಳು ಸಚಿವ ರಾಮಲಿಂಗಾ ರೆಡ್ಡಿ ಅವರಿಗೆ ಮನವಿ ಸಲ್ಲಿಸಿದರು. | Kannada Prabha

ಸಾರಾಂಶ

ನೇಮಕ ಪ್ರಕ್ರಿಯೆಯಲ್ಲಿ ಪರಿಗಣಿಸುವಂತೆ ಒತ್ತಾಯಿಸುತ್ತಿರುವ ಅಭ್ಯರ್ಥಿಗಳ ಪರವಾಗಿ ನಾನಿದ್ದೇನೆ. ಧನಾತ್ಮಕ ಚರ್ಚೆ ನಡೆಯುತ್ತಿದೆ. ಆದರೂ ವಿವಿಧ ಆಯಾಮಗಳಲ್ಲಿ ಕಾನೂನು ಪರಿಶೀಲಿಸಬೇಕಾಗುತ್ತದೆ.

ಹುಬ್ಬಳ್ಳಿ: ಕಾನೂನು ಅಭಿಪ್ರಾಯ ಹಾಗೂ ಸಚಿವ ಎಚ್‌.ಕೆ.ಪಾಟೀಲ ಅವರೊಂದಿಗೆ ಚರ್ಚಿಸಿ ವಾಯವ್ಯ ಸಾರಿಗೆ ಸಂಸ್ಥೆಯಲ್ಲಿ ಒಂದು ಸಾವಿರ ಚಾಲಕರ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುವುದು ಎಂದು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಹೇಳಿದರು.

ಇಲ್ಲಿನ ಪ್ರಾದೇಶಿಕ ಸಾರಿಗೆ ಕಚೇರಿ ಹಾಗೂ ವಾಯವ್ಯ ಸಾರಿಗೆ ಸಂಸ್ಥೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

ನೇಮಕ ಪ್ರಕ್ರಿಯೆಯಲ್ಲಿ ಪರಿಗಣಿಸುವಂತೆ ಒತ್ತಾಯಿಸುತ್ತಿರುವ ಅಭ್ಯರ್ಥಿಗಳ ಪರವಾಗಿ ನಾನಿದ್ದೇನೆ. ಧನಾತ್ಮಕ ಚರ್ಚೆ ನಡೆಯುತ್ತಿದೆ. ಆದರೂ ವಿವಿಧ ಆಯಾಮಗಳಲ್ಲಿ ಕಾನೂನು ಪರಿಶೀಲಿಸಬೇಕಾಗುತ್ತದೆ. ಈ ಹಿಂದಿನ ನೇಮಕ ಪ್ರಕ್ರಿಯೆಯಲ್ಲಿ ಡ್ರೈವಿಂಗ್ ಟೆಸ್ಟ್‌ನಲ್ಲಿ ಪಾಲ್ಗೊಂಡವರು ಮತ್ತು ವಯೋಮಿತಿ ಮೀರುತ್ತಿರುವವರನ್ನು ಪರಿಗಣಿಸಲು ಅವಕಾಶವಿದೆಯೇ ಎಂಬುದರ ಕುರಿತು ಕಾನೂನು ತಜ್ಞರ ವರದಿ ಪಡೆಯಲಾಗುವುದು ಎಂದು ತಿಳಿಸಿದರು.

ಬಿಜೆಪಿ ಆಡಳಿತದ ಅವಧಿಯಲ್ಲಿ ಸಾರಿಗೆ ಸಂಸ್ಥೆಯಲ್ಲಿ ಒಂದೂ ನೇಮಕಾತಿ ನಡೆಯಲಿಲ್ಲ. ಒಂದೇ ಒಂದು ಬಸ್ ಖರೀದಿಸಿಲ್ಲ. ನಾವು ಈ ಹಿಂದೆ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ನೇಮಕಾತಿ ಆಗಿತ್ತು. ಇದೀಗ ಮತ್ತೆ ನಮ್ಮದೇ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಸಾರಿಗೆ ಸಂಸ್ಥೆಯಲ್ಲಿ ನೇಮಕಾತಿ ಪ್ರಕ್ರಿಯೆ ಆರಂಭವಾಗಿದೆ. ಹಿಂದಿನ ಸರ್ಕಾರ ಸಾರಿಗೆ ಸಂಸ್ಥೆಗಾಗಿ ₹ 4 ಸಾವಿರ ಕೋಟಿ ಸಾಲ ಮಾಡಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಈಗಾಗಲೇ ₹2 ಸಾವಿರ ಕೋಟಿ ಸಾಲ ತೀರಿಸಿದ್ದಾರೆ ಎಂದರು.

ನೇಮಕಾತಿ ಪ್ರಕ್ರಿಯೆಯಲ್ಲಿ ಮೈಸೂರು ಕರ್ನಾಟಕ, ಉತ್ತರ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕ ಎಂದು ತಾರತಮ್ಯ ಮಾಡಿಲ್ಲ. ಎಲ್ಲೆಡೆಯೂ ಒಂದೇ ರೀತಿಯಲ್ಲಿ ನೇಮಕಾತಿ ಮಾಡಿಕೊಳ್ಳಲಾಗಿದೆ.

ಒಟ್ಟಾರೆ ಸಾರಿಗೆ ಸಂಸ್ಥೆಯಲ್ಲಿ ಇದುವರೆಗೆ 14 ಸಾವಿರ ಜನ ನಿವೃತ್ತರಾಗಿದ್ದಾರೆ. ಅದರಲ್ಲಿ ನಾನು ಸಾರಿಗೆ ಸಚಿವನಾದ ಮೇಲೆ ಎಂಟು ಸಾವಿರ ಸಾಮಾನ್ಯ ನೇಮಕಾತಿ ಮಾಡಿದರೆ, ಅನುಕಂಪದ ಆಧಾರದ ಮೇಲೆ ಒಂದು ಸಾವಿರ ಜನರನ್ನು ನೇಮಕ ಮಾಡಿಕೊಳ್ಳಲಾಗಿದೆ. ಇನ್ನು ಮೆಕ್ಯಾನಿಕಲ್‌ ಸೇರಿ ತಾಂತ್ರಿಕ ಸಿಬ್ಬಂದಿಯ ನೇಮಕದ ಕುರಿತಂತೆಯೂ ಕ್ರಮವಹಿಸುವುದಾಗಿ ತಿಳಿಸಿದರು.

ವಾಯವ್ಯ ಸಾರಿಗೆ ಸಂಸ್ಥೆಯ ಉಪಾಧ್ಯಕ್ಷ ಪೀರಸಾಬ್‌ ಕೌತಾಳ, ಎಂಡಿ ಪ್ರಿಯಾಂಗ್ ಹಾಗೂ ಸಂಸ್ಥೆಯ ಹಿರಿಯ ಅಧಿಕಾರಿಗಳು ಹಾಜರಿದ್ದರು.

ಮುಖಂಡರಿಂದ ಮನವಿ ಸಲ್ಲಿಕೆ: ಬೆಂಗಳೂರಿನಲ್ಲಿ ಸಾರಿಗೆ ಸಚಿವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದ ಈ ಹಿಂದೆ ಪರೀಕ್ಷೆ ಬರೆದಿದ್ದ ಅಭ್ಯರ್ಥಿಗಳು ಸಾರಿಗೆ ಸಂಸ್ಥೆ ಕೇಂದ್ರ ಕಚೇರಿ ಮುಂದೆ ನೆರೆದಿದ್ದರು. ಸಚಿವ ರಾಮಲಿಂಗಾರೆಡ್ಡಿ ಅವರು ಅಲ್ಲಿಗೆ ಆಗಮಿಸುತ್ತಿದ್ದಂತೆ ಘೋಷಣೆ ಕೂಗಿ ತಮ್ಮನ್ನೇ ನೇಮಕ ಮಾಡಿಕೊಳ್ಳುವಂತೆ ಆಗ್ರಹಿಸಿದರು. ಬಳಿಕ ಸಚಿವರು ಹೋರಾಟಗಾರರ ಮುಖಂಡರನ್ನು ಕಚೇರಿಯಲ್ಲಿ ಭೇಟಿಯಾಗಿ ಅವರಿಂದ ಮನವಿ ಸ್ವೀಕರಿಸಿದರು.

PREV
Read more Articles on

Latest Stories

ನಗರದಲ್ಲಿ ಶೀಘ್ರ ಟೋಯಿಂಗ್ ವ್ಯವಸ್ಥೆ ಮರು ಜಾರಿ:ಪರಂ
ದೇಶದಲ್ಲೇ ಫಸ್ಟ್‌ ಟೈಂ ಜನರ ಮನೆ ಬಾಗಿಲಿಗೆ ಪೊಲೀಸ್ : ಪರಂ
ನೀರುಗಾಲುವೆಗಳಲ್ಲಿ ಟೆಕ್‌ ಪಾರ್ಕ್‌ ನಿರ್ಮಾಣದಿಂದ ಪ್ರವಾಹ