ಭಟ್ಕಳ: ಮುರುಡೇಶ್ವರದ ಅಕ್ವಾರೈಡ್ ಸ್ಕೂಬಾ ಡೈವಿಂಗ್ ವತಿಯಿಂದ ಚಿತ್ರನಟ ಡಾಲಿ ಧನಂಜಯ್ ಅವರು ನೇತ್ರಾಣಿ ದ್ವೀಪ ಸಮೀಪದ ಸಮುದ್ರದಲ್ಲಿ ಸ್ಕೂಬಾ ಡೈವಿಂಗ್ ನಡೆಸಿದರು.
ತಾಲೂಕಿನ ಬೇಂಗ್ರೆಯ ಗಾಲ್ಫ್ ಮೈದಾನದಲ್ಲಿ ಜರುಗಿದ ವಿಶ್ವ ಮೀನುಗಾರಿಕೆ ದಿನಾಚರಣೆ ಮತ್ತು ಮತ್ಸ್ಯಮೇಳದ ಸಮಾರೋಪ ಸಮಾರಂಭಕ್ಕ ಚಿತ್ರನಟ ಡಾಲಿ ಧನಂಜಯ್ ಆಗಮಿಸಿದ್ದರು.ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಅವರು, ನೇತ್ರಾಣಿ ಸಮೀಪದ ಸಮುದ್ರದಲ್ಲಿ ಸ್ಕೂಬಾ ಡೈವಿಂಗ್ ನಡೆಸಿದರು. ಸ್ಕೂಬಾ ಡೈವಿಂಗ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಇದೊಂದು ಉತ್ತಮ ಅನುಭವ ಎಂದು ಬಣ್ಣಸಿದ್ದಾರೆ. ನೇತ್ರಾಣಿ ದ್ವೀಪದ ಬಗ್ಗೆಯೂ ಅವರು ಮೆಚ್ಚುಗೆ ವ್ಯಕ್ತಪಡಿಸಿ ಸುತ್ತಲೂ ಸಮುದ್ರ ಹೊಂದಿರುವ ಪ್ರಕೃತಿದತ್ತವಾದ ಸುಂದರ ಸ್ಥಳ ಎಂದು ಹೇಳಿದ್ದಾರೆ.
ವೀರಮಣಿ ಕಾಳಗ ಯಕ್ಷಗಾನ ಪ್ರದರ್ಶನ
ಶಿರಸಿ: ಸಿದ್ದಾಪುರದ ಶ್ರೀ ಅನಂತ ಯಕ್ಷಕಲಾ ಪ್ರತಿಷ್ಠಾನವು ತಾಲೂಕಿನ ಮುಂಡಿಗೇಸರದಲ್ಲಿ ಹಮ್ಮಿಕೊಂಡಿದ್ದ ವೀರಮಣಿ ಕಾಳಗ ಯಕ್ಷಗಾನ ಪ್ರದರ್ಶನವು ಕೊರೆವ ಚಳಿಯನ್ನು ಓಡಿಸಿ ಬೆಚ್ಚಗಿನ ರಾಮಾಶ್ವಮೇಧ, ರಾಮ, ಹರನ ಸುತ್ತಲಿನ ಭಕ್ತ ಕಥಾನಕ ಬಿಚ್ಚಿಕೊಂಡಿತು.ಕೇಶವ ಹೆಗಡೆ ಕೊಳಗಿ, ಸತೀಶ ದಂಟ್ಕಲ್, ನಂದನ್ ದಂಟಕಲ್ ಭಾಗವತರಾಗಿ, ಮದ್ದಳೆಯಲ್ಲಿ ಶಂಕರ ಭಾಗವತ ಯಲ್ಲಾಪುರ, ವಿಘ್ನೇಶ್ವರ ಗೌಡ ಕೆಸರಕೊಪ್ಪ ಚಂಡೆಯಲ್ಲಿ ಹಿಮ್ಮೇಳದಲ್ಲಿ ಭಾಗವಹಿಸಿದ್ದರು.
ಮುಮ್ಮೇಳದಲ್ಲಿ ಅಶೋಕ ಭಟ್ಟ ಸಿದ್ದಾಪುರ, ಸಂಜಯ ಬಿಳಿಯೂರು, ವಿ. ದತ್ತಮೂರ್ತಿ ಭಟ್ಟ ಶಿವಮೊಗ್ಗ, ಮಹಾಬಲೇಶ್ವರ ಇಟಗಿ, ವೆಂಕಟೇಶ ಬೊಗ್ರಿಮಕ್ಕಿ, ಪ್ರವೀಣ ತಟ್ಟಿಸರ, ನವ್ಯಾ ಭಟ್ಟ ಶಿವಮೊಗ್ಗ, ತುಳಸಿ ಹೆಗಡೆ ವಿವಿಧ ಪಾತ್ರದಲ್ಲಿ ಹಾಗೂ ಬಾಲಗೋಪಾಲದಲ್ಲಿ ಎಂ.ವಿ. ಶಮದ್ ಭಾಗವಹಿಸಿದ್ದರು. ಪ್ರಸಾಧನದಲ್ಲಿ ಎಂ.ಆರ್. ನಾಯ್ಕ ಕರ್ಸೆಬೈಲ್ ಸಹಕಾರ ನೀಡಿದರು.ಇದಕ್ಕೂ ಮುನ್ನ ಪ್ರಸಿದ್ಧ ಕಲಾವಿದರಿಂದ ಹಿಮ್ಮೇಳ ವೈಭವ ನಡೆಯಿತು. ಕೇಶವ ಹೆಗಡೆ, ಸತೀಶ ದಂಟ್ಕಲ್, ರವಿ ಮೂರೂರು ಅವರು ಭಾಗವತರಾಗಿ, ಮದ್ದಲೆಯಲ್ಲಿ ಶಂಕರ ಭಾಗವತ್, ಚಂಡೆಯಲ್ಲಿ ವಿಘ್ನೇಶ್ವರ ಗೌಡ ಸಹಕಾರ ನೀಡಿದರು. ಕಾರ್ಯಕ್ರಮಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರ ನೀಡಿತ್ತು.