ಹಾಸನ : ಸಿನಿಮಾ ನಟರು ಖಾಸಗಿ ವ್ಯಕ್ತಿಗಳಾಗಿದ್ದು, ಹೋರಾಟದಲ್ಲಿ ಭಾಗವಹಿಸಬೇಕೊ, ಬೇಡವೋ ಎಂಬ ತೀರ್ಮಾನವನ್ನು ಅವರೇ ಮಾಡಬೇಕು, ಹೋರಾಟದಲ್ಲಿ ಭಾಗವಹಿಸಿಲ್ಲ ಎಂದು ಪ್ರಶ್ನೆ ಮಾಡುವುದು ಸೂಕ್ತವಲ್ಲ ಎಂದು ಡಿ.ಕೆ. ಶಿವಕುಮಾರ್ ಹೇಳಿಕೆಯನ್ನು ಬಿಜೆಪಿ ಸಂಸದ ಯದುವೀರ್ ಒಡೆಯರ್ ಖಂಡಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಚಲನಚಿತ್ರ ನಟರು, ಕಲಾವಿದರು ಖಾಸಗಿ ವ್ಯಕ್ತಿಗಳಾಗಿರುತ್ತಾರೆ. ಹೋರಾಟದಲ್ಲಿ ಪಾಲ್ಗೊಳ್ಳಬೇಕೋ ಬೇಡವೋ ಎಂಬುದನ್ನು ಅವರೇ ತೀರ್ಮಾನ ಮಾಡಬೇಕಾಗುತ್ತದೆ. ಹೋರಾಟದಲ್ಲಿ ಭಾಗವಹಿಸುವುದು ಅವರ ಆಯ್ಕೆ. ಪಕ್ಷದಿಂದ ಆಗಿದ್ದರೆ ಅವರ ಪಕ್ಷದವರೆಲ್ಲರೂ ಸೇರಿ ಹೋರಾಟ ಮಾಡ್ತಾರೆ. ಚಲನಚಿತ್ರದವರು ಯಾವುದೇ ಪಕ್ಷಕ್ಕೆ ಸೇರಿರಲ್ಲ. ಅವರನ್ನು ಭಾಗವಹಿಸಿಲ್ಲ ಎಂದು ಪ್ರಶ್ನೆ ಮಾಡುವುದು ಸೂಕ್ತವಲ್ಲ. ಅಧಿಕಾರದಲ್ಲಿರುವವರು ಸರ್ವಾಧಿಕಾರಿಯಂತೆ ಘೋಷಣೆ ಮಾಡುವುದನ್ನು ಕಡಿಮೆ ಮಾಡಬೇಕು. ಅದು ಅವರ ಅಹಂಕಾರ ತೋರಿಸುತ್ತದೆ ಎಂದರು.
ಸಿಎಂ ಬದಲಾವಣೆ ವಿಚಾರವಾಗಿ ಪ್ರಶ್ನೆಯೊಂದಕ್ಕೆ ಉತ್ತರಿಸಿ, ಆಡಳಿತದಲ್ಲಿ ಇರುವುದು ಕಾಂಗ್ರೆಸ್. ನೀವು ಅವರನ್ನು ಪ್ರಶ್ನೆ ಮಾಡಬೇಕು. ಅವರ ಪಕ್ಷದ ಒಳಗಡೆ ಏನು ನಡೆಯುತ್ತಿದೆಯೋ ಅದರ ಬಗ್ಗೆ ನನಗೆ ಮಾಹಿತಿ ಇಲ್ಲ. ವಿರೋಧ ಪಕ್ಷವಾಗಿ ಅದರಲ್ಲಿ ನಮ್ಮ ಕೆಲಸವಿಲ್ಲ. ಮುಖ್ಯಮಂತ್ರಿ ಕುರ್ಚಿಗಾಗಿ ವಾದ-ಸಂವಾದ ಅವರು ನಡೆಸುತ್ತಿರುವುದು. ಇಂತಹ ಬೆಳವಣಿಗೆಗಳು ಮೇಲ್ಮಟ್ಟದಲ್ಲಿ ನಡೆಯುತ್ತಿವೆ. ಯಾರೇ ಮುಖ್ಯಂತ್ರಿ ಆದರೂ ಒಳ್ಳೆಯ ಆಡಳಿತ ಕೊಡಬೇಕು ಎಂದು ಹೇಳಿದರು.
ಲೋಕಸಭಾ ಕ್ಷೇತ್ರಗಳ ಮರುವಿಂಗಡನೆ ವಿಚಾರವಾಗಿ ಮಾತನಾಡಿ, ಆಡಳಿತ ವೈಫಲ್ಯ ಮುಚ್ಚಿಕೊಳ್ಳಲು ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ. ಕ್ಷೇತ್ರಗಳು ಕಡಿಮೆ ಆಗಲ್ಲ ಅಂತ ಗೃಹ ಸಚಿವರು ಬಹಳ ಸ್ಪಷ್ಟವಾಗಿ ಹೇಳಿದ್ದಾರೆ ಎಂದು ಉತ್ತರಿಸಿದರು.
ಸುದ್ದಿಗೋಷ್ಠಿಯಲ್ಲಿ ಆಲೂರು- ಸಕಲೇಶಪುರ ಕ್ಷೇತ್ರದ ಶಾಸಕ ಸಿಮೆಂಟ್ ಮಂಜು, ಚಾಮರಾಜನಗರ ಮಾಜಿ ಶಾಸಕ ಬಾಲರಾಜು, ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ, ರಾಜ್ಯ ಕಾರ್ಯಾಲಯ ಕಾರ್ಯದರ್ಶಿ ಪ್ರಶಾಂತ್ ಕುಮಾರ್, ಎಸ್.ಟಿ. ಮೋರ್ಚಾ ರಾಜ್ಯ ಕಾರ್ಯದರ್ಶಿ ಬೆಳ್ಳಿ ಗಂಗಾಧರ್, ವಕೀಲ ಅರುಣ್ ಕುಮಾರ್ ಇತರರು ಉಪಸ್ಥಿತರಿದ್ದರು.