ಕನ್ನಡಪ್ರಭ ವಾರ್ತೆ ಮಂಗಳೂರು
ಮಂಗಳೂರಿನ ಶರಧಿ ಪ್ರತಿಷ್ಠಾನ, ದ.ಕ. ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ಸಹಯೋಗದಲ್ಲಿ ಕದ್ರಿ ಪಾರ್ಕ್‌ನಲ್ಲಿ ಎರಡು ದಿನಗಳ ಕಲಾ ಪರ್ಬದಲ್ಲಿ ಚಿತ್ರ, ಶಿಲ್ಪ, ನೃತ್ಯ ಮೇಳ ಪ್ರದರ್ಶನಕ್ಕೆ ವೇದಿಕೆಯಾಯಿತು.ಕರಾವಳಿ ಜಿಲ್ಲೆಗಳ ಕಲಾವಿದರು ತಮ್ಮದೇ ಚಿಂತನೆಯೊಂದಿಗೆ ರಚಿಸಿದ ಚಿತ್ರಗಳು ಗಮನ ಸೆಳೆಯಿತು. ಕಲಾ ಪ್ರಕಾರಗಳೊಂದಿಗೆ ಶಿಲ್ಪಕಲೆ, ಕಸೂತಿಗಳು ಚಿತ್ತಾಕರ್ಷಕವಾಗಿದ್ದು, ಕಲಾಪರ್ಬದಲ್ಲಿ 118 ಮಳಿಗೆಗಳಿದ್ದು, ವಿವಿಧ ಕಲಾಕೃತಿಗಳು ಕಲಾಸಕ್ತರ ಕಣ್ಣಿಗೆ ಹಬ್ಬ ಉಂಟು ಮಾಡಿತ್ತು.
ಆಯಿಲ್ ಪೈಂಟಿಂಗ್, ಪೆನ್ಸಿಲ್ ಆರ್ಚ್, ಅಕ್ರೇಲಿಕ್, ಲೈನ್ ಆರ್ಚ್, ಸಿರಾಮಿಕ್ ಆರ್ಚ್, ಪೊಟ್ರೇಟ್, ನೇಚರ್ ಪೈಂಟಿಂಗ್ ಇತ್ಯಾದಿಗಳು ಗಮನ ಸೆಳೆಯುತ್ತಿವೆ. ಗೃಹಿಣಿಯರು ಮನೆಯಲ್ಲೇ ತಯಾರಿಸಿದ ಆಕರ್ಷಕ ಕೈಮಗ್ಗದ ಅಲಂಕಾರಿಕ ವಸ್ತುಗಳು ಕಲಾಪರ್ಬದಲ್ಲಿ ಕಂಡುಬಂತು. ಕೂಳೂರು ಮೂಲದ ಗೃಹಣಿಯೊಬ್ಬರು ರಚಿಸಿರುವ ಅಲಂಕಾರಿಕೆಗಳು ಗಮನ ಸೆಳೆದಿವೆ. ಅನೇಕ ಮಹಿಳೆಯರು ಮನೆಯಲ್ಲಿ ತಯಾರಿಸಿದ ಕಸೂತಿ ವಸ್ತುಗಳ ಮಳಿಗೆ ಕಲಾಪರ್ಬದಲ್ಲಿ ಇತ್ತು.ಶ್ರೀನಿವಾಸ್ ಕಾಲೇಜಿನ ವಿದ್ಯಾರ್ಥಿಗಳು ಹಳೆ ಪತ್ರಿಕೆಗಳನ್ನು ಬಳಸಿಕೊಂಡು ಪ್ರತಿಕೃತಿ ರಚಿಸಿದ್ದಾರೆ. ಅದರ ಮೂಲಕ ಸಾರ್ವಜನಿಕ ಜಾಗದಲ್ಲಿ ಎಸೆದ ಪ್ಲಾಸ್ಟಿಕ್ ವಸ್ತುಗಳನ್ನು ಪ್ರಾಣಿಗಳು ಸೇವಿಸಿ ಉಂಟಾಗುವ ಅಪಾಯದ ಬಗ್ಗೆ ಜಾಗೃತಿ ಮೂಡಿಸಲಾಗಿದೆ.
ಇದಲ್ಲದೆ ಯಲ್ಲಾಪುರ ಮಂಚಿಕೆರೆಯ ಸಿದ್ದಿ ಬುಡಕಟ್ಟು ಸಮುದಾಯದ ಪನ್ನಿಕ ಸಿದ್ದಿ ನೇತೃತ್ವದಲ್ಲಿ ಸಿದ್ದಿ ಢಮಾಮಿ ನೃತ್ಯ ಪ್ರದರ್ಶನ ಗಮನ ಸೆಳೆಯಿತು. ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ ಏರ್ಪಡಿಸಲಾಗಿತ್ತು. ಎಕ್ಸ್‌ಪರ್ಟ್ ಸಂಸ್ಥೆಯ ಅಂಕುಶ್ ನಾಯಕ್ ಅವರ ತಂಡದಿಂದ ಸಂಗೀತ ಪ್ರದರ್ಶನ, ವಿವಿಧ ಕಲಾ ತಂಡಗಳಿಂದ ನೃತ್ಯ ಪ್ರದರ್ಶನ ನಡೆಯಿತು.ಶನಿವಾರ ಸಮಾರಂಭ ಉದ್ಘಾಟಿಸಿದ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ ಅವರು, ಕಲೆಗೆ ಗತಕಾಲದ ವಿಚಾರ ತಿಳಿಸುವ ವಿಶೇಷ ಶಕ್ತಿ ಇದ್ದು, ಸಂಸ್ಕೃತಿ ಉಳಿವಿಗೆ ಹಿರಿಯರು ನೀಡಿದ ಕೊಡುಗೆ ಸ್ಮರಿಸಲು ಕಲಾ ಪ್ರದರ್ಶನ ವೇದಿಕೆಯಾಗಿದೆ ಎಂದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್. ಪೂಜಾರಿ, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಜಿ.ಪಂ. ಸಿಇಒ ಡಾ. ಆನಂದ್, ಜಿಲ್ಲಾ ಎಸ್ಪಿ ಯತೀಶ್, ಪಾಲಿಕೆ ಸದಸ್ಯೆ ಶಕೀಲಾ ಕಾವ, ಉದ್ಯಮಿ ಲಾಂಚುಲಾಲ್ ಕೆ.ಎಸ್., ಪ್ರಮುಖರಾದ ಕೋಟಿ ಪ್ರಸಾದ್ ಆಳ್ವ, ಬಿ.ಪಿ. ಮೋಹನ್ ಕುಮಾರ್, ಡಿ. ರಮೇಶ್ ನಾಯಕ್, ಪುನೀಕ್ ಶೆಟ್ಟಿ, ದಿನೇಶ್ ಹೊಳ್ಳ, ಮೋಹನ್ ಇದ್ದರು.ಚೇತನ್ ಶೆಟ್ಟಿ ನಿರೂಪಿಸಿದರು.
---------------