- ಡಿಸಿ ಕಚೇರಿ, ಸಹಾಯಕ ಮತದಾರರ ನೋಂದಣಾಧಿಕಾರಿ ಕಚೇರಿ, ಮತಗಟ್ಟೆಯಲ್ಲಿ ಅಂತಿಮ ಪಟ್ಟಿ ಮಾಹಿತಿ ಲಭ್ಯ
- - -
ಕನ್ನಡಪ್ರಭ ವಾರ್ತೆ ದಾವಣಗೆರೆಭಾರತ ಚುನಾವಣಾ ಆಯೋಗದ ನಿರ್ದೇಶನದ ಅನ್ವಯ ವಿಶೇಷ ಪರಿಷ್ಕರಣೆ ನಂತರ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಅಂತಿಮ ಮತದಾರರ ಪಟ್ಟಿಯನ್ನು ಫೆ.14ರಂದು ಜಿಲ್ಲಾಧಿಕಾರಿ ಕಚೇರಿ, ಸಹಾಯಕ ಮತದಾರರ ನೋಂದಣಾಧಿಕಾರಿ ಕಚೇರಿಗಳು ಹಾಗೂ ದಕ್ಷಿಣ ವಿಧಾನಸಭಾ ಕ್ಷೇತ್ರದ ಎಲ್ಲ ಮತಗಟ್ಟೆಗಳಲ್ಲಿ ಪ್ರಕಟಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಹೇಳಿದರು.
ನಗರದ ಜಿಲ್ಲಾಡಳಿತ ಭವನದಲ್ಲಿ ಭಾನುವಾರ ವಿವಿಧ ರಾಜಕೀಯ ಪಕ್ಷಗಳ ಮುಖಂಡರ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕ್ಷೇತ್ರದ ಮತದಾರರ ಪರಿಷ್ಕರಣೆ ಹಾಗೂ ಅಂತಿಮ ಮತದಾರರ ಪಟ್ಟಿ ಪ್ರಕಟಿಸಿದ್ದು, ಡಿಸಿ ಕಚೇರಿ, ಸಹಾಯಕ ಮತದಾರರ ನೋಂದಣಾಧಿಕಾರಿ ಕಚೇರಿ, ದಕ್ಷಿಣ ಕ್ಷೇತ್ರದ ಎಲ್ಲ ಮತಗಟ್ಟೆಗಳಲ್ಲೂ ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗಿದೆ ಎಂದರು.ಮತದಾರರ ಪಟ್ಟಿಯನ್ನು ಅಧಿಕೃತ ವೆಬ್ ಸೈಟ್: ** https://ceo.karnataka.gov.in/en ** ಹಾಗೂ ಪಟ್ಟಿಯನ್ನು ಮತ್ತು ಜಿಲ್ಲಾಧಿಕಾರಿಗಳ ವೆಬ್ ಸೈಟ್‌ಗಳಲ್ಲಿ ಮತದಾರರ ಮಾಹಿತಿಗಾಗಿ ಪ್ರಕಟಿಸಲಾಗಿದೆ. ಸಾರ್ವಜನಿಕರು ತಮ್ಮ ಹೆಸರುಗಳನ್ನು ಸರಿಯಾದ ಮಾಹಿತಿಯೊಂದಿಗೆ ಮತದಾರರ ಪಟ್ಟಿಯಲ್ಲಿ ಸೇರಿಸಲಾಗಿದೆಯೇ ಎಂದು ಪರಿಶೀಲಿಸಕೊಳ್ಳಬಹುದು ಎಂದು ಹೇಳಿದರು.
ಒಟ್ಟು 2,32,564 ಮತದಾರರು:ನಂ.107- ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ, 1,14,165 ಪುರುಷ, 1,18,355 ಮಹಿಳೆಯರು ಹಾಗೂ 44 ತೃತೀಯಲಿಂಗಗಳು ಸೇರಿದಂತೆ ಒಟ್ಟು 2,32,564 ಮತದಾರರಿದ್ದಾರೆ. ಇದರಲ್ಲಿ 2204 ಯುವ ಮತದಾರರು (18-19 ವರ್ಷದವರು), 1 ವಿದೇಶಿ ಮತದಾರರು, 2542 ವಿಕಲಚೇತನ ಮತದಾರರು ಮತ್ತು 85 ವರ್ಷ ಮತ್ತು ಅದಕ್ಕೂ ಮೇಲ್ಪಟ್ಟವರು 2157 ಮತದಾರರಿದ್ದಾರೆ. ಒಟ್ಟು 217 ಮತಗಟ್ಟೆಗಳಿದ್ದು, ಹೊಸದಾಗಿ 67 ಮತಗಟ್ಟೆಗಳನ್ನು ಸೇರ್ಪಡೆಗೊಳಿಸಲಾಗಿದೆ. 24 ಮತಗಟ್ಟೆಗಳನ್ನು ಬದಲಾಯಿಸಿದ್ದು, ಒಟ್ಟು ಈಗ 284 ಮತಗಟ್ಟೆಗಳಿವೆ ಎಂದು ವಿವರಿಸಿದರು.
ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ:ಅರ್ಹ ಮತದಾರರು ಅರ್ಜಿ ಸಲ್ಲಿಸಲು ತಮ್ಮ ಮೊಬೈಲ್ ಫೋನ್‌ನಲ್ಲಿ ಮತದಾರರ ಸಹಾಯವಾಣಿ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಬಹುದು. ** https://voters.eci.gov.in/portal ** ನಲ್ಲೂ ಅರ್ಜಿಗಳನ್ನು ಸಲ್ಲಿಸಬಹುದು. ಅರ್ಜಿಗಳನ್ನು ನಿಗದಿತ ನಮೂನೆಗಳಲ್ಲಿ ವಿಧಾನಸಭಾ ಕ್ಷೇತ್ರದ ಮತದಾರರ ನೋಂದಣಾಧಿಕಾರಿ, ಸಹಾಯಕ ಮತದಾರರ ನೊಂದಣಾಧಿಕಾರಿಗಳಿಗೆ ಸಲ್ಲಿಸಬಹುದು ಎಂದು ಅವರು ತಿಳಿಸಿದರು.
ನಮೂನೆ 8ರಲ್ಲಿ ಅರ್ಜಿ ಸಲ್ಲಿಸಿ:ಕ್ಷೇತ್ರದ ಹೊಸ ಮತದಾರರು ಮತದಾರರ ಪಟ್ಟಿಗೆ ಹೆಸರು ಸೇರಿಸಲು ನಮೂನೆ 6 ಅರ್ಜಿ, ವಿದೇಶಿ ಭಾರತೀಯ ಮತದಾರರು ಮತದಾರರ ಪಟ್ಟಿಯಲ್ಲಿ ಹೆಸರನ್ನು ಸೇರಿಸಲು ನಮೂನೆ 6ಎ ಅರ್ಜಿ, ಅಸ್ತಿತ್ವದಲ್ಲಿರುವ ಮತದಾರರ ಪಟ್ಟಿಯಲ್ಲಿ ಸೇರ್ಪಡೆ/ ಹೆಸರು ತೆಗೆದುಹಾಕಲು ಆಕ್ಷೇಪಣೆ ಸಲ್ಲಿಸಲು ನಮೂನೆ 7 ನಮೂನೆ, ನಿವಾಸ ಬದಲಾವಣೆ/ ಅಸ್ತಿತ್ವದಲ್ಲಿರುವ ಮತದಾರರ ಪಟ್ಟಿಯಲ್ಲಿ ನಮೂದುಗಳ ತಿದ್ದುಪಡಿ/ ಎಪಿಕ್ ಬದಲಾವಣೆ/ ಭಾವಚಿತ್ರ ಬದಲಾವಣೆ ಇತರೆ ತಿದ್ದುಪಡಿಗೆ ನಮೂನೆ 8ರಲ್ಲಿ ಅರ್ಜಿ ಸಲ್ಲಿಸಬೇಕು ಎಂದು ಹೇಳಿದರು.
ಮಹಾನಗರ ಪಾಲಿಕೆ ಆಯುಕ್ತೆ ರೇಣುಕಾ, ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿಗಳಾದ ಎ.ನಾಗರಾಜ, ಎಸ್.ಮಲ್ಲಿಕಾರ್ಜುನ, ಜಿ.ಎಸ್. ಮಂಜುನಾಥ ಗಡಿಗುಡಾಳ, ಬಿಜೆಪಿ ಜಿಲ್ಲಾಧ್ಯಕ್ಷ ಎನ್.ರಾಜಶೇಖರ ನಾಗಪ್ಪ, ಎಚ್.ಪಿ. ವಿಶ್ವಾಸ, ಕೊಟ್ರೇಶ ಗೌಡ, ಜೆಡಿಎಸ್ ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿ ಜೆ.ಅಮಾನುಲ್ಲಾ ಖಾನ್, ಬಿಎಸ್‌ಪಿ ಮುಖಂಡ ಡಿ.ಹನುಮಂತಪ್ಪ ಸೇರಿದಂತೆ ಸಿಪಿಐ, ಆಮ್ ಆದ್ಮಿ ಪಕ್ಷ ಸೇರಿದಂತೆ ವಿವಿಧ ಪಕ್ಷಗಳ ಪ್ರತಿನಿಧಿಗಳು ಇದ್ದರು.- - -
(ಬಾಕ್ಸ್) * ದೋಷರಹಿತ ಮತಪಟ್ಟಿ ತಯಾರಿಕೆಗೆ ರಾಜಕೀಯ ಪಕ್ಷಗಳು ಸಹಕರಿಸಲಿ ಮತದಾರರ ಫೋಟೋ ಗುರುತಿನ ಚೀಟಿಗಳು ಮತ್ತು ಅರ್ಜಿಗಳ ಸಲ್ಲಿಕೆಗೆ ಸಂಬಂಧಿಸಿದ ಯಾವುದೇ ಮಾಹಿತಿಗೆ ಜಿಲ್ಲಾ ಚುನಾವಣಾಧಿಕಾರಿ, ಮತದಾರರ ನೊಂದಣಾಧಿಕಾರಿ, ಸಹಾಯಕ ಮತದಾರರ ನೋಂದಣಾಧಿಕಾರಿ ಮತ್ತು ಸಂಬಂಧಪಟ್ಟ ಮತಗಟ್ಟೆ ಮಟ್ಟದ ಅಧಿಕಾರಿಗೆ ಸಂಪರ್ಕಿಸಬಹುದು. ಎಲ್ಲ ರಾಜಕೀಯ ಪಕ್ಷದವರು ಮತಗಟ್ಟೆ ಮಟ್ಟದ ಏಜೆಂಟರ್‌ಗಳನ್ನು ನೇಮಕ ಮಾಡಿ, ನೇಮಕ ಮಾಡಿದ ಪ್ರತಿಗಳನ್ನು ಈ ಪ್ರಾಧಿಕಾರಕ್ಕೆ ಸಲ್ಲಿಸಬೇಕು. ರಾಜಕೀಯ ಪಕ್ಷಗಳು ಈ ಕಾರ್ಯಕ್ರಮದಲ್ಲಿ ಹೆಚ್ಚಿನ ರೀತಿ ಪಾಲ್ಗೊಂಡು ಮತದಾರರ ನೋಂದಣಿ ಮಾಡಿಸುವ ನಿಟ್ಟಿನಲ್ಲಿ ಹಾಗೂ ದೋಷರಹಿತ ಮತದಾರರ ಪಟ್ಟಿ ತಯಾರಿಸಲು ಸಹಕರಿಸುವಂತೆ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಸಲಹೆ ನೀಡಿದರು.- - -
-15ಕೆಡಿವಿಜಿ1.ಜೆಪಿಜಿ:ದಾವಣಗೆರೆಯಲ್ಲಿ ದಕ್ಷಿಣ ವಿಧಾನಸಭಾ ಕ್ಷೇತ್ರದ ವಿಶೇಷ ಮತಪಟ್ಟಿ ಪರಿಷ್ಕರಣೆ ನಂತರ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆಯಲ್ಲಿ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರ ಸ್ವಾಮಿ ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಿದರು.