ತ್ರಿಕರಣ ಪೂರ್ವಕವಾದ ಇಷ್ಟಾರ್ಥ ಪೂಜೆಯಿಂದ ಅಂತರಂಗ ಶುದ್ಧಿ: ಶ್ರೀ

KannadaprabhaNewsNetwork | Published : Sep 1, 2024 2:01 AM

ಸಾರಾಂಶ

ಹೊಂಬುಜ ಶ್ರೀ ಜೈನ ಮಠದ ಪೀಠಾಧೀಶರಾದ ಜಗದ್ಗುರು ಸ್ವಸ್ತಿಶ್ರೀ ಡಾ.ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ ಅಂತಿಮ ಶ್ರಾವಣದ ವಿಶೇಷಪೂಜೆ ಸಲ್ಲಿಸಿದ ಭಕ್ತರಿಗೆ ಆಶೀರ್ವದಿಸಿದರು.

ಕನ್ನಡಪ್ರಭ ವಾರ್ತೆ ರಿಪ್ಪನ್‍ಪೇಟೆ

ಅತಿಶಯ ಶ್ರೀಕ್ಷೇತ್ರ ಹೊಂಬುಜ ಶ್ರೀ 1008 ಪಾರ್ಶ್ವನಾಥ ಸ್ವಾಮಿ, ಜಗನ್ಮಾತೆ ಯಕ್ಷಿ ಶ್ರೀ ಪದ್ಮಾವತಿ ದೇವಿ ಸನ್ನಿಧಿಯಲ್ಲಿ ಸಮರ್ಪಿಸುವ ತ್ರಿಕರಣ ಪೂರ್ವಕ ಇಷ್ಟಾರ್ಥ ಪೂಜೆ ಸಮರ್ಪಣೆಯಿಂದ ಭಾವಶುದ್ಧಿ, ಅಂತರಂಗ ಶುದ್ಧಿ ಮತ್ತು ಜೀವನ ಚೈತನ್ಯ ಪ್ರಾಪ್ತಿ ಆಗುತ್ತದೆ ಎಂದು ಹೊಂಬುಜ ಶ್ರೀ ಜೈನ ಮಠದ ಪೀಠಾಧೀಶರಾದ ಜಗದ್ಗುರು ಸ್ವಸ್ತಿಶ್ರೀ ಡಾ.ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ ಅಂತಿಮ ಶ್ರಾವಣದ ವಿಶೇಷಪೂಜೆ ಸಲ್ಲಿಸಿದ ಭಕ್ತರಿಗೆ ಆಶೀರ್ವದಿಸಿದರು.

ಪ್ರಾಚೀನ ಜೈನ ಪುಣ್ಯಕ್ಷೇತ್ರವಾಗಿರುವ ವಿಶ್ವವಂದ್ಯ ಶ್ರೀ ಪದ್ಮಾವತಿ ದೇವಿ ಕಾರಣಿಕವು ಶ್ರದ್ಧಾ ಭಕ್ತಿಯನ್ನು ಅರ್ಪಿಸುವ ಭಕ್ತ ಸಮುದಾಯದವರ ಏಳಿಗೆ, ಬಾಳಿಗೆ ಧಾರ್ಮಿಕ ಸ್ಪರ್ಶ ನೀಡುತ್ತಿದೆ ಎಂದು ವಿವರಿಸಿದರು.

ಷೋಡೋಪಚಾರ ಪೂಜೆ, ಹೂವು-ಫಲಗಳಿಂದ ಶೃಂಗರಿಸಿದ ಜಿನಮಂದಿರಗಳಲ್ಲಿ ಆಗಮೋಕ್ತ ಧಾರ್ಮಿಕ ವಿಧಿ-ವಿಧಾನಗಳು ಸಾಂಗವಾಗಿ ನೆರವೇರಿದವು. 108 ವಿವಿಧ ಧಾನ್ಯ, ಫಲ, ಹೂವು, ಕಜ್ಜಾಯ ನೈವೇದ್ಯ ಶ್ರೀ ಪದ್ಮಾವತಿ ದೇವಿ ಸನ್ನಿಧಿಯಲ್ಲಿ ಪೂಜ್ಯ ಶ್ರೀಗಳವರಿಂದ ಭಕ್ತರ ಉಡಿ-ಕಾಣಿಕೆ-ಹರಕೆ ದ್ರವ್ಯಗಳನ್ನು ಸಮರ್ಪಿಸುವ ದೃಶ್ಯ ಕಂಡು ಧನ್ಯತಾಭಾವದಿಂದ ಭಕ್ತರು ಜಯಕಾರ ಹಾಕಿದರು.

ಶ್ರೀ ನೇಮಿನಾಥ ಸ್ವಾಮಿ, ಶ್ರೀ ಮಹಾವೀರ ಸ್ವಾಮಿ, ಶ್ರೀ ಕೂಷ್ಮಾಂಡಿನಿ ದೇವಿ, ಶ್ರೀ ಸರಸ್ವತಿ ದೇವಿ ಮತ್ತು ತ್ರಿಕೂಟ ಜಿನಾಲಯ, ಬೋಗಾರ ಬಸದಿ, ಶ್ರೀ ಆದಿನಾಥ ಬಸದಿ, ಮಕ್ಕಳ ಬಸದಿ ಮತ್ತು ಶ್ರೀ ಕ್ಷೇತ್ರಪಾಲ ಬಸದಿಗಳಲ್ಲಿ ನಿತ್ಯಪೂಜೆಯಲ್ಲಿ ಊರ-ಪರವೂರ ಶ್ರಾವಕರು, ಶ್ರಾವಿಕೆಯರು ಮತ್ತು ಭಕ್ತ ವೃಂದದವರು ಪಾಲ್ಗೊಂಡರು.

ಪಾದಯಾತ್ರೆಯಲ್ಲಿ ಆಗಮಿಸಿದ ಐನಾಪುರ, ಅಥಣಿ, ಶಿರಹಟ್ಟಿ, ದುಂಡಶಿ ಶ್ರಾವಕರು ಶ್ರೀಗಳವರಿಂದ ಶ್ರೀಫಲ ಮಂತ್ರಾಕ್ಷತೆ ಸ್ವೀಕರಿಸಿ ಧನ್ಯರಾದರು. ಮಹಾರಾಷ್ಟ್ರ, ಉತ್ತರ ಭಾರತದ ಕರ್ನಾಟಕದ ಹಲವಾರು ಜಿಲ್ಲೆಗಳಿಂದ ಭಕ್ತರು ಆಗಮಿಸಿದ್ದರು. ವಸತಿ, ಅನ್ನಪ್ರಸಾದ ವ್ಯವಸ್ಥೆ ಅಚ್ಚುಕಟ್ಟಾಗಿ ಮಾಡಲಾಗಿತ್ತು.

Share this article