ಬಳ್ಳಾರಿ: ಆಶ್ರಯ ಯೋಜನೆಯ ಅಡಿ ನಿರ್ಮಾಣ ಆಗಿರುವ ಮನೆಗಳ ಹಸ್ತಾಂತರ ಕೆಲಸವನ್ನು ಶೀಘ್ರ ಆರಂಭಿಸುವಂತೆ ನಗರ ಶಾಸಕ ನಾರಾ ಭರತ್ ರೆಡ್ಡಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮಹಾನಗರ ಪಾಲಿಕೆಯ ಶಾಸಕರ ಕಚೇರಿಯಲ್ಲಿ ನಡೆದ ಆಶ್ರಯ ಯೋಜನೆ ಸಮಿತಿ ಸಭೆಯಲ್ಲಿ ಅಧಿಕಾರಿಗಳಿಂದ ಯೋಜನೆಯ ಸ್ಥಿತಿ-ಗತಿ ಬಗ್ಗೆ ಮಾಹಿತಿ ಪಡೆದು ಮಾತನಾಡಿದರು.ನಗರದ ವಾರ್ಡ್‌ವಾರು ಅರ್ಹ ಫಲಾನುಭವಿಗಳ ಪಟ್ಟಿ ಅಂತಿಮಗೊಳಿಸಿ ನಿರ್ಮಾಣ ಆಗಿರುವ 809 ಮನೆಗಳ ಹಸ್ತಾಂತರ ಕೆಲಸ ಶೀಘ್ರ ಆರಂಭ ಆಗಬೇಕು. ಯುದ್ಧೋಪಾದಿಯಲ್ಲಿ ಈ ಕೆಲಸ ನಡೆಯಬೇಕು ಎಂದು ಆದೇಶಿಸಿದರು.ಮಹಾತ್ಮ ಗಾಂಧಿ ಟೌನ್‌ಶಿಪ್ ಯೋಜನೆ ಸಮರ್ಥವಾಗಿ ಪೂರ್ಣಗೊಳಿಸಬೇಕು. ಈ ಟೌನ್‌ಶಿಪ್‌ಗೆ ಅಗತ್ಯ ಇರುವ ಎಲ್ಲ ಮೂಲಭೂತ ಸೌಕರ್ಯ ಈಡೇರಿಸಿ ಟೌನ್‌ಶಿಪ್ ಯೋಜನೆ ಯಶಸ್ವಿಗೊಳಿಸಬೇಕು ಎಂದು ಶಾಸಕ ನಾರಾ ಭರತ್ ರೆಡ್ಡಿ ಹೇಳಿದರು.
ಕೈಗಾರಿಕಾ ಪ್ರದೇಶ ಅಭಿವೃದ್ಧಿಗೆ ಚಿಂತನೆ:ಮಹಾತ್ಮ ಗಾಂಧಿ ಟೌನ್‌ಶಿಪ್ ಸಮೀಪ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಯೋಜನೆಯೊಂದು ನನೆಗುದಿಗೆ ಬಿದ್ದಿದೆ. ಹಳೆಯ ಯೋಜನೆ ಮರು ವಿನ್ಯಾಸಗೊಳಿಸಿ, ಕೈಗಾರಿಕಾ ಪ್ರದೇಶ ಅಭಿವೃದ್ಧಿಗಾಗಿ ಸರ್ಕಾರದ ವತಿಯಿಂದ 39 ಎಕರೆ 40 ಸೆಂಟ್ಸ್ ವಿಸ್ತಾರದ ಬೃಹತ್ ಬಡಾವಣೆ ನಿರ್ಮಿಸಿ ಕೈಗಾರಿಕೆಗಳಿಗೆ ಗುತ್ತಿಗೆ ನೀಡಲಾಗುವುದು. ಈ ಪ್ರದೇಶದಲ್ಲಿ ಕೈಗಾರಿಕೆಗಳು ತಲೆ ಎತ್ತಿದರೆ ಟೌನ್‌ಶಿಪ್‌ನ ನಿವಾಸಿಗಳಿಗೆ ಉದ್ಯೋಗ ಅವಕಾಶ ಸಿಗುತ್ತದೆ ಎಂದು ಹೇಳಿದರು.
ಸಭೆಯಲ್ಲಿ ಮಹಾನಗರ ಪಾಲಿಕೆಯ ಮೇಯರ್ ಮುಲ್ಲಂಗಿ ನಂದೀಶ್, ಆಯುಕ್ತ ಖಲೀಲಸಾಬ್, ಪಾಲಿಕೆಯ ಅಧಿಕಾರಿಗಳು, ಸಹಾಯಕ ಆಯುಕ್ತರ ಕಚೇರಿಯ ಅಧಿಕಾರಿಗಳು ಹಾಗೂ ಪಾಲಿಕೆಯ ಸದಸ್ಯರು ಹಾಜರಿದ್ದು ಮಾಹಿತಿ ನೀಡಿದರು.ಬಳ್ಳಾರಿ ಮಹಾನಗರ ಪಾಲಿಕೆಯ ಶಾಸಕರ ಕಚೇರಿಯಲ್ಲಿ ನಡೆದ ಆಶ್ರಯ ಯೋಜನೆ ಸಮಿತಿ ಸಭೆಯಲ್ಲಿ ಶಾಸಕ ನಾರಾ ಭರತ್ ರೆಡ್ಡಿ ಅಧಿಕಾರಿಗಳಿಂದ ಯೋಜನೆಯ ಸ್ಥಿತಿ ಗತಿಯ ಕುರಿತು ಮಾಹಿತಿ ಪಡೆದರು.