ಕನ್ನಡಪ್ರಭ ವಾರ್ತೆ ಹಿರಿಯೂರು:
ಬಬ್ಬೂರು ಸರ್ವೆ ನಂ.39 ಮತ್ತು 40 ರ ಮದ್ಯದಲ್ಲಿ ಅಡ್ಡಿಪಡಿಸಿದ್ದ ರಸ್ತೆ ಮದ್ಯದಲ್ಲಿರುವ ವಿದ್ಯುತ್ ಪರಿವರ್ತಕ ಹಾಗೂ ವಿದ್ಯುತ್ ಕಂಬಗಳನ್ನು ತೆರವುಗೊಳಿಸಲು ಭಾನುವಾರ ಬೆಳಗ್ಗೆಯಿಂದ ಸಂಜೆಯವರೆಗೆ ಸ್ಥಳದಲ್ಲಿಯೇ ಇದ್ದ ಪೌರಾಯುಕ್ತರು ದಶಕದ ಸಮಸ್ಯೆ ಇತ್ಯರ್ಥ ಪಡಿಸಿದ್ದಾರೆ. ಈಗಾಗಲೇ ಬಹು ದಿನಗಳಿಂದ ನನೆಗುದಿಗೆ ಬಿದ್ದಿರುವ ರಸ್ತೆ ಬಿಡಿಸಿಕೊಡಲು ಜಿಲ್ಲಾಧಿಕಾರಿ, ಜಿಲ್ಲಾ ಉಸ್ತುವಾರಿ ಸಚಿವರು, ಲೋಕೋಪಯೋಗಿ ಸಚಿವರು, ಮುಖ್ಯಮಂತ್ರಿಗಳಿಗೂ ಸಹಿತ ಪತ್ರ ಬರೆಯಲಾಗಿತ್ತು, ರಾಜ್ಯ ಮಾನವ ಹಕ್ಕುಗಳ ಆಯೋಗದಲ್ಲಿ ದೂರು ದಾಖಲಿಸಿ ಕಾನೂನಾತ್ಮಕ ಹೋರಾಟ ಮಾಡಲಾಗಿದೆ. ಈ ಹಿಂದೆ ಕಾರ್ಯನಿರ್ವಹಿಸಿ ವರ್ಗಾವಣೆಯಾಗಿ ಹೋದ ಹಲವಾರು ಪೌರಾಯುಕ್ತರು ದಾರಿ ಬಿಡಿಸಿಕೊಡಲು ಪ್ರಯತ್ನ ಮಾಡಲಿಲ್ಲ. ಇಂತಹ ಸವಾಲಿನ ಕೆಲಸವನ್ನು ಈಗಿನ ಪೌರಾಯುಕ್ತರು ಬಗಿಹರಿಸಿದ್ದಾರೆ.
ದಾರಿ ಸಮಸ್ಯೆ ಇತ್ಯರ್ಥಕ್ಕೆ ಶ್ರಮಿಸಿದ ಬೆಸ್ಕಾಂ ಅಧಿಕಾರಿಗಳಿಗೆ,ಗುತ್ತಿಗೆದಾರರಿಗೆ, ನಗರಸಭೆ ಸಿಬ್ಬಂದಿ ವರ್ಗಕ್ಕೆ ನಾಗರೀಕ ಹಿತರಕ್ಷಣಾ ಸಮಿತಿ ಗೌರವಾಧ್ಯಕ್ಷ ಎಸ್ ವಿ ರಂಗನಾಥ್, ಅಧ್ಯಕ್ಷ ಸಂತೋಷ ರಾಥೋಡ್, ಉಪಾಧ್ಯಕ್ಷ ಸ್ವಾಮಿ, ಕಾರ್ಯದರ್ಶಿ ಸಿ.ಜಿ ಗೌಡ ಅಭಿನಂದನೆ ತಿಳಿಸಿದ್ದಾರೆ.