ಕೊನೆಗೂ ಅನುಮೋದನೆಗೊಂಡ ಗ್ರಾಪಂ ನೌಕರರು

KannadaprabhaNewsNetwork |  
Published : Jan 19, 2026, 12:15 AM IST
೧೮ಕೆಎಂಎನ್‌ಡಿ-೧ಜಿಲ್ಲಾ ಪಂಚಾಯಿತಿ ಕಚೇರಿ. | Kannada Prabha

ಸಾರಾಂಶ

ಕಳೆದ ಎಂಟು ವರ್ಷಗಳಿಂದ ಕನಿಷ್ಠ ವಿದ್ಯಾರ್ಹತೆ ಹೊಂದಿಲ್ಲದ ಕಾರಣಕ್ಕೆ ಅನುಮೋದನೆಯಾಗಿರದ ಮಂಡ್ಯ ಜಿಲ್ಲೆಯ ೭೨೭ ಗ್ರಾಪಂ ಸಿಬ್ಬಂದಿಗೆ ಜಿಲ್ಲಾ ಪಂಚಾಯ್ತಿಯಿಂದ ಅನುಮೋದನೆ ನೀಡುವಂತೆ ಸರ್ಕಾರ ಆದೇಶ ಹೊರಡಿಸಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಕಳೆದ ಎಂಟು ವರ್ಷಗಳಿಂದ ಕನಿಷ್ಠ ವಿದ್ಯಾರ್ಹತೆ ಹೊಂದಿಲ್ಲದ ಕಾರಣಕ್ಕೆ ಅನುಮೋದನೆಯಾಗಿರದ ಜಿಲ್ಲೆಯ ೭೨೭ ಗ್ರಾಪಂ ಸಿಬ್ಬಂದಿಗೆ ಜಿಲ್ಲಾ ಪಂಚಾಯ್ತಿಯಿಂದ ಅನುಮೋದನೆ ನೀಡುವಂತೆ ಸರ್ಕಾರ ಆದೇಶ ಹೊರಡಿಸಿದೆ.

ಕಳೆದ ೩೧ ಅಕ್ಟೋಬರ್ ೨೦೧೭ರ ಪೂರ್ವದಲ್ಲಿ ಗ್ರಾಮ ಪಂಚಾಯ್ತಿಯಿಂದ ನೇಮಕಗೊಂಡು ಕಾರ್ಯನಿರ್ವಹಿಸುತ್ತಿದ್ದು, ಕನಿಷ್ಠ ವಿದ್ಯಾರ್ಹತೆ ಹೊಂದಿಲ್ಲವೆಂಬ ಕಾರಣಕ್ಕೆ ಅನುಮೋದನೆಯಾಗಿರದ ೫೫೦ ವಾಟರ್ ಆಪರೇಟರ್‌ಗಳು, ೧೩೬ ಕ್ಲೀನರ್ಸ್ ಹಾಗೂ ೪೧ ಅಟೆಂಡೆಂಟ್‌ಗಳು ಸೇರಿದಂತೆ ಒಟ್ಟು ೭೨೭ ಸಿಬ್ಬಂದಿಗೆ ಗ್ರಾಪಂ ಸಭಾ ನಡವಳಿ, ವೇತನ ಪಾವತಿ, ಹಾಜರಾತಿ ಆಧಾರದ ಮೇಲೆ ಅನುಮೋದನೆ ನೀಡುವುದಕ್ಕೆ ಅವಕಾಶ ಕಲ್ಪಿಸಲಾಗಿದೆ.

ಅದೇ ರೀತಿ ರಾಜ್ಯದಲ್ಲಿ ಅನುಮೋದನೆಗೆ ಬಾಕಿ ಇದ್ದ ೮೫೮೬ ವಾಟರ್ ಆಪರೇಟರ್‌ಗಳು, ೭೯೪ ಅಟೆಂಡೆಂಟ್‌ಗಳು ಹಾಗೂ ೧೭೯೦ ಕ್ಲೀನರ್ಸ್ ಸೇರಿದಂತೆ ೧೧೧೭೦ ಗ್ರಾಪಂ ನೌಕರರಿಗೆ ಕನಿಷ್ಠ ವಿದ್ಯಾರ್ಹತೆ ಹೊರತುಪಡಿಸಿ ಒಂದು ಬಾರಿಗೆ ಜಿಲ್ಲಾ ಪಂಚಾಯ್ತಿಯಿಂದ ಅನುಮೋದನೆ ನೀಡುವಂತೆ ಆದೇಶಿಸಿದೆ. ಎಲ್ಲಾ ದಾಖಲೆಗಳು ಸರಿಯಿದ್ದರೂ ಕನಿಷ್ಠ ವಿದ್ಯಾರ್ಹತೆ ಹೊಂದಿಲ್ಲವೆಂಬ ಕಾರಣಕ್ಕೆ ವಿನಾಕಾರಣ ಅನುಮೋದನೆ ನೀಡುವುದಕ್ಕೆ ವಿಳಂಬ ಮಾಡಲಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿದ್ದವು. ಜಿಲ್ಲಾ ಪಂಚಾಯ್ತಿ ಮತ್ತು ತಾಲೂಕು ಪಂಚಾಯ್ತಿ ಅಧಿಕಾರಿಗಳ ಧೋರಣೆಯಿಂದ ಗ್ರಾಪಂ ಸಿಬ್ಬಂದಿಗೆ ಅವಶ್ಯವಾಗಿ ದೊರೆಯಬೇಕಾದ ಸೌಲಭ್ಯಗಳು ಸಿಗದೆ ವಂಚಿತರಾಗುತ್ತಿದ್ದರು. ಇದೀಗ ಸರ್ಕಾರ ಹೊರಡಿಸಿರುವ ಆದೇಶದಿಂದ ಅನುಮೋದನೆ ಪ್ರಕ್ರಿಯೆಗೆ ಚಾಲನೆ ಸಿಕ್ಕಿರುವುದರಿಂದ ಅನುಮೋದನೆಗೆ ಕಾಯುತ್ತಿದ್ದ ಸಿಬ್ಬಂದಿ ನಿಟ್ಟುಸಿರು ಬಿಡುವಂತಾಗಿದೆ.

ರಾಜ್ಯದ ಎಲ್ಲಾ ಗ್ರಾಮ ಪಂಚಾಯ್ತಿಗಳಲ್ಲಿ ೩೧ ಅಕ್ಟೋಬರ್ ೨೦೧೭ರ ಪೂರ್ವದಲ್ಲಿ ಗ್ರಾಮ ಪಂಚಾಯ್ತಿಯಿಂದ ನೇಮಕಗೊಂಡು ಕಾರ್ಯನಿರ್ವಹಿಸುತ್ತಿರುವ ಅನುಮೋದನೆಗೆ ಬಾಕಿ ಇದ್ದ ೭೦೪ ಕರ ವಸೂಲಿಗಾರರು, ೭೭೫ ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್‌ಗಳು, ೪೩೭೩ ವಾಟರ್ ಆಪರೇಟರ್‌ಗಳು, ೧೧೪೧ ಕ್ಲೀನರ್ಸ್ ಹಾಗೂ ೫೩೩ ಅಟೆಂಡೆಂಟ್‌ಗಳು ಸೇರಿದಂತೆ ಒಟ್ಟು ೭೫೧೫ ಸಿಬ್ಬಂದಿಗೆ ಕನಿಷ್ಠ ವಿದ್ಯಾರ್ಹತೆ, ಗ್ರಾಪಂ ಸಭಾ ನಡಾವಳಿ, ವೇತನ ಪಾವತಿ, ಹಾಜರಾತಿ ಆಧಾರದ ಮೇಲೆ ಕರ್ನಾಟಕ ಪಂಚಾಯತ್‌ರಾಜ್ ಆಯುಕ್ತಾಲಯದ ಆದೇಶ ೧೬ ಮಾರ್ಚ್ ೨೦೨೪ರನ್ವಯ ಅನುಮೋದನೆ ನೀಡುವುದಕ್ಕೂ ಅವಕಾಶ ನೀಡಿದೆ.

ಅದರಂತೆ ಮಂಡ್ಯ ಜಿಲ್ಲೆಯಲ್ಲಿ ಎಲ್ಲಾ ದಾಖಲೆಗಳು ಸರಿ ಇದ್ದು, ಅನುಮೋದನೆಗೆ ಬಾಕಿ ಇದ್ದ ೪೦ ಕರವಸೂಲಿಗಾರರು, ೪೦ ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್‌ಗಳು, ೧೧೩ ವಾಟರ್ ಆಪರೇಟರ್‌ಗಳು, ೧೩ ಮಂದಿ ಕ್ಲೀನರ್ಸ್, ೧೦ ಅಟೆಂಡೆಂಟ್‌ಗಳು ಸೇರಿ ಒಟ್ಟು ೨೧೬ ಗ್ರಾಪಂ ಸಿಬ್ಬಂದಿಯ ಅನುಮೋದನೆಗೆ ಆದೇಶ ನೀಡಿದೆ.

ಗ್ರಾಮ ಪಂಚಾಯ್ತಿ ಸಿಬ್ಬಂದಿ ಅನುಮೋದನೆಗೆ ಸಂಬಂಧಿಸಿದಂತೆ ಮಂಡ್ಯ ಜಿಲ್ಲಾ ಪಂಚಾಯ್ತಿ ಹಂತದಲ್ಲಿ ೨೬ ಜೂನ್ ೨೦೨೫ ಮತ್ತು ೩೧ ಜುಲೈ ೨೦೨೫ರಂದು ದಾಖಲಾತಿಗಳನ್ನು ಪರಿಶೀಲಿಸಲು ಎರಡು ಬಾರಿ ಅವಕಾಶ ನೀಡಿ ಬಾಕಿ ಇರುವ ಪ್ರಸ್ತಾವನೆಗಳನ್ನು ತಾಲೂಕು ಮಟ್ಟದ ಸಮಿತಿ ಸಭೆಯಲ್ಲಿ ಪರಿಶೀಲಿಸಿದ ನಂತರ ಜಿಲ್ಲಾ ಮಟ್ಟದ ಸಮಿತಿ ಸಭೆಯಲ್ಲಿ ಪರಿಶೀಲಿಸಲು ಸಭೆಯನ್ನು ಕರೆಯಲಾಗಿದ್ದು ಪ್ರಸ್ತುತ ಸಿಬ್ಬಂದಿ ಅನುಮೋದನೆ ಪ್ರಕ್ರಿಯೆ ಪ್ರಗತಿಯಲ್ಲಿದೆ.

ಗ್ರಾಮ ಪಂಚಾಯ್ತಿಗಳಲ್ಲಿ ೩೧ ಅಕ್ಟೋಬರ್ ೨೦೧೭ ಪೂರ್ವದಲ್ಲಿ ನೇಮಕಗೊಂಡು ಗ್ರಾಮ ಪಂಚಾಯ್ತಿಗಳಲ್ಲಿ ಕರ್ತವ್ಯನಿರ್ವಹಿಸುತ್ತಿದ್ದು ಜಿಲ್ಲಾ ಪಂಚಾಯ್ತಿಯಿಂದ ಅನುಮೋದನೆಯಾಗಿಲ್ಲದ ಗ್ರಾಪಂ ಸಿಬ್ಬಂದಿಗೆ ಸೇವಾ ಭದ್ರತೆ ನೀಡುವ ಸಲುವಾಗಿ ಸರ್ಕಾರದಿಂದ ಅನುಮೋದನೆಗೆ ಅವಕಾಶ ನೀಡಿದೆ. ಕರ್ನಾಟಕ ಪಂಚಾಯತ್‌ರಾಜ್ ಆಯುಕ್ತಾಲಯದ ೧೮ ನವೆಂಬರ್ ೨೦೨೩ ಮತ್ತು ೧೬ ಮಾರ್ಚ್ ೨೦೨೪ರ ಆದೇಶದನ್ವಯ ಕ್ರಮ ವಹಿಸಲು ಜಿಪಂ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಆಯುಕ್ತಾಲಯದಿಂದ ನಿರ್ದೇಶನ ನೀಡಿರುವುದಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.ತಾತ್ಕಾಲಿಕ ಆಯ್ಕೆ ಪಟ್ಟಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ

ಕನ್ನಡಪ್ರಭ ವಾರ್ತೆ ಮಂಡ್ಯ

ಗ್ರಾಪಂ ನೌಕರರ ಅನುಮೋದನೆಗೆ ಸರ್ಕಾರ ಆದೇಶ ಹೊರಡಿಸಿದ ಬೆನ್ನಲ್ಲೇ ಜಿಲ್ಲಾ ಪಂಚಾಯ್ತಿ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಿ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಿದೆ. ೩೧-೧೦-೨೦೧೭ಕ್ಕೂ ಪೂರ್ವದಲ್ಲಿ ಗ್ರಾಮ ಪಂಚಾಯ್ತಿಯಿಂದ ನೇಮಕಗೊಂಡು ನೀರುಗಂಟಿ, ಸ್ವಚ್ಛತಗಾರ, ಅಟೆಂಡರ್ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ೬೫೧ ನೌಕರರು ಹುದ್ದೆಗೆ ಅನುಮೋದನೆ ನೀಡಿರಲಿಲ್ಲ. ಇಂತಹ ನೌಕರರನ್ನು ಅನುಮೋದನೆಗೆ ಒಳಪಡಿಸುವ ಬಗ್ಗೆ ಅಗತ್ಯ ದಾಖಲಾತಿಗಳನ್ನು ಪರಿಶೀಲಿಸಿ ಅರ್ಹರಿರುವ ನೌಕರರ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಲಾಗಿದೆ ಎಂದು ಜಿಪಂ ಸಿಇಒ ಕೆ.ಆರ್.ನಂದಿನಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನೌಕರರ ಅನುಮೋದನೆ ಪ್ರಕ್ರಿಯೆ ಕೈಗೊಳ್ಳಲು ಹಾಗೂ ಅನುಮೋದನೆ ಪ್ರಕ್ರಿಯೆಯನ್ನು ಅತ್ಯಂತ ಪಾರದರ್ಶಕವಾಗಿ ನಡೆಸಲು ಒಟ್ಟು ನಾಲ್ಕು ಹಂತಗಳಲ್ಲಿ ನೌಕರರ ದಾಖಲಾತಿಗಳ ಪರಿಶೀಲನಾ ಕಾರ್ಯ ಹಮ್ಮಿಕೊಳ್ಳಲಾಗಿತ್ತು. ನಂತರ ತಾಲೂಕುವಾರು ಪ್ರಸ್ತಾವನೆಗಳನ್ನು ಪ್ರತ್ಯೇಕ ಪರಿಶೀಲನಾ ಸಮಿತಿಯಿಂದ ಪರಿಶೀಲಿಸಿ, ನಡವಳಿಯಲ್ಲಿ ದಾಖಲಿಸಿ ಅಂತಿಮವಾಗಿ ಜಿಲ್ಲಾ ಮಟ್ಟದ ಅಧಿಕಾರಿಗಳ ತಂಡದಿಂದ ಮರುಪರಿಶೀಲನೆಗೆ ಒಳಪಡಿಸಿ ಅರ್ಹ ನೌಕರರ ಅನುಮೋದನೆಯ ತಾತ್ಕಾಲಿಕ ಪಟ್ಟಿ ಸಿದ್ಧಪಡಿಸಲಾಗಿದೆ. ಪಟ್ಟಿಯನ್ನು ಜಿಲ್ಲಾ ಪಂಚಾಯ್ತಿ ಮತ್ತು ಜಿಲ್ಲೆಯ ಎಲ್ಲಾ ತಾಲೂಕು ಪಂಚಾಯ್ತಿಗಳ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದೆ ಎಂದು ತಿಳಿಸಲಾಗಿದೆ. ತಾತ್ಕಾಲಿಕ ಆಯ್ಕೆ ಪಟ್ಟಿಗೆ ಆಕ್ಷೇಪಣೆಯನ್ನು ಸಲ್ಲಿಸಲು ಜ.೨೩ರವರೆಗೆ ರಜಾ ದಿನಗಳನ್ನು ಹೊರತುಪಡಿಸಿ ಕಲ್ಪಿಸಿರುವುದಾಗಿ ಹೇಳಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಿಸ್ವಾರ್ಥ ಸೇವೆಯಿಂದ ಸಾಮಾಜಿಕ ಪಿಡುಗುಗಳ ದೂರಗೊಳಿಸಲು ಸಾಧ್ಯ: ಸಮಾಜ ಸೇವಕ ಡಾ.ಟಿ.ಶ್ರೀನಿವಾಸಪ್ಪ
ಇತಿಹಾಸ ಪ್ರಸಿದ್ಧ ಶ್ರೀ ರಂಗನಾಥಸ್ವಾಮಿಗೆ ಸಂಭ್ರಮದ ರಥೋತ್ಸವ