ಕುಂದಗೋಳ: ಸಾಲಬಾಧೆ ತಾಳದೆ ಆತ್ಮಹತ್ಯೆಗೆ ಶರಣಾದ ತಾಲೂಕಿನ ಭರದ್ವಾಡ ಗ್ರಾಮದ ರೈತರಾದ ರವಿರಾಜ ಜಾಡರ ಮತ್ತು ಬಸವನಗೌಡ ಪಾಟೀಲ ಅವರ ಕುಟುಂಬಗಳಿಗೆ ಸಂತೋಷ ಲಾಡ್ ಫೌಂಡೇಶನ್ ವತಿಯಿಂದ ತಲಾ ₹2.50 ಲಕ್ಷ ಆರ್ಥಿಕ ನೆರವು ನೀಡಲಾಯಿತು.
ಚೆಕ್‌ಗಳನ್ನು ಮಾಜಿ ಶಾಸಕಿ ಕುಸುಮಾವತಿ ಶಿವಳ್ಳಿ, ಎಂ.ಎಸ್. ಅಕ್ಕಿ ಮತ್ತು ಚಂದ್ರಶೇಖರ ಜುಟ್ಟಲ್ ಅವರು ಮೃತ ರೈತರ ಕುಟುಂಬದವರಿಗೆ ಹಸ್ತಾಂತರಿಸಿದರು.ಜಿಲ್ಲಾ ಗ್ರಾಮೀಣ ಪ್ರಚಾರ ಸಮಿತಿ ಅಧ್ಯಕ್ಷ ಚಂದ್ರಶೇಖರ ಜುಟ್ಟಲ್ ಮಾತನಾಡಿ, ಸಂತೋಷ ಲಾಡ್ ಫೌಂಡೇಶನ್ ಕೇವಲ ಆರ್ಥಿಕ ನೆರವಿಗೆ ಸೀಮಿತವಾಗದೆ, ಸಮುದಾಯದ ವಿವಿಧ ವರ್ಗಗಳ ಕಲ್ಯಾಣಕ್ಕಾಗಿ ನಿರಂತರವಾಗಿ ಶ್ರಮಿಸುತ್ತಿದೆ. ಇತ್ತೀಚೆಗೆ ಹಳ್ಳದಲ್ಲಿ ಸಿಲುಕಿ ದುರ್ಮರಣಕ್ಕೀಡಾದ ಕುಂದಗೋಳದ ಇನ್ನೊಬ್ಬ ರೈತರ ಕುಟುಂಬಕ್ಕೂ ₹2.50 ಲಕ್ಷ ನೆರವು ನೀಡಿ ಅವರ ದುಃಖದಲ್ಲಿ ಭಾಗಿಯಾಗಿದೆ ಎಂದರು.
ಕೃಷಿ ಕ್ಷೇತ್ರದ ಬಲವರ್ಧನೆಗೆ ಒತ್ತು ನೀಡುವ ಫೌಂಡೇಶನ್, ಧಾರವಾಡ ಜಿಲ್ಲೆ ಸುತ್ತಮುತ್ತಲಿನ ಪ್ರದೇಶದಲ್ಲಿ ಎತ್ತುಗಳಿಲ್ಲದೆ ಸಂಕಷ್ಟದಲ್ಲಿದ್ದ ಅನೇಕ ರೈತರಿಗೆ ಹೊಸ ಎತ್ತುಗಳನ್ನು ಹಾಗೂ ಜೆಸಿಬಿ ಒದಗಿಸುವ ಮೂಲಕ ಕೃಷಿ ಚಟುವಟಿಕೆಗಳಿಗೆ ಪುನಶ್ಚೇತನ ನೀಡಿದೆ. ಇದು ರೈತರು ತಮ್ಮ ಜಮೀನುಗಳಲ್ಲಿ ಸುಲಭವಾಗಿ ಕೆಲಸ ಮಾಡಲು ಮತ್ತು ಉತ್ತಮ ಇಳುವರಿ ಪಡೆಯಲು ಸಹಾಯಕವಾಗಿದೆ. ಫೌಂಡೇಶನ್‌ನ ಸಾಮಾಜಿಕ ಬದ್ಧತೆಯಿಂದ ವಿಕಲಚೇತನರ ಸಬಲೀಕರಣಕ್ಕೂ ಅದು ಕೈಜೋಡಿಸಿದೆ. ಅಂಗವಿಕಲರಿಗೆ ಸುಧಾರಿತ ಬೈಸಿಕಲ್‌ಗಳನ್ನು ವಿತರಿಸುವ ಮೂಲಕ ಅವರು ಸ್ವಾವಲಂಬಿಗಳಾಗಿ ಬದುಕಲು ಪ್ರೋತ್ಸಾಹ ನೀಡಿದೆ ಎಂದು ಹೇಳಿದರು.ಮಾಜಿ ಶಾಸಕ ಎಂ.ಎಸ್. ಅಕ್ಕಿ ಮಾತನಾಡಿ, ಸಂತೋಷ ಲಾಡ್ ಫೌಂಡೇಶನ್ ವತಿಯಿಂದ ಅನೇಕ ಸಾಮಾಜಿಕ ಕೆಲಸ ಕಾರ್ಯ ಮಾಡುತ್ತ ರೈತರಿಗೆ, ಅಂಗವಿಕಲರಿಗೆ ಅನೇಕ ರೀತಿಯಲ್ಲಿ ಸಹಾಯ ಹಸ್ತ ಚಾಚುತ್ತಿದೆ ಎಂದರು.
ಈ ಸಂದರ್ಭದಲ್ಲಿ ವೆಂಕನಗೌಡ ಹಿರೇಗೌಡ್ರು, ಸಂತೋಷ್ ಲಾಡ್ ಫೌಂಡೇಶನ್ ಪ್ರಮುಖ ಸಂದೀಪ್ ಪೈ ಓಂಕಾರ್ ಹಾಗೂ ಗ್ರಾಪಂ ಅಧ್ಯಕ್ಷ ಮಾದೇವಪ್ಪ ಮಾಡೊಳ್ಳಿ, ವೈ.ಜಿ. ಪಾಟೀಲ, ವಿಜಯಾನಂದ ಹಾಲಿ, ಮಾರುತಿ ಕಲ್ಲೂರ, ಜಿ.ಕೆ. ನೂಲ್ವಿ, ಶೌಕತ್ತಲಿ ಮುಲ್ಲಾ ಸೇರಿ ಗ್ರಾಮಸ್ಥರು ಇದ್ದರು.