ಹಾವೇರಿ: ಜನಶಕ್ತಿ ಹಾಗೂ ದುಡಿಯುವ ಶಕ್ತಿ ಬಳಕೆ ಮಾಡಿದರೆ ಹಣಕಾಸಿನ ಶಕ್ತಿ ಹೆಚ್ಚಾಗುತ್ತದೆ. ಸಹಕಾರಿ ಬ್ಯಾಂಕಿನವರು ಆರ್ಥಿಕ ಶಿಸ್ತು ಉಳಿಸಿಕೊಳ್ಳುವುದರ ಜತೆಗೆ ಗ್ರಾಹಕರ ಸೌಹಾರ್ದತೆ, ವಿಶ್ವಾಸಾರ್ಹತೆ ಉಳಿಸಿಕೊಳ್ಳಬೇಕು ಎಂದು ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ತಿಳಿಸಿದರು.ನಗರದ ರಜನಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಶ್ರೀ ಸುವರ್ಣ ಪತ್ತಿನ ಸೌಹಾರ್ದ ಸಹಕಾರಿ ನಿ. ಇದರ ಬೆಳ್ಳಿ ಮಹೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.ಮನುಷ್ಯ ಸಂಘ ಜೀವಿ. ಒಬ್ಬಂಟಿಯಾಗಿ ಜೀವಿಸಲು ಸಾಧ್ಯವಿಲ್ಲ. ಸಂಘ- ಸಮಾಜ, ಊರು- ಕೆರೆ, ನಾಡು- ದೇಶ ಹೀಗೆ ನಾಗರಿಕತೆ ಬೆಳೆದುಕೊಂಡು ಬಂದಿದೆ. ನಾಗರಿಕತೆ ಬೆಳೆದಂತೆ ನಾಗರಿಕರ ಅವಶ್ಯಕತೆಗಳು ಬೆಳೆಯುತ್ತಿವೆ. ಆರ್ಥಿಕ, ಶೈಕ್ಷಣಿಕ, ಸಾಮಾಜಿಕವಾಗಿ ಮುಂದೆ ಬರಬೇಕೆಂಬುದು ಪ್ರತಿಯೊಬ್ಬರ ಕನಸಾಗಿರುತ್ತದೆ. ಆ ಕನಸು ನನಸಾಗಬೇಕಾದರೆ ಹಲವು ಸಂಸ್ಥೆಗಳ ಸಹಾಯ, ಸಹಕಾರ ಅವಶ್ಯಕವಿದೆ. ಕೋ- ಆಪರೇಟಿವ್ ಸಂಘಗಳ ಶಕ್ತಿ ಬಹಳ ವಿಶಾಲವಾದುದು ಎಂದರು.ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆರ್ಥಿಕತೆ ಇರಬೇಕು. ಆದರೆ ಆರ್ಥಿಕತೆಯಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಇರಬಾರದು. ಸರ್ಕಾರ ಶ್ರೀಮಂತ ಇದೆ. ಆದರೆ ಜನರು ಶ್ರೀಮಂತರಿಲ್ಲ. ಈ ನಡುವೆ ಕಳೆದ ಹತ್ತು ವರ್ಷಗಳಲ್ಲಿ 25 ಕೋಟಿ ಜನ ಬಡತನ ರೇಖೆಯಿಂದ ಮೇಲೆ ಬಂದಿದ್ದಾರೆ. ಜನರ ಕೈಯಲ್ಲಿ ಆರ್ಥಿಕತೆ ಇರಬೇಕು. ಆರ್ಥಿಕ ನೀತಿಯನ್ನು ಜನರು ತೀರ್ಮಾನಿಸಬೇಕು. ಆಗ ಮಾತ್ರ ಆರ್ಥಿಕ ಸ್ವಾತಂತ್ರ್ಯ ಪಡೆಯಲು ಸಾಧ್ಯವಿದೆ. ಆಡಳಿತದಲ್ಲಿ ಸಾರ್ವಜನಿಕರ ಹಣ ಪೋಲಾಗದಂತೆ, ಆರ್ಥಿಕ ಶಿಸ್ತು ಕಾಪಾಡಿಕೊಂಡು ಜನೋಪಯೋಗಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.ಕಾರ್ಯಕ್ರಮದಲ್ಲಿ ಸುವರ್ಣ ಪತ್ತಿನ ಸೌಹಾರ್ದ ಸಹಕಾರಿ ನಿ. ಅಧ್ಯಕ್ಷ ಉದಯ ಕುರ್ಡೇಕರ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿ. ನಿರ್ದೇಶಕ ಕೆ. ಶಿವಲಿಂಗಪ್ಪ, ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ಇಲಾಖೆ ಉಪನಿರ್ದೇಶಕಿ ವಿದ್ಯಾ ವನಶೆಟ್ಟಿ, ಹಿರಿಯ ನ್ಯಾಯವಾದಿ ಎಸ್.ಆರ್. ಹೆಗಡೆ, ಯುವ ಕಾಂಗ್ರೆಸ್ ಅಧ್ಯಕ್ಷ ದರ್ಶನಕುಮಾರ ಲಮಾಣಿ ಮಾತನಾಡಿದರು. ಸಂಘದ ಉಪಾಧ್ಯಕ್ಷ ಸುಭಾಸ ಪೋತದಾರ, ನಿರ್ದೇಶಕರಾದ ಸುರೇಶ ಕಮ್ಮಾರ, ರಾಘವೇಂದ್ರ ಸಾನು, ನಾಗರಾಜ ಕುರ್ಡೆಕರ, ಸಚಿನ ಮಡ್ಡಿ, ಪ್ರಸಾದ ವಿಠ್ಠಲಕರ್, ಮಂಜುನಾಥ ಬಿಷ್ಟಣ್ಣನವರ, ಶೇಖರಪ್ಪ ಕಲ್ಲಮ್ಮನವರ, ಗಾಯತ್ರಿ ನೇಜಕರ, ಮಂಜುಳಾ ಚೂರಿ, ಗೀತಾಬಾಯಿ ಜೂಜಗಾಂವ, ಶಕುಂತಲಾ ರಿತ್ತಿ, ಶಿವಾನಂದ ಮ್ಯಾಗೇರಿ, ಬಸನಗೌಡ ಮೇಲಿನಮನಿ, ಸಿಇಒ ಹಾಗೂ ಶಾಖಾ ವ್ಯವಸ್ಥಾಪಕ ಪ್ರವೀಣಕುಮಾರ ಸಿ.ಆರ್. ಇತರರು ಇದ್ದರು.