ಗ್ಯಾರಂಟಿ ಯೋಜನೆಗಳ ಅನುಷ್ಠಾನದಿಂದ ಬಡವರ ಕೈಗೆ ನೇರವಾಗಿ ಹಣ ತಲುಪುತ್ತಿದೆ : ಎಚ್. ಎಂ. ರೇವಣ್ಣ

KannadaprabhaNewsNetwork |  
Published : Dec 01, 2024, 01:35 AM ISTUpdated : Dec 01, 2024, 01:07 PM IST
30ಕೆಪಿಎಲ್23 ಕೊಪ್ಪಳ ಪ್ರವಾಸಿ ಮಂದಿರದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ರಾಜ್ಯಾಧ್ಯಕ್ಷ ಎಚ್.ಎಂ. ರೇವಣ್ಣ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿರುವುದು. | Kannada Prabha

ಸಾರಾಂಶ

ಗ್ಯಾರಂಟಿ ಯೋಜನೆಗಳಿಂದ ಆರ್ಥಿಕ ಸಂಕಷ್ಟ ಎದುರಾಗಿದೆ ಎನ್ನುವುದು ಶುದ್ಧ ಸುಳ್ಳು. ಈ ಕುರಿತು ಬೆಳಗಾವಿ ಅಧಿವೇಶನದಲ್ಲಿ ಶ್ವೇತಪತ್ರವನ್ನೇ ಹೊರಡಿಸಲಾಗುತ್ತದೆ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ರಾಜ್ಯಾಧ್ಯಕ್ಷ ಎಚ್.ಎಂ. ರೇವಣ್ಣ ಹೇಳಿದ್ದಾರೆ.

ಕೊಪ್ಪಳ: ಗ್ಯಾರಂಟಿ ಯೋಜನೆಗಳಿಂದ ಆರ್ಥಿಕ ಸಂಕಷ್ಟ ಎದುರಾಗಿದೆ ಎನ್ನುವುದು ಶುದ್ಧ ಸುಳ್ಳು. ಈ ಕುರಿತು ಬೆಳಗಾವಿ ಅಧಿವೇಶನದಲ್ಲಿ ಶ್ವೇತಪತ್ರವನ್ನೇ ಹೊರಡಿಸಲಾಗುತ್ತದೆ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ರಾಜ್ಯಾಧ್ಯಕ್ಷ ಎಚ್.ಎಂ. ರೇವಣ್ಣ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಸುಳ್ಳು ಪ್ರಚಾರ ಮಾಡುತ್ತಿದ್ದಾರೆ ಎಂದರು.

ಗ್ಯಾರಂಟಿ ಯೋಜನೆಗಳ ಅನುಷ್ಠಾನದಿಂದ ಬಡವರ ಕೈಗೆ ನೇರವಾಗಿ ಹಣ ತಲುಪುತ್ತಿದೆ. ಅವರು ಸಹ ವೆಚ್ಚ ಮಾಡುತ್ತಿರುವುದರಿಂದ ರಾಜ್ಯದ ಆದಾಯದಲ್ಲಿ ಹೆಚ್ಚಳವಾಗಿದೆ. ದೇಶದಲ್ಲಿಯೇ ಜಿಎಸ್‌ಟಿ ಪಾವತಿಯಲ್ಲಿ ರಾಜ್ಯ ನಂಬರ್ 2 ಇದೆ ಎಂದರು.

ಸರ್ಕಾರದ ಇಂಥ ಜನಪರ ಯೋಜನೆಗಳನ್ನು ಬಿಜೆಪಿ ಕೊಡುವುದಿಲ್ಲ, ಬದಲಾಗಿ ಕಿತ್ತುಕೊಳ್ಳುತ್ತದೆ. ಆದರೆ, ಕಾಂಗ್ರೆಸ್ ಸರ್ಕಾರ ಇಂಥ ಸಾಲು ಸಾಲು ಯೋಜನೆಗಳನ್ನು ಮೊದಲಿನಿಂದಲೂ ಕೊಡುತ್ತ ಬಂದಿದೆ. ಇಂದಿರಾ ಗಾಂಧಿ ಅವರ 20 ಅಂಶಗಳ ಕಾರ್ಯಕ್ರಮದಿಂದ ಹಿಡಿದು ದೇವರಾಜು ಅರಸು ಅವರು ಊಳುವವನೇ ಒಡೆಯ, ಬಂಗಾರಪ್ಪ ಅವರ ರೈತರ ಪಂಪ್‌ಸೆಟ್‌ಗೆ ಉಚಿತ ವಿದ್ಯುತ್ ಸೇರಿದಂತೆ ಹಲವಾರು ಯೋಜನೆಗಳನ್ನು ಈ ಹಿಂದೆಯೂ ಜಾರಿ ಮಾಡಲಾಗಿದೆ ಎಂದು ಹೇಳಿದರು.

ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕ್ರಾಂತಿಕಾರಿ ರೀತಿಯಲ್ಲಿ ಗ್ಯಾರಂಟಿ ಯೋಜನೆಗಳನ್ನು ಬರಿ ಘೋಷಣೆ ಮಾಡಿದ್ದಲ್ಲ, ಜಾರಿಯೂ ಮಾಡಿದ್ದಾರೆ. ಇದನ್ನು ಕೆಲವೇ ಕೆಲವರು ಶ್ರೀಮಂತರು ವಿರೋಧ ಮಾಡುತ್ತಿದ್ದಾರೆಯೇ ಹೊರತು, ಬಡವರು ಸ್ವಾಗತಿಸುತ್ತಿದ್ದಾರೆ ಎಂದರು.

ಗ್ಯಾರಂಟಿ ಯೋಜನೆಗಳ ಕುರಿತು ಪರಾಮರ್ಶೆ ಆಗಬೇಕು ಎನ್ನುವ ಮಾತು ಇರುವುದು ನಿಜ. ತೆರಿಗೆ ಪಾವತಿದಾರರು ಸೇರಿದಂತೆ ಲಕ್ಷಗಟ್ಟಲೇ ವೇತನ ಪಡೆಯುವವರಿಗೂ ಯಾಕೆ ಗ್ಯಾರಂಟಿ ಎನ್ನುವ ಮಾತು ಇದೆ. ಆದರೆ, ಹಾಗಂತ ನಾವು ಈಗ ಅದನ್ನು ಪರಿಶೀಲನೆ ಮಾಡುವುದಾಗಲಿ ಅಥವಾ ಸುಧಾರಣೆ ಮಾಡುವುದಾಗಲಿ ಸದ್ಯಕ್ಕಂತೂ ಮಾಡುತ್ತಿಲ್ಲ. ಆದರೆ, ಈ ಹಿಂದೆ ತಂದಿರುವ ಇಂಥ ಯೋಜನೆಗಳನ್ನು ಆಗಾಗ ಪರಿಶೀಲನೆ ಮಾಡಿ, ಒಂದಷ್ಟು ಮಾರ್ಪಾಡು ಮಾಡಿದ ಸಾಕಷ್ಟು ವಿಷಯಗಳು ಇವೆ. ಆದರೆ, ಈಗ ಅದನ್ನೇ ದೊಡ್ಡದು ಮಾಡುತ್ತಾರೆ ಎನ್ನುವ ಕಾರಣಕ್ಕಾಗಿಯೇ ಯಥಾವತ್ತಾಗಿಯೇ ಗ್ಯಾರಂಟಿ ಯೋಜನೆಗಳು ಮುಂದುವರಿಸುತ್ತೇವೆ ಎಂದರು.

ರಾಹುಲ್ ಗಾಂಧಿ ಅಸ್ತು:

ಹಾಸನದಲ್ಲಿ ನಡೆಯುವ ಅಹಿಂದ ಸಮಾವೇಶಕ್ಕೆ ಖುದ್ದು ರಾಹುಲ್ ಗಾಂಧಿ ಅವರೇ ಅಸ್ತು ಎಂದಿದ್ದಾರೆ. ಹೀಗಿದ್ದಾಗ ಮತ್ತೇನು ಸಮಸ್ಯೆ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಂ. ರೇವಣ್ಣ ಪ್ರಶ್ನೆ ಮಾಡಿದರು.

ಹಾಸನ ಸಮಾವೇಶದ ಕುರಿತು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಯಾರೋ ಪತ್ರ ಬರೆದಿದ್ದಾರೆ ಎಂದಾಕ್ಷಣ ಅದಕ್ಕೆ ಒತ್ತು ನೀಡುವುದಾಗಲಿ, ಪ್ರತಿಕ್ರಿಯಿಸುವುದಾಗಲಿ ಮಾಡುವುದಿಲ್ಲ. ಅಹಿಂದ ಸಮಾವೇಶ ನಡೆಯುತ್ತದೆ. ಈಗ ಅದನ್ನು ಕಾಂಗ್ರೆಸ್ ಅಡಿಯಲ್ಲಿಯೇ ಮಾಡಲು ಸಹ ಸಮ್ಮತಿ ನೀಡಲಾಗಿದೆ. ಕಾಂಗ್ರೆಸ್ ಎಂದರೆ ಅಹಿಂದ ಪಕ್ಷ, ಅಹಿಂದ ಮತ್ತು ಕಾಂಗ್ರೆಸ್ ಬೇರೆ ಬೇರೆ ಅಲ್ಲವೇ ಅಲ್ಲ ಎಂದರು.

ಕೆಪಿಪಿಸಿ ಅಧ್ಯಕ್ಷರ ಬದಲಾವಣೆ ಹಾಗೂ ಸಚಿವ ಸಂಪುಟ ವಿಸ್ತರಣೆ ಕುರಿತು ನಾನು ಮಾತನಾಡುವುದಿಲ್ಲ. ನಾನು ಸಚಿವ ಆಕಾಂಕ್ಷಿಯೂ ಅಲ್ಲ ಮತ್ತು ವಿಧಾನಸಭೆ ಅಥವಾ ವಿಧಾನಪರಿಷತ್ ಸದಸ್ಯನೂ ಆಗಿರದೆ ಇರುವುದರಿಂದ ಸಚಿವನಾಗುವ ಸಾಧ್ಯತೆ ಇಲ್ಲವೇ ಇಲ್ಲ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಯಣ್ಣನ ವೀರಭೂಮಿ ಶೀಘ್ರ ಲೋಕಾರ್ಪಣೆ
ಅಕ್ರಮ ಬಾಂಗ್ಲಾ ವಲಸಿಗರನ್ನು ಹೊರಗಟ್ಟಿ