ಮೋದಿ‌ ಸರ್ಕಾರ ಕಿತ್ತು ಒಗೆಯದಿದ್ದರೆ ಆರ್ಥಿಕ ಗುಲಾಮಗಿರಿ

KannadaprabhaNewsNetwork |  
Published : Mar 21, 2024, 01:03 AM IST
ಸಮಾವೇಶದ ಪೋಟೋಗಳು.  | Kannada Prabha

ಸಾರಾಂಶ

ದೇಶದಲ್ಲಿ ಸಂವಿಧಾನದ ತಿರುಚುವ ಪ್ರಯತ್ನ ಬಿಜೆಪಿ ಸದ್ದಿಲ್ಲದೆ ನಡೆಸುತ್ತಿದೆ. ಇನ್ನೊಂದೆಡೆ ಚುನಾವಣಾ ಬಾಂಡ್ ಮೂಲಕ ಬಿಜೆಪಿ ಚುನಾವಣೆಗೆ ಹಣ ಸಂಗ್ರಹಿಸುತ್ತಿದೆ. ಸಂವಿಧಾನ ಕಾಪಾಡಿಕೊಳ್ಳುವ, ಮೀಸಲಾತಿ ಉಳಿಸಿಕೊಳ್ಳುವುದಕ್ಕಾಗಿ ನಾವು ಸಂವಿಧಾನ ರಕ್ಷಣೆ ಮಾಡಬೇಕಿದೆ

ಗದಗ: ದೇಶದಲ್ಲಿ ಮೋದಿ ಸರ್ಕಾರವನ್ನು ಕಿತ್ತೊಗೆಯದಿದ್ದರೆ ಮುಂಬರುವ ದಿನಗಳಲ್ಲಿ ದೇಶದಲ್ಲಿ ಆರ್ಥಿಕ ಗುಲಾಮಗಿರಿ ಅನುಭವಿಸಬೇಕಾಗುತ್ತದೆ. ಅದನ್ನು ತಪ್ಪಿಸಲು ನಮ್ಮ ಸರ್ಕಾರ ಗ್ಯಾರಂಟಿ ಯೋಜನೆ ನೀಡಿದ್ದು, ಮುಂಬರುವ ದಿನಗಳಲ್ಲಿ ಗ್ಯಾರಂಟಿ ಯೋಜನೆಗಳನ್ನು ಮಾನವ ಹಕ್ಕುಗಳನ್ನಾಗಿ ಮಾಡಲಾಗುವುದು ಎಂದು ಕಾನೂನು ಸಚಿವ ಎಚ್.ಕೆ. ಪಾಟೀಲ ಹೇಳಿದರು.

ನಗರದ ಕೆ.ಎಚ್. ಪಾಟೀಲ ಸಭಾಭವನದಲ್ಲಿ ಬುಧವಾರ ಏರ್ಪಡಿಸಿದ್ದ ಗದಗ-ಹಾವೇರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿದರು.

ದೇಶದಲ್ಲಿ ಸಂವಿಧಾನದ ತಿರುಚುವ ಪ್ರಯತ್ನ ಬಿಜೆಪಿ ಸದ್ದಿಲ್ಲದೆ ನಡೆಸುತ್ತಿದೆ. ಇನ್ನೊಂದೆಡೆ ಚುನಾವಣಾ ಬಾಂಡ್ ಮೂಲಕ ಬಿಜೆಪಿ ಚುನಾವಣೆಗೆ ಹಣ ಸಂಗ್ರಹಿಸುತ್ತಿದೆ. ಸಂವಿಧಾನ ಕಾಪಾಡಿಕೊಳ್ಳುವ, ಮೀಸಲಾತಿ ಉಳಿಸಿಕೊಳ್ಳುವುದಕ್ಕಾಗಿ ನಾವು ಸಂವಿಧಾನ ರಕ್ಷಣೆ ಮಾಡಬೇಕಿದೆ, ಅದಕ್ಕಾಗಿ ದೇಶದ ಪ್ರತಿಯೊಬ್ಬರೂ ಕಾಂಗ್ರೆಸ್ ಪಕ್ಷ ಬೆಂಬಲಿಸಬೇಕು. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವಧಿಯಲ್ಲಿ ದೇಶದ ರೈತರ ₹72000 ಕೋಟಿ ಸಾಲಮನ್ನಾ ಮಾಡಲಾಯಿತು. ಬಿಜೆಪಿ ಅವಧಿಯಲ್ಲಿ ಅದಾನಿ, ಅಂಬಾನಿಗಳ ₹6.50 ಲಕ್ಷ ಕೋಟಿ ಸಾಲ ಮನ್ನಾ ಮಾಡಲಾಗಿದೆ, ಇದು ಬಿಜೆಪಿ ಸರ್ಕಾರದ ಸಾಧನೆಯಾಗಿದೆ. ಜನರ ವಿಶ್ವಾಸಕ್ಕೆ ಕಾಂಗ್ರೆಸ್ ಎಂದು ದ್ರೋಹ ಬಗೆದಿಲ್ಲ. ಬಡವರ, ದಲಿತರ, ಅಲ್ಪಸಂಖ್ಯಾತರ, ಹಿಂದುಳಿದ ವರ್ಗದವರ ಏಳ್ಗೆಗೆ ಕಾಂಗ್ರೆಸ್ ಸರ್ಕಾರ ಬದ್ಧವಾಗಿದೆ. ಗ್ಯಾರಂಟಿ ಯೋಜನೆಗಳಿಂದ ಆರ್ಥಿಕ ಸುಭದ್ರತೆ ದೊರೆತಿದೆ ಎಂದರು.

ಕೃಷಿ ಮಾರುಕಟ್ಟೆ ಸಚಿವ ಸಚಿವ ಶಿವಾನಂದ ಪಾಟೀಲ ಮಾತನಾಡಿ, ಬಿಜೆಪಿ ರಾಜ್ಯದಲ್ಲಿ ಎಂದಿಗೂ ಸ್ವಂತ ಬಲದಿಂದ ಅಧಿಕಾರಕ್ಕೆ ಬಂದಿಲ್ಲ. ಬಿಜೆಪಿ ಅಭ್ಯರ್ಥಿ ಬೊಮ್ಮಾಯಿ ಅವರು ಹಾವೇರಿ ಜಿಲ್ಲೆಯವರಾಗಿದ್ದರೂ ಕೂಡ ಅಧಿಕಾರದಲ್ಲಿದ್ದಾಗ ಜಿಲ್ಲೆಗೆ ನೀರು ಪೂರೈಸುವ ಯೋಜನೆ ತರಲಾಗಿಲ್ಲ. ಕಳೆದ 20 ವರ್ಷದಿಂದ ಬಿಜೆಪಿ ಅಭ್ಯರ್ಥಿಯನ್ನು ಇಲ್ಲಿ ಆಯ್ಕೆ ಮಾಡಲಾಗಿದೆ. ಆದರೆ ಜನರಿಗೆ ಅಭಿವೃದ್ಧಿ ಯೋಜನೆಗಳು ದೊರೆತಿಲ್ಲ ಎಂದರು.

ವಿಧಾನಪರಿಷತ್ ಸದಸ್ಯ ಸಲೀಂ ಅಹಮ್ಮದ ಮಾತನಾಡಿ, ಸಮಾಜದ ಎಲ್ಲ ವರ್ಗಗಳ ಹಿತಾಸಕ್ತಿ ಕಾಯುವ ಪಕ್ಷವೇ ಕಾಂಗ್ರೆಸ್. ಸುಳ್ಳು ಹೇಳುವ ಪಕ್ಷ ಬಿಜೆಪಿ. ಚುನಾವಣಾ ಬಾಂಡ್ ಗಳ ಮೂಲಕ ಬಿಜೆಪಿ ಭ್ರಷ್ಟಾಚಾರ ಹೊರಬರುತ್ತಿದೆ. ದೇಶದ ಐಕ್ಯತೆಗೆ ಕಾಂಗ್ರೆಸ್ ಪಕ್ಷ ತ್ಯಾಗ, ಬಲಿದಾನ ನೀಡಿದೆ. ಅತ್ಯಂತ ಹೆಚ್ಚಿನ ಮತಗಳಿಂದ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂದರು.

ಶಾಸಕ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜಿ.ಎಸ್.ಪಾಟೀಲ ಮಾತನಾಡಿ, ಅತೀ ಆತ್ಮವಿಶ್ವಾಸ ಬೇಡ. 2004 ರಿಂದ ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಗೆಲ್ಲಲೂ ಸಾಧ್ಯವಿಲ್ಲ. 2014 ರಲ್ಲೂ ಕಾಂಗ್ರೆಸ್ ಶಾಸಕರೂ ಹೆಚ್ಚಿದ್ದರು. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸೋತಿತು. ಹಾಗಾಗಿ, ಪಕ್ಷ ಆದೇಶಿಸಿದಂತೆ ಕ್ಷೇತ್ರದಲ್ಲಿ ಕೆಲಸ ಮಾಡಿ ಅಭ್ಯರ್ಥಿ ಗೆಲುವಿಗೆ ಶ್ರಮಿಸಬೇಕು ಎಂದರು.

ಡಿ.ಆರ್. ಪಾಟೀಲ ಮಾತನಾಡಿ, ಗದಗ ಜಿಲ್ಲೆಯಲ್ಲಿ ರಾಜಕೀಯ ಸಂಸ್ಕೃತಿ ಬೆಳೆಸಿಕೊಂಡು ಬಂದಿದ್ದೇವೆ. ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಉತ್ತಮ ವಾತಾವರಣ ಇದೆ ಎಂದರು.

ಕಾರ್ಯಕ್ರಮದಲ್ಲಿ ಸುಜಾತಾ ದೊಡ್ಡಮನಿ, ರಾಮಣ್ಣ ಲಮಾಣಿ, ಜಿ.ಎಸ್. ಗಡ್ಡದೇವರಮಠ, ಟಿ.ಈಶ್ವರ, ಮಿಥುನ ಪಾಟೀಲ, ಅಶೋಕ ಮಂದಾಲಿ, ಸಿದ್ದು ಪಾಟೀಲ ಮುಂತಾದವರು ಹಾಜರಿದ್ದರು. ವೀರಯ್ಯ ಸೋಮನಕಟ್ಟಿಮಠ ನಿರೂಪಿಸಿದರು.

ನಾನು ಹಾವೇರಿ ಕ್ಷೇತ್ರದಲ್ಲಿ ಅಭ್ಯರ್ಥಿಯಾಗಿರುವುದೇ ನನ್ನ ಭಾಗ್ಯ. ಎಲ್ಲ ಹಿರಿಯರ ಕನಸು ನನಸು ಮಾಡುವ ಜವಾಬ್ದಾರಿ ನಮ್ಮ ಕಾರ್ಯಕರ್ತರ ಮೇಲಿದೆ. ಬಿಜೆಪಿ ಅಭ್ಯರ್ಥಿಗಳು ಎಂದಿಗೂ ಅಭ್ಯರ್ಥಿ ನೋಡಿ ಮತ ಕೇಳಿಲ್ಲ. ಪ್ರಧಾನಿ ಮೋದಿ ನೋಡಿ ಮತ ಕೊಡಿ ಎಂದು ಕೇಳುತ್ತಾರೆ. ಆದರೆ ಕಾಂಗ್ರೆಸ್ ಅಭ್ಯರ್ಥಿಗಳು ಅಭಿವೃದ್ಧಿಗೆ ಮತ ನೀಡಿ ಎಂದು ಕೇಳುತ್ತೇವೆ. ಕಾಂಗ್ರೆಸ್‌ ಅಭ್ಯರ್ಥಿ ಆನಂದ ಗಡ್ಡದೇವರಮಠ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಯ್ಯಪ್ಪನ ಮಾಲೆ ಧರಿಸಿದ ಬಾಲಕನ ಮೇಲೆ ಶಿಕ್ಷಕ ಹಲ್ಲೆ!
ತಂದೆಗೆ ಕಿರುಕುಳ ನೀಡದಂತೆ ಚೈತ್ರಾ ಕುಂದಾಪುರಗೆ ಆದೇಶ