ಜಾಲಿ ಎಲ್‌ಎಲ್‌ಬಿ ಚಿತ್ರಕ್ಕೆ ತಡೆಕೋರಿದ್ದ ಅರ್ಜಿದಾರರಿಗೆ ದಂಡ

KannadaprabhaNewsNetwork |  
Published : Sep 19, 2025, 01:00 AM IST

ಸಾರಾಂಶ

ಶುಕ್ರವಾರ (ಇಂದು) ಬಿಡುಗಡೆಗೆ ಸಿದ್ಧವಾಗಿರುವ ‘ಜಾಲಿ ಎಲ್‌ಎಲ್‌ಬಿ -3’ ಚಿತ್ರದ ಬಿಡುಗಡೆ ಮತ್ತು ಪ್ರದರ್ಶನಕ್ಕೆ ತಡೆ ನೀಡುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ವಜಾಗೊಳಿಸಿರುವ ಹೈಕೋರ್ಟ್‌, ಅರ್ಜಿದಾರರಿಗೆ 50 ಸಾವಿರ ರು. ದಂಡ ವಿಧಿಸಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಶುಕ್ರವಾರ (ಇಂದು) ಬಿಡುಗಡೆಗೆ ಸಿದ್ಧವಾಗಿರುವ ‘ಜಾಲಿ ಎಲ್‌ಎಲ್‌ಬಿ -3’ ಚಿತ್ರದ ಬಿಡುಗಡೆ ಮತ್ತು ಪ್ರದರ್ಶನಕ್ಕೆ ತಡೆ ನೀಡುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ವಜಾಗೊಳಿಸಿರುವ ಹೈಕೋರ್ಟ್‌, ಅರ್ಜಿದಾರರಿಗೆ 50 ಸಾವಿರ ರು. ದಂಡ ವಿಧಿಸಿದೆ.

ಈ ಕುರಿತು ಬೆಂಗಳೂರಿನ ಮಂಜುನಾಥ ನಗರದ ನಿವಾಸಿ ಸೈಯದ್‌ ನೀಲುಫರ್‌ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಅವರ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ನೀಡಿದೆ. ಚಿತ್ರದಲ್ಲಿರುವ ಸಂಭಾಷಣೆ ಮತ್ತು ದೃಶ್ಯಗಳು ಭಾರತೀಯ ನ್ಯಾಯ ಸಂಹಿತೆ ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆಗಳ ಉಲ್ಲಂಘನೆ ಮಾಡಿದಂತಿದೆ. ಆದ್ದರಿಂದ ಚಿತ್ರದ ನಟರು, ನಿರ್ಮಾಪಕರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಪ್ರಾಧಿಕಾರಕ್ಕೆ ಸೂಚಿಸಬೇಕು. ಚಿತ್ರದ ನಿರ್ಮಾಪಕರು ಹಾಗೂ ಮತ್ತು ನಟರು ರಾಷ್ಟ್ರೀಯ ಪತ್ರಿಕೆಗಳಲ್ಲಿ ಕ್ಷಮೆಯಾಚಿಸಲು ನಿರ್ದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದರು.

ಈ ಮನವಿ ಪುರಸ್ಕರಿಸಲು ನಿರಾಕರಿಸಿದ ವಿಭಾಗೀಯ ಪೀಠ, ಚಿತ್ರದಲ್ಲಿನ ನ್ಯಾಯಾಲಯದ ದೃಶ್ಯಗಳು, ಹಾಸ್ಯಪ್ರಜ್ಞೆ ಮೂಲಕ ಪ್ರೇಕ್ಷಕರನ್ನು ಆಕರ್ಷಿಸುವ ಉದ್ದೇಶದಿಂದ ಕೂಡಿದೆ ಎಂಬುದಾಗಿ ತೋರುತ್ತದೆ. ಆದರೆ, ಆ ಹಾಸ್ಯಪ್ರಜ್ಞೆಯು ಅರ್ಜಿದಾರರನ್ನು ಆಕರ್ಷಿಸಿಲ್ಲ. ಆ ಕಾರಣಕ್ಕಾಗಿ ಸೃಜನಶೀಲತೆಯನ್ನು ಹತ್ತಿಕ್ಕುವುದು ಮತ್ತು ದೃಶ್ಯಗಳನ್ನು ಸೆನ್ಸಾರ್‌ ಮಾಡುವಂತೆ ಆದೇಶಿಸಲಾಗದು ಎಂದು ಅಭಿಪ್ರಾಯಪಟ್ಟಿತು.

ಅಲ್ಲದೆ, ಇಂತಹ ನಿಷ್ಪ್ರಯೋಜಕ ಅರ್ಜಿ ಸಲ್ಲಿಸಿ ನ್ಯಾಯಾಲಯದ ಅಮೂಲ್ಯ ಸಮಯ ವ್ಯರ್ಥ ಮಾಡಿದಕ್ಕೆ ಅರ್ಜಿದಾರರಿಗೆ 50 ಸಾವಿರ ರು. ದಂಡ ವಿಧಿಸಲಾಗಿದೆ. ದಂಡದ ಮೊತ್ತವನ್ನು ಹೈಕೋರ್ಟ್‌ನ ರಿಜಿಸ್ಟ್ರಾರ್ ಕಚೇರಿಯಲ್ಲಿ ಠೇವಣಿ ಇಡಬೇಕು. ಒಂದೊಮ್ಮೆ ದಂಡದ ಮೊತ್ತ ಪಾವತಿಸದಿದ್ದರೆ ಅರ್ಜಿದಾರರ ವಿರುದ್ಧ ಕ್ರಮ ಕೈಗೊಳ್ಳುವುದಕ್ಕಾಗಿ ಅ.4 ರಂದು ಅರ್ಜಿಯನ್ನು ಮತ್ತೆ ವಿಚಾರಣೆಗೆ ಪಟ್ಟಿ ಮಾಡುವುದಾಗಿ ನ್ಯಾಯಪೀಠ ಆದೇಶದಲ್ಲಿ ತಿಳಿಸಿದೆ.

PREV

Recommended Stories

ಸಹಕಾರಿ ತತ್ವದಿಂದ ಕಟ್ಟಕಡೆ ವ್ಯಕ್ತಿಗೂ ಸಹಾಯ
ವೀರಶೈವ ಲಿಂಗಾಯತರಲ್ಲಿ ಸಮಾಜ ಒಗ್ಗಟ್ಟು ಮುಖ್ಯ