ಕನ್ನಡಪ್ರಭ ವಾರ್ತೆ ಕೊಪ್ಪಳ
ಜೆಜೆಎಂ ಯೋಜನೆಯ ಅನುಷ್ಠಾನದ ಬಗ್ಗೆ ನಿರ್ಲಕ್ಷ್ಯ ವಹಿಸಿರುವ ತಪ್ಪಿತಸ್ಥ ಅಧಿಕಾರಿಗಳನ್ನು ಅಮಾನತುಗೊಳಿಸಿದರೆ ಸಾಲದು. ಅಂತಹವರ ವಿರುದ್ಧ ಎಫ್‌ಐಆರ್ ದಾಖಲಿಸಲು ಕ್ರಮ ವಹಿಸಬೇಕು ಎಂದು ಜಿಲ್ಲಾ ಅಭಿವೃದ್ಧಿ ಸಮನ್ವಯ ಹಾಗೂ ಉಸ್ತುವಾರಿ ಸಮಿತಿಯ ಅಧ್ಯಕ್ಷರೂ ಆಗಿರುವ ಸಂಸದ ಸಂಗಣ್ಣ ಕರಡಿ ಹೇಳಿದರು.ನಗರದ ಜಿಪಂ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಜರುಗಿದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಲಜೀವನ ಮಿಷನ್ ಕಾಮಗಾರಿಗಳನ್ನು ದೂರುಗಳು ಬಾರದ ಹಾಗೆ ನಡೆಸಬೇಕು. ಪ್ರತಿ ಮನೆಮನೆಗೂ ನೀರು ತಲುಪಬೇಕು ಅನ್ನುವ ಬಹುಮುಖ್ಯ ಆಶಯದ ಜೆಜೆಎಂ ಯೋಜನೆಯ ಅನುಷ್ಠಾನದ ಬಗ್ಗೆ ಗಮನ ಹರಿಸಬೇಕಾದ ಅಧಿಕಾರಿಗಳೇ ಕಾಮಗಾರಿ ಕಳಪೆಯಾಗಿದೆ ಎಂದು ಹೇಳುವುದು ಎಷ್ಟು ಸರಿ? ಎಂದು ಪ್ರಶ್ನಿಸಿದ ಅವರು, ಕೆಲಸದ ಬಗ್ಗೆ ನಿರ್ಲಕ್ಷ್ಯ ವಹಿಸುವ ಅಧಿಕಾರಿಗಳಿಗೆ ತಕ್ಕಪಾಠ ಕಲಿಸಬೇಕು. ತಪ್ಪಿತಸ್ಥ ಅಧಿಕಾರಿಗಳನ್ನು ಅಮಾನತುಗೊಳಿಸಿದರೆ ಸಾಲದು. ಅಂತಹವರ ಮೇಲೆ ಯಾವುದೇ ಮುಲಾಜಿಲ್ಲದೆ ಎಫ್‌ಐಆರ್ ದಾಖಲಿಸಲು ಕ್ರಮ ವಹಿಸಬೇಕು ಎಂದರು.ಜಿಲ್ಲೆಯ ಪ್ರತಿಯೊಂದು ಹಳ್ಳಿಗೆ ಪ್ರತಿಯೊಂದು ಮನೆಗೆ ಕುಡಿಯುವ ನೀರು ತಲುಪಬೇಕು ಎಂಬುದಷ್ಟೇ ನಮ್ಮ ಉದ್ದೇಶವಾಗಿದೆ. ಜನಹಿತ ಆಶಯದ ಜೆಜೆಎಂ ಕಾಮಗಾರಿ ಕಳಪೆಯಾಗುತ್ತಿದೆ ಎಂಬುದನ್ನು ಸಹಿಸಲಾಗದು. ಜೆಜೆಎಂ ಕಾಮಗಾರಿಯಲ್ಲಿ ಕಳಪೆ ಕೆಲಸ ಮಾಡಿದ ಮತ್ತು ಕಳಪೆ ಸಾಮಗ್ರಿ ಬಳಸಿದ ಗುತ್ತಿಗೆದಾರರ ಮೇಲೆ ಮುಲಾಜಿಲ್ಲದೇ ಕ್ರಮ ಜರುಗಿಸಬೇಕು ಎಂದು ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.ಶಾಸಕ ದೊಡ್ಡನಗೌಡ ಪಾಟೀಲ ಮಾತನಾಡಿ, ಜಿಪಂ ಸಿಇಒ ತಾಲೂಕುವಾರು ಭೇಟಿ ನೀಡಿ ಅಧಿಕಾರಿಗಳ ಸಭೆ ನಡೆಸಿ ನಿರಂತರ ಪರಿಶೀಲಿಸುತ್ತಿರುವುದರಿಂದ ಜೆಜೆಎಂ ಕಾಮಗಾರಿ ಕೆಲವು ಕಡೆಗಳಲ್ಲಿ ಅಚ್ಚುಕಟ್ಟಾಗಿ ನಡೆಯುತ್ತಿದೆ ಎಂದರು.ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ ಮಾತನಾಡಿ, 8 ತಿಂಗಳಿನಿಂದ ಶೇ.45ರಷ್ಟು ಮಾತ್ರ ಕಾಮಗಾರಿಯಲ್ಲಿ ಪ್ರಗತಿಯಾಗಿದೆ ಎಂಬುದು ಕೆಲವು ಕಡೆಗೆ ವರದಿಯಾಗಿದೆ. ಕೆಲವು ಕಡೆಗಳಲ್ಲಿ ಅವೈಜ್ಞಾನಿಕವಾಗಿ ಗಟಾರು ಪಕ್ಕವೇ ಜೆಜೆಎಂ ಪೈಪು ಮತ್ತು ನಲ್ಲಿ ಕೂಡಿಸಲಾಗಿದೆ. ಜೆಜೆಎಂ ಕಾಮಗಾರಿಗಾಗಿ ಸಿಸಿ ರಸ್ತೆಯನ್ನು ಕಿತ್ತಿರುವುದನ್ನು ಕೆಲವೆಡೆ ಇದುವರೆಗೆ ಸರಿಪಡಿಸಿಲ್ಲ. ನಿರಂತರವಾಗಿ ಗುತ್ತಿಗೆದಾರರು ಬದಲಾಗುತ್ತಿರುವುದರಿಂದಲೂ ಈ ಕಾಮಗಾರಿ ಕಳಪೆಯಾಗಲು ಕಾರಣವಾಗಿದೆ ಎಂದರು.ಜಿಲ್ಲಾಧಿಕಾರಿ ನಳಿನ್ ಅತುಲ್ ಮಾತನಾಡಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಲೋಕೋಪಯೋಗಿ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ಯ ಇಲಾಖೆ, ನಿರ್ಮಿತಿ, ಕೆಆರ್‌ಐಡಿಎಲ್ ಸೇರಿದಂತೆ ಇನ್ನೀತರ ಇಲಾಖೆಗಳು ಸಮನ್ವಯದಿಂದ ಕೆಲಸ ಮಾಡಬೇಕು. ಸರ್ಕಾರಗಳು ಕಾಲಕಾಲಕ್ಕೆ ಹೊರಡಿಸುವ ಸುತ್ತೋಲೆಗಳನ್ವಯ ಕೆಲಸ ನಿರ್ವಹಿಸಬೇಕು. ಯಾವುದೇ ಪ್ರದೇಶದಲ್ಲಿ ಸಿಸಿ ರಸ್ತೆ ನಿರ್ಮಿಸುವ ಮೊದಲು ಅಂತಹ ಕಡೆಗಳಲ್ಲಿ ಕುಡಿಯುವ ನೀರು ಸರಬರಾಜು ಪೈಪ್‌ಲೈನ್ ಅಳವಡಿಕೆ ಆಗಿದೆಯೋ ಇಲ್ಲೋ ಎಂಬುದರ ಬಗ್ಗೆ ಗಮನಹರಿಸಬೇಕು ಎಂದರು.ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆ ಮಾತನಾಡಿ, ಜೆಜೆಎಂ ಕಾಮಗಾರಿಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವಲ್ಲಿ ಲೋಪ ಎಸಗಿದ ಅಧಿಕಾರಿಗಳಿಗೆ ನೋಟೀಸ್ ನೀಡಿ ಎಚ್ಚರಿಕೆ ನೀಡಲಾಗಿದೆ. ಗುತ್ತಿಗೆದಾರರಿಗೆ ಸಹ ನೊಟೀಸ್ ನೀಡಿ ಅವರಿಂದ ವಿವರಣೆ ಪಡೆದು ಲೋಪ ಎಸಗಿದವರನ್ನು ಕಪ್ಪುಪಟ್ಟಿಗೆ ಸೇರಿಸಿ ಅಂತವರ ಮೇಲೆ ಸೂಕ್ತ ಕ್ರಮ ಜರುಗಿಸಲಾಗುತ್ತಿದೆ ಎಂದರು.ಶಾಸಕ ಜನಾರ್ಧನರೆಡ್ಡಿ, ಸಹಾಯಕ ಆಯುಕ್ತ ಮಹೇಶ ಮಾಲಗಿತ್ತಿ, ಜಿಪಂ ಯೋಜನಾ ನಿರ್ದೇಶಕ ಕೃಷ್ಣಮೂರ್ತಿ ಪಿ, ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು.